ನವದೆಹಲಿ: ಐಪಿಎಲ್ 2027ರ ಹರಾಜು ಪ್ರಕ್ರಿಯೆಗೂ ಮುನ್ನವೇ ಮುಂಬೈ ಇಂಡಿಯನ್ಸ್ ತಮ್ಮ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಟ್ರೇಡ್ ಮೂಲಕ ಪಂಜಾಬ್ ಕಿಂಗ್ಸ್ಗೆ ಕಳುಹಿಸಿದ್ದು, ಅಲ್ಲಿಂದ ಅವರ ಬದಲಿಗೆ ವೇಗಿ ಅರ್ಷ್ದೀಪ್ ಸಿಂಗ್ರನ್ನು ಕರೆದುಕೊಂಡಿದೆ. ಸಾಕಷ್ಟು ವದಂತಿಗಳನ್ನು ಕೊನೆಗೂ ನಿಜವಾಗಿಸಿದ ಎಂಐ ನಡೆಗೆ ಇದೀಗ ಪಾಂಡ್ಯ ಕೊಟ್ಟಿರುವ ಫಸ್ಟ್ ರಿಯಾಕ್ಷನ್ ಕ್ರಿಕೆಟ್ ಪ್ರೇಮಿಗಳಲ್ಲಿ ನಾನಾ ರೀತಿಯ ಅಭಿಪ್ರಾಯಗಳನ್ನು ಮೂಡಿಸಿದೆ.
"ಸತ್ ಶ್ರೀ ಅಕಾಲ್. ನನ್ನ ಕ್ಯಾಪ್ಟನ್ ಶ್ರೇಯಸ್ ಅಯ್ಯರ್, ನನ್ನ ಕೋಚ್ ರಿಕಿ ಪಾಂಟಿಂಗ್, ನನ್ನ ತಂಡ, ಇಡೀ ಪಂಜಾಬ್ ಕಿಂಗ್ಸ್. ಇನ್ಮುಂದೆ ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ" ಎಂದು ಪಂಜಾಬ್ ಕಿಂಗ್ಸ್ ಸೇರ್ಪಡೆಯಾದ ಮೊದಲ ದಿನವೇ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದು, ಹಾರ್ದಿಕ್ ಪೋಸ್ಟ್ ಮಾಡಿದ್ದಾರೆ. ಇದು ಕ್ರಿಕೆಟ್ ಪ್ರಿಯರ ಗಮನ ಸೆಳೆದಿದ್ದು, ತಮ್ಮನ್ನು ವದಂತಿಗಳಂತೆ ತಂಡದಿಂದ ಹೊರಗಟ್ಟಿದ ಮುಂಬೈ ಇಂಡಿಯನ್ಸ್ಗೆ ಇದು ಖಡಕ್ ತಿರುಗೇಟು ಇರಬಹುದು ಎಂದು ಅನೇಕರು ಊಹಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದಿಂದಲೇ ಐಪಿಎಲ್ಗೆ ಪದಾರ್ಪಣೆ ಮಾಡಿದ ಹಾರ್ದಿಕ್ ಪಾಂಡ್ಯ, 2022 ಮತ್ತು 2023ರಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ನಾಯಕನಾಗಿ ಸೇರಿಕೊಂಡರು. ಇದರಲ್ಲಿ, 2022ರಲ್ಲಿ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟ ಪಾಂಡ್ಯ, ಬಳಿಕ ಇನ್ನೊಂದು ಸೀಸನ್ನಲ್ಲಿ ಫೈನಲ್ಗೆ ಹೋಗಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋಲುಂಡಿತು. ಅದಾದ ಬಳಿಕ ಮತ್ತೇ ಮುಂಬೈ ಇಂಡಿಯನ್ಸ್ಗೆ ಬಂದ ಹಾರ್ದಿಕ್, ಪಡೆದಿದ್ದು ಕ್ಯಾಪ್ಟನ್ಸಿ ಪಟ್ಟ! ಅದುವೇ ರೋಹಿತ್ ಶರ್ಮಾರಿಂದ ಕಸಿದುಕೊಂಡಿದ್ದು ಎಂಬುದೇ ಇಂದಿಗೂ ಕ್ರಿಕೆಟ್ ಪ್ರಿಯರ ವಾದ.
ರೋಹಿತ್ ಶರ್ಮರಿಂದ ಬಲವಂತವಾಗಿ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿಯನ್ನು ಕಸಿದುಕೊಂಡ ಪಾಂಡ್ಯ, ದುಬಾರಿ ಮೊತ್ತದ ಸಂಭಾವನೆಯನ್ನು ಪಡೆದೇ ತಂಡಕ್ಕೆ ಮರಳಿದರು ಎಂಬುದು ಎಂಐ ಫ್ರಾಂಚೈಸಿ ಅಭಿಮಾನಿಗಳ ಕೋಪ. ಅಂತೆಯೇ, ನಾಯಕನಾಗಿ ತಂಡವನ್ನು ಮುನ್ನಡೆಸಲು ತೀರ ಹೆಣಗಾಡಿದ ಹಾರ್ದಿಕ್, ಪ್ಲೇಆಫ್ ಇರಲಿ, ಟೀಮ್ ಅನ್ನು ಅಂಕಪಟ್ಟಿಯ ಕೊನೇ ಸ್ಥಾನಗಳಲ್ಲಿ ಇರಿಸುವ ಮೂಲಕ ಚಾಂಪಿಯನ್ಸ್ ತಂಡವನ್ನು ಸೋಲಿನ ಹಾದಿಗೆ ದೂಡಿದ್ದು ಇವತ್ತಿಗೂ ಕ್ರಿಕೆಟ್ ಪ್ರೇಮಿಗಳ ಎದೆಯಲ್ಲಿ ಕಿಚ್ಚಾಗಿಯೇ ಉಳಿದಿದೆ.
ಅಂದು ರೋಹಿತ್ ನಾಯಕತ್ವವನ್ನು ಹಾರ್ದಿಕ್ ಕಸಿದು ಮುಂಬೈ ಇಂಡಿಯನ್ಸ ಕ್ಯಾಪ್ಟನ್ ಆದರು ಎಂಬ ಆರೋಪಗಳ ನಡುವೆ ಇದೀಗ ಪಂಜಾಬ್ ಕಿಂಗ್ಸ್ಗೆ ಟ್ರೇಡ್ ಆಗಿರುವ ಪಾಂಡ್ಯ, ಇಲ್ಲಿ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯನ್ನು ಕಿತ್ತುಕೊಳ್ಳುತ್ತಾರಾ ಎಂಬ ಪ್ರಶ್ನೆಗಳು ಮೂಡಿವೆ. ಸದ್ಯದ ಮಟ್ಟಿಗೆ ಆ ರೀತಿಯ ಯಾವುದೇ ವರದಿಗಳು ಅಥವಾ ವದಂತಿಗಳು ಇಲ್ಲದೇ ಹೋದರೂ, ಮುಂದಿನ ದಿನಗಳಲ್ಲಿ ಅಯ್ಯರ್ ಸ್ಥಾನವನ್ನು ಪಾಂಡ್ಯ ಪಡೆದರೆ ಯಾವುದೇ ಆಶ್ಚರ್ಯವಿಲ್ಲ ಎಂದೇ ಹೇಳಬಹುದು,(ಏಜೆನ್ಸೀಸ್).