ಹರಿಣರ ಆರ್ಭಟಕ್ಕೆ ಮಂಡಿಯೂರಿದ ವಿಂಡೀಸ್​​; ಭಾರತ ಸೆಮೀಸ್ ಹಾದಿ ಈಗ ಇನ್ನಷ್ಟು ಸುಲಭ! ಆದ್ರೆ... | ​WI vs SA

ವೆಸ್ಟ್​ ಇಂಡೀಸ್​ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ
ವೆಸ್ಟ್​ ಇಂಡೀಸ್​ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ
Published on

ಪ್ರಮುಖ ಮುಖ್ಯಾಂಶಗಳು

  • ವೆಸ್ಟ್ ಇಂಡೀಸ್​ ವಿರುದ್ಧ ಗೆದ್ದ ದಕ್ಷಿಣ ಆಫ್ರಿಕಾ
  • ಲೆಕ್ಕಾಚಾರದ ಪ್ರಕಾರವೇ ಗೆದ್ದು ಬೀಗಿದ ಹರಿಣರ ಪಡೆ
  • ಟೀಮ್ ಇಂಡಿಯಾ ಸೆಮೀಸ್ ಹಾದಿ ಸುಲಭವಾಗಿಸಿದ ಸೌತ್ ಆಫ್ರಿಕಾ
  • ರನ್​ರೇಟ್​ನಿಂದ ಬಚಾವ್​ ಆದರೂ ಭಾರತಕ್ಕಿದೆ ಈ ಎರಡು ಸವಾಲು
​WI vs SA: ಲೀಗ್​ ಹಂತದ ಸತತ 4 ಗೆಲುವಿನ ಬಳಿಕ, ಸೂಪರ್​-8 ಹಂತದ ಆರಂಭಿಕ ಪಂದ್ಯದಲ್ಲಿ ಬೃಹತ್​ ಗೆಲುವು ದಾಖಲಿಸಿ ಬೀಗಿರುವ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್​ ಇಂಡೀಸ್​ ತಂಡಗಳು ಟಿ20 ವಿಶ್ವಕಪ್​ನಲ್ಲಿ ಇಂದು (ಫೆ.26) ಮುಖಾಮುಖಿಯಾಗಿ ಸೆಣಸಾಡಿತು. ಈ ಪಂದ್ಯದಲ್ಲಿ ಯಾರಿಗೆ ಗೆಲುವು ಒಲಿಯಲಿದೆಯೋ ಆ ತಂಡಕ್ಕೆ ಸೆಮಿಫೈನಲ್​ಗೇರುವ ಸುವರ್ಣಾವಕಾಶ ಎನ್ನಲಾಗಿತ್ತು. ಅದೆಲ್ಲದಕ್ಕಿಂತ ಹೆಚ್ಚಾಗಿ, ಈ ಪಂದ್ಯ ಭಾರತದ ಪಾಲಿಗೂ ಮಹತ್ವದ್ದಾಗಿತ್ತು. ಲೆಕ್ಕಾಚಾರಗಳ ಪ್ರಕಾರ, ಕಡೆಗೂ ವಿಂಡೀಸ್​ನ ಬಗ್ಗುಬಡಿದ ದಕ್ಷಿಣ ಆಫ್ರಿಕಾ, ಇದೀಗ ಟೀಮ್ ಇಂಡಿಯಾ ಸೆಮೀಸ್​ ಹಾದಿಯನ್ನು ಸುಲಭವಾಗಿಸಿದೆ.
ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್​ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸೂಪರ್​-8 ಪಂದ್ಯದಲ್ಲಿ, ಹರಿಣರ ಪಡೆ ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ, ಬ್ಯಾಟ್​ ಮಾಡಿದ ವೆಸ್ಟ್ ಇಂಡೀಸ್​, 20 ಓವರ್ ಅಂತ್ಯಕ್ಕೆ 8 ವಿಕೆಟ್​ ಕಳೆದುಕೊಂಡು 176 ರನ್​ ಕಲೆಹಾಕಿತು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾಕ್ಕೆ ಕ್ಯಾಪ್ಟನ್​ ಐಡೆನ್​ ಮಾರ್ಕ್ರಮ್ (46 ಎಸೆತ 82 ರನ್​)​ ಮತ್ತು ರಿಕಲ್ಟನ್ (28 ಎಸೆತ 45 ರನ್​)​ ಅವರ ಅಜೇಯ ಸ್ಫೋಟಕ ಇನ್ನಿಂಗ್ಸ್ ಸುಲಭ ಗೆಲುವಿಗೆ ದಾರಿ ಮಾಡಿಕೊಟ್ಟಿತು. ಅದು ಕೇವಲ 1 ವಿಕೆಟ್​ ನಷ್ಟಕ್ಕೆ ಎಂಬುದು ಇಲ್ಲಿ ಗಮನಾರ್ಹ.

ವರ್ಕ್​ಔಟ್​ ಆಯ್ತು ಲೆಕ್ಕಾಚಾರ

ಮೊದಲೇ ಲೆಕ್ಕಾಚಾರ ಹಾಕಿಕೊಂಡಂತೆ ಟೀಮ್ ಇಂಡಿಯಾ ಸೆಮೀಫೈನಲ್​ ಹಾದಿ ಸುಲಭ ಆಗಬೇಕಾದರೆ, ಇಂದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ಗೆಲ್ಲಲೇಬೇಕಿತ್ತು. ಗೆದ್ದರೆ ಮಾತ್ರ ಟೀಮ್ ಇಂಡಿಯಾಗೆ ಮುಂದಿನ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್​ ವಿರುದ್ಧದ ಪಂದ್ಯದಲ್ಲಿ ರನ್​ರೇಟ್​ ಅವಶ್ಯಕತೆ ಇರುವುದಿಲ್ಲ ಎಂದು ಹೇಳಲಾಗಿತ್ತು. ಅಂತೆಯೇ, ಎಲ್ಲರ ಆಶಯ ಈಡೇರಿದ್ದು, ಹರಿಣರ ಪಡೆ ಟೀಮ್ ಇಂಡಿಯಾ ಸೆಮೀಸ್​ ಕನಸನ್ನು ಜೀವಂತವಾಗಿಸಿದೆ. ಆದ್ರೆ, ಇಲ್ಲಿಂದ ಮುಂದಿನ ಹಾದಿ ಸಂಪೂರ್ಣವಾಗಿ ಭಾರತದ ಕೈಯಲ್ಲಿದೆ.

ಮುಂದಿದೆ 2 ಸವಾಲು

ದಕ್ಷಿಣ ಆಫ್ರಿಕಾ ಏನೋ ಸೆಮೀಸ್​ ಹಾದಿಯನ್ನು ಭಾರತಕ್ಕೆ ಸುಲಭವಾಗಿಸಿದೆ. ಆದ್ರೆ, ಇಂದಿನ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮತ್ತು ಮಾ.01ರಂದು ನಡೆಯಲಿರುವ ವೆಸ್ಟ್ ಇಂಡೀಸ್​ ಎದುರು ಸೂರ್ಯಕುಮಾರ್ ಯಾದವ್​ ಪಡೆ ಗೆಲುವು ದಾಖಲಿಸಲೇಬೇಕು. ಇದು ಸಂಭವಿಸಿದರೆ ಮಾತ್ರ ಭಾರತ ತಂಡವು ಸೌತ್ ಆಫ್ರಿಕಾ ಜೊತೆಗೆ ಸೆಮೀಸ್​ಗೆ ಲಗ್ಗೆಯಿಡಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net