18 ವರ್ಷಗಳಿಂದ ಕಟ್ಟಿದ ಭದ್ರಕೋಟೆ! ಹಾರ್ದಿಕ್​, ರೋಹಿತ್​, ಬುಮ್ರಾ ಮುಖಗಳೇ ಹೇಳ್ತಿವೆ ಇಟ್ಟಿಗೆಯ ಕಥೆ... ಎಂಐ ಫ್ಯಾನ್​ ಆಕ್ರೋಶ

ಮುಂಬೈ ಇಂಡಿಯನ್ಸ್ ಫ್ರಾಂಚೈಸಿ
ಮುಂಬೈ ಇಂಡಿಯನ್ಸ್ ಫ್ರಾಂಚೈಸಿ
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ 19ನೇ ಆವೃತ್ತಿಯಲ್ಲಿ ಒಂದೇ ಒಂದು ಗೆಲುವು, ಇನ್ನೆಲ್ಲ ಸೋಲು
  • ಸೋಲಿಗಿಂತ ಹೆಚ್ಚಾಗಿ ಕಳಪೆ ಪ್ರದರ್ಶನ ತೋರುತ್ತಿರುವ ಮುಂಬೈ ಇಂಡಿಯನ್ಸ್
  • ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯ ಮಾತು ಕೇಳಲು ತಯಾರಿಲ್ಲ ಯಾರೊಬ್ಬರು?
Mumbai Indians: ನಿನ್ನೆ (ಏ.16) ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ 19ನೇ ಆವೃತ್ತಿಯ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಪಡೆ 7 ವಿಕೆಟ್​ಗಳ ಹೀನಾಯ ಸೋಲು ಅನುಭವಿಸಿತು. ಉತ್ತಮ ಬ್ಯಾಟಿಂಗ್​ ಮತ್ತು ಬೌಲಿಂಗ್ ಲೈನ್​ಅಪ್​ ಇದ್ದರೂ ಸಹ ಮೈದಾನದಲ್ಲಿ ಬ್ಯಾಕ್​ ಟು ಬ್ಯಾಕ್​ ಕಳಪೆ ಪ್ರದರ್ಶನ ತೋರುತ್ತಿರುವ ಎಂಐ ತಂಡದ ಆಟಗಾರರಿಗೆ ಅಷ್ಟಕ್ಕೂ ಏನಾಗಿದೆ ಎಂಬ ಪ್ರಶ್ನೆ, ಗೊಂದಲಗಳು ಸದ್ಯ ಫ್ರಾಂಚೈಸಿ ಅಭಿಮಾನಿಗಳಲ್ಲಿ ಬೆಂಬಿಡದೆ ಕಾಡುತ್ತಿದೆ.

ಐಪಿಎಲ್​ ಅಂಕಪಟ್ಟಿಯಲ್ಲಿ 9ನೇ ಸ್ಥಾನ

19ನೇ ಆವೃತ್ತಿಯ ಆರಂಭದಿಂದ ಇಲ್ಲಿಯವರೆಗೆ ಒಟ್ಟು ಐದು ಪಂದ್ಯಗಳನ್ನಾಡಿರುವ ಮುಂಬೈ ಇಂಡಿಯನ್ಸ್, ಗೆದ್ದಿರುವುದು ಕೇವಲ ಒಂದೇ ಒಂದು ಪಂದ್ಯ ಮಾತ್ರ. ರೋಹಿತ್​ ಶರ್ಮ, ರಿಕಲ್ಟನ್, ಕ್ವಿಂಟನ್​ ಡಿಕಾಕ್​, ಸೂರ್ಯಕುಮಾರ್ ಯಾದವ್​​ರಂತಹ ಸ್ಫೋಟಕ ಬ್ಯಾಟರ್​ಗಳನ್ನು ಇಟ್ಟುಕೊಂಡಿರುವ ಎಂಐ, ಹಾರ್ದಿಕ್​ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಸೇರಿ ಒಂದಷ್ಟು ಸ್ಪೆಷಲಿಸ್ಟ್​ ಬೌಲರ್​ಗಳಿದ್ದರೂ ಈ ಮಟ್ಟಿಗಿನ ಕಳಪೆ ಪ್ರದರ್ಶನ ನೀಡುತ್ತಿರುವುದು ಏಕೆ? ಎಂಬುದು ಸದ್ಯ ಅನುಮಾನಗಳಿಗೂ ಕಾರಣವಾಗಿದೆ.

ಒಗ್ಗಟ್ಟಿನ ಕೊರತೆ

ಹಾರ್ದಿಕ್​ ಪಾಂಡ್ಯ ನಾಯಕತ್ವದಲ್ಲಿ ಆಡುತ್ತಿರುವುದೇ ಸದ್ಯ ಇಷ್ಟೆಲ್ಲ ಸಮಸ್ಯೆಗೆ ಮೂಲ ಕಾರಣ ಎನ್ನುವಂತಾಗಿದೆ. ಪಾಂಡ್ಯ ಕ್ಯಾಪ್ಟನ್ಸಿಯಲ್ಲಿ ಕಣಕ್ಕಿಳಿಯುತ್ತಿರುವ ತಂಡ, ಉತ್ತಮ ಪ್ರದರ್ಶನ ನೀಡಲು ಹೆಣಗಾಡುತ್ತಿದೆ ಅನ್ನೋದಕ್ಕಿಂತ ಮನಸ್ಸು ಮಾಡುತ್ತಿಲ್ಲ ಎಂದು ಮೇಲ್ನೋಟಕ್ಕೆ ತೋರುತ್ತಿರುವುದಂತು ಸ್ಪಷ್ಟ. ರೋಹಿತ್ ಶರ್ಮ, ಸೂರ್ಯಕುಮಾರ್​ ಯಾದವ್​ರಿಂದ ಅಂದುಕೊಂಡಂತ ಇನ್ನಿಂಗ್ಸ್​ಗಳು ಬರುತ್ತಿಲ್ಲ. ಮತ್ತೊಂದೆಡೆ, ಆಡಿರುವ ಇಷ್ಟು ಪಂದ್ಯಗಳಲ್ಲಿ ವಿಶ್ವದ ಬೆಸ್ಟ್​ ಬೌಲರ್ ಎಂದೇ ಗುರುತಿಸಿಕೊಂಡಿರುವ ಬುಮ್ರಾರಿಂದ ಒಂದೇ ಒಂದು ವಿಕೆಟ್​ ಕೂಡ ಬಂದಿಲ್ಲ. ಇದೆಲ್ಲದಕ್ಕಿಂತ ಹೆಚ್ಚಾಗಿ, ಮೈದಾನದಲ್ಲಿ ಕ್ಯಾಪ್ಟನ್​ ಪಾಂಡ್ಯ ಮಾತನ್ನು ಬುಮ್ರಾ ಕೇಳಲು ನಿರಾಸಕ್ತಿ ತೋರುತ್ತಿರುವುದು ಊಹಾಪೋಹಗಳಿಗೆ ಪುಷ್ಠಿ ನೀಡುತ್ತಿದೆ.  ​  

ಕಿರಿಯ ಕ್ಯಾಪ್ಟನ್​

ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್​ ಮತ್ತು ಜಸ್ಪೀತ್ ಬುಮ್ರಾರಂತಹ ಸೀನಿಯರ್ಸ್​ಗಳು ಇರುವಾಗ, ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿರುವ ಹಾರ್ದಿಕ್​ ಪಾಂಡ್ಯ ಮಾತುಗಳನ್ನು ಕೇಳಲು ಯಾರೊಬ್ಬರಿಗೂ ಅಂತಹ ಆಸಕ್ತಿ ಇಲ್ಲ ಎಂಬುದು ಅಲ್ಲಲ್ಲಿ ಕಾಣಿಸುತ್ತಿದೆ. ಪಂದ್ಯ ಸೋತಾಗ ಡ್ರೆಸ್ಸಿಂಗ್ ರೂಮ್​ನಲ್ಲಿ ಎಲ್ಲಾ ಆಟಗಾರರ ಸಮ್ಮುಖದಲ್ಲಿ ಪಾಂಡ್ಯ ಮಾತನಾಡುವ ವಿಡಿಯೋಗಳನ್ನು ನೋಡಿದರೆ, ಯಾರೊಬ್ಬರು ಹೊಣೆ ಹೊತ್ತಿಕೊಳ್ಳುವುದು ಕಾಣುತ್ತಲೇ ಇಲ್ಲ. ಮತ್ತೊಂದೆಡೆ, ಮೈದಾನಕ್ಕಿಳಿಯುತ್ತಿದ್ದ ಮುಂಬೈ ಆಟಗಾರರಲ್ಲಿ ಅದರಲ್ಲೂ ಹಾರ್ದಿಕ್​ ಮುಖದಲ್ಲಿ ಉತ್ಸಾಹ ಅಥವಾ ನಗುವಿನ ಮುಖ ಕಣ್ಮರೆಯಾಗಿದೆ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿ ನೋಡಿದರೆ, ತಂಡದಲ್ಲಿ ಆಂತರಿಕ ಸಮಸ್ಯೆ ಇರುವುದಂತು ಸ್ಪಷ್ಟ ಎಂದೇ ಹೇಳಬಹುದು.  

ಫ್ಯಾನ್ಸ್​ ಅಸಮಾಧಾನ

ಒಂದೇ ಒಂದು ಪಂದ್ಯವನ್ನು ಗೆದ್ದಿರುವುದು ಬಿಟ್ಟರೆ ಉಳಿದೆಲ್ಲ ಮ್ಯಾಚ್​ಗಳಲ್ಲಿ ಸೋತು, ಕಳಪೆ ಪ್ರದರ್ಶನ ನೀಡುತ್ತಿರುವ ತಮ್ಮ ನೆಚ್ಚಿನ ತಂಡದ ಬಗ್ಗೆ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 18 ವರ್ಷಗಳಿಂದ ಕಟ್ಟಿದ ಭದ್ರಕೋಟೆಯ ಇಟ್ಟಿಗೆಗಳು ಈಗ ಒಂದೊಂದಾಗಿ ಉದುರಿ ಹೋಗುತ್ತಿವೆ. ವಾಂಖೆಡೆ ಸ್ಟೇಡಿಯಂ ನಮ್ಮ ಗೆಲುವಿನ ಕೋಟೆಯಾಗಿತ್ತು. ಆದರೀಗ... ಎಂದು ಭಾರೀ ನಿರಾಶೆ, ಬೇಸರ ಹೊರಹಾಕಿದ್ದಾರೆ.   
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net