3,4,8,14... ಇಷ್ಟಾದರೂ ಫ್ರಾಂಚೈಸಿಗೆ ಬುದ್ಧಿ ಬಂದಿಲ್ಲ! ಏನಿದು ರಾಜಸ್ಥಾನ ರಾಯಲ್ಸ್​ ಲೆಕ್ಕಾಚಾರ? | Rajasthan Royals

ರಾಜಸ್ಥಾನ ರಾಯಲ್ಸ್ ಆಟಗಾರರು
ರಾಜಸ್ಥಾನ ರಾಯಲ್ಸ್ ಆಟಗಾರರು
Published on

ಪ್ರಮುಖ ಮುಖ್ಯಾಂಶಗಳು

  • 6 ಪಂದ್ಯಗಳಲ್ಲಿ 4 ಗೆಲುವು, 2 ಸೋಲು ಕಂಡಿರುವ ರಾಜಸ್ಥಾನ ರಾಯಲ್ಸ್​
  • ವೈಭವ್ ಸೂರ್ಯವಂಶಿ, ಜೈಸ್ವಾಲ್​ ಮತ್ತು ಜ್ಯುರೆಲ್​ ಬಿಟ್ಟರೆ ಇನ್ಯಾರಿಂದಲೂ ಅಬ್ಬರದ ಬ್ಯಾಟಿಂಗ್ ಇಲ್ಲ
  • ಕ್ಯಾಪ್ಟನ್​ ಆಗಿ ರಿಯಾನ್​ ಪರಾಗ್ ಮಾಡುತ್ತಿರುವುದೇನು?
  • ಏನಿದು ಆರ್​ಆರ್ ಫ್ರಾಂಚೈಸಿಯ​ ಲೆಕ್ಕಾಚಾರ?
Rajasthan Royals: ಪ್ರಸಕ್ತ ನಡೆಯುತ್ತಿರುವ 19ನೇ ಐಪಿಎಲ್​ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪಡೆ ಉತ್ತಮ ಬ್ಯಾಟಿಂಗ್​​ ಪ್ರದರ್ಶನದ ಮೂಲಕ ಹೆಚ್ಚು ಗೆಲುವನ್ನು ದಾಖಲಿಸಿದೆ. ಇಲ್ಲಿಯವರೆಗೆ ಆಡಿರುವ 6 ಪಂದ್ಯಗಳಲ್ಲಿ 4 ರಲ್ಲಿ ಜಯ, 2ರಲ್ಲಿ ಸೋಲುಂಡಿರುವ ಆರ್​ಆರ್​ಗೆ ಬ್ಯಾಟಿಂಗ್​ ಬಲವಿದೆಯೇ ಹೊರತು ಬೌಲಿಂಗ್​ನಲ್ಲಿ ಅಂತಹ ಪ್ರದರ್ಶನ ಬಂದಿಲ್ಲ. ಇದೆಲ್ಲದಕ್ಕಿಂತ ಮುಖ್ಯವಾಗಿ, ನಾಯಕನ ಆಟವನ್ನೇ ತೋರದ ರಿಯಾನ್​ ಪರಾಗ್​ಗೆ ಕ್ಯಾಪ್ಟನ್​ ಸ್ಥಾನ ನೀಡಿರುವ ಫ್ರಾಂಚೈಸಿಗೆ ಏನಾಗಿದೆ ಎಂಬುದೇ ಸದ್ಯದ ಪ್ರಶ್ನೆ. 
ಹಾಲಿ ಚಾಂಪಿಯನ್ಸ್​ ರಾಜಸ್ಥಾನ ರಾಯಲ್ಸ್ ತಂಡದ ನಾಯಕನಾಗಿ ಸಂಜು ಸ್ಯಾಮ್ಸನ್​ ಇದ್ದರು. ಆದರೆ, ಸಿಎಸ್​ಕೆಯೊಂದಿಗೆ ಟ್ರೇಡ್​ ಮಾಡಿದ ಆರ್​ಆರ್​, ಸಂಜು ಬದಲಿಗೆ ರವೀಂದ್ರ ಜಡೇಜಾರನ್ನು ಕರೆದುಕೊಂಡಿತು. ಬಹುತೇಕರು, ಜಡ್ಡುಗೆ ಕ್ಯಾಪ್ಟನ್​ ಸ್ಥಾನ ಖಚಿತ ಎಂದು ನಿರೀಕ್ಷಿಸಿದ್ದರು. ಆದರೆ, ಫ್ರಾಂಚೈಸಿ ರಿಯಾನ್​ ಪರಾಗ್​ಗೆ ಕ್ಯಾಪ್ಟನ್​ ಸ್ಥಾನ ನೀಡುವ ಮೂಲಕ ತಂಡದ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿತು. ಇಲ್ಲಿ ಯಾವ ಆಧಾರದ ಮೇಲೆ ಪರಾಗ್​ಗೆ ನಾಯಕನ ಸ್ಥಾನ ಕೊಟ್ಟಿದ್ದಾರೆ ಅನ್ನೋದು ಪ್ರಶ್ನಾತೀತ.   
ಸನ್​ರೈಸರ್ಸ್​ ವಿರುದ್ಧದ ಪಂದ್ಯದಲ್ಲಿ 57 ರನ್​ಗಳಿಂದ ಸೋತ ಆರ್​ಆರ್​, ಕಳೆದ ಮ್ಯಾಚ್​ನಲ್ಲಿ ಕೋಲ್ಕತ ನೈಟ್​ ರೈಡರ್ಸ್​ ಎದುರು ಹೀನಾಯ ಸೋಲು ಅನುಭವಿಸಿತು. ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್ ಮತ್ತು ಧ್ರುವ್ ಜ್ಯುರೆಲ್​ ಅವರ ಬಲಿಷ್ಠ ಬ್ಯಾಟಿಂಗ್​ ತಂಡದ ದೊಡ್ಡ ಶಕ್ತಿಯಾಗಿದೆ. ಈ ಮೂವರ ವಿಕೆಟ್​ ಹೋದರೆ, ನಂತರ ಬಂದವರು ಹೆಚ್ಚು ಕಾಲ ಕ್ರೀಸ್​ನಲ್ಲಿ ಉಳಿಯಲು ಪರದಾಡುತ್ತಾರೆ. ಅದರಲ್ಲಿ, ಕ್ಯಾಪ್ಟನ್ ರಿಯಾನ್ ಪರಾಗ್​ ಮೊದಲು. 
ನಾಯಕನಾಗಿ ಜವಾಬ್ದಾರಿ ಹೊತ್ತು, ಕಷ್ಟದ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾಗಬೇಕಾದ ರಿಯಾನ್ ಪರಾಗ್​, ತಮಗೆ ಸಿಕ್ಕ ಅವಕಾಶಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿರುವುದು ಗಮನಾರ್ಹ. ಇಲ್ಲಿಯವರೆಗೆ ಆಡಿರುವ ಅಷ್ಟು ಪಂದ್ಯಗಳಲ್ಲಿ ಪರಾಗ್​ ಗಳಿಸಿರುವ ಅತಿ ಹೆಚ್ಚು ಸ್ಕೋರ್​ ಎಂದರೆ ಅದು 20 ರನ್​ ಅಷ್ಟೇ.  ಬ್ಯಾಟಿಂಗ್​ ಲೈನ್​ನಲ್ಲಿ ಟಾಪ್​ ಆರ್ಡರ್​ನ ಮೂವರನ್ನು ಹೊರತುಪಡಿಸಿದರೆ, ಇನ್ನೆಲ್ಲರೂ ಸ್ಕೋರ್​ ತಂದುಕೊಡಲು ಹೆಣಗಾಡುತ್ತಿರುವುದು ಫ್ರಾಂಚೈಸಿಗೆ ಚಿಂತಿಸುವ ವಿಷಯ. ಅದರಲ್ಲೂ ಕ್ಯಾಪ್ಟನ್​ ಆಟ ಮಾತ್ರ ಪ್ರಶ್ನಿಸಲೇಬೇಕಿದೆ.
ಇನ್ನು ಪರಾಗ್ ನಂತರ ಬರುವ ರವೀಂದ್ರ ಜಡೇಜಾ, ಶಿಮ್ರಾನ್​ ಹೆಟ್​ಮೈರ್​ ಕೆಲವು ಪಂದ್ಯಗಳಲ್ಲಿ ಉತ್ತಮ ಇನ್ನಿಂಗ್ಸ್​ ನೀಡುವ ಮೂಲಕ ತಂಡದ ಪರ ಜವಾಬ್ದಾರಿಯ ಆಟ ತೋರಿದ್ದಾರೆ. ಆದರೆ, ನಾಯಕನಾಗಿ ಕಣಕ್ಕಿಳಿಯುವ ಪರಾಗ್​, ಬ್ಯಾಟಿಂಗ್ ಮತ್ತು ಫೀಲ್ಡಿಂಗ್​ನಲ್ಲಿ ಅಂತಹ ಕಮಾಲ್​ ಮಾಡದಿರುವುದು ಕ್ಯಾಪ್ಟನ್​ ಸ್ಥಾನವನ್ನು ಪ್ರಶ್ನಿಸದೆ ಬಿಡದು. ಇಲ್ಲಿಯವರೆಗೆ ಆಡಿರುವ 6 ಪಂದ್ಯಗಳಲ್ಲಿ ರಿಯಾನ್​ ಪರಾಗ್​ ಗಳಿಸಿದ ಒಟ್ಟು ಹಾಗೂ ಪ್ರತ್ಯೇಕ ರನ್​ ಎಷ್ಟು ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.

ಪರಾಗ್ ಬ್ಯಾಟಿಂಗ್​​ ಇನ್ನಿಂಗ್ಸ್​ ವಿವರ 

1. ಚೆನ್ನೈ ಸೂಪರ್ ಕಿಂಗ್ಸ್​ ಎದುರು 14 (11 ಎಸೆತ) ರನ್ 
2. ಗುಜರಾತ್​ ಟೈಟನ್ಸ್ ವಿರುದ್ಧ 8 (4 ಎಸೆತ) ರನ್​
3. ಮುಂಬೈ ಇಂಡಿಯನ್ಸ್​ ಎದುರು 20 (10 ಎಸೆತ) ರನ್​
4. ಆರ್​ಸಿಬಿ ವಿರುದ್ಧ 3 (5 ಎಸೆತ) ರನ್​
5. ಎಸ್​ಆರ್​ಎಚ್​ ಎದುರು 4 (6 ಎಸೆತ) ರನ್​
6. ಕೆಕೆಆರ್​ ವಿರುದ್ಧ 12 (14 ಎಸೆತ) ರನ್ 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net