ಚಿಪ್ಸ್, ಕೂಲ್​ಡ್ರಿಂಕ್ಸ್, ನೀರಿನ ಬಾಟಲಿ... ಐಪಿಎಲ್​ ಪಂದ್ಯ ನೋಡಲು ಬರುವ ಕ್ರಿಕೆಟ್​ ಫ್ಯಾನ್ಸ್​ಗಳಿಗೆ ಇದೆಂಥಾ ಮೋಸ!

ಐಪಿಎಲ್​ ಪಂದ್ಯ ವೀಕ್ಷಣೆಯ ವೇಳೆ ಆದ ಘಟನೆ
ಐಪಿಎಲ್​ ಪಂದ್ಯ ವೀಕ್ಷಣೆಯ ವೇಳೆ ಆದ ಘಟನೆ
Published on
IPL Stadiums: ಪ್ರಸಕ್ತ ನಡೆಯುತ್ತಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಪ್ರತಿಯೊಂದು ಪಂದ್ಯಗಳು ಬಹಳ ರೋಚಕ ಹಾಗೂ ಕುತೂಹಲಕಾರಿ ಆಗಿವೆ. ಐಪಿಎಲ್​ನ ಬಲಿಷ್ಠ ತಂಡಗಳು ಎಂದೇ ಗುರುತಿಸಿಕೊಂಡಿರುವ ಆರ್​ಸಿಬಿ, ಸಿಎಸ್​ಕೆ, ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಪಡೆಗಳು ಸಾವಿರಾರು ಸಂಖ್ಯೆಯಲ್ಲಿ ಮೈದಾನಕ್ಕೆ ಬರುವ ಕ್ರಿಕೆಟ್​ ಪ್ರೇಮಿಗಳಿಗೆ ಭರಪೂರ ಮನರಂಜನೆ ನೀಡುತ್ತಿವೆ. ಅವರು ಕೊಟ್ಟ ಕಾಸಿಗೆ ಮೋಸ ಮಾಡುತ್ತಿಲ್ಲ. ಆದರೆ, ಸ್ಟೇಡಿಯಂನಲ್ಲಿರುವ ತಿಂಡಿ-ತಿನಿಸುಗಳ ಮಳಿಗೆಯವರು ಮಾತ್ರ ಅಭಿಮಾನಿಗಳ ಜೇಬಿಗೆ ಕತ್ತರಿ ಹಾಕುತ್ತಿರುವುದು ಭಾರೀ ಬೇಸರದ ಸಂಗತಿ.
ಸಾಮಾನ್ಯವಾಗಿ ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಿ, ಆಟಗಾರರನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯಾ ಪಂದ್ಯಗಳು ನಡೆಯುವ ಕ್ರೀಡಾಂಗಣಕ್ಕೆ ಬಂದಿರುತ್ತಾರೆ. 7:30ರ ಸಮಯಕ್ಕೆ ಆರಂಭಗೊಳ್ಳುವ ಪಂದ್ಯಕ್ಕೆ 2 ಅಥವಾ 3 ಗಂಟೆಗೂ ಮುಂಚೆಯೇ ಆಗಮಿಸುವ ಫ್ಯಾನ್ಸ್​, ಕೆಲವೊಮ್ಮೆ ಊಟ-ತಿಂಡಿ ಮಾಡದೆಯೇ, ಸೀಟಿನಲ್ಲಿ ಕುಳಿತು ತಮ್ಮ ತಂಡದ ಆಟಗಾರರು ಮೈದಾನದಲ್ಲಿ ನಡೆಸುವ ಅಭ್ಯಾಸವನ್ನು ನೋಡುತ್ತ ಕುಳಿತಿರುತ್ತಾರೆ. ಈ ಸಂದರ್ಭದಲ್ಲಿ, ಮ್ಯಾಚ್​ ನೋಡುವಾಗ ಅಥವಾ ಸಣ್ಣದಾಗಿ ಕಾಡುವ ಹಸಿವನ್ನು ನೀಗಿಸಲು, ಕ್ರೀಡಾಂಗಣಗಳಲ್ಲಿ ಸಿಗುವ ಚಿಪ್ಸ್​ ಮತ್ತು ನೀರಿನ ಬಾಟಲಿಯನ್ನು ಖರೀದಿಸಲು ಹೋದರೆ, ಅಂಗಡಿಯವರಿಂದ ದುಪ್ಪಟ್ಟು ಹಣ ಕೀಳುವ ಕೆಲಸ. 
ಚಿಪ್ಸ್​, ಕೂಲ್​ ಡ್ರಿಂಕ್ಸ್ ಮತ್ತು ನೀರಿನ ಬಾಟಲಿ​ಗಳನ್ನು ಹೆಚ್ಚಾಗಿ ಮಾರಾಟ ಮಾಡುವ ಸ್ಟೇಡಿಯಂ ಅಂಗಡಿ ಮಾಲೀಕರು, ಮೈದಾನಕ್ಕೆ ಬರುವ ಕ್ರಿಕೆಟ್​ ಅಭಿಮಾನಿಗಳ ಬಳಿ ನಿಗದಿತ ದರಕ್ಕಿಂತ ದುಪ್ಪಟ್ಟು ಹಣ ಪಡೆಯುವ ಮೂಲಕ ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. 50 ರೂ. ಇರುವ ಚಿಪ್ಸ್​ ಪ್ಯಾಕೆಟ್​ಗೆ 100 ರೂ. ಎಂದು ತಮ್ಮದೇ ಒಂದು ಸ್ಟಿಕರ್​ ಅಂಟಿಸಿ, ಅದನ್ನು ಜನರಿಗೆ ಮಾರುತ್ತಿರುವುದು ತೀರ ಕೆರಳಿಸುವ ಸಂಗತಿ.
ಈ ಕುರಿತು ಅಭಿಮಾನಿಯೊಬ್ಬರು, ಅಂಗಡಿಯವರು ಹೆಚ್ಚಿನ ಲಾಭದ ದಾಹಕ್ಕಾಗಿ ಜನರಿಗೆ ಮಾಡುತ್ತಿರುವ ಮೋಸದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 50 ರೂ. ಚಿಪ್ಸ್ ಪ್ಯಾಕೆಟ್​ಗೆ 100 ರೂ. ಪಡೆಯುತ್ತಿರುವ ಕುರಿತು ಅವರು ಕಳವಳ ವ್ಯಕ್ತಪಡಿಸಿದ್ದಾರೆ. 10, 20 ರೂ. ಅಲ್ಲ! ಬದಲಿಗೆ ಬರೋಬ್ಬರಿ 50 ರೂ. ಹೆಚ್ಚಾಗಿ ವಸೂಲಿ ಮಾಡುತ್ತಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ರೀತಿ ಜನರಿಗೆ ಮೋಸ ಮಾಡುವವರಿಗೆ ಕ್ರೀಡಾಂಗಣದ ಆಡಳಿತ ಮಂಡಳಿ ತಕ್ಕ ಪಾಠ ಕಲಿಸಬೇಕು.  ದುಪ್ಪಟ್ಟು ಹಣ ಪಡೆಯುವವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ಹಲವರು ಅಭಿಪ್ರಾಯಿಸಿದ್ದಾರೆ. ಇಂತಹ ಪ್ರಕರಣಗಳು ಕಂಡುಬಂದಾಗ, ಗ್ರಾಹಕರು ಧ್ವನಿ ಎತ್ತಬೇಕು ಮತ್ತು ಅಲ್ಲಿನ ಆಡಳಿತ ಮಂಡಳಿ ಕೂಡ ಇದಕ್ಕೆಲ್ಲ ಅವಕಾಶ ಕೊಡದಂತೆ ಕಟ್ಟೆಚ್ಚರ ವಹಿಸಬೇಕು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net