ಬ್ಯಾಟಿಂಗ್ ಆರಂಭಕ್ಕೂ ಮುನ್ನವೇ ಸ್ಕೋರ್ ಬೋರ್ಡ್‌ನಲ್ಲಿತ್ತು 5 ರನ್!...ಅಷ್ಟಕ್ಕೂ ಅಫ್ಘಾನಿಸ್ತಾನ ತಂಡದ ನಾಯಕ ಮಾಡಿದ ಆ ತಪ್ಪೇನು..? | Penalty Runs

Penalty Runs > ಬ್ಯಾಟಿಂಗ್ ಆರಂಭಕ್ಕೂ ಮುನ್ನವೇ ಸ್ಕೋರ್ ಬೋರ್ಡ್‌ನಲ್ಲಿತ್ತು 5 ರನ್
Penalty Runs > ಬ್ಯಾಟಿಂಗ್ ಆರಂಭಕ್ಕೂ ಮುನ್ನವೇ ಸ್ಕೋರ್ ಬೋರ್ಡ್‌ನಲ್ಲಿತ್ತು 5 ರನ್
Published on
Penalty Runs: ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಸರಣಿಯ ಮೂರನೇ ಹಾಗೂ ಅಂತಿಮ ಏಕದಿನ (ODI) ಪಂದ್ಯದಲ್ಲಿ ಭಾರತ ತಂಡವು ಯಾವುದೇ ಎಸೆತವನ್ನು ಎದುರಿಸುವ ಮುನ್ನವೇ 5/0 ರನ್‌ಗಳೊಂದಿಗೆ ತನ್ನ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಪ್ರವಾಸಿ ಅಫ್ಘಾನಿಸ್ತಾನ ತಂಡದ ಬ್ಯಾಟರ್‌ಗಳು ಪಿಚ್‌ನ ಡೇಂಜರ್​ ಏರಿಯಾದಲ್ಲಿ (Danger Area) ಓಡಿದ ಕಾರಣಕ್ಕಾಗಿ ಅವರಿಗೆ 5 ಪೆನಾಲ್ಟಿ ರನ್‌ಗಳ ದಂಡ ವಿಧಿಸಲಾಗಿದ್ದು, ಈ ರನ್‌ಗಳು ಭಾರತದ ಖಾತೆ ಸೇರಿವೆ.
ಅಫ್ಘಾನಿಸ್ತಾನ ತಂಡದ ನಾಯಕ ಹಷ್ಮತುಲ್ಲಾ ಶಾಹಿದಿ ಪಿಚ್‌ನ ಡೇಂಜರ್​ ಏರಿಯಾದಲ್ಲಿ (Danger Area) ಹಲವು ಬಾರಿ ಓಡುವ ಮೂಲಕ ನಿಯಮ ಉಲ್ಲಂಘಿಸಿದ್ದರು. ಅವರ ಈ ಬೇಜವಾಬ್ದಾರಿಯ ನಡೆಗಾಗಿ ಅಂಪೈರ್‌ಗಳು 21ನೇ ಓವರ್‌ನಲ್ಲಿ ಮತ್ತು ಆ ಬಳಿಕ 31ನೇ ಓವರ್‌ನಲ್ಲಿ ನಿಯಮದ ಪ್ರಕಾರ ಅಂತಿಮ ಎಚ್ಚರಿಕೆಗಳನ್ನು ನೀಡಿದ್ದರು.
ಇದಾದ ಬಳಿಕ 40ನೇ ಓವರ್‌ನ ಅಂತ್ಯದಲ್ಲಿ ಶಾಹಿದಿ ಅವರಿಗೆ ಮತ್ತೊಂದು ಎಚ್ಚರಿಕೆ ನೀಡಲಾಯಿತು. ವಾಷಿಂಗ್ಟನ್ ಸುಂದರ್ ಬೌಲಿಂಗ್‌ನಲ್ಲಿ ರಶೀದ್ ಖಾನ್ ಅವರೊಂದಿಗೆ ಸ್ಟ್ರೈಕ್ ಬದಲಾಯಿಸಲು ಸಿಂಗಲ್ ರನ್‌ಗಾಗಿ ಓಡುವಾಗ ಅವರು ಮತ್ತೆ ಅದೇ ವಲಯದೊಳಗೆ ಪ್ರವೇಶಿಸಿದರು. ಓಟದ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಅಫ್ಘಾನಿಸ್ತಾನ ತಂಡಕ್ಕೆ ಆ ಸಿಂಗಲ್ ರನ್ ನಿರಾಕರಿಸಲಾಯಿತು ಮತ್ತು ಅವರ ವಿರುದ್ಧ 5 ಪೆನಾಲ್ಟಿ ರನ್‌ಗಳ ದಂಡ ವಿಧಿಸಲಾಯಿತು. ಇದೇ ಕಾರಣದಿಂದಾಗಿ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದಾಗ ಭಾರತ ತನ್ನ ಇನ್ನಿಂಗ್ಸ್ ಅನ್ನು 5/0 ರನ್‌ಗಳಿಂದ ಆರಂಭಿಸಿತು.

ನಿಯಮ ಹೇಳೋದೇನು..?

ಎಂಸಿಸಿ (MCC) ನಿಯಮ 41.14.2 ರ ಪ್ರಕಾರ, ಬ್ಯಾಟರ್‌ಗಳು ಉದ್ದೇಶಪೂರ್ವಕವಾಗಿ ಪಿಚ್‌ಗೆ ಹಾನಿ ಉಂಟುಮಾಡಿದರೆ ಈ ಉಲ್ಲಂಘನೆಯನ್ನು ಗಮನಿಸಿದ ತಕ್ಷಣ ಅಂಪೈರ್, ಚೆಂಡು ಡೆಡ್ (Dead) ಆದಾಗ ಮತ್ತೊಬ್ಬ ಅಂಪೈರ್‌ಗೆ ವಿಷಯವನ್ನು ತಿಳಿಸಬೇಕು. ನಂತರ ಅಂಪೈರ್ ಇಬ್ಬರೂ ಬ್ಯಾಟರ್‌ಗಳಿಗೆ ಈ ಅಭ್ಯಾಸವು ಸರಿಯಲ್ಲ ಎಂದು ಎಚ್ಚರಿಸಬೇಕು ಮತ್ತು ಇದು ಮೊದಲ ಹಾಗೂ ಅಂತಿಮ ಎಚ್ಚರಿಕೆ ಎಂದು ಸೂಚಿಸಬೇಕು. ಈ ಎಚ್ಚರಿಕೆಯು ಇಡೀ ಇನ್ನಿಂಗ್ಸ್‌ನಾದ್ಯಂತ ಅನ್ವಯಿಸುತ್ತದೆ.
ನಿಯಮ 41.14.3 ರ ಪ್ರಕಾರ, ಆ ಇನ್ನಿಂಗ್ಸ್‌ನಲ್ಲಿ ಯಾವುದೇ ಬ್ಯಾಟರ್‌ನಿಂದ ಆ ಘಟನೆ ಮರುಕಳಿಸಿದರೆ, ಉಲ್ಲಂಘನೆಯನ್ನು ನೋಡಿದ ಅಂಪೈರ್, ಚೆಂಡು ಡೆಡ್ ಆದಾಗ ಮತ್ತೊಬ್ಬ ಅಂಪೈರ್‌ಗೆ ಮಾಹಿತಿ ನೀಡಬೇಕು. ಅಂಪೈರ್ ಬ್ಯಾಟಿಂಗ್ ತಂಡ ಗಳಿಸಿದ ಆ ರನ್‌ಗಳನ್ನು ರದ್ದುಗೊಳಿಸಿ, ಬ್ಯಾಟ್ಸಮನ್​ಗೆ ಕ್ರೀಸ್‌ಗೆ ಮರಳಿ ಕಳುಹಿಸಬೇಕು. ಆ ಎಸೆತವು ನೋ ಬಾಲ್ ಅಥವಾ ವೈಡ್ ಆಗಿದ್ದರೆ, ಅದನ್ನು ಸ್ಕೋರರ್‌ಗಳಿಗೆ ತಿಳಿಸಬೇಕು. ಇದರೊಂದಿಗೆ ಫೀಲ್ಡಿಂಗ್ ತಂಡಕ್ಕೆ 5 ಪೆನಾಲ್ಟಿ ರನ್‌ಗಳನ್ನು ನೀಡಬೇಕು. ಮೈದಾನದಲ್ಲಿಟ್ಟ ಹೆಲ್ಮೆಟ್‌ಗೆ ಚೆಂಡು ತಗುಲಿದಾಗ ಕೊಡುವ ಪೆನಾಲ್ಟಿ (ನಿಯಮ 28.3) ಹೊರತುಪಡಿಸಿ, ನಿಯಮಾವಳಿಗಳ ಪ್ರಕಾರ ಅನ್ವಯವಾಗುವ ಇತರ ಯಾವುದೇ 5 ರನ್‌ಗಳ ಪೆನಾಲ್ಟಿಯನ್ನು ಇಲ್ಲಿ ನೀಡಬಹುದು ಎನ್ನಲಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net