ಯಾರೀ ಮಂಗೇಶ್​ ಯಾದವ್​? ಲಾರಿ ಚಾಲಕನ ಪುತ್ರನ ಮೇಲೆ ಆರ್​ಸಿಬಿಗೆ ಯಾಕಿಷ್ಟು ಭರವಸೆ? ಆತನ ಬಳಿ ಇರುವ ಬ್ರಹ್ಮಾಸ್ತ್ರ ಏನು?

ಆರ್​ಸಿಬಿ ಯುವ ವೇಗಿ ಮಂಗೇಶ್​ ಯಾದವ್
ಆರ್​ಸಿಬಿ ಯುವ ವೇಗಿ ಮಂಗೇಶ್​ ಯಾದವ್
Published on

ಪ್ರಮುಖ ಮುಖ್ಯಾಂಶಗಳು

  • ಮಾ.28ರಿಂದ ಆರ್​ಸಿಬಿ ಮತ್ತು ಸನ್​ರೈಸರ್ಸ್ ಹೈದರಾಬಾದ್​ ನಡುವೆ ಮೊದಲ ಐಪಿಎಲ್ ಪಂದ್ಯ
  • ಆರ್​ಸಿಬಿ ತಂಡ ಸೇರಿದ ಯುವ ವೇಗಿ ಮಂಗೇಶ್ ಯಾದವ್
  • ಪುತ್ರನ ಕ್ರಿಕೆಟ್​ ಕನಸಿಗೆ ತಮ್ಮ ಆಸೆಗಳನ್ನೇ ತ್ಯಾಗ ಮಾಡಿದ ತಂದೆ
ಬೆಂಗಳೂರು: ಇದೇ ಶನಿವಾರ (ಮಾ.28) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಡುವೆ ಐಪಿಎಲ್​ 19ನೇ ಆವೃತ್ತಿಯ ಮೊದಲ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕಾಗಿ ಕ್ರಿಕೆಟ್​ ಅಭಿಮಾನಿಗಳು ಭಾರೀ ಕಾತರ ವ್ಯಕ್ತಪಡಿಸಿದ್ದು, ಕಿಕ್​ಸ್ಟಾರ್ಟ್​ ಪಂದ್ಯದ ಎಲ್ಲ ಟಿಕೆಟ್​ಗಳ ಸೋಲ್ಡ್​ ಔಟ್ ಆಗಿವೆ. ಈ ಮಧ್ಯೆ, ಆರ್​ಸಿಬಿಯ ಯುವ ವೇಗಿ ಮೇಲೆ ಫ್ರಾಂಚೈಸಿಯ ಫ್ಯಾನ್ಸ್​ ಕಣ್ಣು ಬಿದ್ದಿದೆ.
ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ 5.8 ಕೋಟಿ ರೂ.ಗೆ ಆರ್​ಸಿಬಿ ಪಾಲಾದ ಮಂಗೇಶ್​ ಯಾದವ್​ ಮೇಲೆ ಸದ್ಯ ಭಾರೀ ಭರವಸೆ ಮೂಡಿದೆ. ಲಾರಿ ಚಾಲಕನ ಪುತ್ರ ಮಂಗೇಶ್​, ಕಡು ಬಡತನದಲ್ಲಿ ಅರಳಿದ ಪ್ರತಿಭೆ. ಕುಟುಂಬದ ಹೊಟ್ಟೆ ತುಂಬಿಸಲು, ಜೀವನ ಸಾಗಿಸಲು ಲಾರಿ ಚಾಲಕರಾಗಿ ಸೇರಿಕೊಂಡ ಮಂಗೇಶ್​ ಅವರ ತಂದೆ, ಕಷ್ಟದ ಹಾದಿಯ ಮಧ್ಯೆಯೂ ಮಗನ ಭವಿಷ್ಯ ರೂಪಿಸಲು ಪಟ್ಟ ಶ್ರಮ ಅಷ್ಟಿಷ್ಟಲ್ಲ.

ಯಾರು ಈ ಮಂಗೇಶ್ ಯಾದವ್​?

ಮಂಗೇಶ್ ಯಾದವ್ ಕಡು ಬಡತನದ ಹಿನ್ನೆಲೆಯಿಂದ ಬಂದಿರುವ ಯುವಕ. ಬಾಲ್ಯದಿಂದಲೇ ಒಬ್ಬ ಯಶಸ್ವಿ ಕ್ರಿಕೆಟರ್​ ಆಗಬೇಕೆಂದು ಮೈದಾನದಲ್ಲಿ ಶ್ರಮಿಸುತ್ತಿದ್ದ ಪುತ್ರನ ಕ್ರಿಕೆಟ್ ಕನಸನ್ನು ನನಸಾಗಿಸಿದ್ದೇ ತಂದೆ. ಬೆಳಗಿನ ಜಾವ 3 ಗಂಟೆಗೆ ಎದ್ದು, ಅಪಾಯಕಾರಿ ರಸ್ತೆಗಳಲ್ಲಿ ಡ್ರೈವಿಂಗ್ ಮಾಡುತ್ತಾ ಹಣ ಉಳಿಸಿದ ಅವರು, ಮಂಗೇಶ್ ಕ್ರಿಕೆಟ್ ಕೋಚಿಂಗ್ ಮತ್ತು ಉಪಕರಣಗಳಿಗೆ ತಗಲುವ ಖರ್ಚನ್ನು ತಮ್ಮ ಆಸೆಗಳನ್ನು ಬದಿಗಿಡುವ ಮೂಲಕ ನೋಡಿಕೊಂಡಿದ್ದಾರೆ.
"ಹಣ ಹೊಂದಿಸಲು ನಾನು ತುಂಬಾನೇ ಕಷ್ಟಪಡಬೇಕಾಯಿತು. ಕೆಲವೊಮ್ಮೆ ರಾತ್ರಿ ನಿದ್ದೆ ಬರುತ್ತಿರಲಿಲ್ಲ, ಅವನಿಗೆ ಹಣ ಹೇಗೆ ಒದಗಿಸುವುದು ಎಂದು ಯೋಚಿಸುತ್ತಿದ್ದೆ. ಟ್ರಕ್ ಚಾಲಕನ ಜೀವನ ತುಂಬ ಕಷ್ಟಕರ. ನಮಗೆ ಸರಿಯಾದ ಸಮಯಕ್ಕೆ ತಿನ್ನಲು ಅಥವಾ ಸ್ನಾನ ಮಾಡಲು ಸಮಯವಿಲ್ಲ. ಟ್ರಕ್ ತುಂಬಿದಾಗ, ಲೋಡ್ ಮಾಡುವ ಬಗ್ಗೆ ಚಿಂತಿಸಬೇಕು. ಅದೇ ಖಾಲಿಯಾದಾಗ, ಅದನ್ನು ತುಂಬಿಸುವತ್ತ ಯೋಚಿಸಬೇಕು. ಇದೇ ಆಗೋಗಿದೆ ಜೀವನ" ಎಂದು ಮಂಗೇಶ್​ ತಂದೆ ಭಾವುಕರಾಗಿ ಹೇಳಿಕೊಂಡರು.

ಕ್ರಿಕೆಟ್​ ಬ್ರೇಕ್​ಥ್ರೂ

2025ರ ಮಧ್ಯಪ್ರದೇಶ ಟಿ20 ಲೀಗ್‌ನಲ್ಲಿ ಮಂಗೇಶ್ ಅದ್ಭುತ ಪ್ರದರ್ಶನ ನೀಡಿದರು. ಗ್ವಾಲಿಯರ್ ಚೀತಾಸ್ ತಂಡದ ಪರ ಆರು ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದರು ಮತ್ತು ಪ್ಲೇಯರ್ ಆಫ್​ ದಿ ಟೂರ್ನಮೆಂಟ್​ ಪ್ರಶಸ್ತಿ ಕೂಡ ಬಾಚಿಕೊಂಡರು. ಮಂಗೇಶ್​ರ ಅದ್ಭುತ ಪ್ರದರ್ಶನವನ್ನು ಗಮನಿಸಿದ ಮುಂಬೈ ಇಂಡಿಯನ್ಸ್, ದೆಹಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ಒಂದಷ್ಟು ಐಪಿಎಲ್​ ಫ್ರಾಂಚೈಸಿಗಳು, ಅವರನ್ನು ಟ್ರಯಲ್ಸ್‌ಗೆ ಆಹ್ವಾನಿಸಿತು. ಇಲ್ಲಿ, ಆರ್​ಸಿಬಿಯ ದಿನೇಶ್ ಕಾರ್ತಿಕ್ ಅವರು, ಮಂಗೇಶ್ ಯಾದವ್ ಅವರ ಸಾಮರ್ಥ್ಯವನ್ನು ಪರೀಕ್ಷಿಸಿದರು. ಡೆತ್​ ಓವರ್​ಗಳಲ್ಲಿ ವಿವಿಧ ರೀತಿಯಲ್ಲಿ ಇಂಪ್ರೆಸ್​ ಮಾಡಿದ್ದೇ ತಡ ಅವರು ಆರ್​ಸಿಬಿಗೆ ಸೆಲೆಕ್ಟ್​ ಆದರು.

24,000 ರೂ.

"ಇಂದು ನಾನು ಕ್ರಿಕೆಟ್ ಆಡ್ತಿದ್ದೇನೆ ಅಂದರೆ ಅದಕ್ಕೆ ಫೂಲ್ ಚಂದ್ ಸರ್ ಕಾರಣ. ದೆಹಲಿಗೆ ಹೋದಾಗ, ನನ್ನ ತಂದೆ ತುಂಬಾ ಕಷ್ಟಪಟ್ಟು 24,000 ರೂ. ಹೊಂದಿಸಿ ಕೊಟ್ಟಿದ್ದರು. ಆಶ್ಚರ್ಯ ಎಂದರೆ, ಆ ಪೂರ್ತಿ ಹಣ ಮೊದಲ ತಿಂಗಳಲ್ಲೇ ಖರ್ಚಾಯಿತು. ಅದು ಹೇಗೆ ಅನ್ನೋದೇ ನನಗೆ ತಿಳಿದಿಲ್ಲ" ಎಂದು ಮಂಗೇಶ್​ ಹೇಳಿದ್ದಾರೆ. 5.2 ಕೋಟಿ ರೂ.ಗೆ ಖರೀದಿ ಆಗಿರುವ ಮಂಗೇಶ್​ ಮೇಲೆ ಸದ್ಯ ಫ್ರಾಂಚೈಸಿ ಮತ್ತು ಆರ್​ಸಿಬಿ ಅಭಿಮಾನಿಗಳ ಭರವಸೆ ಹೆಚ್ಚಿದ್ದು, ಈ ಯುವ ಬೌಲರ್​ ಹೇಗೆ ತಂಡದ ಪರ ಕಮಾಲ್​ ಮಾಡ್ತಾರೆ? ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net