ಯಾರೀ ಪ್ರಫುಲ್ ಹಿಂಗೆ? ಮೊದಲ ಓವರ್​ನಲ್ಲೇ 3 ವಿಕೆಟ್​ ಪಡೆದ ಈತನ ಅಪರೂಪದ ಸಾಧನೆ ಹಿಂದಿದೆ ರೋಚಕ ಕಥೆ​

ಎಸ್​ಆರ್​ಎಚ್​ ವೇಗಿ ಪ್ರಫುಲ್​ ಹಿಂಗೆ
ಎಸ್​ಆರ್​ಎಚ್​ ವೇಗಿ ಪ್ರಫುಲ್​ ಹಿಂಗೆ
Published on

ಪ್ರಮುಖ ಮುಖ್ಯಾಂಶಗಳು

  • ಸನ್​ರೈಸರ್ಸ್​ ಹೈದರಾಬಾದ್​ ಮುಂದೆ ಸೋಲಿಗೆ ಶರಣಾದ ರಾಜಸ್ಥಾನ ರಾಯಲ್ಸ್
  • ಮೊದಲ ಪಂದ್ಯದಲ್ಲೇ, ಮೊದಲ ಓವರ್​ನಲ್ಲೇ ಅಪರೂಪದ ದಾಖಲೆ
  • ಅಷ್ಟಕ್ಕೂ ಯಾರೀ ಪ್ರಫುಲ್​ ಹಿಂಗೆ? ಇಲ್ಲಿದೆ ನೋಡಿ ಮಾಹಿತಿ
Praful Hinge: ನಿನ್ನೆ (ಏ.13) ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್​ ನಡುವಿನ ಪಂದ್ಯದಲ್ಲಿ ಇಶಾನ್ ಕಿಶನ್ ಪಡೆ 57 ರನ್​ಗಳ ಭಾರೀ ಅಂತರದಲ್ಲಿ ಜಯ ಸಾಧಿಸಿತು. ಆರ್​ಆರ್​ ಬಲಿಷ್ಠತೆಯನ್ನು ಕೇವಲ ಮೊದಲನೇ ಓವರ್​ನಲ್ಲೇ ಕುಗ್ಗಿಸಿದ ಎಸ್​ಆರ್​ಎಚ್​ನ ಯುವ ವೇಗಿ ಬಗ್ಗೆ ತಿಳಿದುಕೊಳ್ಳಲು ಇದೀಗ ಕ್ರಿಕೆಟ್​ ಪ್ರೇಮಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.
ಸತತ ಗೆಲುವುಗಳಿಂದ ತಮ್ಮ ಬಲವನ್ನೇ ಮರೆತಿದ್ದ ಆರ್​ಆರ್​ ಕಡೆಗೂ ಐಪಿಎಲ್​ 19ನೇ ಆವೃತ್ತಿಯಲ್ಲಿ ತನ್ನ ಮೊದಲ ಸೋಲನ್ನು ಕಂಡಿತು. ಈ ಸೋಲಿಗೆ ಮುಖ್ಯ ಕಾರಣವೇ ಸನ್​ರೈಸರ್ಸ್ ಹೈದರಾಬಾದ್​ ವೇಗಿ ಪ್ರಫುಲ್​ ಹಿಂಗೆ ಅವರು ಮಾಡಿದ ಮ್ಯಾಜಿಕ್​. ತನ್ನ ಚೊಚ್ಚಲ ಪಂದ್ಯದ, ಮೊದಲನೇ ಓವರ್​ನಲ್ಲಿ ಕೇವಲ ಒಂದು ರನ್​ ಕೊಟ್ಟು ಮೂರು ಬಹುಮುಖ್ಯ ವಿಕೆಟ್​ಗಳನ್ನು ಪಡೆದ ಈತ, 19 ವರ್ಷಗಳ ಐಪಿಎಲ್​ ಇತಿಹಾಸದಲ್ಲಿ ಯಾವೊಬ್ಬ ಅಂತಾರಾಷ್ಟ್ರೀಯ ಹಾಗೂ ಅನುಭವಿ ಬೌಲರ್​ಗಳು ಮಾಡದ ಅಪರೂಪದ ಸಾಧನೆಯನ್ನು ಮಾಡಿದ್ದಾರೆ.
ದ್ವಿತೀಯ ಇನ್ನಿಂಗ್ಸ್​ 217 ರನ್​ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ವೈಭವ್ ಸೂರ್ಯವಂಶಿಯನ್ನು ಗೋಲ್ಡನ್ ಡಕ್‌ಗೆ ಔಟ್ ಮಾಡಿದ ಪ್ರಫುಲ್, ಅವರ ನಂತರದಲ್ಲಿ ಬಂದ ಧ್ರುವ್ ಜ್ಯುರೆಲ್​ ಮತ್ತು ಲುವಾನ್-ಡ್ರೆ ಪ್ರಿಟೋರಿಯಸ್ ವಿಕೆಟ್ ಪಡೆದು ತಂಡದ ಪರ ಮಿಂಚಿದರು. 4 ಓವರ್​ಗಳನ್ನು ಪೂರ್ತಿಯಾಗಿ ಮುಗಿಸಿದ ಅವರು, ಕೇವಲ 34 ರನ್​ ನೀಡಿ 4 ವಿಕೆಟ್​ಗಳನ್ನು ಕಬಳಿಸಿದರು. ಈ ಮೂಲಕ ಡೆಬ್ಯೂ ಮ್ಯಾಚ್​ನಲ್ಲೇ ವಿಶೇಷ ದಾಖಲೆ ಬರೆದ ಯುವ ಪ್ರತಿಭೆ ಎಂಬ ಹೆಗ್ಗಳಿಕೆಗೆ ಪ್ರಫುಲ್​ ಪಾತ್ರರಾಗಿದ್ದಾರೆ.

ಯಾರೀ ಪ್ರಫುಲ್ ಹಿಂಗೆ?

ಮೂಲತಃ ಮಹಾರಾಷ್ಟ್ರದ ನಾಗ್ಪುರದ ಪ್ರಪುಲ್ ಸಿಂಗ್, ಜನಿಸಿದ್ದು ಜನವರಿ 18, 2002ರಂದು. ಬಡ ಕುಟುಂಬದಲ್ಲಿ ಹುಟ್ಟಿದ ಈ ಪ್ರತಿಭೆ, ಆರಂಭದಲ್ಲಿ, ಕ್ರಿಕೆಟ್​ಗೆ ಹೋಗಲು ಸಾಧ್ಯವಾಗಲಿಲ್ಲ. ಕಾರಣ, ತಂದೆಗೆ ತಮ್ಮ ಮಗ ಕ್ರಿಕೆಟ್ ಆಡುವುದು ಕಿಂಚಿತ್ತು ಇಷ್ಟವಿರೋದಿಲ್ಲ. ಆದರೆ, 12ನೇ ವಯಸ್ಸಿನಲ್ಲಿ, ಬೇಸಿಗೆ ಶಿಬಿರದಲ್ಲಿ ಪ್ರಪುಲ್ ಅವರ ಪ್ರತಿಭೆಯನ್ನು ಗಮನಿಸಿದ ಅವರು, ಇಲ್ಲ ಮಗನಿಗೆ ಕ್ರಿಕೆಟ್​ನಲ್ಲಿ ಭವಿಷ್ಯವಿದೆ ಎಂಬುದನ್ನು ಅರಿತು, ಕಡೆಗೂ ಗ್ರೀನ್ ಸಿಗ್ನಲ್ ನೀಡಿದರು.
13ನೇ ವಯಸ್ಸಿನಲ್ಲಿ ತಮ್ಮ ಬೌಲಿಂಗ್ ಕೌಶಲ್ಯವನ್ನು ಹೆಚ್ಚಿಸಿಕೊಂಡ ಪ್ರಫುಲ್​, 16ನೇ ವಯಸ್ಸಿಗೆ ಕೋಚ್ ಸಂಜೀವ್ ಅವರ ನೇತೃತ್ವದಲ್ಲಿ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಅಕಾಡೆಮಿಗೆ ಸೇರಿಕೊಂಡರು. ಇಲ್ಲೇ ಅವರ ಕರಿಯರ್​ಗೆ ತಿರುವು ಸಿಕ್ಕಿದ್ದು. ಅಂಡರ್-19 ಟ್ರಯಲ್ಸ್‌ನಲ್ಲಿ 36 ವಿಕೆಟ್‌ಗಳನ್ನು ಪಡೆಯುವ ಮೂಲಕ ಎಲ್ಲರ ಗಮನ ಸೆಳೆದರು. 10 ಪ್ರಥಮ ದರ್ಜೆ ಪಂದ್ಯಗಳಲ್ಲಿ 27 ವಿಕೆಟ್‌ಗಳು ಮತ್ತು ಆರು ಲಿಸ್ಟ್ ಎ ಪಂದ್ಯಗಳಲ್ಲಿ 5 ವಿಕೆಟ್‌ಗಳನ್ನು ಕಬಳಿಸಿದರು. ವಿದರ್ಭ ಪ್ರೊ ಟಿ20 ಲೀಗ್‌ನಲ್ಲಿ ನೆಕೊ ಮಾಸ್ಟರ್ ಬ್ಲಾಸ್ಟರ್ ಚಾಂಪಿಯನ್ ಆಗಿ ಹೊರಹೊಮ್ಮಲು ಸಹಾಯ ಮಾಡುವಲ್ಲಿ ಪ್ರಫುಲ್​ ಪ್ರಮುಖ ಪಾತ್ರ ವಹಿಸಿದರು, 6 ಪಂದ್ಯಗಳಲ್ಲಿ 8 ವಿಕೆಟ್‌ಗಳನ್ನು ಕಬಳಿಸಿದರು.

ವರುಣ್ ಆರನ್ ಕರೆ

ಕಳೆದ ವರ್ಷ ತಮಿಳುನಾಡು ವಿರುದ್ಧದ ರಣಜಿ ಪಂದ್ಯದಲ್ಲಿ ಪ್ರಪುಲ್ ಐದು ವಿಕೆಟ್‌ಗಳನ್ನು ಪಡೆದು ಪ್ರಭಾವಶಾಲಿಯಾದರು. ಆ ಸಮಯದಲ್ಲಿ ಅವರ ಪ್ರದರ್ಶನವನ್ನು ನೋಡಿದ ಸನ್‌ರೈಸರ್ಸ್ ಹೈದರಾಬಾದ್ ಬೌಲಿಂಗ್ ಕೋಚ್ ವರುಣ್ ಆ್ಯರನ್, ಪ್ರಫುಲ್​ಗೆ ಟ್ರಯಲ್ಸ್‌ಗೆ ಬರುವಂತೆ ಆಹ್ವಾನಿಸಿದರು. ಇಲ್ಲಿಯೂ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಬಳಿಕ, ಸನ್‌ರೈಸರ್ಸ್ ಅವರನ್ನು ಹರಾಜಿನಲ್ಲಿ ಕೇವಲ 30 ಲಕ್ಷ ರೂ. ಮೂಲ ಬೆಲೆಗೆ ಖರೀದಿಸಿತು. ಈಗ ತಮ್ಮ ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಯುವ ವೇಗಿ, ಈ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net