ಯಾರೀ ಚಿನ್ಮಯ್​ ಸುತಾರ್​? ರಣಜಿ ಟ್ರೋಫಿ ಇತಿಹಾಸದಲ್ಲೇ 400 ರನ್​ ಬಾರಿಸಿದ 2ನೇ ಸ್ಟಾರ್​ ಯುವ ಬ್ಯಾಟರ್​ | Chinmay Sutar

ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಈ ಅಪರೂಪದ ಸಾಧನೆಗೈದ ಆ ಬ್ಯಾಟ್ಸ್‌ಮನ್ ಹೆಸರು ಚಿನ್ಮಯ್ ಸುತಾರ್. ರಣಜಿ ಟ್ರೋಫಿಯಲ್ಲಿ ಮಿಜೋರಾಂ ತಂಡದ ಸ್ಟಾರ್​ ಬ್ಯಾಟ್ಸ್‌ಮನ್ ಆಗಿರುವ ಚಿನ್ಮಯ್, ನಾಗಲ್ಯಾಂಡ್​ ವಿರುದ್ಧದ ಪಂದ್ಯದಲ್ಲಿ ಈ ಅದ್ಭುತ ಇನ್ನಿಂಗ್ಸ್​ಗೆ ಸಾಕ್ಷಿಯಾಗಿದ್ದಾರೆ.
Chinmay Sutar
ಯಾರೀ ಚಿನ್ಮಯ್​ ಸುತಾರ್​? ರಣಜಿ ಟ್ರೋಫಿ ಇತಿಹಾಸದಲ್ಲೇ 400 ರನ್​ ಬಾರಿಸಿದ 2ನೇ ಯುವ ಬ್ಯಾಟರ್​ | Chinmay Sutar
Published on: 

Chinmay Sutar: 400 ರನ್​ ಎಂದ ಕೂಡಲೇ ನಮಗೆ ಮೊದಲಿಗೆ ನೆನಪಿಗೆ ಬರುವುದೇ ವೆಸ್ಟ್ ಇಂಡೀಸ್‌ನ ದಿಗ್ಗಜ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ಅವರು. ಕಾರಣ, ಅಂತಾರಾಷ್ಟ್ರೀಯ ಟೆಸ್ಟ್​ ಪಂದ್ಯದ ಒಂದೇ ಇನ್ನಿಂಗ್ಸ್​ನಲ್ಲಿ ಏಕಾಂಗಿಯಾಗಿ 400 ರನ್​ಗಳನ್ನು ಸಿಡಿಸಿದ ಅಪರೂಪದ ದಾಖಲೆ ಇಂದಿಗೂ ಅವರ ಹೆಸರಿನಲ್ಲಿ ಮಾತ್ರ ಇರುವುದು. ಈಗ ಇದೇ ರೀತಿಯ ಸಾಧನೆಯನ್ನು ದೇಶಿಯ ಕ್ರಿಕೆಟ್​ನಲ್ಲಿ ಭಾರತೀಯ ಕ್ರಿಕೆಟಿಗನೊಬ್ಬ ಮಾಡಿರುವುದು ಸದ್ಯ ಕ್ರಿಕೆಟ್​ ಪ್ರೇಮಿಗಳ ಹುಬ್ಬೇರಿಸಿದೆ.

ದೇಶಿಯ ಕ್ರಿಕೆಟ್​

ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಈ ಅಪರೂಪದ ಸಾಧನೆಗೈದ ಆ ಬ್ಯಾಟ್ಸ್‌ಮನ್ ಹೆಸರು ಚಿನ್ಮಯ್ ಸುತಾರ್. ರಣಜಿ ಟ್ರೋಫಿಯಲ್ಲಿ ಮಿಜೋರಾಂ ತಂಡದ ಸ್ಟಾರ್​ ಬ್ಯಾಟ್ಸ್‌ಮನ್ ಆಗಿರುವ ಚಿನ್ಮಯ್, ನಾಗಲ್ಯಾಂಡ್​ ವಿರುದ್ಧದ ಪಂದ್ಯದಲ್ಲಿ ಈ ಅದ್ಭುತ ಇನ್ನಿಂಗ್ಸ್​ಗೆ ಸಾಕ್ಷಿಯಾಗಿದ್ದಾರೆ. ಈ ಪಂದ್ಯದಲ್ಲಿ, ಅವರು ಒಂದೇ ಇನ್ನಿಂಗ್ಸ್‌ನಲ್ಲಿ 400 ರನ್ ಬಾರಿಸಿ, ರಣಜಿ ಟ್ರೋಫಿ ಇತಿಹಾಸದಲ್ಲಿ ಇಂತಹ ಸಾಧನೆ ಮಾಡಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಾಗಾಲ್ಯಾಂಡ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಮಿಜೋರಾಂ ತಂಡವು ಬೃಹತ್ ಮೊತ್ತವನ್ನೇ ಕಲೆಹಾಕಿತು. ಈ ಇನ್ನಿಂಗ್ಸ್‌ನಲ್ಲಿ ಸುತಾರ್ ಒಬ್ಬರೇ 400 ರನ್ ಗಳಿಸುವ ಮೂಲಕ ತಂಡಕ್ಕೆ ದೊಡ್ಡ ಮೊತ್ತವನ್ನು ಕೊಡಗೆಯಾಗಿ ನೀಡಿದರು. ಒಂದು ಹಂತದಲ್ಲಿ, ಮಿಜೋರಾಂ ತಂಡವು 392 ರನ್‌ಗೆ ಒಂಬತ್ತು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆಗ ತಂಡದ ಮೊತ್ತ ಅಲ್ಲಿಗೇ ನಿಲ್ಲಬಹುದು ಎಂದು ಭಾವಿಸಲಾಗಿತ್ತು. ಆದರೆ, ಕೊನೆಯವರೆಗೂ ಕ್ರೀಸ್‌ಗೆ ಅಂಟಿ ನಿಂತ ಸುತಾರ್​, ತಂಡದ ಮೊತ್ತವನ್ನು 581/9ಕ್ಕೆ ಕೊಂಡೊಯ್ದರು ಮತ್ತು ವೈಯಕ್ತಿಕವಾಗಿ 400 ರನ್‌ಗಳ ಗಡಿಯನ್ನು ತಲುಪಿದರು. ಆ ಬಳಿಕ ಮಿಜೋರಾಂ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಂಡಿತು.

ಈ ಹಿಂದೆ, ಬಿಬಿ ನಿಂಬಾಳ್ಕರ್ ಎಂಬುವವರು ಮಾತ್ರ ಈ ಅಪರೂಪದ ಸಾಧನೆ ಮಾಡಿದ್ದರು. 1948ರಲ್ಲಿ ಕಥಿಯಾವಾರ್ ವಿರುದ್ಧ ಮಹಾರಾಷ್ಟ್ರ ತಂಡಕ್ಕಾಗಿ ಅಜೇಯ 443 ರನ್ ಗಳಿಸಿ ತಮ್ಮ ಹೆಸರಿನಲ್ಲಿ ದಾಖಲೆ ನಿರ್ಮಿಸಿದ್ದರು. ಆದರೀಗ, 400 ರನ್‌ಗಳ ಗಡಿಯನ್ನು ಒಂದೇ ಇನ್ನಿಂಗ್ಸ್​ನಲ್ಲಿ ತಲುಪುವ ಮೂಲಕ ಸುತಾರ್​ ಹೊಸ ಸೆನ್ಸೇಷನ್​ ಆಗಿ ಹೊರಹೊಮ್ಮಿದ್ದಾರೆ. ಈ ವಿಷಯ ಇದೀಗ ಕ್ರಿಕೆಟ್​ ಲೋಕದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಯಾರು ಈ ಚಿನ್ಮಯ್ ಸುತಾರ್?

ಮೇ 3, 1997ರಂದು ಜನಿಸಿದ ಸುತಾರ್, ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಮತ್ತು ಮಿಜೋರಾಂ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಅವರು ವಿಜಯ್ ಹಜಾರೆ ಟ್ರೋಫಿಯಲ್ಲೂ ಆಡಿದ್ದು, 2019ರ 'ಎಮರ್ಜಿಂಗ್ ಟೀಮ್ಸ್ ಏಷ್ಯಾ ಕಪ್'ನಲ್ಲಿ ಭಾರತದ ಅಂಡರ್-23 ತಂಡವನ್ನು ಪ್ರತಿನಿಧಿಸಿದ್ದಾರೆ. ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ದೇಶೀಯ ಕ್ರಿಕೆಟ್‌ನಲ್ಲಿ ವಿವಿಧ ತಂಡಗಳ ಪರ ಆಡಿದ್ದ ಸುತಾರ್‌ಗೆ, ಈ 400 ರನ್‌ಗಳ ಇನ್ನಿಂಗ್ಸ್ ದೊಡ್ಡ ಅವಕಾಶವನ್ನೇ ಒದಗಿಸಿಕೊಟ್ಟಿದೆ.

Also Read
1954ರಲ್ಲಿ ಟೋಕಿಯೋ ಏರ್​ಪೋರ್ಟ್​ಗೆ ಬಂದಿಳಿದ ಈತ ಹೇಳಿದ್ದು ಮಾತ್ರ ವಿಶ್ವ ಭೂಪಟದಲ್ಲೇ ಇಲ್ಲದ ದೇಶದ ಹೆಸರು | The Taured Man
Chinmay Sutar

ಒಂದೇ ಇನ್ನಿಂಗ್ಸ್‌ನಲ್ಲಿ 400 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳನ್ನು ಗಳಿಸಿದ ಪ್ರಥಮ ದರ್ಜೆ ಕ್ರಿಕೆಟ್‌ನ ಬ್ಯಾಟ್ಸ್‌ಮನ್‌ಗಳ ಸಾಲಿಗೆ ಸುತಾರ್ ಕೂಡ ಸೇರ್ಪಡೆಗೊಂಡಿದ್ದಾರೆ. ನಾಗಾಲ್ಯಾಂಡ್ ವಿರುದ್ಧ ಚಿನ್ಮಯ್ ಸುತಾರ್ ಆಡಿದ ಈ ಇನ್ನಿಂಗ್ಸ್, ಅವರ ವೃತ್ತಿಜೀವನದಲ್ಲಿ ಮಾತ್ರವಲ್ಲದೆ ರಣಜಿ ಟ್ರೋಫಿಯ ಇತಿಹಾಸದಲ್ಲೂ ಒಂದು ಸ್ಮರಣೀಯ ಘಟನೆಯಾಗಿ ಉಳಿಯಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net