3ನೇ ಬಾರಿ ಟಿ20 ವಿಶ್ವಕಪ್​ ಚಾಂಪಿಯನ್ಸ್​ ಟೀಮ್ ಇಂಡಿಯಾಗೆ ಸಿಗುವ ಬಹುಮಾನ ಹಣವೆಷ್ಟು? ಇಲ್ಲಿದೆ ನೋಡಿ ವಿವರ | Prize Money

ಟಿ20 ವಿಶ್ವಕಪ್​ 2026 ಗೆದ್ದ ಭಾರತ
ಟಿ20 ವಿಶ್ವಕಪ್​ 2026 ಗೆದ್ದ ಭಾರತ
Published on

ಪ್ರಮುಖ ಮುಖ್ಯಾಂಶಗಳು

  • 3ನೇ ಬಾರಿ ಟಿ20 ವಿಶ್ವಕಪ್​ ಗೆದ್ದ ಭಾರತ
  • ನ್ಯೂಜಿಲೆಂಡ್​ ವಿರುದ್ಧ 96 ರನ್​ಗಳಿಂದ ಜಯ ಸಾಧಿಸಿದ ತಂಡಕ್ಕೆ ಎಷ್ಟು ಹಣ?
  • ವಿನ್ನರ್​ ಮತ್ತು ರನ್ನರ್​ಅಪ್ ತಂಡಗಳಿಗೆ ಸಿಗುವ ಒಟ್ಟು ಬಹುಮಾನ ಹಣವೆಷ್ಟು?
ಅಹಮದಾಬಾದ್: ನಿನ್ನೆ (ಮಾ.08) ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನೆರೆದಿದ್ದ ಲಕ್ಷಾಂತರ ಅಭಿಮಾನಿಗಳ ಹರ್ಷೋದ್ಗಾರಕ್ಕೆ ಸಾಕ್ಷಿಯಾದ ಟೀಮ್ ಇಂಡಿಯಾ ಗೆಲುವು, ನ್ಯೂಜಿಲೆಂಡ್ ತಂಡದ ಚೊಚ್ಚಲ ಟಿ20 ವಿಶ್ವಕಪ್​ ಕನಸನ್ನು ಭಗ್ನಗೊಳಿಸಿತು. 96 ರನ್‌ಗಳ ಭಾರೀ ಅಂತರದಿಂದ ಕಿವೀಸ್​ ಪಡೆಯನ್ನು ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡ ಸೂರ್ಯಕುಮಾರ್​ ಯಾದವ್ ಪಡೆಗೆ ಕೋಟ್ಯಂತರ ಅಭಿಮಾನಿಗಳಿಂದ ಅಭಿನಂದನೆಗಳ ಹೊಳೆಯೇ ಹರಿದುಬರುತ್ತಿದೆ. 
ತವರಿನಲ್ಲಿ ಟಿ20 ವಿಶ್ವಕಪ್​ ಗೆದ್ದ ಮೊದಲ ತಂಡ ಎಂಬ ಭಾರತವಾಗಿದ್ದು, ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ (3 ಸಲ) ವಿಶ್ವಕಪ್ ಗೆದ್ದ ಏಕೈಕ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಟೀಮ್ ಇಂಡಿಯಾ ಪರ ಟೂರ್ನಿ ಪೂರ ಅದ್ಭುತ ಇನ್ನಿಂಗ್ಸ್​ ಆಡಿದ ಸಂಜು ಸ್ಯಾಮ್ಸನ್​ ಒಂದೆಡೆಯಾದರೆ, ಬೌಲಿಂಗ್​ನಲ್ಲಿ ಭಾರತಕ್ಕೆ ಅಭಯ ನೀಡಿದ್ದೇ ಜಸ್ಪ್ರಿತ್ ಬುಮ್ರಾ. ಇವರಿಬ್ಬರನ್ನು ಹೊರತುಪಡಿಸಿದರೆ, ಶಿವಂ ದುಬೆ, ಇಶಾನ್ ಕಿಶನ್​, ಅಕ್ಷರ್​ ಪಟೇಲ್​, ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ, ಅರ್ಷದೀಪ್ ಸಿಂಗ್​ ಸೇರಿ ತಂಡದ ಒಂದಷ್ಟು ಆಟಗಾರರು ಟೂರ್ನಿ ಪೂರ ಅದ್ಭುತ ಪ್ರದರ್ಶನ ನೀಡಿದ್ದು ಗಮನಾರ್ಹ.  
ಇಂಗ್ಲೆಂಡ್​ ವಿರುದ್ಧ ನಡೆದ ಸೆಮಿಫೈನಲ್​ ಎಷ್ಟು ರೋಚಕವಾಗಿ ಮೂಡಿಬಂತೋ, ಆ ಮಟ್ಟಿಗಿನ ರೋಚಕತೆ ಅಥವಾ ಕುತೂಹಲ ಫೈನಲ್ ಪಂದ್ಯದಲ್ಲಿ ಇರಲಿಲ್ಲ. ಕಾರಣ, ನ್ಯೂಜಿಲೆಂಡ್​ ವಿರುದ್ಧದ ಪಂದ್ಯ 10 ಓವರ್​ ಅಂತ್ಯಕ್ಕೆ ಒನ್​ ಸೈಡೆಡ್ ಆಗಿ ಹೋಗಿತ್ತು. ಕ್ರಿಕೆಟ್​ ಅಭಿಮಾನಿಗಳಿಗೆ ಗೆಲುವು ಭಾರತದ್ದೇ ಎಂಬ ಸ್ಪಷ್ಟತೆ ಅದಾಗಲೇ  ಸಿಕ್ಕಿಬಿಟ್ಟಿತು. ​159ಕ್ಕೆ ಕಿವೀಸ್​ ಪಡೆಯನ್ನು ಆಲ್​ಔಟ್​ ಮಾಡಿ, ವಿಶ್ವಕಪ್​ ಟ್ರೋಫಿ ಎತ್ತಿಹಿಡಿದ ಟೀಮ್ ಇಂಡಿಯಾಗೆ ಐಸಿಸಿಯಿಂದ ಸಿಗುವ ಬಹುಮಾನ ಮೊತ್ತ ಎಷ್ಟು? ಎಂಬ ಕೌತುಕ ಸದ್ಯ ಹಲವರಲ್ಲಿ ಕಾಡತೊಡಗಿದೆ. 

ಎಷ್ಟು ಕೋಟಿ ರೂ.?

ಪ್ರಶಸ್ತಿ ವಿಜೇತ ತಂಡಕ್ಕೆ ಐಸಿಸಿಯಿಂದ ಭಾರಿ ಬಹುಮಾನದ ಹಣವನ್ನು ನೀಡಲಾಗಿದೆ. ಈ ಹಿಂದೆಯೇ ತಿಳಿಸಿದಂತೆ, ವಿಶ್ವ ಚಾಂಪಿಯನ್ ಟೀಮ್ ಇಂಡಿಯಾಗೆ 27.50 ಕೋಟಿ ರೂ. ಹಣ ಸಿಗಲಿದೆ. ಅದೇ ರೀತಿ, ಫೈನಲ್‌ನಲ್ಲಿ ಭಾರತದ ಎದುರು ಸೋತು, ರನ್ನರ್​ಅಪ್ ಸ್ಥಾನವನ್ನು ಅಲಂಕರಿಸಿದ ನ್ಯೂಜಿಲೆಂಡ್ ತಂಡಕ್ಕೆ 13.67 ಕೋಟಿ ದೊರೆಯಲಿದೆ. ಸೆಮಿಫೈನಲಿಸ್ಟ್ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿಗೆ ತಲಾ 7.24 ಕೋಟಿ ಸಿಗಲಿದ್ದು, ಸೂಪರ್-8 ಹಂತ ತಲುಪಿದ ಟೀಮ್​ಗಳಿಗೆ 3.48 ಕೋಟಿ ರೂಪಾಯಿ ಸೇರಲಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net