ಭಾರತ-ಪಾಕಿಸ್ತಾನ ಫೈನಲ್​ನಲ್ಲಿ ಮುಖಾಮುಖಿಯಾದ್ರೆ ಏನಾಗಬಹುದು? ಇಲ್ಲಿದೆ ನೋಡಿ ಅಚ್ಚರಿ ಉತ್ತರ! T20 World Cup

ಪ್ರಮುಖ ಪ್ರಶ್ನೆ ಎತ್ತಿದ ಕಾಮೆಂಟೇಟರ್​ ಹರ್ಷಾ ಭೋಗ್ಲೆ
ಪ್ರಮುಖ ಪ್ರಶ್ನೆ ಎತ್ತಿದ ಕಾಮೆಂಟೇಟರ್​ ಹರ್ಷಾ ಭೋಗ್ಲೆ
Published on

ಪ್ರಮುಖ ಮುಖ್ಯಾಂಶಗಳು

  • ಫೆ.7ರಂದು ಆರಂಭವಾಗಲಿರುವ ಟಿ20 ವಿಶ್ವಕಪ್ ಮೆಗಾ ಟೂರ್ನಿಗೆ ದಿನಗಣನೆ ಆರಂಭ
  • ಈ ಐತಿಹಾಸಿಕ ಟೂರ್ನಿಗಾಗಿ ಎಲ್ಲ ಕ್ರಿಕೆಟ್​ ಪ್ರೇಮಿಗಳು ಬಹಳ ಕಾತರದಿಂದ ಕಾಯುತ್ತಿದ್ದಾರೆ
  • ಟಿ20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ನಾವು ಆಡಲ್ಲ ಎಂದು ಪಾಕಿಸ್ತಾನ ಹೇಳುತ್ತಿದೆ
ನೆವದೆಹಲಿ: ಆರಂಭದಲ್ಲಿ ಟಿ20 ವಿಶ್ವಕಪ್ ( T20 World Cup )​ ಟೂರ್ನಿಯನ್ನೇ ಬಹಿಷ್ಕರಿಸುತ್ತೇವೆ ಎನ್ನುತ್ತಿದ್ದ ಪಾಕಿಸ್ತಾನ, ಐಸಿಸಿ ನೀಡಿದ ವಾರ್ನಿಂಗ್​ಗೆ ಹೆದರಿ ಸದ್ದಿಲ್ಲದೇ ಶ್ರೀಲಂಕಾಗೆ ಪ್ರಯಾಣ ಬೆಳೆಸಿ, ಅಭ್ಯಾಸದಲ್ಲಿ ನಿರತವಾಗಿದೆ. ಈಗಾಗಲೇ ಪಾಕಿಸ್ತಾನದ ಆರ್ಥಿಕ ಸ್ಥಿತಿ ಅಧೋಗತಿ ಹಂತದಲ್ಲಿದೆ. ಹೀಗಿರುವಾಗ, ಐಸಿಸಿ ನಿರ್ಬಂಧ ಹೇರಿದರೆ, ಮತ್ತಷ್ಟು ಹೀನಾಯ ಸ್ಥಿತಿಗೆ ತಲುಪುತ್ತೇವೆ ಅನ್ನೋ ಭಯದಲ್ಲಿ ಪಾಕ್​, ವಿಶ್ವಕಪ್​ ಆಡಲು ಆಗಮಿಸಿದೆ. ಇದೀಗ ಮತ್ತೊಂದು ವರಸೆ ತೆಗೆದಿರುವ ಪಾಕ್​, ನಾವು ಭಾರತದ ವಿರುದ್ಧ ಗ್ರೂಪ್​ ಪಂದ್ಯವನ್ನು ಆಡುವುದಿಲ್ಲ ಎಂದು ಹೇಳುತ್ತಿದೆ. ಬುದ್ಧಿ ಭ್ರಮಣೆ ಆಗಿರುವ ಪಾಕಿಸ್ತಾನಕ್ಕೆ ಎಲ್ಲೆಡೆ ಟೀಕೆಗಳು ವ್ಯಕ್ತವಾಗುತ್ತಿವೆ.
ಸಾಲು ಸಾಲು ಟೀಕೆಗಳ ನಡುವೆ ಕಾಮೆಂಟೇಟರ್​ ಹರ್ಷಾ ಭೋಗ್ಲೆ ಅವರು ಪ್ರಮುಖ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ. ಅದೇನೆಂದರೆ, ಒಂದು ವೇಳೆ ಸಾಂಪ್ರದಾಯಿಕ ಎದುರಾಳಿಗಳು ಫೈನಲ್​ನಲ್ಲಿ ಮುಖಾಮುಖಿಯಾದರೆ ಏನಾಗಲಿದೆ? ಅನ್ನೋದು. ಅಷ್ಟಕ್ಕೂ ಏನಾಗಬಹುದು? ಈ ಪ್ರಶ್ನೆಗೆ ಉತ್ತರ ತಿಳಿಯುವ ಕುತೂಹಲವಿದ್ದರೆ ಮುಂದೆ ಓದಿ.
ಅಂದಹಾಗೆ, ಭಾನುವಾರ (ಫೆ.01) ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಪಾಕಿಸ್ತಾನ ಸರ್ಕಾರ, 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ತಮ್ಮ ತಂಡಕ್ಕೆ ಅನುಮತಿ ನೀಡಿರುವುದಾಗಿ ಘೋಷಿಸಿದೆ. ಆದರೆ, ಫೆಬ್ರವರಿ 15 ರಂದು ಭಾರತ ವಿರುದ್ಧ ನಿಗದಿಯಾಗಿರುವ ಗ್ರೂಪ್​ ಪಂದ್ಯವನ್ನು ನಮ್ಮ ತಂಡ ಆಡುವುದಿಲ್ಲ ಎಂದು ಅದೇ ಸಮಯದಲ್ಲಿ ಹೇಳಿದೆ. ಈ ಹೇಳಿಕೆ ಇದೀಗ ಕ್ರೀಡಾ ಲೋಕದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಕಾರಣ ಏನು ಅನ್ನೋದನ್ನು ಪಾಕಿಸ್ತಾನ ತಿಳಿಸಿಲ್ಲ. ಆದರೆ, ಈ ಮೆಗಾ ಟೂರ್ನಮೆಂಟ್​ನಿಂದ ಬಾಂಗ್ಲಾದೇಶವನ್ನು ಹೊರಗಿಡುವ ಮೂಲಕ ಐಸಿಸಿ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಅನ್ನೋದು ಪಾಕಿಸ್ತಾನ ಕ್ರಿಕೆಟ್​ ಮಂಡಳಿ (ಪಿಸಿಬಿ)ಯ ಚೇರ್ಮನ್​ ಮೋಹ್ಸಿನ್​ ನಖ್ವಿ ಅವರ ವಾದ. ಆದರೆ, ಭಾರತಕ್ಕೆ ಬರಲು ಬಾಂಗ್ಲಾ ಒಪ್ಪದೇ, ಈ ಟೂರ್ನಿಯಿಂದ ಹಿಂದೆ ಸರಿದಿದೆ. ಭಾರತದಲ್ಲಿ ನಮಗೆ ಭದ್ರತೆ ಇಲ್ಲ ಎಂಬ ನೆಪ ನೀಡಿದೆ. ಆದರೆ, ಭಾರತದಲ್ಲೇ ಆಡಬೇಕು ಎಂದು ಐಸಿಸಿ ಹೇಳಿತು. ಆದರೆ, ಐಸಿಸಿ ಮಾತನ್ನು ಧಿಕ್ಕರಿಸಿ, ವಿಶ್ವಕಪ್​ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ಬಾಂಗ್ಲಾ ಹೇಳಿದೆ. ಹೀಗಾಗಿ ಬಾಂಗ್ಲಾ ಬದಲು ಸ್ಕಾಟ್​ಲೆಂಡ್​ಗೆ ಐಸಿಸಿ ಅವಕಾಶ ನೀಡಿದೆ.
ಟಿ20 ವಿಶ್ವಕಪ್​ನಲ್ಲಿ ನಮ್ಮ ತಂಡ ಭಾಗವಹಿಸುವುದು ನಮ್ಮ ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ ಎಂದು ನಖ್ವಿ ಆರಂಭದಲ್ಲಿ ಹೇಳಿದ್ದರು. ಆದರೆ, ಇಡೀ ವಿಶ್ವಕಪ್​ ಅನ್ನು ಬಹಿಷ್ಕರಿಸುವ ಬದಲು ಇಂಡಿಯಾ ವಿರುದ್ಧದ ಪಂದ್ಯಗಳನ್ನು ಬಹಿಷ್ಕರಿಸುವ ನಿರ್ಧಾರವನ್ನು ಪಾಕ್​ ತೆಗೆದುಕೊಂಡಿದೆ. ಈ ಕುರಿತು ಕಾಮೆಂಟೇಟರ್​ ಹರ್ಷ ಭೋಗ್ಲೆ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ತಮ್ಮ ಅಭಿಪ್ರಾಯವನ್ನು ಬರೆದುಕೊಂಡಿದ್ದಾರೆ.
ಪಾಕಿಸ್ತಾನ ವಿಶ್ವಕಪ್‌ ಆಡಲು ಹೋಗಿ ಸಾಂಪ್ರದಾಯಿಕ ಎದುರಾಳಿ ಭಾರತದೊಂದಿಗೆ ಆಡದಿದ್ದರೆ ಐಸಿಸಿಯ ಪ್ರತಿಕ್ರಿಯೆ ಏನಿರುತ್ತದೆ ಎಂದು ನೋಡುವುದು ತುಂಬಾ ಆಸಕ್ತಿದಾಯಕವಾಗಿರುತ್ತದೆ. ಇಲ್ಲಿ ಕಾನೂನು ಏನು ಹೇಳುತ್ತದೆ ಅಥವಾ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂದು ನನಗೆ ತಿಳಿದಿಲ್ಲ ಆದರೆ, ಟೆಲಿಕಾಸ್ಟ್​ ನಷ್ಟವನ್ನು ಪಾಕಿಸ್ತಾನದ ಐಸಿಸಿ ಆದಾಯದ ಪಾಲಿನಿಂದ ಕಡಿತಗೊಳಿಸಬೇಕೆಂದು ಐಸಿಸಿ ಏನಾದರೂ ಕೇಳಿದರೂ ಅಚ್ಚರಿಪಡಬೇಕಿಲ್ಲ. ಒಂದು ವೇಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಫೈನಲ್ ನಡೆದರೆ ಏನು? ಎಂದು ಭೋಗ್ಲೆ ಪ್ರಶ್ನೆ ಹಾಕಿದ್ದಾರೆ.
ಮತ್ತೊಂದು ಟ್ವೀಟ್​ ಮಾಡಿರುವ ಹರ್ಷಾ ಅವರು, ಐಸಿಸಿ ಕ್ರಮ ಕೈಗೊಂಡರೆ ಪಾಕಿಸ್ತಾನಕ್ಕೆ ಭಾರಿ ಪೆಟ್ಟು ಬೀಳಲಿದೆ ಎಂದಿದ್ದಾರೆ. ಐಸಿಸಿಯ ಆದಾಯ ಕಡಿತದಿಂದ ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ನಂತಹ ರಾಷ್ಟ್ರಗಳಿಗೆ ಯಾವುದೇ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಆದರೆ, ಐಸಿಸಿಯ ಆದಾಯವನ್ನು ಸಂಪೂರ್ಣವಾಗಿ ಅವಲಂಬಿಸಿರುವ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ದೇಶಗಳಿಗೆ ಭಾರಿ ಹೊಡೆತ ಬೀಳಲಿದೆ ಎಂದು ಹೇಳಿದ್ದಾರೆ.
ಅಂದಹಾಗೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯದಿದ್ದರೆ ಪ್ರಸಾರ ಹಕ್ಕುಗಳು ಮತ್ತು ಪ್ರಾಯೋಜಕತ್ವ ಒಪ್ಪಂದಗಳಿಂದ ಐಸಿಸಿಗೆ ಗಮನಾರ್ಹ ಆದಾಯ ನಷ್ಟವಾಗುತ್ತದೆ. ಇದರಿಂದ ಪಾಕ್​ ವಿರುದ್ಧ ಐಸಿಸಿ ಗಂಭೀರವಾದ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಐಸಿಸಿಯ ವಾರ್ಷಿಕ ಆದಾಯದಲ್ಲಿ ಪಾಕಿಸ್ತಾನಕ್ಕೆ ತನ್ನ ಪಾಲು ಸಿಗುವುದಿಲ್ಲ. ಅಂದಾಜು 34.5 ಮಿಲಿಯನ್ ಯುಎಸ್ ಡಾಲರ್ (ಸುಮಾರು ರೂ. 316 ಕೋಟಿ) ಪಾಕಿಸ್ತಾನಕ್ಕೆ ನಷ್ಟವಾಗಬಹುದು. ಇದು ಐಸಿಸಿಯ ಶೇ. 6 ರಷ್ಟು ಆದಾಯವಾಗಿದೆ. ಈಗಾಗಲೇ ಆರ್ಥಿಕ ಸ್ಥಿತಿಯಲ್ಲಿ ಹೀನಾಯ ಹಂತವನ್ನು ತಲುಪಿರುವ ಪಾಕ್​, ಶೇ. 6 ರಷ್ಟು ಆದಾಯ ಕಳೆದುಕೊಂಡಲ್ಲಿ ಪಿಸಿಬಿ, ಆರ್ಥಿಕ ಕುಸಿತ ಕಾಣುವುದರಲ್ಲಿ ಸಂದೇಹವೇ ಇಲ್ಲ. ಅಲ್ಲದೆ, ಅದರಿಂದ ಪಾಕ್​, ಚೇತರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಐಸಿಸಿ ಪ್ರತಿಕ್ರಿಯೆ ಏನು?

ಟಿ20 ವಿಶ್ವಕಪ್​ ವಿಚಾರದಲ್ಲಿ ಪಾಕಿಸ್ತಾನ ಸರ್ಕಾರ ತೆಗೆದುಕೊಂಡ ನಿರ್ಧಾರ ನಮ್ಮ ಗಮನಕ್ಕೆ ಬಂದಿದೆ. ಆದಾಗ್ಯೂ, ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ (ಪಿಸಿಬಿ) ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ನಾವು ಇದಕ್ಕಾಗಿ ಕಾಯುತ್ತಿದ್ದೇವೆ. ಇಂತಹ ಮೆಗಾ ಟೂರ್ನಮೆಂಟ್‌ಗಳಲ್ಲಿ ಆಯ್ದ ಪಂದ್ಯಗಳಲ್ಲಿ ಮಾತ್ರ ಭಾಗವಹಿಸುವ ಪಾಕ್​ ತಂಡದ ವರ್ತನೆಯು ಸ್ವೀಕಾರಾರ್ಹವಲ್ಲ. ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ವೇಳಾಪಟ್ಟಿಯ ಪ್ರಕಾರವೇ ಸ್ಪರ್ಧಿಸುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ ಅಂತ ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ರಾಷ್ಟ್ರೀಯ ನೀತಿಯಂತಹ ವಿಚಾರಗಳಲ್ಲಿ ಸರ್ಕಾರಗಳ ಪಾತ್ರವನ್ನು ಐಸಿಸಿ ಬಹಳ ಗೌರವಿಸುತ್ತದೆ. ಆದರೆ, ಪಾಕ್​ ಸರ್ಕಾರ ಈಗ ತೆಗೆದುಕೊಂಡಿರುವ ನಿರ್ಧಾರ, ಕ್ರೀಡೆ ಅಥವಾ ಪಾಕಿಸ್ತಾನದ ಲಕ್ಷಾಂತರ ಜನರು ಸೇರಿದಂತೆ ಪ್ರಪಂಚದಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳ ಹಿತಾಸಕ್ತಿಗೆ ಒಳ್ಳೆಯದಲ್ಲ. ಈಗ ತೆಗೆದುಕೊಂಡ ನಿರ್ಧಾರವು ಆ ದೇಶದಲ್ಲಿ ಕ್ರಿಕೆಟ್ ಮೇಲೆ ದೀರ್ಘಕಾಲೀನ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ತಮ್ಮ ನಿರ್ಧಾರವನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕಾಗಿದೆ ಎಂದು ಐಸಿಸಿ, ಪಾಕಿಸ್ತಾನಕ್ಕೆ ಮಹತ್ವದ ಸಲಹೆಯನ್ನು ನೀಡಿದೆ.
ಇನ್ನು ರಾಜಕೀಯ ಉದ್ವಿಗ್ನತೆಯಿಂದಾಗಿ ಭಾರತ ಮತ್ತು ಪಾಕಿಸ್ತಾನ ಒಂದು ದಶಕಕ್ಕೂ ಹೆಚ್ಚು ಕಾಲ ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ಆಡುತ್ತಿಲ್ಲ. ಕೇವಲ ಜಾಗತಿಕ ಮತ್ತು ಏಷ್ಯನ್ ಪಂದ್ಯಾವಳಿಗಳಲ್ಲಿ ಮಾತ್ರ ಸಾಂಪ್ರದಾಯಿಕ ಎದುರಾಳಿಗಳು ಪರಸ್ಪರ ಮುಖಾಮುಖಿಯಾಗುತ್ತವೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net