ಏಷ್ಯಾಕಪ್​, ಪಿಎಸ್​ಲ್​... ಟಿ20 ವಿಶ್ವಕಪ್​ನಿಂದ ಪಾಕ್​ ಹಿಂದೆ ಸರಿದರೆ ಭಾರೀ ನಷ್ಟ ಫಿಕ್ಸ್​! ಪಿಸಿಬಿ ಸೊಕ್ಕು ಮುರಿಯಲು ICC ರೆಡಿ

ಪಾಕಿಸ್ತಾನಕ್ಕೆ ಐಸಿಸಿ ಖಡಕ್ ಎಚ್ಚರಿಕೆ
ಪಾಕಿಸ್ತಾನಕ್ಕೆ ಐಸಿಸಿ ಖಡಕ್ ಎಚ್ಚರಿಕೆ
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್​ ಟೂರ್ನಿಯಿಂದ ಬಾಂಗ್ಲಾ ಕಿಕ್​ಔಟ್​
  • ಬಾಂಗ್ಲಾದೇಶ ತಂಡದ ಸ್ಥಾನಕ್ಕೆ ಸ್ಕಾಟ್​​ಲ್ಯಾಂಡ್​ಗೆ ಅವಕಾಶ
  • ಐಸಿಸಿ ಈ ನಿರ್ಧಾರಕ್ಕೆ ಪಾಕಿಸ್ತಾನ ಕಿಡಿ
  • ತಾವು ಹೊರನಡೆಯುವ ಮುನ್ಸೂಚನೆ, ಐಸಿಸಿಯಿಂದ ಖಡಕ್​ ಎಚ್ಚರಿಕೆ
ನವದೆಹಲಿ: ಭಾರತದಲ್ಲಿ ನಮ್ಮ ಆಟಗಾರರಿಗೆ ಸುರಕ್ಷತೆ ಇಲ್ಲ. ಹೀಗಾಗಿ, ಟಿ20 ವಿಶ್ವಕಪ್​ನಲ್ಲಿ ನಮ್ಮ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿಸಬೇಕು ಎಂದು ಐಸಿಸಿಗೆ ಪತ್ರದ ಮುಖೇನ ಮನವಿ ಮಾಡಿಕೊಂಡಿದ್ದ ಬಾಂಗ್ಲಾ ಕ್ರಿಕೆಟ್​ಗೆ ಕಡೆಗೂ ಭಾರೀ ಮುಖಭಂಗವೇ ಉಂಟಾಗಿದೆ. ಭಾರತಕ್ಕೆ ನಾವು ಪ್ರವಾಸ ಮಾಡಲ್ಲ. ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದಿದ್ದ ಬಿಸಿಬಿಯನ್ನು ಕಡೆಗೂ ಐಸಿಸಿ ವಿಶ್ವಕಪ್ ಟೂರ್ನಿಯಿಂದ ಕಿತ್ತುಬಿಸಾಡಿದೆ. ಅವರ ಸ್ಥಾನಕ್ಕೆ ಸ್ಕಾಟ್​ಲ್ಯಾಂಡ್​ಗೆ ಅವಕಾಶ ನೀಡಿದೆ. ಈ ಮಧ್ಯೆ, ಮೂಗು ತೂರಿರುವ ಪಾಕಿಸ್ತಾನಕ್ಕೆ ಐಸಿಸಿ ಖಡಕ್​ ಎಚ್ಚರಿಕೆಯನ್ನು ರವಾನಿಸಿದೆ.
ಐಸಿಸಿ ಬಾಂಗ್ಲಾದೇಶ ತಂಡವನ್ನು ಟಿ20 ವಿಶ್ವಕಪ್​ ಟೂರ್ನಿಯಿಂದ ಕೈಬಿಟ್ಟಿದ್ದೇ ತಡ, ಆರಂಭದಿಂದಲೂ ಬಾಂಗ್ಲಾ ಬೆನ್ನಿಗೆ ನಿಂತಿರುವ ಪಿಸಿಬಿ (ಪಾಕಿಸ್ತಾನ ಕ್ರಿಕೆಟ್ ಮಂಡಳಿ) ತಾವು ಕೂಡ ವಿಶ್ವಕಪ್​ ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾಗಿ ವರದಿಯಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪಾಕ್​ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮೊಹ್ಸಿನ್ ನಖ್ವಿ ಪ್ರತಿಕ್ರಿಯಿಸಿ, ಆ ಒಂದು ದೇಶ (ಭಾರತ) ಯಾವುದೇ ಪರ್ಯಾಯ ಆಯ್ಕೆಗಳು ಸಿಗದಂತೆ ಮಾಡುತ್ತಿದೆ ಎಂದಿದ್ದಾರೆ.
ಎಲ್ಲವೂ ನಮ್ಮ ಸರ್ಕಾರದ ನಿರ್ದೇಶನದಂತೆ ನಡೆಯಲಿದೆ. ಪ್ರಸ್ತುತ, ನಮ್ಮ ಪ್ರಧಾನಿಗಳು ವಿದೇಶ ಪ್ರವಾಸದಲ್ಲಿದ್ದಾರೆ. ಅವರು ಬಂದ ನಂತರ ಟಿ20 ವಿಶ್ವಕಪ್​ನಿಂದ ಹೊರಗುಳಿಯಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸುತ್ತೇವೆ ಎಂದು ನಖ್ವಿ ತಿಳಿಸಿದ್ದಾರೆ. ಈ ಎಲ್ಲ ಬೆಳವಣಿಗೆಯನ್ನು ಬಹಳ ಸೂಕ್ಷ್ಮವಾಗಿ ಗಮನಿಸಿರುವ ಐಸಿಸಿ, ಪಾಕಿಸ್ತಾನ ತಂಡ ಏನಾದರೂ ವಿಶ್ವಕಪ್​ ಟೂರ್ನಿ ಕೈಬಿಡಲು ಮುಂದಾದರೆ, ದೊಡ್ಡ ಮಟ್ಟದ ನಷ್ಟ ಹಾಗೂ ಮುಂದಿನ ಅಂತಾರಾಷ್ಟ್ರೀಯ ಪಂದ್ಯಗಳಿಂದ ದೂರ ಉಳಿಯಬೇಕಾಗುವ ಪರಿಸ್ಥಿತಿಗಳು ಎದುರಾಗುತ್ತದೆ ಎಂದು ಎಚ್ಚರಿಸಿದೆ.

ಐಸಿಸಿ ಎಚ್ಚರಿಕೆಯಲ್ಲಿ ಏನಿದೆ?

ಅಕಸ್ಮಾತ್ ಪಾಕಿಸ್ತಾನ ಏನಾದರೂ ನುಡಿದಂತೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಹಿಂದೆ ಸರಿದರೆ, ಭಾರೀ ಶಿಕ್ಷೆಯನ್ನೇ ಅನುಭವಿಸುಬೇಕಿದೆ. ಇದು ದ್ವಿಪಕ್ಷೀಯ ಸರಣಿಗಳನ್ನು ಮಾತ್ರ ರದ್ದು ಮಾಡುವುದಲ್ಲದೇ, ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಆಡುವ ವಿದೇಶಿ ಆಟಗಾರರಿಗೆ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು (ಎನ್‌ಒಸಿ) ನೀಡಲು ನಿರಾಕರಿಸಲಿದೆ ಮತ್ತು ಏಷ್ಯಾಕಪ್‌ನಿಂದ ಪಾಕ್​ ತಂಡವನ್ನು ಸಂಪೂರ್ಣವಾಗಿ ಹೊರಗಿಡಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net