ಮೋದಿಜೀ ಮಾತನ್ನು ಚಾಚೂತಪ್ಪದೆ ಪಾಲಿಸಿದ್ದೇವೆ!: ಮಗಳಿಗೆ 'ಇಂಡಿಯಾ' ಎಂದು ಹೆಸರಿಟ್ಟಿದ್ದೇಕೆ ಎಂಬ ಗುಟ್ಟು ಬಿಚ್ಚಿಟ್ಟ ಜಾಂಟಿ ರೋಡ್ಸ್ | Jonty Rhodes

ಮಗಳಿಗೆ 'ಇಂಡಿಯಾ' ಎಂದು ಹೆಸರಿಟ್ಟಿದ್ದೇಕೆ ಎಂಬ ಗುಟ್ಟು ಬಿಚ್ಚಿಟ್ಟ ಜಾಂಟಿ ರೋಡ್ಸ್
ಮಗಳಿಗೆ 'ಇಂಡಿಯಾ' ಎಂದು ಹೆಸರಿಟ್ಟಿದ್ದೇಕೆ ಎಂಬ ಗುಟ್ಟು ಬಿಚ್ಚಿಟ್ಟ ಜಾಂಟಿ ರೋಡ್ಸ್
Published on: 

Jonty Rhodes: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟ್ ದಿಗ್ಗಜ ಹಾಗೂ ವಿಶ್ವದ ಶ್ರೇಷ್ಠ ಫೀಲ್ಡರ್‌ಗಳಲ್ಲೊಬ್ಬರಾದ ಜಾಂಟಿ ರೋಡ್ಸ್ ಅವರು ಮತ್ತೊಮ್ಮೆ ಭಾರತೀಯ ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ. ತಮ್ಮ ಮಗಳು ಇಂಡಿಯಾಳ ಕುರಿತು ಅವರು ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ರೋಡ್ಸ್ ನೀಡಿದ ಹಾಸ್ಯಮಯ ಹೋಲಿಕೆ ನೆಟ್ಟಿಗರ ಮನಗೆದ್ದಿದೆ.

ಕಳೆದ ಆಗಸ್ಟ್‌ನಲ್ಲಿ ಚಿತ್ರೀಕರಿಸಲಾದ ಸಂವಾದವೊಂದರಲ್ಲಿ, ರೋಡ್ಸ್ ಅವರಿಗೆ ಭಾರತದೊಂದಿಗಿನ ಅವರ ಅವಿನಾಭಾವ ಸಂಬಂಧ ಮತ್ತು ಮಗಳ ಹೆಸರಿನ ಕುರಿತು ಪ್ರಶ್ನಿಸಲಾಗಿತ್ತು. ಇದಕ್ಕೆ ತಕ್ಷಣವೇ ಹಾಸ್ಯಮಯವಾಗಿ ಉತ್ತರಿಸಿದ ರೋಡ್ಸ್, 2014ರಲ್ಲಿ ಪ್ರಧಾನಿ ಮೋದಿ ಅವರು ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಆರಂಭಿಸಿದಾಗಿನಿಂದ ತಮ್ಮ ಕುಟುಂಬವೂ ಅದಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಚಟಾಕಿ ಹಾರಿಸಿದ್ದಾರೆ. 2015ರಲ್ಲಿ ಭಾರತದಲ್ಲಿಯೇ ತಮ್ಮ ಮಗಳು ಜನಿಸಿರುವುದನ್ನು ಉಲ್ಲೇಖಿಸಿ ಅವರು ಈ ತಮಾಷೆಯ ಹೇಳಿಕೆ ನೀಡಿದ್ದಾರೆ. ಅವರ ಈ ಹಾಸ್ಯಪ್ರಜ್ಞೆ ಮತ್ತು ಭಾರತದ ಮೇಲಿನ ಪ್ರೀತಿಗೆ ವೀಕ್ಷಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮಗಳಿಗೆ ಇಂಡಿಯಾ ಎಂದು ಹೆಸರಿಟ್ಟಿದ್ದೇಕೆ ಜಾಂಟಿ ರೋಡ್ಸ್?

ಜಾಂಟಿ ರೋಡ್ಸ್ ಅವರಿಗೆ ಇಂಡಿಯಾ ಎಂಬ ಹೆಸರು ಕೇವಲ ಪದವಲ್ಲ, ಅದೊಂದು ಭಾವನಾತ್ಮಕ ಸಂಬಂಧ. 2015ರ ಏಪ್ರಿಲ್‌ನಲ್ಲಿ ರೋಡ್ಸ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ, ಮುಂಬೈನಲ್ಲೇ ಅವರ ಮಗಳು ಇಂಡಿಯಾ ಜೀನ್ ರೋಡ್ಸ್ ಜನಿಸಿದಳು. ಕ್ರಿಕೆಟ್ ಮೂಲಕ ಇಲ್ಲಿ ತುಂಬಾ ಸಮಯ ಕಳೆದಿರುವ ರೋಡ್ಸ್, ಇಲ್ಲಿನ ಜನರು, ಸಂಪ್ರದಾಯ ಮತ್ತು ಸಂಸ್ಕೃತಿಯೊಂದಿಗೆ ಗಾಢವಾದ ನಂಟು ಬೆಳೆಸಿಕೊಂಡಿದ್ದಾರೆ. ಇದೇ ಪ್ರೀತಿಯ ಸಂಕೇತವಾಗಿ ತಮ್ಮ ಮಗಳಿಗೆ ಭಾರತದ ಹೆಸರನ್ನೇ ಇಡಲು ನಿರ್ಧರಿಸಿದ್ದರು.

ಈ ಹಿಂದಿನ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ್ದ ರೋಡ್ಸ್, ಭಾರತದ ಇತಿಹಾಸ, ಆಧ್ಯಾತ್ಮಿಕತೆ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಆಧುನಿಕ ದೃಷ್ಟಿಕೋನದ ವಿಶಿಷ್ಟ ಸಂಗಮವು ತಮಗೆ ಮತ್ತು ತಮ್ಮ ಪತ್ನಿ ಮೆಲಾನಿ ಅವರಿಗೆ ಬಹಳಷ್ಟು ಆಕರ್ಷಿಸಿತ್ತು ಎಂದು ಹೇಳಿದ್ದರು. ಅಲ್ಲದೆ, ತಮ್ಮ ಮಗಳು ವಿಭಿನ್ನ ಅನುಭವಗಳು ಮತ್ತು ಸಂಸ್ಕೃತಿಗಳನ್ನು ಮುಕ್ತವಾಗಿ ಅನ್ವೇಷಿಸುವ ಸ್ವಾತಂತ್ರ್ಯದೊಂದಿಗೆ ಬೆಳೆಯಬೇಕೆಂಬುದು ತಮ್ಮ ಆಶಯವಾಗಿತ್ತು ಎಂದು ವಿವರಿಸಿದ್ದರು.

Also Read
2035ರವರೆಗಿನ ಐಸಿಸಿ ಟೂರ್ನಿ ವೇಳಾಪಟ್ಟಿ ಪ್ರಕಟ: ಭಾರತಕ್ಕೆ 2031ರ ವಿಶ್ವಕಪ್ ಆತಿಥ್ಯ!..ಹೀಗಿದೆ ನೋಡಿ ಟೈಮ್​ ಟೇಬಲ್​​ | ICC Schedule
ಮಗಳಿಗೆ 'ಇಂಡಿಯಾ' ಎಂದು ಹೆಸರಿಟ್ಟಿದ್ದೇಕೆ ಎಂಬ ಗುಟ್ಟು ಬಿಚ್ಚಿಟ್ಟ ಜಾಂಟಿ ರೋಡ್ಸ್

ಕ್ರಿಕೆಟ್‌ಗೂ ಮೀರಿದ ಭಾವನಾತ್ಮಕ ಬಾಂಧವ್ಯ

ಭಾರತದೊಂದಿಗಿನ ಜಾಂಟಿ ರೋಡ್ಸ್ ಅವರ ಸಂಬಂಧ ಕೇವಲ ಕ್ರಿಕೆಟ್ ಮೈದಾನಕ್ಕೆ ಸೀಮಿತವಾಗಿಲ್ಲ. ಕಳೆದ ಹಲವು ವರ್ಷಗಳಿಂದ ಇಂಡಿಯನ್ ಫ್ಯಾನ್ಸ್ ತಮಗೆ ನೀಡುತ್ತಿರುವ ಪ್ರೀತಿ ಮತ್ತು ಇಲ್ಲಿನ ಕುಟುಂಬದ ಅನುಭವಗಳ ಬಗ್ಗೆ ಅವರು ಆಗಾಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ರೋಡ್ಸ್ ಪತ್ನಿ ಮತ್ತು ಮಕ್ಕಳು ಕೂಡ ಭಾರತೀಯ ಸಂಸ್ಕೃತಿಯಲ್ಲಿ ಬೆರೆತುಹೋಗಿದ್ದು, ಇಲ್ಲಿನ ದೇವಾಲಯಗಳಿಗೆ ಭೇಟಿ ನೀಡುವುದು ಹಾಗೂ ಸಾಂಪ್ರದಾಯಿಕ ಪೂಜೆ-ಪುನಸ್ಕಾರಗಳಲ್ಲಿ ಪಾಲ್ಗೊಳ್ಳುತ್ತಾರೆ.

ಮೈದಾನದಲ್ಲಿ ಮಿಂಚಿನಂತೆ ಸಂಚರಿಸುತ್ತಿದ್ದ ಅಪ್ರತಿಮ ಫೀಲ್ಡರ್ ಆಗಿ ರೋಡ್ಸ್ ಅವರನ್ನು ಆರಾಧಿಸುವ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ, ಅವರಿಗೆ ಭಾರತದ ಮೇಲಿರುವ ಪ್ರೀತಿ ಹೊಸದೇನಲ್ಲ. ಆದರೆ, ತಮ್ಮ ಮಗಳಿಗೆ ಇಂಡಿಯಾ ಎಂದು ಹೆಸರಿಡುವ ಮೂಲಕ ಆ ಬಾಂಧವ್ಯಕ್ಕೆ ಶಾಶ್ವತ ರೂಪ ನೀಡಿದ್ದರು. ಇದೀಗ ವರ್ಷಗಳ ನಂತರ ಅವರ ಮೇಕ್ ಇನ್ ಇಂಡಿಯಾ ಹಾಸ್ಯ ಚಟಾಕಿಯು ಭಾರತ ಮತ್ತು ರೋಡ್ಸ್ ನಡುವಿನ ಆತ್ಮೀಯ ಸಂಬಂಧವನ್ನು ಅಭಿಮಾನಿಗಳು ಮತ್ತೊಮ್ಮೆ ಸಂಭ್ರಮಿಸುವಂತೆ ಮಾಡಿದೆ(ಏಜೆನ್ಸೀಸ್​).