ಗೌತಿ ಬದಲಿಗೆ ವಿವಿಎಸ್​ ಲಕ್ಷ್ಮಣ್​ ಹೆಡ್​ ಕೋಚ್? ವಿಚಾರ ಹೊರಬೀಳ್ತಿದ್ದಂತೆ ಸ್ಪಷ್ಟತೆ ಕೊಟ್ಟ ಬಿಸಿಸಿಐ​

ಗೌತಮ್​ ಗಂಭೀರ್​, ವಿವಿಎಸ್​ ಲಕ್ಷ್ಮಣ್​
ಗೌತಮ್​ ಗಂಭೀರ್​, ವಿವಿಎಸ್​ ಲಕ್ಷ್ಮಣ್​
Published on

ಪ್ರಮುಖ ಮುಖ್ಯಾಂಶಗಳು

  • ಹೆಡ್​ ಕೋಚ್​ ಸ್ಥಾನಕ್ಕೆ ಗೌತಿ ಬದಲಿಗೆ ವಿವಿಎಸ್​ ಲಕ್ಷ್ಮಣ್​
  • ಟೆಸ್ಟ್​ ಕ್ರಿಕೆಟ್​ಗೆ ಕೋಚ್​ ಆಗಿ ಗೌತಮ್ ಗಂಭೀರ್​ ಬೇಡ
  • ತೆರೆಮರೆಯಲ್ಲಿ ಲಕ್ಷ್ಮಣ್​ ಜತೆ ಬಿಸಿಸಿಐ ಮಾತುಕತೆ
ನವದೆಹಲಿ: ಟೆಸ್ಟ್​ ಕ್ರಿಕೆಟ್​ಗೆ ಗೌತಮ್ ಗಂಭೀರ್ ಬದಲಿಗೆ ಟೀಮ್ ಇಂಡಿಯಾದ ಮಾಜಿ ಹಿರಿಯ ಕ್ರಿಕೆಟಿಗ ವಿವಿಎಸ್​ ಲಕ್ಷ್ಮಣ್ ಅವರನ್ನು ಕರೆತರಲು ಬಿಸಿಸಿಐ ತೆರೆಮರೆಯಲ್ಲಿ ಮಾತುಕತೆ ನಡೆಸಿದ್ದಾಗಿ ವದಂತಿಗಳು ಹರಿದಾಡುತ್ತಿವೆ. ಈ ವಿಷಯ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಉತ್ತರಿಸಿರುವ ಬಿಸಿಸಿಐ ಅಧಿಕಾರಿಗಳು, ಇದು ನಿಜವೇ? ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ​
ಕಳೆದ ಕೆಲವು ವರ್ಷಗಳಿಂದ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಚರ್ಚೆಗೆ, ಟೀಕೆಗೆ ಗುರಿಯಾಗುತ್ತಿರುವ ಟೀಮ್ ಇಂಡಿಯಾ ಹೆಡ್​ ಕೋಚ್ ಗೌತಮ್ ಗಂಭೀರ್, ಟೆಸ್ಟ್​ ಫಾರ್ಮೆಟ್​ನಲ್ಲಿ ತಂಡವನ್ನು ಗೆಲುವಿನಡೆಗೆ ಕೊಂಡೊಯ್ಯುವಲ್ಲಿ ವಿಫಲರಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಅದಕ್ಕೆ ಸಾಕ್ಷಿ, ಇತ್ತೀಚಿನ ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್​ ಸರಣಿ. ಹೀಗಾಗಿ, ಬಿಸಿಸಿಐ ಗೌತಿ ಸ್ಥಾನಕ್ಕೆ ಲಕ್ಷ್ಮಣ್​ ಅವರನ್ನು ನೇಮಕ ಮಾಡಲು ಮುಂದಾಗಿದ್ದಾಗಿ ವರದಿಗಳು ಹರಿದಾಡಿದವು. ಇದಕ್ಕೆ ಸಂಬಂಧಿಸಿದಂತೆ ಕಡೆಗೂ ಬಿಸಿಸಿಐ ಕಾರ್ಯದರ್ಶಿಗಳೇ ಪ್ರತಿಕ್ರಿಯಿಸಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾತನಾಡಿ, ಆ ಎಲ್ಲಾ ಸುದ್ದಿಗಳು ಶುದ್ಧ ಸುಳ್ಳು. ಲಕ್ಷ್ಮಣ್ ಅವರೊಂದಿಗೆ ನಾವು ಯಾವುದೇ ರೀತಿಯ ಚರ್ಚೆಯನ್ನೂ ನಡೆಸಿಲ್ಲ. ಗಂಭೀರ್ ಕೇವಲ ಏಕದಿನ, ಟಿ20 ಕ್ರಿಕೆಟ್‌ಗೆ ಮಾತ್ರ ಸೀಮಿತರಾಗಿದ್ದಾರೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ. ಇವೆಲ್ಲವೂ ಕೇವಲ ವದಂತಿಗಳು. ಈ ಬಗ್ಗೆ ಇಲ್ಲಿಯವರೆಗೆ ಯಾವುದೇ ಚರ್ಚೆಯೂ ನಡೆದಿಲ್ಲ. ಗಂಭೀರ್ ಒಪ್ಪಂದದ ಪ್ರಕಾರ ಮುಂದುವರಿಯುತ್ತಾರೆ ಎಂದರು.
ಪ್ರಮುಖ ಸುದ್ದಿ ಸಂಸ್ಥೆಗಳು ಸಹ ಇದೇ ಸುದ್ದಿಯನ್ನು ವರದಿ ಮಾಡುತ್ತಿವೆ. ಹೀಗೆ ಮಾಡುವುದು ಕಿಂಚಿತ್ತು ಸರಿಯಲ್ಲ. ಈ ವಿಚಾರದಲ್ಲಿ ಜನರು ತಮಗೆ ಹೇಗೇ ಬೇಕೋ ಹಾಗೆ ಯೋಚಿಸಲಿ. ಬಿಸಿಸಿಐ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇದು ಕೇವಲ ಊಹಾಪೋಹವಷ್ಟೇ. ಇದರ ಬಗ್ಗೆ ಇನ್ನೇನು ಹೇಳಲು ಇಲ್ಲ" ಎಂದಿದ್ದಾರೆ.(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net