ಅಂದು ರಿಕ್ಕಿ ಪಾಂಟಿಂಗ್​ಗೆ ಆಗಿದ್ದು ಮೋಸ!? ಅದೊಂದು ನಿರ್ಣಯ ಬದಲಿಸಲು ಪಾಕ್ ಅಂಪೈರ್​ಗೆ ಮಾತು ಕೊಟ್ಟಿದ್ದ ವೀರೂ

ಕ್ರಿಕೆಟ್​
ಕ್ರಿಕೆಟ್​
Published on

ಪ್ರಮುಖ ಮುಖ್ಯಾಂಶಗಳು

  • ಅಸಾದ್​ ರೌಫ್‌ಗೆ ತಮ್ಮ ಪರ ನಿರ್ಣಯ ಕೊಡುವಂತೆ ಹೇಳಿದ್ದ ವೀರೂ
  • ಹಣದ ಬದಲಿಗೆ ದುಬಾರಿ ವಸ್ತುಗಳನ್ನು ಕೊಟ್ಟಿದ್ದ ಸೆಹ್ವಾಗ್​
  • ಈ ಬಗ್ಗೆ ಮುಕ್ತವಾಗಿ ಸಂದರ್ಶನದಲ್ಲಿ ಮಾತನಾಡಿದ್ದ ಸ್ಟಾರ್​ ಕ್ರಿಕೆಟಿಗ
ಮುಂಬೈ: ಅಂದಿನ ಭಾರತೀಯ ಕ್ರಿಕೆಟ್​ನ ಸ್ಟಾರ್​ ಬ್ಯಾಟರ್​ ಆಗಿದ್ದ ವೀರೇಂದ್ರ ಸೆಹ್ವಾಗ್​, ತಮ್ಮ ಸಹ ಓಪನರ್​ ಸಚಿನ್ ತೆಂಡೂಲ್ಕರ್​ ಅವರೊಂದಿಗೆ ತಂಡದ ಪರ ಆರಂಭಿಕರಾಗಿ ಮೈದಾನಕ್ಕಿಳಿಯುತ್ತಿದ್ದರೆ, ಕ್ರಿಕೆಟ್​ ಪ್ರಿಯರು ರೋಮಾಂಚಕ ಬ್ಯಾಟಿಂಗ್ ಪ್ರದರ್ಶನ ಖಚಿತ ಎಂದೇ ನಿರೀಕ್ಷಿಸುತ್ತಿದ್ದರು. ಕಾರಣ, ಇವರಿಬ್ಬರ ಜೋಡಿ ಎದುರಾಳಿ ತಂಡದ ಬೌಲರ್​ಗಳ ವಿರುದ್ಧ ಆರ್ಭಟಿಸಲು ನಿಂತರೆ, ಬೌಂಡರಿ ಮತ್ತು ಸಿಕ್ಸರ್​ಗಳ ಸುರಿಮಳೆ ಪಕ್ಕಾ. ಇದು ಮೈದಾನದಲ್ಲಿರುತ್ತಿದ್ದ ಕ್ರೀಡಾಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿತ್ತು. ಆದರೀಗ, ಅದೇ ವೀರೂ ಬಗ್ಗೆ ಶಾಕಿಂಗ್ ವಿಚಾರವೊಂದು ಮತ್ತೊಮ್ಮೆ ಮುನ್ನೆಲೆಗೆ ಬಂದಿರುವುದು ಹಲವರ ಹುಬ್ಬೇರಿಸಿದೆ.
ತಮ್ಮ ತ್ರಿಬಲ್​ ಸೆಂಚುರಿ ಮೂಲಕವೇ ಟೆಸ್ಟ್​ ಕ್ರಿಕೆಟ್​ನಲ್ಲಿ ದಾಖಲೆ ನಿರ್ಮಿಸಿರುವ ವೀರೂ, ತಮ್ಮ ಅಬ್ಬರದ ಬ್ಯಾಟಿಂಗ್​ನಿಂದ ಅಪಾರ ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಸಂಪಾದಿಸಿದ್ದಾರೆ. ಪ್ರಸ್ತುತ, ಕ್ರಿಕೆಟ್​ ಜಗತ್ತಿಗೆ ಗುಡ್​ಬೈ ಹೇಳಿ, ಆಗಾಗ್ಗೆ ಕೆಲವು ಸಂದರ್ಶನಗಳಲ್ಲಿ ತಮ್ಮ ಹಳೆಯ ನೆನಪುಗಳು ಮತ್ತು ಅನುಭವಗಳನ್ನು ಮೆಲುಕು ಹಾಕುವ ಸೆಹ್ವಾಗ್​, ಹಿಂದಿನ ಸಂದರ್ಶನವೊಂದರಲ್ಲಿ ತಾವು ಮಾಡಿದ ತಪ್ಪನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು. ಅದೀಗ, ಮತ್ತೆ ವೈರಲ್ ಆಗಿದೆ.
2023ರಲ್ಲಿ ಪ್ರಕಟವಾಗಿದ್ದ ನ್ಯೂಸ್​ 18 ವರದಿ ಪ್ರಕಾರ, 'ವಾಟ್​ ದಿ ಡಕ್​' ವಿಥ್ ವಿಕ್ರಮ್ ಸಥಾಯೆ ಅವರ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದ ಸೆಹ್ವಾಗ್, ಪಾಕಿಸ್ತಾನಿ ಅಂಪೈರ್ ಅಸಾದ್​ ರೌಫ್‌ಗೆ ತಮ್ಮ ಪರ ನಿರ್ಣಯಗಳನ್ನು ಕೊಡುವಂತೆ ಲಂಚ ನೀಡುವುದಾಗಿ ಹೇಳಿದ್ದೆ. ರೌಫ್ ಅವರಿಗೆ ಬ್ರ್ಯಾಂಡೆಡ್​ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸವಿತ್ತು. ದುಬಾರಿ ಮೌಲ್ಯದ ಸನ್​ಶೇಡ್ಸ್​, ಟಿ-ಶರ್ಟ್ ಮತ್ತು ಶೂಗಳನ್ನು ಧರಿಸುವುದನ್ನು ಇಷ್ಟಪಡುತ್ತಿದ್ದರು. ಆ ಸಮಯದಲ್ಲಿ ನಾನು ಒಂದು ಬ್ರ್ಯಾಂಡ್​ ಸಂಸ್ಥೆಯ ರಾಯಭಾರಿಯಾಗಿದ್ದೆ. ಹೀಗಾಗಿ, ಅಲ್ಲಿ ಸಿಗುವ ವಸ್ತುಗಳನ್ನು ಇವರಿಗೆ ಕೊಟ್ಟು, ಮುಂದಿನ ಪಂದ್ಯಗಳಲ್ಲಿ ನನ್ನ ವಿರುದ್ಧ ಬೆರಳು ಎತ್ತಬೇಡಿ ಎಂದು ತಮಾಷೆಯಾಗಿ ಹೇಳಿದ್ದೆ ಎಂದಿದ್ದಾರೆ.
2008ರಲ್ಲಿ ಮೊಹಾಲಿಯಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಆಗ, ಈ ಘಟನೆ ನಡೆಯಿತು. ಟೀಮ್ ಇಂಡಿಯಾದ ಎರಡನೇ ಇನ್ನಿಂಗ್ಸ್‌ನಲ್ಲಿ, ನಾನು 90 ರನ್ ಗಳಿಸಿ, ಬ್ಯಾಟಿಂಗ್ ಮಾಡುತ್ತಿದ್ದೆ. ಈ ವೇಳೆ, ಮಿಚೆಲ್ ಜಾನ್ಸನ್ ಅವರ ಎಸೆತವು ನನ್ನ ಬ್ಯಾಟ್‌ಗೆ ತಗುಲಿತು. ತಕ್ಷಣವೇ ಇದು ಔಟ್​ ಎಂದು ಆಸೀಸ್​ ನಾಯಕ ರಿಕ್ಕಿ ಪಾಂಟಿಂಗ್ ಅಪೀಲ್ ಮಾಡಿದರು. ಆಶ್ಚರ್ಯ ಎಂದರೆ, ಅಂಪೈರ್ ರೌಫ್ ಅದನ್ನು ನಾಟ್ ಔಟ್ ಎಂದೇ ತೀರ್ಪು ನೀಡಿದರು ಎಂದು ಸೆಹ್ವಾಗ್ ಹೇಳಿಕೊಂಡಿದ್ದರು. ಈ ವಿಷಯ ಜಾಲತಾಣಗಳಲ್ಲಿ ಹರಿದಾಡಿದ್ದು, ನಿಜಕ್ಕೂ ವೀರೂ ಮೋಸ ಮಾಡಿದ್ರಾ? ಇದು ಸತ್ಯವೇ? ಎಂದೆಲ್ಲ ನೆಟ್ಟಿಗರು ಕಮೆಂಟ್​ ಮೂಲಕ ತಮ್ಮ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net