ವಡೋದರದಲ್ಲಿ ಇಂದು ಕಿವೀಸ್ ವಿರುದ್ಧ ಮೊದಲ ಏಕದಿನ; 2026ರಲ್ಲಿ ಶುಭಾರಂಭದ ಹಂಬಲದಲ್ಲಿ ಭಾರತ
ವಡೋದರದಲ್ಲಿ ಇಂದು ಕಿವೀಸ್ ವಿರುದ್ಧ ಮೊದಲ ಏಕದಿನ; 2026ರಲ್ಲಿ ಶುಭಾರಂಭದ ಹಂಬಲದಲ್ಲಿ ಭಾರತ
Published on:
Copied
Follow Us
ವಡೋದರ: ಟೀಮ್ ಇಂಡಿಯಾ (Team India) 2026ರ ಮೊದಲ ಸವಾಲಿಗೆ ಸಜ್ಜಾಗಿದೆ. ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ (ODI Cricket) ಮೊದಲ ಕಾದಾಟ ಭಾನುವಾರ ನೂತನ ಕೋಟಂಬಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಶುಭಮಾನ್ ಗಿಲ್ (Shubman Gill) ಬಳಗ ಹೊಸ ವರ್ಷವನ್ನು ಗೆಲುವಿನೊಂದಿಗೆ ಆರಂಭಿಸುವ ಹಂಬಲದಲ್ಲಿದೆ.
ಕಳೆದ ವರ್ಷಾಂತ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಆಡಿದ್ದ ಭಾರತ ತಂಡ ನಂತರ 22 ದಿನಗಳ ಬಿಡುವಿನ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳುತ್ತಿದೆ. ಈ ಸಮಯದಲ್ಲಿ ತಂಡದ ಬಹುತೇಕ ಆಟಗಾರರು ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕನಿಷ್ಠ 2 ಪಂದ್ಯಗಳನ್ನು ಆಡಿದ್ದು, ಉತ್ತಮ ಲಯದಲ್ಲಿದ್ದಾರೆ. ಸದ್ಯ ಏಕದಿನ ಕ್ರಿಕೆಟ್ಗೆ ಸೀಮಿತವಾಗಿರುವ ಅನುಭವಿ ಬ್ಯಾಟರ್ಗಳಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ, ದೇಶೀಯ ಕ್ರಿಕೆಟ್ನಲ್ಲೂ ಭರ್ಜರಿ ಶತಕ ಸಿಡಿಸಿ ಫಾರ್ಮ್ ಕಾಯ್ದುಕೊಂಡಿದ್ದಾರೆ.
ಕಿವೀಸ್ ತಂಡಕ್ಕೆ ಕಾಯಂ ನಾಯಕ ಮಿಚೆಲ್ ಸ್ಯಾಂಟ್ನರ್ ಗಾಯದ ಸಮಸ್ಯೆಯಿಂದಾಗಿ ಏಕದಿನ ಸರಣಿಗೆ ಅಲಭ್ಯರಾಗಿದ್ದು, ಮೈಕೆಲ್ ಬ್ರೇಸ್ವೆಲ್ ಹಂಗಾಮಿ ನಾಯಕರಾಗಿದ್ದಾರೆ. ಟಾಮ್ ಲಾಥಮ್ 3ನೇ ಮಗುವಿನ ನಿರೀಕ್ಷೆಯಲ್ಲಿ ಮತ್ತು ಕೇನ್ ವಿಲಿಯಮ್ಸನ್ ದಕ್ಷಿಣ ಆಫ್ರಿಕಾದ ಟಿ20 ಲೀಗ್ನಲ್ಲಿ ಆಡುತ್ತಿರುವ ಕಾರಣ ಗೈರಾಗಿದ್ದಾರೆ. ಟಿ20 ವಿಶ್ವಕಪ್ಗೆ ಪೂರ್ವಭಾವಿಯಾಗಿ ರಚಿನ್ ರವೀಂದ್ರ, ಮ್ಯಾಟ್ ಹೆನ್ರಿ, ಜೇಕಬ್ ಡಫಿಗೆ ವಿಶ್ರಾಂತಿ ನೀಡಲಾಗಿದೆ. ಕಿವೀಸ್ ತಂಡದ 15ರ ಪೈಕಿ 8 ಆಟಗಾರರಿಗೆ ಇದು ಮೊದಲ ಭಾರತ ಪ್ರವಾಸವಾಗಿದೆ. ಹೀಗಾಗಿ ಅನನುಭವಿ ಪ್ರವಾಸಿ ತಂಡ ಆತಿಥೇಯರಿಗೆ ಸುಲಭ ತುತ್ತಾಗುವ ನಿರೀಕ್ಷೆ ಇದೆ.
ಗಿಲ್ಗೆ ಸವಾಲಿನ ಸರಣಿ: ಟಿ20 ವಿಶ್ವಕಪ್ಗೆ ಕಡೆಗಣಿಸಲ್ಪಟ್ಟಿರುವ ಶುಭಮಾನ್ ಗಿಲ್ಗೆ ನಾಯಕರಾಗಿ ಏಕದಿನ ಕ್ರಿಕೆಟ್ ದಾಖಲೆ ಸುಧಾರಿಸಿಕೊಳ್ಳಲು ಇದು ಉತ್ತಮ ಅವಕಾಶವೆನಿಸಿದೆ. ಏಕದಿನ ನಾಯಕರಾಗಿ ಕಳೆದ ಆಸ್ಟ್ರೆಲಿಯಾ ಪ್ರವಾಸದ ಮೊದಲ ಸವಾಲಿನಲ್ಲಿ ಅವರು ಸರಣಿ ಸೋಲು ಕಂಡಿದ್ದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ಅನಾರೋಗ್ಯದಿಂದ ಒಂದು ಪಂದ್ಯ ತಪ್ಪಿಸಿಕೊಂಡಿದ್ದ ಅವರು, ಇನ್ನೊಂದು ಪಂದ್ಯದಲ್ಲಿ ಬೇಗನೆ ಔಟಾಗಿದ್ದರು. ಹೀಗಾಗಿ ಬ್ಯಾಟಿಂಗ್ನಲ್ಲೂ ಅವರು ಶ್ರೀ ಲಯಕ್ಕೆ ಮರಳಬೇಕಿದೆ.
ಮುಂದಿನ ವರ್ಷದ ಏಕದಿನ ವಿಶ್ವಕಪ್ ಟೂರ್ನಿಗೆ ಸಿದ್ಧತೆ ಮತ್ತು ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ಭಾರತಕ್ಕೆ ಇದು ಮಹತ್ವದ ವರ್ಷವಾಗಿದೆ. ಹಾಲಿ ವರ್ಷ ಭಾರತ ತಂಡ ಕನಿಷ್ಠ 18 ಏಕದಿನ ಪಂದ್ಯಗಳನ್ನು ಆಡಲಿದೆ. ಸೆಪ್ಟೆಂಬರ್ನಲ್ಲಿ ಬಾಂಗ್ಲಾದೇಶದಲ್ಲೂ 3 ಏಕದಿನ ಪಂದ್ಯ ಆಡಬೇಕಿದ್ದರೂ, ಪ್ರಸಕ್ತ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಈ ಸರಣಿ ನಡೆಯುವ ಸಾಧ್ಯತೆ ಕ್ಷೀಣವಾಗಿದೆ. ಉಳಿದಂತೆ ಭಾರತ ತಂಡ ಅಫ್ಘಾನಿಸ್ತಾನ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ (2 ಬಾರಿ), ಶ್ರೀಲಂಕಾ ವಿರುದ್ಧ ತಲಾ 3 ಏಕದಿನ ಪಂದ್ಯಗಳ ಸರಣಿ ಆಡಲಿದೆ. ಹಾಲಿ ವರ್ಷದ ಟಿ20 ವಿಶ್ವಕಪ್ ಮತ್ತು ಐಪಿಎಲ್ ನಂತರವಂತೂ ಭಾರತದ ಸಂಪೂರ್ಣ ಗಮನ ಏಕದಿನ ವಿಶ್ವಕಪ್ ಸಿದ್ಧತೆಯ ಮೇಲಿರಲಿದೆ.
ಟೀಮ್ ನ್ಯೂಸ್:
ಭಾರತ: ಈಗಾಗಲೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿ ಫಿಟ್ನೆಸ್ ಸಾಬೀತುಪಡಿಸಿರುವ ಉಪನಾಯಕ ಶ್ರೇಯಸ್ ಅಯ್ಯರ್, ಮೂರು ತಿಂಗಳ ಬಳಿಕ ಭಾರತ ತಂಡದ ಪರ 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ದಣ ಆಫ್ರಿಕಾ ಎದುರು ತಾನಾಡಿದ ಕೊನೇ ಏಕದಿನದಲ್ಲಿ ಶತಕ ಸಿಡಿಸಿದ್ದರೂ ಯಶಸ್ವಿ ಜೈಸ್ವಾಲ್ ಈ ಬಾರಿ ಗಿಲ್ಗೆ ಸ್ಥಾನ ಬಿಟ್ಟುಕೊಡಬೇಕಿದೆ. ಜಸ್ಪ್ರೀತ್ ಬುಮ್ರಾ ಗೈರಿನಲ್ಲಿ ಮೊಹಮದ್ ಸಿರಾಜ್ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಅರ್ಷದೀಪ್ 2ನೇ ವೇಗಿಯಾಗಿದ್ದರೆ, 3ನೇ ವೇಗದ ಬೌಲರ್ ಸ್ಥಾನಕ್ಕೆ ಹರ್ಷಿತ್ ರಾಣಾ ಜತೆ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಪೈಪೋಟಿಯಲ್ಲಿದ್ದಾರೆ. ಕನ್ನಡಿಗ ಪ್ರಸಿದ್ಧಕೃಷ್ಣ 11ರ ಬಳಗದಿಂದ ಹೊರಗುಳಿಯಲಿದ್ದಾರೆ.
ನ್ಯೂಜಿಲೆಂಡ್: ಇತ್ತೀಚೆಗೆ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ ತಂಡಕ್ಕಿಂತ ಬಹುತೇಕ ಬದಲಾದ ಆಡುವ 11ರ ಬಳಗವನ್ನು ನ್ಯೂಜಿಲೆಂಡ್ ಕಣಕ್ಕಿಳಿಸಲಿದೆ. ಎಡಗೈ ಆರಂಭಿಕ ಡೆವೊನ್ ಕಾನ್ವೇ ಮೊದಲ ಬಾರಿಗೆ ಏಕದಿನ ಕ್ರಿಕೆಟ್ನಲ್ಲಿ ವಿಕೆಟ್ ಕೀಪಿಂಗ್ ಕೂಡ ನಿರ್ವಹಿಸುವ ನಿರೀೆ ಇದೆ. ಅವರಿಗೆ ಕೀಪಿಂಗ್ ಜವಾಬ್ದಾರಿ ನೀಡದಿದ್ದರೆ, ತಜ್ಞ ಕೀಪರ್ ಮಿಚೆಲ್ ಹೇ ಕಣಕ್ಕಿಳಿಯಲಿದ್ದಾರೆ.
*8: ಭಾರತದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಇದು 8ನೇ ದ್ವಿಪಯ ಏಕದಿನ ಸರಣಿ ಆಗಿದೆ. ಹಿಂದಿನ 7ರಲ್ಲೂ ಭಾರತವೇ ಸರಣಿ ಜಯಿಸಿದೆ.
ಕಿವೀಸ್ಗೆ ದಾಖಲೆ ತವಕ
ಕಳೆದ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಭಾರತದ ವಿರುದ್ಧ ಸೋತ ನಂತರ ಕಿವೀಸ್ ತಂಡ ಸತತ 9 ಏಕದಿನ ಪಂದ್ಯ ಗೆದ್ದ ಸಾಧನೆ ಮಾಡಿದೆ. ವಡೋದರದಲ್ಲೂ ಗೆದ್ದರೆ ಕಿವೀಸ್ ತಂಡ 2015 ಮತ್ತು 2021ರಲ್ಲಿ ಸತತ 10 ಏಕದಿನ ಪಂದ್ಯ ಗೆದ್ದ ತನ್ನ ದಾಖಲೆಯನ್ನು ಸರಿಗಟ್ಟಲಿದೆ.
ದಾಖಲೆ ನಿರೀಕ್ಷೆಯಲ್ಲಿ ಕೊಹ್ಲಿ
ವಿರಾಟ್ ಕೊಹ್ಲಿ ವರ್ಷಾರಂಭದಲ್ಲೇ ದಾಖಲೆಯೊಂದನ್ನು ಬರೆಯುವ ನಿರೀೆಯಲ್ಲಿದ್ದಾರೆ. ಅವರಿನ್ನು 25 ರನ್ ಗಳಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 28 ಸಾವಿರ ರನ್ ಪೂರೈಸಿದ ವಿಶ್ವದ 3ನೇ ಬ್ಯಾಟರ್ ಎನಿಸಲಿದ್ದಾರೆ. ಟೆಸ್ಟ್, ಏಕದಿನ, ಟಿ20ಯಲ್ಲಿ ಅವರು ಇದುವರೆಗೆ 623 ಇನಿಂಗ್ಸ್ಗಳಲ್ಲಿ 27,975 ರನ್ ಗಳಿಸಿದ್ದಾರೆ. ಅಲ್ಲದೆ ಅವರು 42 ರನ್ ಗಳಿಸಿದರೆ ಶ್ರೀಲಂಕಾದ ಕುಮಾರ್ ಸಂಗಕ್ಕರರನ್ನು (28,016) ಹಿಂದಿಕ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 2ನೇ ಗರಿಷ್ಠ ರನ್ಸ್ಕೋರರ್ ಎನಿಸಲಿದ್ದಾರೆ. ದಿಗ್ಗಜ ಸಚಿನ್ ತೆಂಡುಲ್ಕರ್ (34,357) ಅಗ್ರಸ್ಥಾನದಲ್ಲಿದ್ದಾರೆ.
ಪಿಚ್ ರಿಪೋರ್ಟ್
ಕೋಟಂಬಿ ಸ್ಟೇಡಿಯಂನಲ್ಲಿ ಇದು ಮೊಟ್ಟಮೊದಲ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಗಿದೆ. ಸದ್ಯ ಇಲ್ಲಿನ 25 ಡಿಗ್ರಿ ಸೆಲ್ಸಿಯಸ್ ಸಮೀಪದಲ್ಲಿದ್ದು, ಇಬ್ಬನಿ ಸಮಸ್ಯೆ ಕಾಡುವ ಸಾಧ್ಯತೆ ಇದೆ. ಹೀಗಾಗಿ ಟಾಸ್ ಗೆದ್ದ ತಂಡ ಚೇಸಿಂಗ್ಗೆ ಆದ್ಯತೆ ನೀಡುವ ನಿರೀಕ್ಷೆ ಇದೆ.