

ಮುಂಬೈ: ದಶಕದ ಕಾಲ ಭಾರತ ಟೆಸ್ಟ್ ತಂಡದ ಬೆನ್ನೆಲುಬಾಗಿದ್ದ ಬಲಗೈ ಬ್ಯಾಟರ್ ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಸೇರಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ಗುರುವಾರ ನಿವೃತ್ತಿ ಪ್ರಕಟಿಸಿದರು. 2020-21ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಹಂಗಾಮಿ ನಾಯಕನಾಗಿ ಭಾರತ ಮೊಟ್ಟ ಮೊದಲ ಬಾರಿಗೆ ಬಾರ್ಡರ್-ಗಾವಸ್ಕರ್ ಟ್ರೋಫಿ ಜಯಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಮುಂಬೈನ 38 ವರ್ಷದ ರಹಾನೆ, 2023ರಲ್ಲಿ ಕೊನೆಯದಾಗಿ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ರಹಾನೆ ನಿವೃತ್ತಿಯೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ ಒಳಗೊಂಡ ಅಗ್ರ ಕ್ರಮಾಂಕದ ಯುಗವೂ ಅಂತ್ಯ ಕಂಡಿದೆ.
8 ಸಾವಿರಕ್ಕೂ ಅಧಿಕ ರನ್‌ಗಳಿಸಿರುವ ರಹಾನೆ, ಶತಕಗಳಿಸಿದ ಎಲ್ಲ ಪಂದ್ಯಗಳಲ್ಲೂ ಭಾರತ ಅಜೇಯ ದಾಖಲೆ ಹೊಂದಿದೆ. ಹಂಗಾಮಿ ನಾಯಕನಾಗಿ ಆಡಿದ 6 ಪಂದ್ಯಗಳಲ್ಲೂ ಅಜೇಯ ದಾಖಲೆ ಕಾಯ್ದುಕೊಂಡಿದ್ದ ರಹಾನೆ, ಬ್ಯಾಟಿಂಗ್ ಜತೆಗೆ ಉತ್ತಮ ಫೀಲ್ಡರ್ ಆಗಿಯೂ ಹೆಸರುವಾಸಿ. ಟೆಸ್ಟ್ ಪಂದ್ಯವೊಂದರಲ್ಲಿ ಸವಾರ್ಧಿಕ 8 ಕ್ಯಾಚ್ ಪಡೆದ ದಾಖಲೆಯೂ ಅವರದ್ದಾಗಿದೆ. ಜತೆಗೆ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ನಾಯಕ-ಆಟಗಾರನಾಗಿ ಆಸೀಸ್ ಎದುರು ಶತಕ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಸೆಂಚುರಿ ಬಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯೂ ರಹಾನೆ ಅವರದ್ದಾಗಿದೆ.
ಅಜಿಂಕ್ಯ ರಹಾನೆ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ನಂತರ ಎಕ್ಸ್‌ನಲ್ಲಿ ಹಲವು ಮಾಜಿ-ಹಾಲಿ ಕ್ರಿಕೆಟಿಗರು ಶುಭಹಾರೈಸಿದ್ದಾರೆ. ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ,ನೀವು (ರಹಾನೆ) ಟೆಸ್ಟ್‌ನಲ್ಲಿ ನನ್ನ ನೆಚ್ಚಿನ ಬ್ಯಾಟಿಂಗ್ ಪಾರ್ಟ್ನರ್ ಎಂದು ತಿಳಿಸಿ, ಅಭಿನಂದನೆ ಹೇಳಿದ್ದಾರೆ.