ಫೈನಲ್​ನಲ್ಲಿ ಆರ್​ಸಿಬಿ ಗೆಲುವಿಗೆ ಕೊಹ್ಲಿ ಪುತ್ರ ಅಕಾಯ್​ ಕಾರಣ... ಅಚ್ಚರಿಯ ಹೇಳಿಕೆ ನೀಡಿದ ಸ್ಮೃತಿ ಮಂಧಾನ! Virat Kohli

ವಿರಾಟ್​ ಕೊಹ್ಲಿ ಮತ್ತು ಸ್ಮೃತಿ ಮಂಧಾನ
ವಿರಾಟ್​ ಕೊಹ್ಲಿ ಮತ್ತು ಸ್ಮೃತಿ ಮಂಧಾನ
Published on

ಪ್ರಮುಖ ಮುಖ್ಯಾಂಶಗಳು

  • ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹಿಳಾ ಪ್ರೀಮಿಯರ್ ಲೀಗ್ 2026ರ ವಿಜೇತರಾಗಿ ಹೊರಹೊಮ್ಮಿದೆ
  • ಫೈನಲ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ, ಎರಡನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದಿದೆ
  • ಗೆಲುವಿನ ಬೆನ್ನಲ್ಲೇ ನಾಯಕಿ ಸ್ಮೃತಿ ಮಂಧಾನ ನೀಡಿದ ಹೇಳಿಕೆ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ
Virat Kohli : ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡ ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ವಿಜೇತರಾಗಿ ಹೊರಹೊಮ್ಮಿದೆ. ಗುರುವಾರ (ಫೆ.05) ವಡೋದರಾದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ, ಎರಡನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದಿದೆ. 2024 ರಲ್ಲಿ ಆರ್​ಸಿಬಿ ಚೊಚ್ಚಲ ಟ್ರೋಫಿ ಜಯಿಸಿತು. ಇದೀಗ ಮತ್ತೆ ಡಬ್ಲ್ಯುಪಿಎಲ್​ಗೆ ಮುತ್ತಿಟ್ಟಿದೆ. ಹೀಗಾಗಿ, ಆರ್​ಸಿಬಿ ತಂಡವು ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಶಂಸೆ ಪಡೆಯುತ್ತಿದೆ. ಗೆಲುವಿನ ಬೆನ್ನಲ್ಲೇ ನಾಯಕಿ ಸ್ಮೃತಿ ಮಂಧಾನ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.
ಪಂದ್ಯದ ನಂತರ ಮಾತನಾಡಿದ ಸ್ಮೃತಿ ಮಂಧಾನ, ನಾನು ನಿನ್ನೆ ವಿರಾಟ್ ಜೊತೆ ಆಟದ ಬಗ್ಗೆ ಮಾತನಾಡಿದ್ದೆ, ಈ ವೇಳೆ ಕೊಹ್ಲಿ ಪುತ್ರ ಅಕಾಯ್​, ನಮಗೆಲ್ಲರಿಗೂ ಶುಭ ಹಾರೈಸಿದ. ಈ ಮುದ್ದಾದ ವಿಷಯವನ್ನು ನಾನಿಲ್ಲಿ ಹೇಳಲು ಬಯಸುತ್ತೇನೆ. ಬಹುಶಃ ಕೊಹ್ಲಿ ಪುತ್ರ ಶುಭ ಹಾರೈಕೆ ನಮ್ಮ ಪರವಾಗಿ ಕೆಲಸ ಮಾಡಿದೆ ಎಂದು ನಾನು ಭಾವಿಸುತ್ತೇನೆ ಎಂದು ಸ್ಮೃತಿ ಹೇಳಿದರು. ಇದೀಗ ಇದಕ್ಕೆ ಸಂಬಂಧಿಸಿದ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಕೊಹ್ಲಿ ಅಭಿನಂದನೆ

ಆರ್​ಸಿಬಿ ವನಿತೆಯರು ಗೆಲುವು ಸಾಧಿಸಿದ ಬೆನ್ನಲ್ಲೇ ಕೊಹ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಆರ್​ಸಿಬಿ ಹುಡುಗಿಯರು ಮತ್ತೊಮ್ಮೆ ಚಾಂಪಿಯನ್ ಆಗಿದ್ದಾರೆ. ಅವರು ಆರ್‌ಸಿಬಿ ಧ್ವಜವನ್ನು ಅತ್ಯುನ್ನತ ಮಟ್ಟದಲ್ಲಿ ಹಾರಿಸಿದ್ದಾರೆ. ತಂಡದ ಬಗ್ಗೆ ಎಲ್ಲರೂ ಹೆಮ್ಮೆ ಪಡಬೇಕು. ಇಡೀ ತಂಡದ ನಿರ್ವಹಣೆಗೆ ಅಭಿನಂದನೆಗಳು. ನೀವು ನಿಜವಾಗಿಯೂ ಈ ಗೆಲುವಿಗೆ ಅರ್ಹರು. ಈ ಕ್ಷಣವನ್ನು ಆನಂದಿಸಿ. ಅದೇ ಸಮಯದಲ್ಲಿ, ಅಭಿಮಾನಿಗಳ ಅಗಣಿತ ಪ್ರೀತಿಯನ್ನು ಸ್ವೀಕರಿಸಿ ಎಂದು ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಗೆಲುವು ಸಾಧಿಸಿದ್ದಕ್ಕೆ ಸಂತಸ

ಪಂದ್ಯದ ನಂತರ ಮಾತನಾಡಿದ ಸ್ಮೃತಿ ಮಂಧಾನ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ನಾಲ್ಕು ವರ್ಷಗಳಲ್ಲಿ ಎರಡು ಪ್ರಶಸ್ತಿಗಳನ್ನು ಗೆಲ್ಲುವುದೆಂದರೆ ನಿಜಕ್ಕೂ ಖುಷಿಯ ಸಂಗತಿ. ಕಳೆದ ಮೂರು ವರ್ಷಗಳಲ್ಲಿ ಫ್ರಾಂಚೈಸಿ ಸತತ ಮೂರನೇ ಪ್ರಶಸ್ತಿಯನ್ನು (WPL 2024, IPL 2025, WPL 2026) ಗೆದ್ದಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಸ್ಮೃತಿ ಮಂಧಾನ ಅವರು ಸಂತೋಷ ವ್ಯಕ್ತಪಡಿಸಿದರು.
ಫೈನಲ್​ ಪಂದ್ಯದ ಬಗ್ಗೆ ಮಾತನಾಡಿದ ಸ್ಮೃತಿ ಮಂಧಾನ, ಲಾರೆನ್ ಬೆಲ್ ಹಾಗೂ ಜಾರ್ಜಿಯಾ ವಾಲ್ ಅವರನ್ನು ಶ್ಲಾಘಿಸಿದರು. ಈ ಪಿಚ್‌ನಲ್ಲಿ ನಾವು 200 ರನ್‌ಗಳ ಗುರಿಯನ್ನು ಬೆನ್ನಟ್ಟಬಹುದೆಂದು ನಾವು ಭಾವಿಸಿದ್ದೆವು. ಇದು ಬ್ಯಾಟಿಂಗ್ ಪಿಚ್. ನಮ್ಮ ಬೌಲರ್‌ಗಳು ಕೊನೆಯ ನಾಲ್ಕು ಓವರ್‌ಗಳಲ್ಲಿ ನಿಜವಾಗಿಯೂ ಉತ್ತಮವಾಗಿ ಬೌಲಿಂಗ್ ಮಾಡಿದರು. ಲಾರೆನ್ ಬೆಲ್ ಖಂಡಿತವಾಗಿಯೂ ಶ್ರೇಯಸ್ಸಿಗೆ ಅರ್ಹರು. 400 ಕ್ಕೂ ಹೆಚ್ಚು ರನ್ ದಾಖಲಾದ ಪಂದ್ಯದಲ್ಲಿ, ಬೆಲ್​ ಅವರು ನಾಲ್ಕು ಓವರ್‌ಗಳನ್ನು ಬೌಲ್ ಮಾಡಿ ಕೇವಲ 20 ರನ್‌ಗಳನ್ನು ನೀಡಿದ್ದು ಅದ್ಭುತವಾಗಿದೆ. ನನ್ನ ಅಭಿಪ್ರಾಯದಲ್ಲಿ, ಅವರದು ಪಂದ್ಯ ಗೆಲ್ಲುವ ಸ್ಪೆಲ್ ಆಗಿತ್ತು ಎಂದು ಸ್ಮೃತಿ ಹೇಳಿದರು.
ಪಂದ್ಯದ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 203 ರನ್ ಗಳಿಸಿತು. ಡೆಲ್ಲಿ ಪರ ನಾಯಕಿ ಜೆಮಿಮಾ ರೊಡ್ರಿಗಸ್ (57), ಲಾರಾ ವೋಲ್ವಾರ್ಡ್ (44), ಲಿಜೆಲ್ಲೆ ಲೀ (37) ಮತ್ತು ಚಿನೆಲ್ಲೆ ಹೆನ್ರಿ (ಔಟಾಗದೆ 35 ರನ್​) ಗರಿಷ್ಠ ಸ್ಕೋರರ್‌ಗಳಾಗಿದ್ದರು. ಆರ್‌ಸಿಬಿ ಬೌಲರ್‌ಗಳಲ್ಲಿ ಸಯಾಲಿ ಸತ್‌ಘರೆ, ನಾಡಿನ್ ಡಿ ಕ್ಲರ್ಕ್ ಮತ್ತು ಅರುಂಧತಿ ರೆಡ್ಡಿ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಆರ್​ಸಿಬಿ ಪರ, ಸ್ಮೃತಿ ಮಂಧಾನ (87 ರನ್​, 41 ಎಸೆತ, 12 ಬೌಂಡರಿ, 3 ಸಿಕ್ಸರ್) ಮತ್ತು ಜಾರ್ಜಿಯಾ ವಾಲ್ (79 ರನ್​, 54 ಎಸೆತ,. 14 ಬೌಂಡರಿ) ಉತ್ತಮ ಪ್ರದರ್ಶನ ನೀಡಿದರು. ಇದರ ಪರಿಣಾಮ ಆರ್‌ಸಿಬಿ ತಂಡ 19.4 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 204 ರನ್‌ಗಳ ಬೃಹತ್ ಗುರಿಯನ್ನು ತಲುಪಿತು. ದೆಹಲಿ ಬೌಲರ್‌ಗಳ ಪರ ಚಿನೆಲ್ಲೆ ಹೆನ್ರಿ ಎರಡು ವಿಕೆಟ್ ಪಡೆದರು. ನಂದಿನಿ ಶರ್ಮಾ ಮತ್ತು ಮಿನ್ನುಮಣಿ ತಲಾ ಒಂದು ವಿಕೆಟ್ ಪಡೆದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net