ಸುಮ್ಮನೆ ಹೇಳಲ್ಲ 'ಕಿಂಗ್ ಕೊಹ್ಲಿ' ಅಂತ! ವಿಜಯ್​ ಹಜಾರೆ ಟ್ರೋಫಿಯಲ್ಲಿ ಒಂದೇ ಒಂದು ರನ್ ಬಾರಿಸಿದ್ರೆ...​ | Virat Kohli

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Published on

ಪ್ರಮುಖ ಮುಖ್ಯಾಂಶಗಳು

  • ಏಕದಿನ ಆಯ್ತು ಈಗ ವಿಜಯ್ ಹಜಾರೆ ಟ್ರೋಫಿಗೆ ವಿರಾಟ್​ ಕೊಹ್ಲಿ
  • ದೆಹಲಿ ತಂಡದ ಪರ ಕಿಂಗ್ ಕೊಹ್ಲಿ ಕಣಕ್ಕೆ
  • ಒಂದೇ ಒಂದು ರನ್​ ಬಾರಿಸಿದ್ರೆ ಅಪರೂಪದ ದಾಖಲೆಗೆ ಸಾಕ್ಷಿ
ನವದೆಹಲಿ: ಟೀಮ್ ಇಂಡಿಯಾದ 'ರನ್ ಮೆಷಿನ್', ದಾಖಲೆಗಳ ಸರದಾರ, ಕ್ರಿಕೆಟ್​ ಅಭಿಮಾನಿಗಳ ನೆಚ್ಚಿನ 'ಕಿಂಗ್' ವಿರಾಟ್​ ಕೊಹ್ಲಿ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ದಿಗ್ಗಜ ಕ್ರಿಕೆಟಿಗರ ಸಾಲಿನಲ್ಲಿ ಈಗಾಗಲೇ ತಮ್ಮ ಹೆಸರನ್ನು ಮುದ್ರಿಸಿರುವ ವಿರಾಟ್, ಅಂತಾರಾಷ್ಟ್ರೀಯ ಕ್ರಿಕೆಟ್​ನ ಮೂರು ಫಾರ್ಮೆಟ್​ನಲ್ಲಿಯೂ ಹಲವು ದಾಖಲೆಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಎಂಬ ಸಂಗತಿ ಬಹುತೇಕರಿಗೆ ಗೊತ್ತೇ ಇದೆ. ಒಮ್ಮೆ ತಂಡದ ಪರ ಕ್ರೀಸ್​ಗಿಳಿದರೆ, ಅವರನ್ನು ಮತ್ತು ಅವರ ಬ್ಯಾಟ್​ನಿಂದ ಹರಿಯುವ ರನ್​ ಹೊಳೆಯನ್ನು ತಡೆಯುವುದು ಸುಲಭದ ಮಾತೇ ಅಲ್ಲ. ಟಿ20, ಏಕದಿನ ಮತ್ತು ಟೆಸ್ಟ್​ನಲ್ಲಿ ಅಬ್ಬರಿಸಿರುವ ಕೊಹ್ಲಿ, ಇದೀಗ ವಿಜಯ್ ಹಜಾರೆ ಟೂರ್ನಿಯಲ್ಲಿ ಮತ್ತೊಂದು ಅಪರೂಪದ ದಾಖಲೆಗೆ ಸಾಕ್ಷಿಯಾಗಲಿದ್ದಾರೆ.

ದಾಖಲೆಗಳ 'ಕಿಂಗ್​'

ಹನ್ನೊಂದು ವರ್ಷಗಳ ಬಳಿಕ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲು ಸಜ್ಜಾಗಿರುವ ವಿರಾಟ್​, ಇದೇ ಬುಧವಾರದಿಂದ (ಡಿ.24) ಆರಂಭಗೊಳ್ಳಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ದೆಹಲಿ ಮತ್ತು ಆಂಧ್ರಪ್ರದೇಶ ತಂಡಗಳು ಪರಸ್ಪರ ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಕೊಹ್ಲಿ ತಮ್ಮದೇ ತಂಡವಾದ ದೆಹಲಿ ಪರವಾಗಿ ಬಿರುಸಿನ ಬ್ಯಾಟಿಂಗ್ ನಡೆಸಲು ಎದುರುನೋಡುತ್ತಿದ್ದಾರೆ. ಇನ್ನು ದೆಹಲಿ ತಂಡವನ್ನು ರಿಷಭ್ ಪಂತ್ ನಾಯಕರಾಗಿ ಮುನ್ನಡೆಸಲಿದ್ದಾರೆ.
ಏಕದಿನ ಕ್ರಿಕೆಟ್​ನಲ್ಲಿ, ಕೊಹ್ಲಿ ಇದುವರೆಗೆ 308 ಪಂದ್ಯಗಳನ್ನಾಡಿದ್ದು, 14,557 ರನ್ ಗಳಿಸಿದ್ದಾರೆ. ಇವುಗಳನ್ನು ಸೇರಿಸಿದರೆ, ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವಿರಾಟ್​ ಅವರ ಒಟ್ಟು ರನ್‌ (ಏಕದಿನ, ವಿಜಯ್ ಹಜಾರೆ ಟ್ರೋಫಿ, ಭಾರತ ಎ ಮತ್ತು ವಲಯ ತಂಡಗಳಲ್ಲಿ ಗಳಿಸಿದ ರನ್‌ಗಳು ಸೇರಿ) 15,999ಕ್ಕೆ ತಲುಪಿದೆ. ನಾಳಿನ ಆಂಧ್ರ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಒಂದೇ ಒಂದು ರನ್ ಬಾರಿಸಿದರೆ, ಅವರು ಲಿಸ್ಟ್ ಎ ಕ್ರಿಕೆಟ್‌ನಲ್ಲಿ 16,000 ರನ್‌ಗಳ ಮೈಲಿಗಲ್ಲನ್ನು ತಲುಪಲಿದ್ದಾರೆ. ಈ ಅಪರೂಪದ ಸಾಧನೆಗೈದ ಎರಡನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ರನ್​ಮಷಿನ್​ ಪಾತ್ರರಾಗಲಿದ್ದಾರೆ.
ಈ ಪಟ್ಟಿಯಲ್ಲಿ, ಕೊಹ್ಲಿಗಿಂತ ಮೊದಲು ಟೀಮ್ ಇಂಡಿಯಾ ದಂತಕಥೆ ಸಚಿನ್ ತೆಂಡೂಲ್ಕರ್ ಇದ್ದಾರೆ. ಮಾಸ್ಟರ್​ಬ್ಲಾಸ್ಟರ್​ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಒಟ್ಟು 21,999 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ಆಟಗಾರ ಗ್ರಹಾಂ ಗೂಚ್ ಪಟ್ಟಿಯಲ್ಲಿ 22,211 ರನ್ ಬಾರಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.

ಕೊಹ್ಲಿ ಫ್ಯಾನ್ಸ್​ಗೆ ನಿರಾಸೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ವಿರಾಟ್​ ಕೊಹ್ಲಿ ಆಟವನ್ನು ಕಣ್ತುಂಬಿಕೊಳ್ಳಲು ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟು ಮಾಡುವ ಸುದ್ದಿಯೊಂದು ಇದೀಗ ಹೊರಬಿದ್ದಿದೆ. ಅದೇನೆಂದರೆ, ಭದ್ರತಾ ಕಾರಣಗಳಿಂದಾಗಿ ಬುಧವಾರ (ಡಿ.24) ನಡೆಯಲಿರುವ ದೆಹಲಿ ಮತ್ತು ಆಂಧ್ರ ಪ್ರದೇಶ ನಡುವಿನ ಆರಂಭಿಕ ಪಂದ್ಯ ಸೇರಿ ವಿಜಯ್ ಹಜಾರೆ ಟ್ರೋಫಿಯ ಎಲ್ಲಾ ಪಂದ್ಯಗಳನ್ನು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ದೇವನಹಳ್ಳಿಯಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಸ್ಥಳಾಂತರಿಸುವಂತೆ ಕೆಎಸ್‌ಸಿಎಗೆ ಸೂಚಿಸಲಾಗಿದೆ.

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳಿವರು

  1. ಸಚಿನ್ ತೆಂಡೂಲ್ಕರ್ - 538 ಇನ್ನಿಂಗ್ಸ್‌, 21,999 ರನ್‌
  2. ವಿರಾಟ್ ಕೊಹ್ಲಿ - 329 ಇನ್ನಿಂಗ್ಸ್‌, 15,999 ರನ್‌
  3. ಸೌರವ್ ಗಂಗೂಲಿ - 421 ಇನ್ನಿಂಗ್ಸ್‌, 15,622 ರನ್‌
  4. ರೋಹಿತ್ ಶರ್ಮ - 338 ಇನ್ನಿಂಗ್ಸ್‌, 13,758 ರನ್‌
  5. ಶಿಖರ್ ಧವನ್ - 298 ಇನ್ನಿಂಗ್ಸ್‌, 12,074 ರನ್‌

ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಒಟ್ಟಾರೆಯಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಿದು

  1. ಗ್ರಹಾಂ ಗೂಚ್ - 22,211 ರನ್‌
  2. ಗ್ರೇಮ್ ಹಿಕ್ - 22,059 ರನ್‌
  3. ಸಚಿನ್ ತೆಂಡೂಲ್ಕರ್ - 21,999 ರನ್‌
  4. ಕುಮಾರ್ ಸಂಗಕ್ಕಾರ - 19,456 ರನ್‌
  5. ವಿವ್ ರಿಚರ್ಡ್ಸ್ - 16,995 ರನ್‌
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net