ಇದು ಧೋನಿಗೂ ಆಗಿದೆ... ನಾನದನ್ನು ಇಷ್ಟಪಡುವುದಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ ಕಿಂಗ್​​ ಕೊಹ್ಲಿ! Virat Kohli

ಟೀಮ್​ ಇಂಡಿಯಾ ಸ್ಟಾರ್​ ಆಟಗಾರ ವಿರಾಟ್ ಕೊಹ್ಲಿ
ಟೀಮ್​ ಇಂಡಿಯಾ ಸ್ಟಾರ್​ ಆಟಗಾರ ವಿರಾಟ್ ಕೊಹ್ಲಿ
Published on

ಪ್ರಮುಖ ಮುಖ್ಯಾಂಶಗಳು

  • ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಜಯ
  • ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಕ್ರಿಕೆಟ್​ ಲೋಕದ ಕಿಂಗ್​​​ ವಿರಾಟ್ ಕೊಹ್ಲಿ
  • ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸುವ ಸಮಯದಲ್ಲಿ ಕೆಲವು ಆಸಕ್ತಿದಾಯಕ ಮಾತುಗಳನ್ನು ಕೊಹ್ಲಿ
Virat Kohli ​: ನಿನ್ನೆ (ಜ.11) ಗುಜರಾತಿನ ವಡೋದರಾದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಜಯಗಳಿಸಿತು. ದಾಖಲೆಗಳ ಸರದಾರ, ಚೇಸ್​ ಮಾಸ್ಟರ್​, ರನ್​ ಮೆಷಿನ್​ ಹಾಗೂ ಕ್ರಿಕೆಟ್​ ಲೋಕದ ಕಿಂಗ್​​​ ಎಂದೇ ಜನಪ್ರಿಯರಾಗಿರುವ ವಿರಾಟ್ ಕೊಹ್ಲಿ (93 ರನ್​ 91 ಎಸೆತ, 8 ಬೌಂಡರಿ, 1 ಸಿಕ್ಸರ್) ಈ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೀಗಾಗಿ, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದರು. ಪ್ರಶಸ್ತಿ ಸ್ವೀಕರಿಸುವ ಸಮಯದಲ್ಲಿ ಕೊಹ್ಲಿ ಕೆಲವು ಆಸಕ್ತಿದಾಯಕ ಮಾತುಗಳನ್ನು ಆಡಿದರು. ಶತಕವನ್ನು ಕಳೆದುಕೊಂಡಿದ್ದಕ್ಕೆ ನನಗೆ ಸ್ವಲ್ಪವೂ ಬೇಸರವಿಲ್ಲ. ತಂಡದ ಗೆಲುವಷ್ಟೇ ನನಗೆ ತುಂಬಾ ಮುಖ್ಯ ಎಂದು ಹೇಳಿದರು.
ನೀವು ಎಷ್ಟು ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿದ್ದೀರಿ ಎಂದು ಪ್ರಶ್ನೆ ಮಾಡಿದಾಗ, ನಿಜವಾಗಿಯೂ ನನಗದು ತಿಳಿದಿಲ್ಲ ಎಂದರು. ಎಲ್ಲ ಪ್ರಶಸ್ತಿಗಳನ್ನು ಗುರುಗ್ರಾಮ್‌ನಲ್ಲಿರುವ ನನ್ನ ತಾಯಿಯ ಮನೆಗೆ ಕಳುಹಿಸುತ್ತೇನೆ ಎಂದರು. ಅಲ್ಲದೆ, ಪ್ರಶಸ್ತಿಗಳನ್ನು ಮರೆಮಾಡಲು ಇಷ್ಟಪಡುತ್ತೇನೆ ಅಂತ ಹೇಳಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ತಲುಪಿದ ಬಗ್ಗೆ ಮಾತನಾಡಿದ ಕೊಹ್ಲಿ, ತಮ್ಮ ಇಡೀ ಪ್ರಯಾಣವನ್ನು ಹಿಂತಿರುಗಿ ನೋಡಿದಾಗ ಅದು ಕನಸು ನನಸಾದಂತೆ ಭಾಸವಾಗುತ್ತದೆ ಎಂದರು.
ನನ್ನ ಸಾಮರ್ಥ್ಯ ಏನೆಂಬುದು ನನಗೆ ಮೊದಲೇ ತಿಳಿದಿತ್ತು. ಆದರೂ, ನಾನು ಈ ಹಂತಕ್ಕೆ ಬರಲು ತುಂಬಾ ಶ್ರಮಿಸಬೇಕಾಯಿತು. ನಾನು ಬಯಸಿದ್ದಕ್ಕಿಂತ ಹೆಚ್ಚಿನದನ್ನು ದೇವರು ನೀಡಿದ್ದಾನೆ. ಅದಕ್ಕಾಗಿ ನಾನು ದೇವರಿಗೆ ಎಂದಿಗೂ ಕೃತಜ್ಞನಾಗಿರುತ್ತೇನೆ ಎಂದು ಕೊಹ್ಲಿ ತಿಳಿಸಿದರು.
ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 54ನೇ ಶತಕದ ಬಗ್ಗೆ ಯೋಚಿಸುತ್ತಿದ್ದೀರಾ ಎಂದು ಪ್ರಶ್ನಿಸಿದಾಗ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಎಂದಿಗೂ ಮೈಲಿಗಲ್ಲುಗಳ ಬಗ್ಗೆ ಯೋಚಿಸುವುದಿಲ್ಲ ಎಂದರು. ಈ ಪಂದ್ಯದಲ್ಲಿ ನಾವು ಮೊದಲು ಬ್ಯಾಟಿಂಗ್ ಮಾಡಿದ್ದರೆ, ನಾನು ಹೆಚ್ಚು ಆಕ್ರಮಣಕಾರಿಯಾಗಿ ಆಡುತ್ತಿದ್ದೆ ಎಂದು ತಿಳಿಸಿದರು. ಗುರಿಯನ್ನು ಬೆನ್ನಟ್ಟುವಾಗ ನಾನು ಯಾವಾಗಲೂ ಪರಿಸ್ಥಿತಿಗೆ ಹೊಂದಿಕೊಳ್ಳುತ್ತೇನೆ. ಏಕೆಂದರೆ, ತಂಡವನ್ನು ಗೆಲುವಿನತ್ತ ಕೊಂಡೊಯ್ಯುವುದೇ ನನ್ನ ಏಕೈಕ ಗುರಿ ಎಂದು ಕೊಹ್ಲಿ ಹೇಳಿದರು.
ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವಾಗ ಪಂದ್ಯದ ಪರಿಸ್ಥಿತಿ ಕಷ್ಟಕರವಾಗಿದ್ದರೆ, ನಾನು ಮನಸ್ಸಿಗೆ ಬಂದಂತೆ ಆಡುವ ಮತ್ತು ಪ್ರತಿದಾಳಿ ಮಾಡುವ ಬಗ್ಗೆ ಯೋಚಿಸುವುದಿಲ್ಲ ಎಂದರು.
ಈಗ ವಿಕೆಟ್​ ಬಿದ್ದರೆ ಮುಂದೆ ನಮ್ಮ ನೆಚ್ಚಿನ ಆಟಗಾರ ಬರುತ್ತಾರೆ ಅಂತ ವಿಕೆಟ್ ಬಿದ್ದಾಗ ಸಂಭ್ರಮಿಸುವುದನ್ನು ನೋಡಿದ್ದೇವೆ. ಈ ವಿಚಾರವಾಗಿ ಮಾತನಾಡಿದ ವಿರಾಟ್​ ಕೊಹ್ಲಿ, ನನಗಿದು ಒಳ್ಳೆಯದು ಅಂತ ಅನಿಸುವುದಿಲ್ಲ. ಧೋನಿ ವಿಚಾರದಲ್ಲೂ ಇದು ಸಾಕಷ್ಟು ಸಂಭವಿಸಿದೆ. ನಾನಿಲ್ಲಿ ಪ್ರೇಕ್ಷಕರ ಉತ್ಸಾಹವನ್ನು ಅರ್ಥಮಾಡಿಕೊಳ್ಳಬಲ್ಲೆ. ಆದರೆ, ಔಟ್ ಆಗಿ ಪೆವಿಲಿಯನ್‌ಗೆ ಹೋಗುವ ಆಟಗಾರನಿಗೆ ಅದು ಒಳ್ಳೆಯ ಭಾವನೆಯಲ್ಲ. ನಾನು ಆಟದ ಮೇಲೆ ಗಮನವನ್ನು ಕೇಂದ್ರೀಕರಿಸಲು ಪ್ರಯತ್ನಿಸುತ್ತೇನೆ. ಪ್ರೇಕ್ಷಕರು ನನ್ನ ಆಟವನ್ನು ನೋಡಲು ಬರುವುದು ನನ್ನ ಅದೃಷ್ಟ. ಅಭಿಮಾನಿಗಳ ಮುಖದಲ್ಲಿ ನಗುವನ್ನು ನೋಡಲು ನನಗೆ ತುಂಬಾ ಇಷ್ಟ ಎಂದು ಹೇಳಿದರು.
ಪಂದ್ಯದ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡವು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 300 ರನ್ ಗಳಿಸಿತು. ಕಿವೀಸ್ ತಂಡದ ಬ್ಯಾಟ್ಸ್‌ಮನ್‌ಗಳಲ್ಲಿ ಡ್ಯಾರೆಲ್ ಮಿಚೆಲ್ (84 ರನ್​, 71 ಎಸೆತ, 5 ಬೌಂಡರಿ, 3 ಸಿಕ್ಸರ್‌), ಹೆನ್ರಿ ನಿಕೋಲ್ಸ್ (62 ರನ್​, 69 ಎಸೆತ, 8 ಬೌಂಡರಿ) ಮತ್ತು ಡೆವೊನ್ ಕಾನ್ವೇ (56 ರನ್​, 67 ಎಸೆತ, 6 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳನ್ನು ಗಳಿಸಿದರು. ಟೀಮ್ ಇಂಡಿಯಾ ಬೌಲರ್‌ಗಳಲ್ಲಿ ಸಿರಾಜ್, ಹರ್ಷಿತ್ ರಾಣಾ ಮತ್ತು ಪ್ರಸಿದ್ಧ ಕೃಷ್ಣ ತಲಾ ಎರಡು ವಿಕೆಟ್ ಪಡೆದರು. ಕುಲದೀಪ್ ಯಾದವ್ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ್ದ ಭಾರತದ ಪರ ವಿರಾಟ್ ಕೊಹ್ಲಿ (93 ರನ್​, 8 ಬೌಂಡರಿ, 91 ಎಸೆತ, 1 ಸಿಕ್ಸರ್) ಅದ್ಭುತ ಇನ್ನಿಂಗ್ಸ್ ಆಡಿದರು. ಭಾರತ 49 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು. ಉಳಿದ ಬ್ಯಾಟ್ಸ್‌ಮನ್‌ಗಳಲ್ಲಿ, ಶುಭಮಾನ್ ಗಿಲ್ (56 ರನ್​, 71 ಎಸೆತ 3 ಬೌಂಡರಿ, 2 ಸಿಕ್ಸರ್) ಮತ್ತು ಶ್ರೇಯಸ್ ಅಯ್ಯರ್ (49 ರನ್​, 47 ಎಸೆತ, 4 ಬೌಂಡರಿ, 1 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಕಿವೀಸ್ ಬೌಲರ್‌ಗಳಲ್ಲಿ ಕೈಲ್ ಜೇಮಿಸನ್ ನಾಲ್ಕು ವಿಕೆಟ್ ಪಡೆದರು. ಆದಿತ್ಯ ಅಶೋಕ್ ಮತ್ತು ಕ್ರಿಶ್ಚಿಯನ್ ಕ್ಲಾರ್ಕ್ ತಲಾ ಒಂದು ವಿಕೆಟ್ ಪಡೆದರು, (ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net