ಅರ್ಧಶತಕ ಬಾರಿಸಿದ 'ಕಿಂಗ್​'ಗೆ ಕಾಡುತ್ತಿತ್ತು ಆ ಎರಡು ಸಮಸ್ಯೆ! ಇದೇ ಕಾರಣಕ್ಕೆ ಫೀಲ್ಡಿಂಗ್​ಗೆ ಇಳಿಯಲಿಲ್ಲ ವಿರಾಟ್​ | Virat Kohli

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ
Published on

ಪ್ರಮುಖ ಮುಖ್ಯಾಂಶಗಳು

  • ಆರ್‌ಸಿಬಿ ಎದುರು ಹೀನಾಯ ಸೋಲುಂಡ ಮುಂಬೈ ಇಂಡಿಯನ್ಸ್​
  • ಆರಂಭಿಕರಾಗಿ ಕಣಕ್ಕಿಳಿದ ವಿರಾಟ್​ ಕೊಹ್ಲಿ ಆಕರ್ಷಕ ಅರ್ಧಶತಕ
  • ಬ್ಯಾಟಿಂಗ್ ಮಾಡಿದ ವಿರಾಟ್​, ಫೀಲ್ಡಿಂಗ್ ಬರಲು ಹಿಂದೇಟು
  • ಈ ಎರಡು ಕಾರಣಗಳಿಂದ ಕೊಹ್ಲಿ ಡ್ರೆಸ್ಸಿಂಗ್ ರೂಮ್​ನಲ್ಲೇ ಉಳಿಯಬೇಕಾಯಿತು
Virat Kohli: ನಿನ್ನೆ (ಏ.12) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಮುಂಬೈ ಇಂಡಿಯನ್ಸ್ (ಎಂಐ) ನಡುವಿನ ಐಪಿಎಲ್​ 19ನೇ ಆವೃತ್ತಿಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 18 ರನ್‌ಗಳಿಂದ ಸೋಲುಂಡಿತು. ಆರ್​ಸಿಬಿ ಅಬ್ಬರಕ್ಕೆ ತಲೆಬಾಗಿದ ಹಾರ್ದಿಕ್ ಪಡೆ, ಬ್ಯಾಟರ್​​ಗಳ ಉತ್ತಮ ಪ್ರದರ್ಶನದ ಕೊರತೆಯಿಂದ ಭಾರೀ ಮುಖಭಂಗ ಅನುಭವಿಸಿತು ಎಂಬುದರಲ್ಲಿ ಅನುಮಾನವೇ ಇಲ್ಲ.
ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ 240 ರನ್ ಗಳಿಸಿತು. ಈ ಬೃಹತ್​ ರನ್​ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್​ ತಂಡದ ಆರಂಭಿಕ ಬ್ಯಾಟರ್​ಗಳಾದ ರೋಹಿತ್ ಶರ್ಮ ಮತ್ತು ರಿಕಲ್ಟನ್​ ಜೋಡಿ, ಪವರ್​ಪ್ಲೇಯ ಮೊದಲ ಮೂವರು ಓವರ್​ನಲ್ಲಿ ಭರ್ಜರಿ ಓಪನಿಂಗ್ ನೀಡಿದ್ದೇ ಆದರೂ, ಅದನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಮುಗ್ಗರಿಸಿದರು. 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 222 ರನ್‌ಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು. ಈ ಮೂಲಕ ಆರ್​ಸಿಬಿ 18 ರನ್​ಗಳಿಂದ ಗೆಲುವು ದಾಖಲಿಸಿತು.
ಇನ್ನು ಆರ್​ಸಿಬಿ ಪರ ಕಣಕ್ಕಿಳಿದ ವಿರಾಟ್​ ಕೊಹ್ಲಿ, 38 ಎಸೆತಕ್ಕೆ 50 ರನ್​ ಬಾರಿಸಿದರು. ಅರ್ಧಶತಕ ಗಳಿಸಿದ ಕಿಂಗ್​, ಮುಂಬೈ ಚೇಸಿಂಗ್ ವೇಳೆ ಫೀಲ್ಡಿಂಗ್​ಗೆ ಇಳಿಯಲಿಲ್ಲ. ಕಿಂಗ್​ ನೋಡಲೆಂದೇ ಗಂಟೇಗಟ್ಟಲೇ ಕಾದು ಕೂರುವ ಅಭಿಮಾನಿಗಳಿಗೆ ಇದು ಗೊಂದಲ ಮೂಡಿಸಿತು. ಯಾವ ಕಾರಣಕ್ಕೆ ಕೊಹ್ಲಿ ಮೈದಾನಕ್ಕಿಳಿಯಲಿಲ್ಲ. ಬ್ಯಾಟಿಂಗ್ ಚೆನ್ನಾಗಿ ಮಾಡಿದ್ದಾರೆ. ಹೀಗಿರುವಾಗ, ಅವರು ಪೆವಿಲಿಯನ್​ನಲ್ಲಿ ಕುಳಿತು ತಂಡಕ್ಕೆ ಬೆಂಬಲಿಸುವಂತದ್ದು ಏನಾಯಿತು? ಎಂಬ ಪ್ರಶ್ನೆಗಳು ತಲೆಯಲ್ಲಿ ನಿರಂತರವಾಗಿ ಓಡಿತು. ಆದರೆ, ಅದಕ್ಕೆ ಉತ್ತರ, ಕೊಹ್ಲಿಗೆ ಕಾಡುತ್ತಿದ್ದ ಕಣ್ಣಿನ ಸೋಂಕು ಮತ್ತು ವಿಪರೀತ ಜ್ವರ.
ವರದಿಗಳ ಪ್ರಕಾರ, ವಿರಾಟ್ ಕಳೆದೆರೆಡು ದಿನಗಳಿಂದ ತೀವ್ರ ಜ್ವರ ಮತ್ತು ಕಣ್ಣು ಸೋಂಕಿನಿಂದ ಬಳಲುತ್ತಿದ್ದಾರೆ. ಈ ಕಾರಣಗಳಿಂದ, ಅವರು ಸಂಪೂರ್ಣವಾಗಿ ಫಿಟ್​ ಆಗಿರಲಿಲ್ಲ. ಹೀಗಾಗಿಯೇ, ಅವರು ಫೀಲ್ಡಿಂಗ್ ಮಾಡಲು ಕಣಕ್ಕಿಳಿಯಲಿಲ್ಲ. ​ಪ್ರಸ್ತುತ, ವೈದ್ಯಕೀಯ ತಂಡವು ಅವರನ್ನು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಶೀಘ್ರದಲ್ಲೇ ಕಂಪ್ಲೀಟ್​ ಗುಣಮುಖರಾಗಲಿದ್ದಾರೆ ಎಂಬ ನಿರೀಕ್ಷೆಯಿದೆ. ಇದೇ ಕಾರಣಕ್ಕೆ, ಅವರು ಗುವಾಹಟಿಯಲ್ಲಿ ನಡೆದ ಆರ್‌ಆರ್ ವಿರುದ್ಧದ ಪಂದ್ಯದಲ್ಲಿ ವಿಭಿನ್ನ ರೀತಿಯ ಸನ್​ಗ್ಲ್ಯಾಸ್​ ಧರಿಸಿದ್ದರು.

ಪಂದ್ಯದ ವಿವರ

ಪಂದ್ಯದ ವಿಚಾರಕ್ಕೆ ಬಂದರೆ, ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಮುಂಬೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಫಿಲ್ ಸಾಲ್ಟ್ ಅವರು ಕೇವಲ 36 ಎಸೆತಗಳಲ್ಲಿ 78 ರನ್ ಗಳಿಸುವ ಮೂಲಕ ವಿಧ್ವಂಸಕ ಬ್ಯಾಟಿಂಗ್ ಮಾಡಿ, ಮುಂಬೈ ಬೌಲರ್‌ಗಳಿಗೆ ಬೆವರಿಳಿಸಿದರು. ಸಾಲ್ಟ್ ಔಟಾದ ನಂತರ ಬಂದ ನಾಯಕ ರಜತ್​ ಪಾಟೀದಾರ್ ಕೂಡ ಬ್ಯಾಟಿಂಗ್​ನಲ್ಲಿ ಇನ್ನಷ್ಟು ವಿನಾಶವನ್ನು ಸೃಷ್ಟಿಸಿದರು. ಅವರು ಕೇವಲ 20 ಎಸೆತಗಳಲ್ಲಿ 5 ಸಿಕ್ಸರ್​ ಮತ್ತು ನಾಲ್ಕು ಬೌಂಡರಿಗಳ ನೆರವಿನಿಂದ 53 ರನ್ ಗಳಿಸಿದರು ಮತ್ತು ಜೆಟ್ ವೇಗದಲ್ಲಿ ಸ್ಕೋರ್‌ಬೋರ್ಡ್‌ಗೆ ಬೆಂಕಿ ಹಚ್ಚಿದರು. ಕೊನೆಯಲ್ಲಿ ಬಂದ ಟಿಮ್ ಡೇವಿಡ್ ಕೇವಲ 16 ಎಸೆತಗಳಲ್ಲಿ 34 ರನ್ ಗಳಿಸಿದರು. ಈ ಮೂಲಕ ಆರ್‌ಸಿಬಿ ನಿಗದಿತ ಓವರ್‌ಗಳಲ್ಲಿ 240 ರನ್‌ಗಳ ಬೃಹತ್ ಸ್ಕೋರ್ ಸಾಧಿಸಲು ಸಹಾಯ ಮಾಡಿದರು.
ಇದಾದ ನಂತರ ಬ್ಯಾಟಿಂಗ್‌ಗೆ ಇಳಿದ ಮುಂಬೈ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 222 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಇದರೊಂದಿಗೆ, ಅವರು ರಾಯಲ್ ಚಾಲೆಂಜರ್ಸ್ ವಿರುದ್ಧ 18 ರನ್‌ಗಳ ಅಂತರದಿಂದ ಸೋಲುಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net