ಕೊಹ್ಲಿ ಅಭಿಮಾನಿಗಳಿಗೆ ಭಾರಿ ನಿರಾಸೆ: ಎಲ್ಲ ವಿಜಯ್ ಹಜಾರೆ ಪಂದ್ಯಗಳು ಚಿನ್ನಸ್ವಾಮಿಯಿಂದ ಶಿಫ್ಟ್​! Virat Kohli

ವಿಜಯ್ ಹಜಾರೆ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸ್ಥಳಾಂತರ
ವಿಜಯ್ ಹಜಾರೆ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸ್ಥಳಾಂತರ
Published on

ಪ್ರಮುಖ ಮುಖ್ಯಾಂಶಗಳು

  • ವಿರಾಟ್​ ಕೊಹ್ಲಿ ಆಟವನ್ನು ಕಣ್ತುಂಬಿಕೊಳ್ಳಲು ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆ
  • ವಿಜಯ್ ಹಜಾರೆ ಟ್ರೋಫಿಯ ಎಲ್ಲಾ ಪಂದ್ಯಗಳನ್ನು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ಶಿಫ್ಟ್​
  • ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಸ್ಥಳಾಂತರಿಸುವಂತೆ ಕೆಎಸ್‌ಸಿಎಗೆ ಸೂಚನೆ
ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ವಿರಾಟ್​ ಕೊಹ್ಲಿ ( Virat Kohli ) ಆಟವನ್ನು ಕಣ್ತುಂಬಿಕೊಳ್ಳಲು ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟು ಮಾಡುವ ಸುದ್ದಿಯೊಂದು ಇದೀಗ ಹೊರಬಿದ್ದಿದೆ. ಅದೇನೆಂದರೆ, ಭದ್ರತಾ ಕಾರಣಗಳಿಂದಾಗಿ ಬುಧವಾರ (ಡಿ.24) ನಡೆಯಲಿರುವ ದೆಹಲಿ ಮತ್ತು ಆಂಧ್ರ ಪ್ರದೇಶ ನಡುವಿನ ಆರಂಭಿಕ ಪಂದ್ಯ ಸೇರಿದಂತೆ ವಿಜಯ್ ಹಜಾರೆ ಟ್ರೋಫಿಯ ಎಲ್ಲಾ ಪಂದ್ಯಗಳನ್ನು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ದೇವನಹಳ್ಳಿಯಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಸ್ಥಳಾಂತರಿಸುವಂತೆ ಕೆಎಸ್‌ಸಿಎಗೆ ಸೂಚಿಸಲಾಗಿದೆ.
ಅಂದಹಾಗೆ, 2025-26ರ ವಿಜಯ್ ಹಜಾರೆ ಟ್ರೋಫಿಯ ಭಾಗವಾಗಿ ಚಿನ್ನಸ್ವಾಮಿ ಕ್ರೀಡಾಂಗಣವು ಒಂಬತ್ತು ಲೀಗ್ ಪಂದ್ಯಗಳನ್ನು ಆಯೋಜಿಸಬೇಕಿತ್ತು. ಮೊದಲ ಪಂದ್ಯವು ಡಿಸೆಂಬರ್ 24 ರಂದು ಆಂಧ್ರ ಮತ್ತು ದೆಹಲಿ ನಡುವೆ ನಡೆಯಬೇಕಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್​ರಂತಹ ಟೀಮ್ ಇಂಡಿಯಾ ಸ್ಟಾರ್ ಆಟಗಾರರು ದೆಹಲಿ ತಂಡಕ್ಕಾಗಿ ಆಡಲಿದ್ದಾರೆ. ಅವರನ್ನು ಮತ್ತೊಮ್ಮೆ ನೇರವಾಗಿ ನೋಡಬಹುದು ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ, ಅಭಿಮಾನಿಗಳಿಗೆ ಕರ್ನಾಟಕ ಸರ್ಕಾರ ಆಘಾತ ನೀಡಿದೆ.
ವಾಸ್ತವವಾಗಿ, ಕರ್ನಾಟಕ ಕ್ರಿಕೆಟ್ ಸಂಸ್ಥೆಯು (ಕೆಎಸ್​ಸಿಎ) ಈ ಪಂದ್ಯಗಳಿಗೆ ಎರಡರಿಂದ ಮೂರು ಸಾವಿರ ಅಭಿಮಾನಿಗಳಿಗೆ ಅವಕಾಶ ನೀಡಲು ನಿರ್ಧರಿಸಿತ್ತು. ಈ ವಿಚಾರವಾಗಿ ಕರ್ನಾಟಕ ಸರ್ಕಾರಕ್ಖೂ ತಿಳಿಸಿತ್ತು. ಆದಾಗ್ಯೂ, ಭದ್ರತಾ ಕಾರಣಗಳಿಂದಾಗಿ ಸರ್ಕಾರ ಈ ಪ್ರಸ್ತಾಪವನ್ನು ತಿರಸ್ಕರಿಸಿದೆ. ಅಲ್ಲದೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸದಂತೆ ಸರ್ಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಎಲ್ಲ ಪಂದ್ಯಗಳನ್ನು ಇದೀಗ ದೇವನಹಳ್ಳಿಯಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಸ್ಥಳಾಂತರಿಸಲಾಗಿದೆ.
ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್​ನಲ್ಲಿ ನಡೆಯುವ ಪಂದ್ಯವು ಕೂಡ ಯಾವುದೇ ಪ್ರೇಕ್ಷರಿಲ್ಲದೇ ನಡೆಯಲಿದೆ. ಸಿಒಇ ಈ ಹಿಂದೆ ದುಲೀಪ್ ಟ್ರೋಫಿ, ಮಹಿಳಾ ವಿಶ್ವಕಪ್ ಅಭ್ಯಾಸ ಪಂದ್ಯಗಳು ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಭಾರತ ಎ ಸರಣಿಯನ್ನು ಪ್ರೇಕ್ಷಕರಿಲ್ಲದೇ ಆಯೋಜಿಸಿತ್ತು.
ಸರ್ಕಾರದ ನಿರ್ಧಾರದಿಂದ ಇದೀಗ ಕೊಹ್ಲಿ ಅಭಿಮಾನಿಗಳಿಗೆ ನಿರಾಸೆ ಆಗಿದೆ. ರಜಾ ದಿನಗಳಲ್ಲಿ ಚಿನ್ನಸ್ವಾಮಿಯ ಸುತ್ತಲಿನ ಅವ್ಯವಸ್ಥೆಯನ್ನು ತಡೆಯಲು ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಇಎಸ್‌ಪಿಎನ್‌ಕ್ರಿಕ್‌ಇನ್ಫೋ ವರದಿ ಮಾಡಿದೆ. ಕರ್ನಾಟಕ ಸರ್ಕಾರವು ರಚಿಸಿದ ಪೊಲೀಸ್, ಲೋಕೋಪಯೋಗಿ ಮತ್ತು ಅಗ್ನಿಶಾಮಕ ಸುರಕ್ಷತಾ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯು ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಪರಿಶೀಲಿಸಿತು ಮತ್ತು ವರದಿಯನ್ನು ಸಲ್ಲಿಸಿತು. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.
ಈ ತಿಂಗಳ ಆರಂಭದಲ್ಲಿ ಕೆಎಸ್‌ಸಿಎ ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಅಧಿಕಾರ ವಹಿಸಿಕೊಂಡಾಗಿನಿಂದ, ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಐಪಿಎಲ್ ಸೇರಿದಂತೆ ಉನ್ನತ ಮಟ್ಟದ ಕ್ರಿಕೆಟ್ ಅನ್ನು ಮತ್ತೆ ಚಿನ್ನಸ್ವಾಮಿಗೆ ಮರಳಿ ತರುವ ಸಾಧ್ಯತೆಯ ಕುರಿತು ಸರ್ಕಾರಿ ಅಧಿಕಾರಿಗಳೊಂದಿಗೆ ಹಲವಾರು ಸಭೆಗಳನ್ನು ನಡೆಸಲಾಗಿದೆ. ಆದರೆ, ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ'ಕುನ್ಹಾ ಅವರ ವರದಿಯ ಪ್ರಕಾರ, ಚಿನ್ನಾಸ್ವಾಮಿ ಕ್ರೀಡಾಂಗಣವು ದೊಡ್ಡ ಸಭೆಗಳಿಗೆ "ಅತ್ಯಂತ ಅಸುರಕ್ಷಿತ" ಎಂದು ಹೇಳಿದೆ.

ಕಾಲ್ತುಳಿತ ದುರಂತವೇ ಕಾರಣ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2025ರ ವಿಜೇತರಾಗಿ ಹೊರಹೊಮ್ಮಿತು. ಇದಾದ ಬಳಿಕ ಆರ್‌ಸಿಬಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ರ್ಯಾಲಿಯನ್ನು ನಡೆಸಿತು. ಈ ಸಮಯದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಪ್ರಾಣ ಕಳೆದುಕೊಂಡರು. ಡಜನ್​ಗಟ್ಟಲೆ ಅಭಿಮಾನಿಗಳು ಗಾಯಗೊಂಡರು. ಈ ಘಟನೆಯ ನಂತರ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಪಂದ್ಯಗಳನ್ನು ನಡೆಸದಂತೆ ಸರ್ಕಾರ ಆದೇಶಗಳನ್ನು ಹೊರಡಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net