ಈ ವಿಷಯ ರವಿಶಾಸ್ತ್ರಿ, ಕೊಹ್ಲಿಗೆ ಮೊದಲೇ ಗೊತ್ತಿತ್ತು! ರೋಹಿತ್ ಶರ್ಮ ದಾಖಲೆಗಳನ್ನು ಇನ್ನೊಮ್ಮೆ ನೋಡಿ

ಟೀಮ್ ಇಂಡಿಯಾ ದಿಗ್ಗಜ ರೋಹಿತ್ ಶರ್ಮ ಕೊನೆಯ ಪಂದ್ಯ
ಟೀಮ್ ಇಂಡಿಯಾ ದಿಗ್ಗಜ ರೋಹಿತ್ ಶರ್ಮ ಕೊನೆಯ ಪಂದ್ಯ
Published on

ಪ್ರಮುಖ ಮುಖ್ಯಾಂಶಗಳು

  • ಇಂಗ್ಲೆಂಡ್​ ವಿರುದ್ಧದ 3ನೇ ಏಕದಿನ ಪಂದ್ಯವೇ ರೋಹಿತ್​ ಕೊನೇ ಮ್ಯಾಚ್​
  • ಲಾರ್ಡ್ಸ್​ ಮೈದಾನದಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡಲಿದ್ದಾರೆ
  • ಈ ವಿಷಯ ಮೊದಲೇ ಕೊಹ್ಲಿ ಮತ್ತು ರವಿಶಾಸ್ತ್ರಿ ಅವರಿಗೆ ಗೊತ್ತಿತ್ತು
ನವದೆಹಲಿ: ಟೀಮ್ ಇಂಡಿಯಾದ ದಿಗ್ಗಜ ಓಪನರ್​, ಅತ್ಯಂತ ಯಶಸ್ವಿ ಮಾಜಿ ಕ್ಯಾಪ್ಟನ್​ ರೋಹಿತ್ ಶರ್ಮಾ (Rohit Sharma) ಅವರು ತಮ್ಮ ಕೊನೆಯ ಏಕದಿನ ಪಂದ್ಯವನ್ನು ಇಂಗ್ಲೆಂಡ್​ ಎದುರು ಲಾರ್ಡ್ಸ್​ ಮೈದಾನದಲ್ಲಿ ಆಡಲಿದ್ದಾರೆ ಎಂಬ ಗುಮಾನಿಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಈ ವಿಷಯ ರೋಹಿತ್ ಅಭಿಮಾನಿಗಳಲ್ಲಿ ಬಹಳ ದುಃಖ ತಂದೊಡ್ಡಿದೆ. ಅನೇಕರು ಬಿಸಿಸಿಐ ನಿರ್ಧಾರವನ್ನು ಖಂಡಿಸಿ, ಮತ್ತೊಮ್ಮೆ ದಿಗ್ಗಜ ಕ್ರಿಕೆಟಿನಗನ ದಾಖಲೆಗಳನ್ನು ಸರಿಯಾಗಿ ನೋಡುವಂತೆ ಒತ್ತಾಯಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್​ಬೈ?

ಭಾನುವಾರ (ಜು.19) ಕ್ರಿಕೆಟ್​ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಗ್ಲೆಂಡ್​ ವಿರುದ್ಧದ ಮೂರನೇ ಏಕದಿನ ಪಂದ್ಯವೇ 'ಹಿಟ್‌ಮ್ಯಾನ್' ಅವರ ಕೊನೆಯ ಏಕದಿನ ಮ್ಯಾಚ್​ ಎಂಬ ಸುದ್ದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸಂಚಲನ ಹುಟ್ಟುಹಾಕಿದ್ದು, ಇದು ಬಹುತೇಕ ನಿಜ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಪುಷ್ಠಿ ಎಂಬಂತೆ ರೋಹಿತ್​ ಅವರ ಪೋಷಕರು ಇಂಗ್ಲೆಂಡ್​ಗೆ ಆಗಮಿಸಿದ್ದಾರೆ.

2027ರ ವಿಶ್ವಕಪ್ ರೇಸ್‌ನಿಂದ ರೋಹಿತ್ ಹೊರಗೆ?

ಈಗಾಗಲೇ ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ರೋಹಿತ್ ಶರ್ಮಾ, 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುವ ಗುರಿ ಹೊಂದಿದ್ದರು. ಆದರೆ, ಬಿಸಿಸಿಐ ಆಯ್ಕೆ ಸಮಿತಿಯು ಮುಂದಿನ ವಿಶ್ವಕಪ್ ಯೋಜನೆಯಿಂದ ರೋಹಿತ್​ರನ್ನು ಕೈಬಿಡುವ ಮೂಲಕ ಯುವ ಬ್ಯಾಟರ್​ ಯಶಸ್ವಿ ಜೈಸ್ವಾಲ್​ಗೆ ಆರಂಭಿಕ ಸ್ಥಾನ ನೀಡಲು ನಿರ್ಧರಿಸಿದೆ.

ರವಿಶಾಸ್ತ್ರಿ, ಕೊಹ್ಲಿಗೇ ಮೊದಲೇ ಗೊತ್ತಿತ್ತು!

ಎರಡನೇ ಏಕದಿನ ಪಂದ್ಯದಲ್ಲಿ ಜಾಲತಾಣಗಳಲ್ಲಿ ಹರಿದಾಡಿದ ವೈರಲ್ ಆದ ರವಿಶಾಸ್ತ್ರಿ ಅವರ ಮಾತುಗಳು ಮತ್ತು ಮೈದಾನದಲ್ಲಿ ಕೊಹ್ಲಿ ಭಾವುಕರಾಗಿರುವಂತೆ ಕಾಣಿಸುವಂತ ಕೆಲವು ಸೂಕ್ಷ್ಮ ಘಟನೆಗಳು ರೋಹಿತ್ ನಿವೃತ್ತಿ 100ಕ್ಕೆ 100 ಎಂಬುದನ್ನು ಇನ್ನಷ್ಟು ಒತ್ತಿ ಹೇಳಿವೆ. ಪಂದ್ಯದಲ್ಲಿ 65 ರನ್ ಸಿಡಿಸಿ ಔಟಾದ ಬಳಿಕ ಡ್ರೆಸ್ಸಿಂಗ್ ರೂಮ್‌ನಲ್ಲಿ ರೋಹಿತ್​ ಮತ್ತು ಬುಮ್ರಾ ಮಧ್ಯೆ ಕುಳಿತಿದ್ದ ವಿರಾಟ್ ತುಂಬಾ ಮಂಕಾಗಿ, ತಲೆಬಾಗಿಸಿ ಕುಳಿತಿದ್ದ ಫೋಟೋಗಳು ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗಿವೆ.

ರವಿಶಾಸ್ತ್ರಿ ಕಾಮೆಂಟರಿಯಲ್ಲಿ ಸುಳಿವು!

ಪಂದ್ಯದ ಲೈವ್ ಕಾಮೆಂಟರಿ ವೇಳೆ ರವಿಶಾಸ್ತ್ರಿ ಮಾತನಾಡುತ್ತಾ, ರೋಹಿತ್ ಶರ್ಮಾ ಅವರ ನಾಯಕತ್ವ ಮತ್ತು ಬ್ಯಾಟಿಂಗ್ ಸಾಧನೆಗಳನ್ನು ಪದೇ ಪದೇ ಮೆಲುಕು ಹಾಕಿದರು. ಹಿಟ್​ಮ್ಯಾನ್​ ದೀರ್ಘಕಾಲದಿಂದ ಭಾರತ ತಂಡದಲ್ಲಿದ್ದಾರೆ. ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆ ಅವರ ಹೆಸರಲ್ಲಿದೆ. ಅದರಲ್ಲೂ ಯುಕೆಯಲ್ಲಿ ನಡೆದ 2019ರ ವಿಶ್ವಕಪ್ ಒಂದರಲ್ಲೇ 5 ಶತಕ ಸಿಡಿಸಿದ ರೆಕಾರ್ಡ್ ಕೂಡ ಅವರ ಹೆಸರಿನಲ್ಲಿದೆ ಎಂದು ಹೊಗಳಿದರು. ಇದು ಖಂಡಿತ ಊಹಾಪೋಹಗಳೇ ಸತ್ಯ ಎಂಬುದನ್ನು ಪರೋಕ್ಷವಾಗಿ ಒತ್ತಿ ಹೇಳಿತು.
ಭಾನುವಾರ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಇಂಗ್ಲೆಂಡ್​ ಮತ್ತು ಭಾರತ ನಡುವಿನ ಮೂರನೇ ಹಾಗೂ ಕೊನೆಯ ಹೈವೋಲ್ಟೇಜ್ ಏಕದಿನ ಪಂದ್ಯವು ಭಾರತಕ್ಕೆ ಸರಣಿ ನಿರ್ಣಾಯಕ ಪಂದ್ಯ ಎಂಬುದು ಒಂದೆಡೆಯಾದರೆ, ರೋಹಿತ್ ಶರ್ಮಾ ಅವರ ಅಂತಾರಾಷ್ಟ್ರೀಯ ಕ್ರಿಕೆಟ್​ ಕರಿಯರ್ ಇದೇ ಮ್ಯಾಚ್​ನಲ್ಲಿ ಕೊನೆಯಾಗಲಿದೆ ಎಂಬ ಆತಂಕ, ಬೇಸರ ಇಡೀ ಕ್ರಿಕೆಟ್ ಜಗತ್ತಿಗೆ ಕಾಡಲಾರಂಭಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net