ಕರ್ನಾಟಕ ತಂಡಕ್ಕೆ ವಿನಯ್ ಕುಮಾರ್​ ನೂತನ ಕೋಚ್

ಕರ್ನಾಟಕ ತಂಡಕ್ಕೆ ವಿನಯ್ ಕುಮಾರ್​ ನೂತನ ಕೋಚ್
ಕರ್ನಾಟಕ ತಂಡಕ್ಕೆ ವಿನಯ್ ಕುಮಾರ್​ ನೂತನ ಕೋಚ್
Published on

ಬೆಂಗಳೂರು: ಕರ್ನಾಟಕ ಕ್ರಿಕೆಟ್ ಕಂಡ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿದ ‘ದಾವಣಗೆರೆ ಎಕ್ಸ್​ಪ್ರೆಸ್’ ಖ್ಯಾತಿಯ ಮಾಜಿ ವೇಗಿ ಆರ್. ವಿನಯ್​ ಕುಮಾರ್ ಮುಂಬರುವ 2026-27ರ ದೇಶೀಯ ಕ್ರಿಕೆಟ್ ಋತುವಿಗೆ ರಾಜ್ಯ ತಂಡದ ನೂತನ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್​ಸಿಎ) ಗುರುವಾರ ಈ ಬಗ್ಗೆ ಅಧಿಕೃತವಾಗಿ ಪ್ರಕಟಿಸಿದೆ.

ದಿಗ್ಗಜರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಜಾವಗಲ್ ಶ್ರೀನಾಥ್ ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿಯ (ಸಿಎಸಿ) ಶಿಫಾರಸಿನ ಅನ್ವಯ ಮುಂಬರುವ ದೇಶೀಯ ಕ್ರಿಕೆಟ್ ಋತುವಿಗೆ ರಾಜ್ಯದ ಪುರುಷರ ಮತ್ತು ಮಹಿಳೆಯರ ಸೀನಿಯರ್ ಮತ್ತು ವಿವಿಧ ವಯೋಮಿತಿ ತಂಡಗಳಿಗೆ ಹೊಸ ತರಬೇತುದಾರರನ್ನು ನೇಮಿಸಲಾಗಿದೆ ಎಂದು ಕೆಎಸ್​ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ. ವಿನಯ್ ನಾಯಕರಾಗಿ ಕಂಡ ಅಮೋಘ ಯಶಸ್ಸನ್ನು ಕೋಚ್ ಆಗಿಯೂ ಸಾಧಿಸುವ ನಿರೀಕ್ಷೆ ರಾಜ್ಯ ಕ್ರಿಕೆಟ್ ಅಭಿಮಾನಿಗಳದ್ದಾಗಿದೆ.

ಗರಿಷ್ಠ ಸಂಭಾವನೆ?: ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರಕ್ಕೆ ಬ್ಯಾಟಿಂಗ್ ಕೋಚ್ ಆಗಿ ನೇಮಕ ಗೊಂಡಿರುವ ಯರೇಗೌಡ ಅವರಿಂದ ತೆರವಾಗಿರುವ ಮುಖ್ಯ ಕೋಚ್ ಹುದ್ದೆಯನ್ನು ವಿನಯ್ ತುಂಬಲಿದ್ದಾರೆ. ಅವರು ರಾಜ್ಯ ತಂಡಕ್ಕೆ ಇದುವರೆಗಿನ ಸರ್ವಾಧಿಕ ಮೊತ್ತದ ಸಂಭಾವನೆಯ ಕೋಚ್ ಆಗಿದ್ದಾರೆ ಎನ್ನಲಾಗಿದೆ.

ರಾಜ್ಯದ ವಿವಿಧ ತಂಡಗಳ ಹೊಸ ಕೋಚ್​ಗಳು: ಸೀನಿಯರ್ ಪುರುಷರ ತಂಡ: ಮುಖ್ಯ ಕೋಚ್: ವಿನಯ್ ಕುಮಾರ್, ಫೀಲ್ಡಿಂಗ್ ಕೋಚ್: ದೀಪಕ್ ಚೌಗಲೆ; ಸೀನಿಯರ್ ಮಹಿಳಾ ತಂಡ: ಮುಖ್ಯ ಕೋಚ್: ಎಸ್.ಎನ್. ಅಮೀತ್, ಫೀಲ್ಡಿಂಗ್ ಕೋಚ್: ರಕ್ಷಿತಾ ಕೃಷ್ಣಪ್ಪ; ಇತರ ಮುಖ್ಯ ಕೋಚ್​ಗಳು: 23 ವಯೋಮಿತಿ ಪುರುಷರು: ಗಣೇಶ್ ಸತೀಶ್; 23 ವಯೋಮಿತಿ ಮಹಿಳೆಯರು: ಎಸ್.ಎನ್. ಅಮೀತ್ 19 ವಯೋಮಿತಿ ಪುರುಷರು: ಕುನಾಲ್ ಕಪೂರ್; 19 ವಯೋಮಿತಿ ಮಹಿಳೆಯರು: ಮುಕುಂದ ಜಿ.16 ವಯೋಮಿತಿ ಬಾಲಕರು: ಆದಿತ್ಯಾ ಬಿ. ಸಾಗರ್; 14 ವಯೋಮಿತಿ ಬಾಲಕರು, 15 ವಯೋಮಿತಿ ಬಾಲಕಿಯರು: ಎಂ. ಗುರುಪ್ರಸಾದ್.

ಅವಳಿ ರಣಜಿ ಗೆದ್ದ ಯಶಸ್ವಿ ನಾಯಕ

ರಣಜಿ ಟ್ರೋಫಿಯಲ್ಲಿ ಸರ್ವಾಧಿಕ 442 ವಿಕೆಟ್ ಕಬಳಿಸಿದ ವೇಗಿ ಎನಿಸಿರುವ ವಿನಯ್ಕುಮಾರ್, ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಒಟ್ಟಾರೆ 139 ಪಂದ್ಯಗಳಲ್ಲಿ 504 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. 2013ರಿಂದ 2015ರ ನಡುವೆ ರಾಜ್ಯ ತಂಡದ ನಾಯಕರಾಗಿ ಸತತ 2 ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಮತ್ತು ಇರಾನಿ ಕಪ್ ಗೆದ್ದ ಅಮೋಘ ದಾಖಲೆ ಅವರದಾಗಿದೆ. ಜತೆಗೆ ಭಾರತ ಪರ ಏಕೈಕ ಟೆಸ್ಟ್, 31 ಏಕದಿನ, 9 ಟಿ20 ಪಂದ್ಯವನ್ನೂ ಆಡಿದ್ದಾರೆ. 42 ವರ್ಷದ ವಿನಯ್, ಇತ್ತೀಚೆಗೆ ಮಹಾರಾಜ ಟ್ರೋಫಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡದ ಕೋಚ್ ಆಗಿದ್ದರು. ಮುಂಬೈ ಇಂಡಿಯನ್ಸ್ ತಂಡದ ಪ್ರತಿಭಾನ್ವೇಷಕರೂ ಆಗಿದ್ದ ಅವರು, ಕಳೆದ ಐಎಲ್​ಟಿ20ಯಲ್ಲಿ ಎಂಐ ಎಮಿರೇಟ್ಸ್ ತಂಡದ ಬೌಲಿಂಗ್ ಕೋಚ್ ಆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net