15 ಬೌಂಡರಿ, 15 ಸಿಕ್ಸರ್...ಅಂಡರ್​ 19 ವಿಶ್ವಕಪ್​ ಫೈನಲ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​, ದಾಖಲೆಯ ಶತಕ ಸಿಡಿಸಿದ ವೈಭವ್​! Vaibhav Sooryavanshi

ಟೀಮ್​ ಇಂಡಿಯಾದ ಯುವ ಆಟಗಾರ ವೈಭವ್​ ಸೂರ್ಯವಂಶಿ
ಟೀಮ್​ ಇಂಡಿಯಾದ ಯುವ ಆಟಗಾರ ವೈಭವ್​ ಸೂರ್ಯವಂಶಿ
Published on

ಪ್ರಮುಖ ಮುಖ್ಯಾಂಶಗಳು

  • ಅಬ್ಬರದ ಆಟದಿಂದಲೇ ಹೆಸರುವಾಸಿಯಾಗಿರುವ ಟೀಮ್​ ಇಂಡಿಯಾದ ಯುವ ಆಟಗಾರ ವೈಭವ್​ ಸೂರ್ಯವಂಶಿ
  • ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಅಂಡರ್ 19 ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ದಾಖಲೆಯ ಶತಕ ಸಿಡಿಸಿದ ವೈಭವ್​
  • 80 ಎಸೆತಗಳಲ್ಲಿ 15 ಸಿಕ್ಸರ್​ ಮತ್ತು 15 ಬೌಂಡರಿ ನೆರವಿನಿಂದ 175 ರನ್​ ಕಲೆಹಾಕಿದ ಯುವ ಕ್ರಿಕೆಟಿಗ
Vaibhav Sooryavanshi : ತನ್ನ ಅಬ್ಬರದ ಆಟದಿಂದಲೇ ಹೆಸರುವಾಸಿಯಾಗಿರುವ ಟೀಮ್​ ಇಂಡಿಯಾದ ಯುವ ಆಟಗಾರ ವೈಭವ್​ ಸೂರ್ಯವಂಶಿ, ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಶತಕ ಸಿಡಿಸಿದ್ದಾರೆ. ಶುಕ್ರವಾರ (ಫೆ.06) ಹರಾರೆಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಫೈನಲ್​ ಪಂದ್ಯದಲ್ಲಿ, ಸೂರ್ಯವಂಶಿ ಅವರು ರಾಲ್ಫಿ ಆಲ್ಬರ್ಟ್ ಬೌಲಿಂಗ್‌ನಲ್ಲಿ ಸಿಂಗಲ್ ಗಳಿಸುವ ಮೂಲಕ ಕೇವಲ 55 ಎಸೆತಗಳಲ್ಲಿ ಶತಕ ಗಳಿಸಿದರು. ಈ ಮೂಲಕ, ಅಂಡರ್-19 ವಿಶ್ವಕಪ್‌ನಲ್ಲಿ ಅತ್ಯಂತ ವೇಗವಾಗಿ ಶತಕ ಗಳಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು, ಈ ದಾಖಲೆಯನ್ನು ರಾಜ್ ಬಾವಾ ಹೊಂದಿದ್ದರು. 2022ರಲ್ಲಿ ಉಗಾಂಡಾ ವಿರುದ್ಧದ ಪಂದ್ಯದಲ್ಲಿ ರಾಜ್ 69 ಎಸೆತಗಳಲ್ಲಿ ಶತಕ ಗಳಿಸಿದ್ದರು.
ಸೂರ್ಯವಂಶಿ ಅವರು ಅಬ್ಬರದ ಆಟ ಕೇವಲ ಶತಕಕ್ಕೆ ಸೀಮಿತವಾಗಲಿಲ್ಲ. ಬಿರುಗಾಳಿಯ ಇನ್ನಿಂಗ್ಸ್ ಆಡಿದ ಸೂರ್ಯವಂಶಿ, ಕೇವಲ 80 ಎಸೆತಗಳಲ್ಲಿ 15 ಸಿಕ್ಸರ್​ ಮತ್ತು 15 ಬೌಂಡರಿ ನೆರವಿನಿಂದ 175 ರನ್​ ಕಲೆಹಾಕಿದರು. ಈ ಮೂಲಕ ಅಂಡರ್-19 ವಿಶ್ವಕಪ್‌ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ಭಾರತದ ಮೊದಲ ಆಟಗಾರನೆಂಬ ಹೆಗ್ಗಳಿಕೆಯ ಜತೆಗೆ ವಿಶ್ವದಲ್ಲಿ ಎರಡನೇ ಆಟಗಾರನೆಂಬ ದಾಖಲೆ ಬರೆದಿದ್ದಾರೆ. ಈ ಪಟ್ಟಿಯಲ್ಲಿ ವಿಲ್ ಮಲಾಕ್ಜುಕ್ ಅಗ್ರಸ್ಥಾನದಲ್ಲಿದ್ದಾರೆ. ಜಪಾನ್ ವಿರುದ್ಧ ಆಸ್ಟ್ರೇಲಿಯಾದ ಆಟಗಾರ ವಿಲ್​ ಕೇವಲ 51 ಎಸೆತಗಳಲ್ಲಿ ಶತಕ ಗಳಿಸಿದರು.

ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ ಅಂಡರ್​ 19 ತಂಡದ ಆಟಗಾರರು

* ವಿಲ್ ಮಲಾಕ್ಜುಕ್ (ಆಸ್ಟ್ರೇಲಿಯಾ) - 2026 ರಲ್ಲಿ ಜಪಾನ್ ವಿರುದ್ಧ 51 ಎಸೆತಗಳಲ್ಲಿ ಶತಕ
* ವೈಭವ್ ಸೂರ್ಯವಂಶಿ (ಭಾರತ) - 2026 ರಲ್ಲಿ ಇಂಗ್ಲೆಂಡ್ ವಿರುದ್ಧ 55 ಎಸೆತಗಳಲ್ಲಿ ಶತಕ
* ಖಾಸಿಮ್ ಅಕ್ರಮ್ (ಪಾಕಿಸ್ತಾನ) - 2022 ರಲ್ಲಿ ಶ್ರೀಲಂಕಾ ವಿರುದ್ಧ 63 ಎಸೆತಗಳಲ್ಲಿ ಶತಕ
* ಬೆನ್ ಮೇಯಸ್ (ಇಂಗ್ಲೆಂಡ್) - 2026 ರಲ್ಲಿ ಸ್ಕಾಟ್ಲೆಂಡ್ ವಿರುದ್ಧ 65 ಎಸೆತಗಳಲ್ಲಿ ಶತಕ
* ರಾಜ್ ಬಾವಾ (ಭಾರತ) - 2022 ರಲ್ಲಿ ಉಗಾಂಡಾ ವಿರುದ್ಧ 69 ಎಸೆತಗಳಲ್ಲಿ ಶತಕ
ಈ ಪಂದ್ಯದಲ್ಲಿ ವೈಭವ್ ಅವರು ಫರ್ಹಾನ್ ಅಹ್ಮದ್ ಎಸೆದ ಇನ್ನಿಂಗ್ಸ್‌ನ 15ನೇ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ, ಅಂಡರ್-19 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಮುರಿದರು. ಇದಕ್ಕೂ ಮೊದಲು, ಈ ದಾಖಲೆಯನ್ನು ದಕ್ಷಿಣ ಆಫ್ರಿಕಾದ ಆಟಗಾರ ಡೆವಾಲ್ಡ್ ಬ್ರೆವಿಸ್ ಹೊಂದಿದ್ದರು. ಬ್ರೆವಿಸ್​ ಅವರು 2022ರ ಅಂಡರ್-19 ವಿಶ್ವಕಪ್‌ನಲ್ಲಿ 18 ಸಿಕ್ಸರ್‌ಗಳನ್ನು ಬಾರಿಸಿದ್ದರು. ಈ ಪಂದ್ಯದಲ್ಲಿ ವೈಭವ್ ಒಟ್ಟು 80 ಎಸೆತಗಳನ್ನು ಎದುರಿಸಿ 15 ಬೌಂಡರಿ ಮತ್ತು 15 ಸಿಕ್ಸರ್‌ಗಳ ಸಹಾಯದಿಂದ 175 ರನ್ ಗಳಿಸಿದರು.
* ವೈಭವ್ ಸೂರ್ಯವಂಶಿ - 2026 ರಲ್ಲಿ 30 ಸಿಕ್ಸರ್‌ಗಳು
* ಡೆವಾಲ್ಡ್ ಬ್ರೆವಿಸ್ - 2022 ರಲ್ಲಿ 18 ಸಿಕ್ಸರ್‌ಗಳು
* ಫಿಲ್ ಅಲೆನ್ - 2016 ರಲ್ಲಿ 18 ಸಿಕ್ಸರ್‌ಗಳು
* ಜ್ಯಾಕ್ ಬರ್ನ್‌ಹ್ಯಾಮ್ - 2016 ರಲ್ಲಿ 15 ಸಿಕ್ಸರ್‌ಗಳು
* ಮೈಕೆಲ್ ಹಿಲ್ - 2008 ರಲ್ಲಿ 14 ಸಿಕ್ಸರ್​ಗಳು
* ನಿಕೋಲಸ್ ಪೂರನ್ - 2014 ರಲ್ಲಿ 14 ಸಿಕ್ಸರ್‌ಗಳು
ಅಂಡರ್-19 ವಿಶ್ವಕಪ್‌ನಲ್ಲಿ ಒಂದು ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎಂಬ ದಾಖಲೆಯೂ ವೈಭವ್ ಅವರ ಹೆಸರಿನಲ್ಲಿದೆ. ಈ ಪಂದ್ಯದಲ್ಲಿ ಅವರು 15 ಸಿಕ್ಸರ್‌ಗಳನ್ನು ಬಾರಿಸಿದರು.
* ವೈಭವ್ ಸೂರ್ಯವಂಶಿ (ಭಾರತ) - 2026 ರಲ್ಲಿ ಇಂಗ್ಲೆಂಡ್ ವಿರುದ್ಧ 15 ಸಿಕ್ಸರ್​ಗಳು
* ಮೈಕೆಲ್ ಹಿಲ್ (ಆಸ್ಟ್ರೇಲಿಯಾ) - 2008 ರಲ್ಲಿ ನಮೀಬಿಯಾ ವಿರುದ್ಧ 12 ಸಿಕ್ಸರ್‌ಗಳು
* ಕ್ರೇಗ್ ಸಿಮನ್ಸ್ (ಆಸ್ಟ್ರೇಲಿಯಾ) - 2002 ರಲ್ಲಿ ಕೀನ್ಯಾ ವಿರುದ್ಧ 11 ಸಿಕ್ಸರ್‌ಗಳು
ಪಂದ್ಯದ ವಿಚಾರಕ್ಕೆ ಬರುವುದಾದರೆ, ಮೊದಲು ಬ್ಯಾಟಿಂಗ್​ ಮಾಡುತ್ತಿರುವ ಟೀಮ್​ ಇಂಡಿಯಾ 34.4 ಓವರ್​ಗಳಿಗೆ 4 ವಿಕೆಟ್​ ನಷ್ಟಕ್ಕೆ 303 ರನ್​ ಕಲೆ ಹಾಕಿದೆ. ಸದ್ಯ ಕ್ರೀಸ್​ನಲ್ಲಿ ವೇದಾಂತ್​ ತ್ರಿವೇದಿ 29 ರನ್​ ಮತ್ತು ಅಭಿಗ್ಯಾನ್ ಕುಂದು 1 ರನ್​ ಗಳಿಸಿ ಆಡುತ್ತಿದ್ದಾರೆ. ಭಾರತ ಬೃಹತ್​ ರನ್​ ದಾಖಲಿಸುವತ್ತ ದಾಪುಗಾಲು ಇಡುತ್ತಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net