ಇಂಗ್ಲೆಂಡ್​ ಪತ್ರಿಕೆಗಳಲ್ಲಿ 'ಬೇಬಿ ಬಾಸ್​' ವೈಭವ! ಆಂಗ್ಲರ ನಾಡಿಗೆ ಕಾಲಿಡುವ ಮುನ್ನವೇ ಹವಾ; ಪಂದ್ಯದ ಟಿಕೆಟ್​ಗಳು ಸೋಲ್ಡ್ ಔಟ್​ ನಿರೀಕ್ಷೆ

ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ
Published on

ಪ್ರಮುಖ ಮುಖ್ಯಾಂಶಗಳು

  • ಬಿರುಗಾಳಿ ಬ್ಯಾಟಿಂಗ್​ನಿಂದಲೇ ಸಖತ್ ಸದ್ದು ಮಾಡಿದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ
  • ಐರ್ಲೆಂಡ್​-ಇಂಗ್ಲೆಂಡ್​ ಟೂರ್​ಗೆ ಆಯ್ಕೆ ಆಗಿರುವ ವೈಭವ್​ ಮೇಲೆ ಹೆಚ್ಚಿದ ನಿರೀಕ್ಷೆಗಳು
  • ಇಂಗ್ಲೆಂಡ್​ಗೆ ಎಂಟ್ರಿ ಕೊಡುವ ಮುನ್ನವೇ ವೈಭವ್​ ಹವಾ
Vaibhav Sooryavanshi: 19ನೇ ಆವೃತ್ತಿಯ ಐಪಿಎಲ್​ನಲ್ಲಿ ತನ್ನ ಬಿರುಗಾಳಿ ಬ್ಯಾಟಿಂಗ್​ ಮೂಲಕವೇ ಸಖತ್​ ಸದ್ದು ಮಾಡಿದ ರಾಜಸ್ಥಾನ ರಾಯಲ್ಸ್‌ ತಂಡದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ, ಸ್ಫೋಟಕ ಇನ್ನಿಂಗ್ಸ್​ ಜೊತೆಗೆ ಆಕರ್ಷಕ ಶತಕಗಳ ಸರಮಾಲೆ ದಾಖಲಿಸಿದ್ದು ಕ್ರಿಕೆಟ್​ ದಿಗ್ಗಜರ ಹುಬ್ಬೇರಿಸಿತು. 237 ಸ್ಟ್ರೈಕ್​ರೇಟ್​ನಲ್ಲಿ ಬರೋಬ್ಬರಿ 776 ರನ್​ಗಳನ್ನು ಕಲೆಹಾಕಿದ ಈ ಪುಟ್ಟ ಪೋರ, ಹಲವು ಪ್ರಶಸ್ತಿಗಳನ್ನು ಬಾಚಿಕೊಂಡರು. ಈಗ ಟೀಮ್ ಇಂಡಿಯಾ ಸೀನಿಯರ್​ ತಂಡದಲ್ಲಿ ಸ್ಥಾನ ಪಡೆದಿರುವ ಅತ್ಯಂತ ಕಿರಿಯ ಆಟಗಾರ ಸೂರ್ಯವಂಶಿ,  ಇಂಗ್ಲೆಂಡ್​-ಐರ್ಲೆಂಡ್​ ಟಿ20 ಸರಣಿಗೆ ತಂಡದ ಪರ ಅಬ್ಬರಿಸಲು ಸಜ್ಜಾಗುತ್ತಿರುವುದು ಆಂಗ್ಲರ ನಾಡಿನಲ್ಲಿ ಭಾರೀ ಸದ್ದು ಮಾಡುತ್ತಿದೆ. 
15 ವರ್ಷದ ಹುಡುಗನೊಬ್ಬ ಮೈದಾನದಲ್ಲಿ ಬೌಂಡರಿ, ಸಿಕ್ಸರ್​ಗಳನ್ನು ಹಿಗ್ಗಾಮುಗ್ಗಾ ಬಾರಿಸುತ್ತಾನೆ ಎಂದರೆ ಅಚ್ಚರಿ ಹಾಗೂ ಗೊಂದಲ ಮೂಡುವುದು ತೀರ ಸಹಜ. ಕಾರಣ, ಅಂತಾರಾಷ್ಟ್ರೀಯ ಮತ್ತು ಅನುಭವಿ ಆಟಗಾರರಿಂದಲೇ ಸಾಧ್ಯವಾಗದು, ಒಬ್ಬ ಚಿಕ್ಕ ಹುಡುಗನಿಂದ ಆಗುತ್ತಿರುವುದು ಸದ್ಯ ಕ್ರಿಕೆಟ್​ ದಿಗ್ಗಜರಿಗೆ ನಂಬಲು ಕಷ್ಟಸಾಧ್ಯವಾಗಿದೆ. ಈ ವರ್ಷ ಅತ್ಯಧಿಕ ರನ್​ಗಳನ್ನು ಗಳಿಸಿದ ಬ್ಯಾಟ್ಸ್​ಮನ್​​ಗಳ ಪೈಕಿ ಬರೋಬ್ಬರಿ 700ಕ್ಕೂ ಅಧಿಕ ರನ್​ಗಳನ್ನು ದಾಖಲಿಸುವ ಮೂಲಕ ಪಟ್ಟಿಯಲ್ಲಿ ವೈಭವ್​ ಅಗ್ರ ಸ್ಥಾನಕ್ಕೇರಿದರು. ಇದೇ ಬಿಸಿಸಿಐ ಆಯ್ಕೆಗಾರರ ಗಮನ ಸೆಳೆದಿದ್ದು, ಈಗ ಆಂಗ್ಲರ ನಾಡಿನಲ್ಲಿ ಸೀನಿಯರ್​ ತಂಡದ ಪರ ಆಡುವ ಮೂಲಕ ಪದಾರ್ಪಣೆ ಮಾಡಲಿರುವ ಸೂರ್ಯವಂಶಿ ನೋಡಲು ಇಂಗ್ಲೆಂಡ್​ ಜನತೆ ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ. ಇದಕ್ಕೆ ಇಂಗ್ಲಿಷ್​ ಪತ್ರಿಕೆಗಳ ಮುಖಪುಟಗಳಲ್ಲಿ ಸದ್ದು ಮಾಡುತ್ತಿರುವ 'ವೈಭವ' ಸುದ್ದಿಗಳೇ ಸಾಕ್ಷಿ.  
ವೈಭವ್ ಸೂರ್ಯವಂಶಿ ಸೃಷ್ಟಿಸಿರುವ ಹವಾ ಕುರಿತು 'ಸ್ಕೈ ಸ್ಫೋರ್ಟ್ಸ್​ ಕ್ರಿಕೆಟ್​ ಶೋ'ನಲ್ಲಿ ಮಾತನಾಡಿದ ಮಾಜಿ ಇಂಗ್ಲೆಂಡ್​ ಕ್ರಿಕೆಟಿಗ ಮೈಕೆಲ್ ಅಥರ್ಟನ್, ಇಂಗ್ಲೆಂಡ್‌ನ ಪತ್ರಿಕೆಗಳು ಬೇಬಿ ಬಾಸ್​ ಎಂಟ್ರಿಗೆ ಈಗಾಗಲೇ ಸಖತ್​ ಪ್ರಚಾರ ಮಾಡುತ್ತಿವೆ. ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್​ ಮಂಡಳಿ ಖಂಡಿತ ವೈಭವ್ ಅವರ ಆಗಮನದಿಂದ ಖುಷಿ ಪಡಲಿದೆ. ಕಾರಣ, ಇದು ಪಂದ್ಯಗಳ ಟಿಕೆಟ್​ ಮಾರಾಟವನ್ನು ಸಹ ಹೆಚ್ಚಿಸಲಿದೆ ಎಂದರು. ಈ ಮೂಲಕ ಆಂಗ್ಲರ ನಾಡಿನಲ್ಲಿ 15 ವರ್ಷದ ಬಾಲಕನ ಹವಾ ಹೇಗಿದೆ ಎಂಬುದನ್ನು ವಿವರಿಸಿದರು. 
ಐಪಿಎಲ್​ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿರುವ ಇಶಾನ್ ಕಿಶನ್​, ಸಂಜು ಸ್ಯಾಮ್ಸನ್​, ವೈಭವ್ ಸೂರ್ಯವಂಶಿ ಸೇರಿ ಹಲವರು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವುದು ಕ್ರಿಕೆಟ್​ ಪ್ರಿಯರಲ್ಲಿ ನಿರೀಕ್ಷೆಗಳನ್ನು ದುಪ್ಪಟ್ಟಾಗಿಸಿದೆ. ಐರ್ಲೆಂಡ್​ ಮತ್ತು ಇಂಗ್ಲೆಂಡ್​ ಪ್ರವಾಸದಲ್ಲಿ ತಂಡದ ಪರ ವೈಭವ್ ಏನಾದರೂ ಕಣಕ್ಕಿಳಿದರೆ, ಅವರು ಕ್ರಿಕೆಟ್​ ದಂತಕಥೆ ಸಚಿನ್​ ತೆಂಡೂಲ್ಕರ್​ ಅವರ ದಾಖಲೆಯನ್ನು ಮುರಿಯಲಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net