ದಿಗ್ಗಜರೇ ಗಪ್​ಚುಪ್​... ಕ್ರಿಸ್​ ಗೇಲ್​ 175 ರನ್​ ದಾಖಲೆ ಮುರಿಯಲು ಕಾಯುತ್ತಿರುವ ವೈಭವ್​ ಹೆಸರಿನಲ್ಲಿವೆ ಹಲವು ರೆಕಾರ್ಡ್​​! | Vaibhav Sooryavanshi

ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ
Published on

ಪ್ರಮುಖ ಮುಖ್ಯಾಂಶಗಳು

  • ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ 103 ರನ್​ ಸಿಡಿಸಿದ ವೈಭವ್ ಸೂರ್ಯವಂಶಿ
  • 15 ವರ್ಷದ ವೈಭವ್ ಆಟಕ್ಕೆ ಕ್ರಿಕೆಟ್​ ದಿಗ್ಗಜರೇ ಗಪ್​ಚುಪ್​
  • ಒಂದಲ್ಲ, ಎರಡಲ್ಲ... ಯುವ ಬ್ಯಾಟರ್​ ಹೆಸರಿನಲ್ಲಿದೆ ಹಲವು ದಾಖಲೆಗಳು
Vaibhav Sooryavanshi: ನಿನ್ನೆ (ಏ.25) ಜೈಪುರದಲ್ಲಿ ನಡೆದ ಐಪಿಎಲ್​ 19ನೇ ಆವೃತ್ತಿಯ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ 5 ವಿಕೆಟ್​ಗಳ ರೋಚಕ ಜಯ ಸಾಧಿಸಿತು. ಈ ಮ್ಯಾಚ್​ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಯುವ ಬ್ಯಾಟರ್​ ವೈಭವ್ ಸೂರ್ಯವಂಶಿ ಸ್ಫೋಟಕ ಶತಕ ದಾಖಲಿಸಿದ್ದೇ ಆದರೂ ತಂಡಕ್ಕೆ ಗೆಲುವು ಸಿಗದೆ ಹೋಗಿದ್ದು ಕ್ರಿಕೆಟ್​ ಪ್ರಿಯರನ್ನು ಭಾರೀ ನಿರಾಶೆಗೊಳಿಸಿತು. ಆದರೆ, ಈ ಬಾರಿಯ ಐಪಿಎಲ್​ನಲ್ಲಿ ಎರಡನೇ ಶತಕದಾಟದ ಮೂಲಕ ವೈಭವ್​ ತಮ್ಮ ಹೆಸರಿಗೆ ಇದೀಗ ಹಲವಾರು ದಾಖಲೆಗಳನ್ನು ಸೇರಿಸಿಕೊಂಡಿರುವುದು ಗಮನಾರ್ಹ. 

ಯಾವ ದಾಖಲೆಗಳು ವೈಭವ್ ಮುಡಿಗೆ? 

  • ವೈಭವ್ ಸೂರ್ಯವಂಶಿ 40ಕ್ಕಿಂತ ಕಡಿಮೆ ಎಸೆತಗಳಲ್ಲಿ ಎರಡು ಐಪಿಎಲ್ ಶತಕಗಳನ್ನು ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಗೆ ಸಾಕ್ಷಿಯಾಗಿದ್ದಾರೆ. 2025ರ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಗಳಿಸಿದ ಅವರು, ಈ ಬಾರಿಯ ಐಪಿಎಲ್​ನಲ್ಲಿ ಎಸ್​ಆರ್​ಎಚ್​ ಎದುರು ಕೇವಲ 36 ಬಾಲ್​ಗಳಲ್ಲಿ ಶತಕ ಬಾರಿಸಿದರು. 
  • ಟಿ20 ಕ್ರಿಕೆಟ್‌ನಲ್ಲಿ 1000 ರನ್ ಮೈಲಿಗಲ್ಲು ತಲುಪಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಸಾಧನೆಗೈದ ಅತ್ಯಂತ ವೇಗದ ಆಟಗಾರ (ಚೆಂಡುಗಳ ವಿಷಯದಲ್ಲಿ) ಎಂಬ ಪಟ್ಟ ಪಡೆದಿದ್ದಾರೆ. ಕೇವಲ 473 ಎಸೆತಗಳಲ್ಲಿ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದರೆ. ಈ ಮೂಲಕ ಮಿಚೆಲ್ ಓವನ್ (533 ಎಸೆತ) ಮತ್ತು ಆ್ಯಂಡ್ರ್ಯೂ ಸಿಮನ್ಸ್ (558 ಎಸೆತ) ಅವರನ್ನು ಹಿಂದಿಕ್ಕಿದ್ದಾರೆ. 
  • ಇನ್ನಿಂಗ್ಸ್‌ನಲ್ಲಿ ಟಿ20ಗಳಲ್ಲಿ 1000 ರನ್ ಗಳಿಸಿದ ನಾಲ್ಕನೇ ವೇಗದ ಆಟಗಾರರಾಗಿ ವೈಭವ್​ ಹೊರಹೊಮ್ಮಿದ್ದಾರೆ. ಕೇವಲ 26 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಅವರದ್ದಾಗಿದೆ. 
  • ಐಪಿಎಲ್‌ನಲ್ಲಿ 15 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ದಾಖಲೆಯೂ ವೈಭವ್​ ಹೆಸರಿಗೆ ಸೇರಿದೆ. ವೈಭವ್ ಮೂರು ಬಾರಿ ಈ ಸಾಧನೆಗೈದಿದ್ದಾರೆ ಎಂಬುದು ಗಮನಾರ್ಹ. 
ಕೇವಲ 15 ವರ್ಷಕ್ಕೆ ಈ ಮಟ್ಟಿಗಿನ ಪ್ರದರ್ಶನ ನೀಡುತ್ತಿರುವ ವೈಭವ್ ಸೂರ್ಯವಂಶಿ, ಸದ್ಯ ಐಪಿಎಲ್​ನಲ್ಲಿ ಒಬ್ಬ ಸ್ಟಾರ್​ ಆಟಗಾರನಾಗಿ ಮಿಂಚುತ್ತಿದ್ದಾರೆ. ಬ್ಯಾಕ್ ಟು ಬ್ಯಾಕು ಹಲವು ಪಂದ್ಯಗಳಲ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಿರುವ ವೈಭವ್​, ಅಂತಾರಾಷ್ಟ್ರೀಯ ಮತ್ತು ಅನುಭವಿ ಆಟಗಾರರೇ ನನ್ನ ಮುಂದೆ ಏನೇನೂ ಅಲ್ಲ ಎಂಬಂತೆ ಆಡುತ್ತಿರುವುದು ಕ್ರಿಕೆಟ್​ ಪ್ರಿಯರ ಮನಸೂರೆಗೊಳಿಸಿದೆ. ಬೇಬಿ ಬಾಸ್​ರಿಂದ ಇದೇ ರೀತಿ ಪ್ರದರ್ಶನ ಬಂದರೆ, ಶೀಘ್ರವೇ ಅವರು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವುದು ಖಚಿತ ಎಂಬ ಮಾತುಗಳು ಸಹ ಕೇಳಿಬಂದಿವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net