ಅಪ್ಪಂದಿರ ದಿನದಂದೇ ಅಬ್ಬರಿಸಿದ ವೈಭವ್​: ಪಾಕಿಸ್ತಾನಕ್ಕೆ ಶುರುವಾಯ್ತಂತೆ ಛೋಟಾ ತಂದೆ ಭಯ, ಅಪ್ಪಿತಪ್ಪಿ ಕೆಣಕಬೇಡಿ! Vaibhav Sooryavanshi

ಅಪ್ಪಂದಿರ ದಿನದಂದೇ ಅಬ್ಬರಿಸಿದ ವೈಭವ್​: ಪಾಕಿಸ್ತಾನಕ್ಕೆ ಶುರುವಾಯ್ತಂತೆ ಛೋಟಾ ತಂದೆ ಭಯ, ಅಪ್ಪಿತಪ್ಪಿ ಕೆಣಕಬೇಡಿ! Vaibhav Sooryavanshi   ​
ಅಪ್ಪಂದಿರ ದಿನದಂದೇ ಅಬ್ಬರಿಸಿದ ವೈಭವ್​: ಪಾಕಿಸ್ತಾನಕ್ಕೆ ಶುರುವಾಯ್ತಂತೆ ಛೋಟಾ ತಂದೆ ಭಯ, ಅಪ್ಪಿತಪ್ಪಿ ಕೆಣಕಬೇಡಿ! Vaibhav Sooryavanshi ​
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀಲಂಕಾ ಎ ತಂಡದ ವಿರುದ್ಧ 11 ಎಸೆತಗಳಲ್ಲೇ ಫಿಫ್ಟಿ ಚಚ್ಚಿದ ಸೂರ್ಯವಂಶಿಗೆ ಸಿಕ್ತು ವಿಚಿತ್ರ ಬಿರುದು
  • ಸಾಮಾಜಿಕ ಜಾಲತಾಣದಲ್ಲಿ 'ಪಾಕಿಸ್ತಾನ್ ಕೆ ಛೋಟೆ ಪಾಪಾ' ಎಂದು ವೈರಲ್
  • ಅಪ್ಪಂದಿರ ದಿನದಂದೇ ಸಿಕ್ತು 'ಪಾಕಿಸ್ತಾನ್ ಕೆ ಛೋಟೆ ಪಾಪಾ' ಅನ್ನೋ ಕ್ರೇಜಿ ಪಟ್ಟ
  • 29 ಎಸೆತಗಳಲ್ಲಿ 94 ರನ್ ಚಚ್ಚಿ ಶ್ರೀಲಂಕಾವನ್ನು ಏಕಾಂಗಿಯಾಗಿ ಸದೆಬೆಡೆದ ಭಾರತದ ಯುವ ಕಿಂಗ್
Vaibhav Sooryavanshi : ಶ್ರೀಲಂಕಾದ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತ್ರಿಕೋನ 'ಎ' ಸರಣಿಯ ರೋಚಕ ಫೈನಲ್ ಪಂದ್ಯದಲ್ಲಿ, ಭಾರತದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಶ್ರೀಲಂಕಾ-ಎ ತಂಡದ ವಿರುದ್ಧ ರನ್ ಮಳೆ ಹರಿಸುವ ಮೂಲಕ ಅಕ್ಷರಶಃ ಅಬ್ಬರಿಸಿದ್ದಾರೆ. ಎದುರಾಳಿ ಬೌಲರ್‌ಗಳನ್ನು ನಿರ್ದಕ್ಷಿಣ್ಯವಾಗಿ ದಂಡಿಸಿದ ವೈಭವ್​, ಕೇವಲ 29 ಎಸೆತಗಳಲ್ಲಿ 8 ಭರ್ಜರಿ ಸಿಕ್ಸರ್ ಹಾಗೂ 10 ಆಕರ್ಷಕ ಬೌಂಡರಿಗಳ ನೆರವಿನಿಂದ ಬರೋಬ್ಬರಿ 94 ರನ್ ಚಚ್ಚಿ ಇತಿಹಾಸ ನಿರ್ಮಿಸಿದ್ದಾರೆ.
ಕೇವಲ 11 ಎಸೆತಗಳಲ್ಲೇ ಅರ್ಧಶತಕ ಪೂರೈಸಿ ಹಲವು ದಾಖಲೆಗಳನ್ನು ಧೂಳೀಪಟ ಮಾಡಿದ ಸೂರ್ಯವಂಶಿ, ಪ್ರಶಸ್ತಿ ಸರಣಿಯ ಅಂತಿಮ ಹಣಾಹಣಿಯಲ್ಲಿ ಭಾರತ-ಎ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಅಂತಿಮವಾಗಿ ಸಹನ್ ಅರಾಚ್ಚಿಗೆ ವಿಕೆಟ್ ಒಪ್ಪಿಸುವ ಮುನ್ನ, ವೈಭವ್​ ಅವರ ಬಿರುಗಾಳಿಯಂತಹ ಇನ್ನಿಂಗ್ಸ್ ಇಡೀ ಪಂದ್ಯದ ಚಿತ್ರಣವನ್ನೇ ಬದಲಾಯಿಸಿ ಭಾರತಕ್ಕೆ ಸಂಪೂರ್ಣ ನಿಯಂತ್ರಣ ತಂದುಕೊಟ್ಟಿದೆ. ಸದ್ಯ ಭಾರತ ಎ ತಂಡ ಪಂದ್ಯದ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿದೆ.
ವೈಭವ್​ ಅವರ ಈ ಆಕರ್ಷಕ ಇನ್ನಿಂಗ್ಸ್ ಮುಗಿಯುತ್ತಿದ್ದಂತೆ, ಕ್ರಿಕೆಟ್ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈಭವ್ ಅವರ ಮೇಲೆ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ. ಕಾಕತಾಳೀಯವೆಂಬಂತೆ, ಇಂದು ವಿಶ್ವ ಅಪ್ಪಂದಿರ ದಿನ (Father's Day) ಆಗಿರುವುದರಿಂದ, ಕ್ರಿಕೆಟ್ ಪ್ರೇಮಿಗಳು ಇದನ್ನು ಮತ್ತಷ್ಟು ತಮಾಷೆಯಾಗಿ ಸಂಭ್ರಮಿಸುತ್ತಿದ್ದಾರೆ.
ವೈಭವ್​ ಅವರ ಭರ್ಜರಿ ಬ್ಯಾಟಿಂಗ್‌ಗೆ ಮನಸೋತಿರುವ ಕೆಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸೂರ್ಯವಂಶಿಯವರನ್ನು ಹಾಸ್ಯಭರಿತವಾಗಿ 'ಪಾಕಿಸ್ತಾನ್ ಕೆ ಛೋಟೆ ಪಾಪಾ' (ಪಾಕಿಸ್ತಾನದ ಚಿಕ್ಕ ತಂದೆ) ಎಂದು ಕರೆಯುವ ಮೂಲಕ ಸಖತ್ ಟ್ರೋಲ್ ಮಾಡುತ್ತಿದ್ದು, ಈ ವಿಶಿಷ್ಟ ಪ್ರಶಂಸೆ ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ದಾಖಲೆಗಳ ಸರದಾರ, ರೆನ್​ ಮಷಿನ್​ ಹಾಗೂ ಕಿಂಗ್​ ಕೊಹ್ಲಿಯನ್ನು ಪಾಕಿಸ್ತಾನದ ತಂದೆ ಎಂದು ಕ್ರೀಡಾಭಿಮಾನಿಗಳು ಕರೆಯುತ್ತಾರೆ. ಏಕೆಂದರೆ, ಪಾಕಿಸ್ತಾನ ವಿರುದ್ಧ ಪಂದ್ಯ ನಡೆದಾಗಲೆಲ್ಲ ಅಬ್ಬರಿಸುವ ವಿರಾಟ್​, ಪಾಕಿಗಳಿಗೆ ಅನೇಕ ಬಾರಿ ಸೋಲಿನ ರುಚಿ ಉಣಿಸಿದ್ದಾರೆ. ಹೀಗಾಗಿ, ಕೊಹ್ಲಿಯನ್ನು ಪಾಕಿಸ್ತಾನದ ತಂದೆ ಎಂದು ಕರೆಯುತ್ತಾರೆ. ಮುಂದೆ ಕೊಹ್ಲಿ ಸ್ಥಾನವನ್ನು ವೈಭವ್ ತುಂಬಲಿದ್ದಾರೆ ಎಂಬ ವಿಶ್ವಾಸ ಕ್ರೀಡಾಭಿಮಾನಿಗಳಲ್ಲಿದೆ. ಆದ್ದರಿಂದ ವೈಭವ್​ ಅವರನ್ನು ಪಾಕಿಸ್ತಾನ ಛೋಟಾ ತಂದೆ ಕರೆಯುತ್ತಿದ್ದಾರೆ.​
ಅಂದಹಾಗೆ, ಯುವರಾಜ್ ಸಿಂಗ್ ಅವರ ಹೆಸರಿನಲ್ಲಿದ್ದ ಸುದೀರ್ಘ ಕಾಲದ ಐತಿಹಾಸಿಕ ದಾಖಲೆಯನ್ನು ವೈಭವ್ ಸೂರ್ಯವಂಶಿ ಮುರಿದಿದ್ದಾರೆ. ಕೇವಲ 11 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ವೇಗದ ಫಿಫ್ಟಿ ಬಾರಿಸಿದ ಆಟಗಾರನೆಂಬ ಹೊಸ ದಾಖಲೆಯನ್ನು ವೈಭವ್​ ಬರೆದಿದ್ದಾರೆ. ಇಡೀ ಇನ್ನಿಂಗ್ಸ್‌ನಲ್ಲಿ ಕೇವಲ ಒಂದೇ ಒಂದು ಡಾಟ್ ಬಾಲ್ ಇತ್ತು ಎನ್ನುವುದೇ ಇವರ ಬ್ಯಾಟಿಂಗ್ ಭೀಕರತೆಗೆ ಸಾಕ್ಷಿ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಸ್ಕೋರರ್ ಆಗಿ ಹೊರಹೊಮ್ಮಿದಾಗಿನಿಂದಲೂ ಸೂರ್ಯವಂಶಿ ಅಡೆತಡೆಯಿಲ್ಲದೆ ಮುನ್ನುಗ್ಗುತ್ತಿದ್ದಾರೆ. ಈ 'ಎ' ಸರಣಿಯ ಆರಂಭಿಕ ಕೆಲವು ಪಂದ್ಯಗಳಲ್ಲಿ ವಿಫಲರಾದರು ಕೂಡ ಪ್ರಶಸ್ತಿಯ ಅಂತಿಮ ಕದನದಲ್ಲಿ ಶ್ರೀಲಂಕಾ ತಂಡವನ್ನು ಏಕಾಂಗಿಯಾಗಿ ಧೂಳೀಪಟ ಮಾಡುವ ಮೂಲಕ 2026ರ ನಾಕೌಟ್ ಕ್ರಿಕೆಟ್‌ನಲ್ಲಿ ತಾನೇ 'ಸುಲ್ತಾನ್' ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಈ ಅದ್ಭುತ ಪ್ರದರ್ಶನವನ್ನು ನೋಡಿದ ಬಳಿಕ ವೈಭವ್ ಸೂರ್ಯವಂಶಿ ಅವರೇ ಭಾರತೀಯ ಕ್ರಿಕೆಟ್‌ನ ಭವಿಷ್ಯದ ದ್ರುವತಾರೆ ಎಂಬುವುದರಲ್ಲಿ ಈಗ ಯಾವುದೇ ಅನುಮಾನ ಉಳಿದಿಲ್ಲ. ಈ ಯುವ ಪ್ರತಿಭೆ ಶೀಘ್ರದಲ್ಲೇ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವುದು ಬಹುತೇಕ ಖಚಿತವಾಗಿದೆ. ಮುಂಬರುವ ಭಾರತ ತಂಡದ ಇಂಗ್ಲೆಂಡ್​ ಪ್ರವಾಸದ ವೇಳೆಯೇ ಸೂರ್ಯವಂಶಿ ತಮ್ಮ ರಾಷ್ಟ್ರೀಯ ತಂಡದ ಜರ್ಸಿಯಲ್ಲಿ ಕಣಕ್ಕಿಳಿಯುವ ಮೂಲಕ ಹೊಸ ಇತಿಹಾಸ ಬರೆಯಲಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net