ಥರ್ಡ್​ ಅಂಪೈರ್​ ಬಿಗ್​ ಗಿಫ್ಟ್​ ಕೊಟ್ಟರೂ ಕೈಕೊಟ್ಟ ವೈಭವ್: ಮತ್ತೆ ನಿರಾಸೆ ಮೂಡಿಸಿದ ವಂಡರ್​ ಕಿಡ್​! Vaibhav Sooryavanshi

ಥರ್ಡ್​ ಅಂಪೈರ್​ ಬಿಗ್​ ಗಿಫ್ಟ್​ ಕೊಟ್ಟರೂ ಕೈಕೊಟ್ಟ ವೈಭವ್: ಮತ್ತೆ ನಿರಾಸೆ ಮೂಡಿಸಿದ ವಂಡರ್​ ಕಿಡ್​! Vaibhav Sooryavanshi
ಥರ್ಡ್​ ಅಂಪೈರ್​ ಬಿಗ್​ ಗಿಫ್ಟ್​ ಕೊಟ್ಟರೂ ಕೈಕೊಟ್ಟ ವೈಭವ್: ಮತ್ತೆ ನಿರಾಸೆ ಮೂಡಿಸಿದ ವಂಡರ್​ ಕಿಡ್​! Vaibhav Sooryavanshi
Published on

ಪ್ರಮುಖ ಮುಖ್ಯಾಂಶಗಳು

  • ಅಫ್ಘಾನಿಸ್ತಾನ 'ಎ' ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಔಟ್
  • ಸತತ ನಾಲ್ಕನೇ ಪಂದ್ಯದಲ್ಲೂ ಭಾರಿ ನಿರಾಸೆ ಮೂಡಿಸಿದ ವಂಡರ್​ ಕಿಡ್​ ವೈಭವ್​
  • ಇಂದು ಎರಡು ಬಾರಿ ಜೀವದಾನ ಸಿಕ್ಕರೂ ದೊಡ್ಡ ಸ್ಕೋರ್ ಗಳಿಸಲು ವಿಫಲರಾದ ಸೂರ್ಯವಂಶಿ
  • ದೂದ್‌ಜಾಯ್‌ಗೆ 2 ಬೌಂಡರಿ, 1 ಸಿಕ್ಸರ್ ಸಿಡಿಸಿ ಕೊನೆ ಎಸೆತದಲ್ಲೇ ಮುಗ್ಗರಿಸಿದ ವೈಭವ್
Vaibhav Sooryavanshi : ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ಸತತ ನಾಲ್ಕನೇ ಬಾರಿಗೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಬುಧವಾರ (ಜೂನ್​ 17) ಅಫ್ಘಾನಿಸ್ತಾನ 'ಎ' ತಂಡದ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 28 ಎಸೆತಗಳನ್ನು ಎದುರಿಸಿದ ವೈಭವ್​ 4 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 38 ರನ್ ಗಳಿಸಿ ಔಟಾಗಿದ್ದಾರೆ.
ಫರಿದೂನ್ ದಾವೂದ್‌ಜಾಯ್ ಎಸೆದ ಓವರ್‌ನಲ್ಲಿ ವೈಭವ್ ಸೂರ್ಯವಂಶಿ ಔಟಾದರು. ಇದೇ ಓವರ್‌ನ ಮೊದಲ ಐದು ಎಸೆತಗಳಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಂತೆ ಕಂಡ ಸೂರ್ಯವಂಶಿ, ಎರಡು ಬೌಂಡರಿ ಹಾಗೂ ಒಂದು ಭರ್ಜರಿ ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದರು. ಆದರೆ, ಓವರ್‌ನ ಕೊನೆಯ ಎಸೆತದಲ್ಲಿ ಬೌಲರ್ ಫರಿದೂನ್ ಅದ್ಭುತವಾಗಿ ಕಂಬ್ಯಾಕ್​ ಮಾಡಿದರು. ಸೂರ್ಯವಂಶಿ ಮತ್ತೊಮ್ಮೆ ದೊಡ್ಡ ಹೊಡೆತಕ್ಕೆ ಕೈಹಾಕಿ ಬ್ಯಾಟಿಂಗ್ ಟೈಮಿಂಗ್ ಮಿಸ್ ಮಾಡಿಕೊಂಡರು. ಇದರ ಪರಿಣಾಮವಾಗಿ, ಕವರ್ ಪಾಯಿಂಟ್‌ನಲ್ಲಿದ್ದ ಖಾಲಿದ್ ತನಿವಾಲ್ ಉತ್ತಮ ಕ್ಯಾಚ್ ಹಿಡಿಯುವ ಮೂಲಕ ಸೂರ್ಯವಂಶಿ ವಿಕೆಟ್ ಪತನವಾಯಿತು.

ಎರಡು ಜೀವದಾನ

ಇದಕ್ಕೂ ಮುನ್ನ ವೈಭವ್ ಅವರಿಗೆ ಎರಡು ಜೀವದಾನ ಕೂಡ ಸಿಕ್ಕಿತ್ತು. ಫರಿದೂನ್ ದಾವೂದ್‌ಜಾಯ್ ಎಸೆದ 3ನೇ ಓವರ್​ನಲ್ಲಿ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿದ ವೈಭವ್​, ಟೈಮಿಂಗ್ ಮಿಸ್ ಮಾಡಿಕೊಂಡಾಗ, ಸ್ಕ್ವೇರ್ ಲೆಗ್ ಕಡೆಗೆ ಅತ್ಯಂತ ಸುಲಭವಾಗಿ ಬಂದ ಕ್ಯಾಚ್ ಅನ್ನು ಅಫ್ಘಾನಿಸ್ತಾನದ ಫೀಲ್ಡರ್ ಕೈಚೆಲ್ಲಿದರು. ಇದಕ್ಕೂ ಮುನ್ನ ಅಂದರೆ, 2ನೇ ಓವರ್​ನಲ್ಲಿ ವೈಭವ್ ಶೂನ್ಯಕ್ಕೆ ಔಟಾಗುವುದರಿಂದ ಪಾರಾದರು. ಶಮ್ಸ್ ಉರ್ ರೆಹಮಾನ್ ಎಸೆದ ಆಫ್-ಸ್ಟಂಪ್‌ನಿಂದ ಹೊರಗಿದ್ದ ಚೆಂಡನ್ನು ಸೂರ್ಯವಂಶಿ ಪಾಯಿಂಟ್ ಕಡೆಗೆ ಕಟ್ ಮಾಡಿದಾಗ, ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಫರಿದೂನ್ ದಾವೂದ್‌ಜಾಯ್ ಡೈವ್ ಮಾಡುವ ಮೂಲಕ ಅದ್ಭುತ ಕ್ಯಾಚ್ ಪಡೆದಿದ್ದರು. ಸೂರ್ಯವಂಶಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದಾಗ ಮರುಪರಿಶೀಲಿಸಿದ ಮೂರನೇ ಅಂಪೈರ್, ಫರಿದೂನ್ ಕ್ಯಾಚ್ ಹಿಡಿಯುವಾಗ ಅವರ ಕೈಯ ಸ್ವಲ್ಪ ಭಾಗ ನೆಲಕ್ಕೆ ತಾಗಿದ್ದರಿಂದ ಅದನ್ನು 'ನಾಟ್ ಔಟ್' ಎಂದು ಘೋಷಿಸಿದರು.
ಈ ಎರಡು ಜೀವದಾನಗಳ ಹೊರತಾಗಿಯೂ ವೈಭವ್ ಕ್ರೀಸ್​ನಲ್ಲಿ ನಿಂತು ಬ್ಯಾಟಿಂಗ್​ ಮೂಲಕ ಅಬ್ಬರಿಸಲಿಲ್ಲ. ಕೇವಲ 38 ರನ್​ಗಳಿಗೆ ತಮ್ಮ ವಿಕೆಟ್​ ಒಪ್ಪಿಸಿ, ವೈಭವ್​ ಹೊರ ನಡೆದರು. ಅಂದಹಾಗೆ, ಈ ಸರಣಿಯಲ್ಲಿ ಶ್ರೀಲಂಕಾ 'ಎ' ತಂಡದ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಕೇವಲ 14 ರನ್ ಗಳಿಸಿ ಔಟಾಗಿದ್ದ ವೈಭವ್, ಆ ಬಳಿಕ ಅಫ್ಘಾನಿಸ್ತಾನ 'ಎ' ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 22 ಎಸೆತಗಳಲ್ಲಿ 44 ರನ್​ ಗಳಿಸಿದರು. ಮೂರನೇ ಪಂದ್ಯದಲ್ಲಿ ಮತ್ತೆ 21 ರನ್​ಗೆ ಔಟಾಗಿದ್ದರು. ಇದೀಗ ನಾಲ್ಕನೇ ಪಂದ್ಯದಲ್ಲಿ 38 ರನ್​ಗೆ ಔಟಾಗಿದ್ದು, ಸತತ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ದಾರೆ.
ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ ಮೊದಲು ಬ್ಯಾಟಿಂಗ್​ ಮಾಡುತ್ತಿರುವ ಭಾರತ ಎ ತಂಡ 25 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 175 ರನ್​ ಗಳಿಸಿದೆ. ಸದ್ಯ ಕ್ರೀಸ್​ನಲ್ಲಿ ನಾಯಕ ತಿಲಕ್​ ವರ್ಮಾ ಹಾಗೂ ಕುಮಾರ್​ ಕುಶಾಗ್ರ ನೆಲೆ ನಿಂತಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net