15ನೇ ವಯಸ್ಸಿನಲ್ಲೇ ಮತ್ತೊಂದು ಐತಿಹಾಸಿಕ ವಿಶ್ವ ದಾಖಲೆ ಬರೆದ ಯುವ ಬ್ಯಾಟಿಂಗ್ ಸೆನ್ಸೇಷನ್​ ವೈಭವ್ ಸೂರ್ಯವಂಶಿ! Vaibhav Sooryavanshi

 Vaibhav Sooryavanshi
15ನೇ ವಯಸ್ಸಿನಲ್ಲೇ ಮತ್ತೊಂದು ಐತಿಹಾಸಿಕ ವಿಶ್ವ ದಾಖಲೆ ಬರೆದ ಯುವ ಬ್ಯಾಟಿಂಗ್ ಸೆನ್ಸೇಷನ್​ ವೈಭವ್ ಸೂರ್ಯವಂಶಿ! Vaibhav Sooryavanshi
Published on: 

Vaibhav Sooryavanshi: ಟೀಮ್ ಇಂಡಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಕೇವಲ 15ನೇ ವಯಸ್ಸಿಗೆ ಸಾಲು ಸಾಲು ಅಪರೂಪದ ದಾಖಲೆಗಳನ್ನು ಒಂದರಂತೆ ಇನ್ನೊಂದು ಎಂಬಂತೆ ಬರೆದು, ಇಡೀ ವಿಶ್ವದ ಕ್ರಿಕೆಟ್​ ಪ್ರಿಯರು ಮಾತ್ರವಲ್ಲದೇ, ಸಾಮಾನ್ಯ ಜನರಿಗೂ ಗೊತ್ತಿರುವಂತ ಅಪ್ರತಿಮ ಪ್ರತಿಭೆ ಇದೀಗ ಮತ್ತೊಂದು ಐತಿಹಾಸಿಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

ಅತ್ಯಂತ ಕಿರಿಯ ನಾಯಕ

ಪ್ರಸಕ್ತ ನಡೆಯುತ್ತಿರುವ ಸೈಯದ್​ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಬಿಹಾರ ಪುರುಷರ ಹಿರಿಯ ತಂಡವನ್ನು ನಾಯಕನಾಗಿ ಮುನ್ನಡೆಸುವ ಮೂಲಕ ಟಿ20 ಕ್ರಿಕೆಟ್​ ಇತಿಹಾಸದಲ್ಲಿ ಅತ್ಯಂತ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೊಂದು ದಾಖಲೆಯಿಂದ ಭಾರತೀಯ ಕ್ರಿಕೆಟ್‌ನ ಭರವಸೆಯ ತಾರೆಯಾಗಿ ಮತ್ತೊಮ್ಮೆ ವೈಭವ್ ಜಾಗತಿಕ ಮಟ್ಟದಲ್ಲಿ​ ಸದ್ದು ಮಾಡುತ್ತಿದ್ದಾರೆ.

ತಮ್ಮದೇ ಹೊಸ ರೆಕಾರ್ಡ್

ಈ ಅಪರೂಪದ ಸಾಧನೆಗೈದ ವೈಭವ್, ಕ್ರೊಯೇಷಿಯಾದ ಝಾಕ್ ವುಕೂಸಿಕ್ ಅವರ ಹೆಸರಿನಲ್ಲಿದ್ದ ಹಳೆಯ ದಾಖಲೆಯನ್ನು ಮುರಿದು, ತಮ್ಮದೇ ಹೊಸ ರೆಕಾರ್ಡ್​ ನಿರ್ಮಿಸಿದ್ದಾರೆ. 2025ರ ಆಗಸ್ಟ್ 7ರಂದು ಸೈಪ್ರಸ್ ವಿರುದ್ಧ ಕ್ರೊಯೇಷಿಯಾ ತಂಡವನ್ನು ಮುನ್ನಡೆಸಿದ್ದ ವುಕೂಸಿಕ್, 17 ವರ್ಷ 311 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. ಇದೀಗ 15 ವರ್ಷದ ವೈಭವ್ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬಿಹಾರ ಕ್ರಿಕೆಟ್ ಅಸೋಸಿಯೇಷನ್ ಶುಕ್ರವಾರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಮೊದಲ ಎರಡು ಪಂದ್ಯಗಳಿಗೆ 17 ಆಟಗಾರರ ತಂಡವನ್ನು ಪ್ರಕಟಿಸಿತ್ತು. ವೈಭವ್ ಸೂರ್ಯವಂಶಿ ನಾಯಕನಾಗಿ ಆಯ್ಕೆಯಾಗಿದ್ದು, ಸೂರಜ್ ಕಶ್ಯಪ್ ಉಪನಾಯಕನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಬಿಹಾರದ ಹಿರಿಯರ ತಂಡವನ್ನು ವೈಭವ್ ಮೊದಲ ಬಾರಿಗೆ ಮುನ್ನಡೆಸಿದ್ದು ಎಲ್ಲರ ಗಮನವನ್ನು ಸೆಳೆಯಿತು.

Also Read
ಕ್ಷಣಾರ್ಧದಲ್ಲಿ ಜನರ ಎದುರೇ ಬದಲಾಗುತ್ತೆ ಮುಖದ ಬಣ್ಣ, ಭಾವನೆ! ಚೀನಾದ 300 ವರ್ಷಗಳ ಕಲೆ ಬಗ್ಗೆ ಇಲ್ಲಿದೆ ರೋಚಕ ಮಾಹಿತಿ
 Vaibhav Sooryavanshi

776 ರನ್, ಆರೆಂಜ್​ ಕ್ಯಾಪ್​

ಇದಕ್ಕೂ ಮುನ್ನ ಐಪಿಎಲ್​ 19ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಸ್ಫೋಟಕ ಇನ್ನಿಂಗ್ಸ್ ಆಡಿದ ವೈಭವ್ ಸೂರ್ಯವಂಶಿ, 237.30ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿ, 72 ಸಿಕ್ಸರ್‌ಗಳನ್ನು ಸಿಡಿಸಿ ಒಟ್ಟು 776 ರನ್ ಗಳಿಸುವ ಮೂಲಕ ಟೂರ್ನಿಯ ಗರಿಷ್ಠ ರನ್‌ ಸಾಧಕರಾಗಿ ಹೊರಹೊಮ್ಮಿದ್ದರು. ಈ ಸೀಸನ್​ನಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರರಾದ ಅವರಿಗೆ ಆರೆಂಜ್ ಕ್ಯಾಪ್ ಕೂಡ ಒಲಿಯಿತು. ಜತೆಗೆ ಇತ್ತೀಚೆಗಷ್ಟೇ ಗೆದ್ದ ಬಹುಮಾನದ ರೂಪದಲ್ಲಿ ಟಾಟಾ ಸಿಯಾರಾ ಕಾರು ಕೂಡ ಡೆಲಿವರಿ ಆಯಿತು.

ಕೇವಲ 15ನೇ ವಯಸ್ಸಿನಲ್ಲೇ ವಿಶ್ವ ದಾಖಲೆಗಳನ್ನು ಬರೆಯುತ್ತಿರುವ ವೈಭವ್​ ಸೂರ್ಯವಂಶಿಗೆ ಕೇವಲ ಹೆಸರು, ಹಣ ಮಾತ್ರವಲ್ಲ, ದಿನ ಕಳೆದಂತೆ ಅವರ ಬ್ರ್ಯಾಂಡ್​ ವ್ಯಾಲ್ಯೂ ಕೂಡ ಹೆಚ್ಚಾಗುತ್ತಲೇ ಇದೆ. ಈಗ ಅತ್ಯಂತ ಕಿರಿಯ ವಯಸ್ಸಿನಲ್ಲಿ ಹಿರಿಯ ತಂಡವನ್ನು ನಾಯಕನಾಗಿ ಪ್ರತಿನಿಧಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿರುವ ವಂಡರ್​ ಕಿಡ್​, ಭಾರತೀಯ ಕ್ರಿಕೆಟ್‌ನ ಭವಿಷ್ಯದ ಸ್ಟಾರ್​ ಆಟಗಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ,(ಏಜೆನ್ಸೀಸ್).