ಜಿಂಬಾಬ್ವೆ ಪ್ರವಾಸ, ಏಷ್ಯಾಡ್​ಗೆ ವಿವಿಎಸ್​ ಲಕ್ಷ್ಮಣ್​ ಟೀಮ್​ ಇಂಡಿಯಾ ಮುಖ್ಯ ಕೋಚ್​!

ಜಿಂಬಾಬ್ವೆ ಪ್ರವಾಸ, ಏಷ್ಯಾಡ್​ಗೆ ವಿವಿಎಸ್​ ಲಕ್ಷ್ಮಣ್​ ಟೀಮ್​ ಇಂಡಿಯಾ ಮುಖ್ಯ ಕೋಚ್​!
ಜಿಂಬಾಬ್ವೆ ಪ್ರವಾಸ, ಏಷ್ಯಾಡ್​ಗೆ ವಿವಿಎಸ್​ ಲಕ್ಷ್ಮಣ್​ ಟೀಮ್​ ಇಂಡಿಯಾ ಮುಖ್ಯ ಕೋಚ್​!
Published on
ನವದೆಹಲಿ: ಮುಂಬರುವ ಜಿಂಬಾಬ್ವೆ ಪ್ರವಾಸ ಮತ್ತು ಏಷ್ಯನ್​ ಗೇಮ್ಸ್​ನಲ್ಲಿ ಬಿಸಿಸಿಐ ಶ್ರೇಷ್ಠತಾ ಕೇಂದ್ರದ (ಸಿಒಇ) ಮುಖ್ಯಸ್ಥ ವಿವಿಎಸ್​ ಲಕ್ಷ್ಮಣ್ (V V S Laxman)​​ ಭಾರತ ತಂಡದ ಹಂಗಾಮಿ ಮುಖ್ಯ ಕೋಚ್​ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಬಿಡುವಿಲ್ಲದ ಅಂತಾರಾಷ್ಟ್ರೀಯ ಕ್ರಿಕೆಟ್​ ನಡುವೆ ರಾಷ್ಟ್ರೀಯ ತಂಡದ ಕಾಯಂ ಮುಖ್ಯ ಕೋಚ್​ ಗೌತಮ್​ ಗಂಭೀರ್​ಗೆ ವಿಶ್ರಾಂತಿ ನೀಡಲು ಬಿಸಿಸಿಐ ಬಯಸಿದೆ ಎನ್ನಲಾಗಿದೆ.
ಹಾಲಿ ಇಂಗ್ಲೆಂಡ್​ ಪ್ರವಾಸದ ಏಕದಿನ ಸರಣಿ ಜುಲೈ 19ಕ್ಕೆ ಮುಕ್ತಾಯಗೊಳ್ಳಲಿದ್ದು, ಅದರ ಬೆನ್ನಲ್ಲೇ ಜುಲೈ 23ರಿಂದ ಜಿಂಬಾಬ್ವೆಯಲ್ಲಿ 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇನ್ನು ಏಷ್ಯನ್​ ಗೇಮ್ಸ್​ ಜಪಾನ್​ನಲ್ಲಿ ಸೆಪ್ಟೆಂಬರ್​ 19ರಿಂದ ಅಕ್ಟೋಬರ್​ 4ರವರೆಗೆ ನಡೆಯಲಿದೆ. ಏಷ್ಯಾಡ್​ ಮುಗಿಯುವುದಕ್ಕೆ ಮುನ್ನವೇ ಸೆಪ್ಟೆಂಬರ್​ 27ರಿಂದ ವೆಸ್ಟ್​ ಇಂಡೀಸ್​ ವಿರುದ್ಧದ ಏಕದಿನ ಸರಣಿ ನಡೆಯಲಿದೆ. ಹೀಗಾಗಿ ತರಬೇತಿಯ ಜವಾಬ್ದಾರಿಯನ್ನು ಹಂಚಿಕೆ ಮಾಡುವುದು ಬಿಸಿಸಿಐಗೆ ಅನಿವಾರ್ಯವೂ ಆಗಿದೆ.

ಲಕ್ಷ್ಮಣ್​​ ಜತೆಗೆ ಬೌಲಿಂಗ್​ ಕೋಚ್​ ಆಗಿ ಮಾಜಿ ಸ್ಪಿನ್ನರ್​ ಹಾಗೂ ಕನ್ನಡಿಗ ಸುನೀಲ್​ ಜೋಶಿ, ಬ್ಯಾಟಿಂಗ್​ ಕೋಚ್​ ಆಗಿ ಹೃಷಿಕೇಶ್​ ಕಾನಿಟ್ಕರ್​ ಕಾರ್ಯನಿರ್ವಹಿಸಲಿದ್ದಾರೆ.

ಬಿಸಿಸಿಐ ಈ ರೀತಿ ಸತತ ಕ್ರಿಕೆಟ್​ ಸರಣಿಗಳ ನಡುವೆ ರಾಷ್ಟ್ರೀಯ ತಂಡದ ಕೋಚ್​ಗೆ ವಿಶ್ರಾಂತಿ ನೀಡಿ ಲಕ್ಷ್ಮಣ್​​ಗೆ ಹಂಗಾಮಿ ಜವಾಬ್ದಾರಿ ವಹಿಸುತ್ತಿರುವುದು ಇದು ಮೊದಲಲ್ಲ. ಈ ಹಿಂದೆ ರಾಹುಲ್​ ದ್ರಾವಿಡ್​ ಮುಖ್ಯ ಕೋಚ್​ ಆಗಿದ್ದ ಸಮಯದಲ್ಲೂ ಲಕ್ಷ್ಮಣ್​ ಕೆಲ ಕಿರು ಸರಣಿಗಳಿಗೆ ಹಂಗಾಮಿ ಕೋಚ್​ ಆಗಿದ್ದರು. ಅಲ್ಲದೆ ಕಳೆದ ಏಷ್ಯಾಡ್​ನಲ್ಲಿ ಅವರ ಮಾರ್ಗದರ್ಶನದಲ್ಲೇ ಭಾರತ ತಂಡ ಚಿನ್ನದ ಪದಕ ಗೆದ್ದುಕೊಂಡಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net