ಸ್ಮಿತ್, ವಾರ್ನರ್ ಅಷ್ಟೇ ಅಲ್ಲ.....8 ವರ್ಷದ ಬಳಿಕ ಬಾಲ್ ಟ್ಯಾಂಪರಿಂಗ್ ಸತ್ಯ ಬಿಚ್ಚಿಟ್ಟ ಉಸ್ಮಾನ್ ಖವಾಜಾ | Usman Khawaja

ಸ್ಮಿತ್, ವಾರ್ನರ್ ಅಷ್ಟೇ ಅಲ್ಲ.....8 ವರ್ಷದ ಬಳಿಕ ಬಾಲ್ ಟ್ಯಾಂಪರಿಂಗ್ ಸತ್ಯ ಬಿಚ್ಚಿಟ್ಟ ಉಸ್ಮಾನ್ ಖವಾಜಾ | Usman Khawaja
Published on: 

Usman Khawaja: ಆಸ್ಟ್ರೇಲಿಯಾ ಕ್ರಿಕೆಟ್ ಇತಿಹಾಸಕ್ಕೆ ಕಪ್ಪುಚುಕ್ಕೆಯಾಗಿ ಉಳಿದಿರುವ 2018ರ ದಕ್ಷಿಣ ಆಫ್ರಿಕಾ ಸರಣಿಯ ಬಾಲ್ ಟ್ಯಾಂಪರಿಂಗ್ (ಸ್ಯಾಂಡ್‌ಪೇಪರ್‌ಗೇಟ್) ಪ್ರಕರಣಕ್ಕೆ ಸಂಬಂಧಿಸಿದಂತೆ ಆಸಿಸ್​ ಮಾಜಿ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಹೊಸ ಬಾಂಬ್ ಸಿಡಿಸಿದ್ದಾರೆ. ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ನಡೆದ ಆ ಸ್ಫೋಟಕ ಘಟನೆಗೂ ಮುನ್ನವೇ ಚೆಂಡನ್ನು ವಿರೂಪಗೊಳಿಸಲು ಬಳಸುವ ವಿಚಾರ ತಂಡದಲ್ಲಿದ್ದ ಎಲ್ಲರಿಗೂ ತಿಳಿದಿತ್ತು ಎಂದು ತಮ್ಮ ಆತ್ಮಕಥೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಉಸ್ಮಾನ್ ಖವಾಜಾ ತಮ್ಮ ನೂತನ ಆತ್ಮಕಥೆ ಸಬ್ರ್ (Sabr) ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ನಲ್ಲಿ ಪ್ರಕಟವಾಗಿರುವ ಪುಸ್ತಕದ ಭಾಗಗಳ ಪ್ರಕಾರ, ಪೋರ್ಟ್ ಎಲಿಜಬೆತ್‌ನಲ್ಲಿ (ಪ್ರಸ್ತುತ ಗ್ಕೆಬರ್ಹಾ) ನಡೆದ ಎರಡನೇ ಟೆಸ್ಟ್ ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಮ್‌ನಲ್ಲಿಯೇ ಚೆಂಡಿನ ಸ್ಥಿತಿಯನ್ನು ಬದಲಾಯಿಸುವ ಬಗ್ಗೆ ಮುಕ್ತವಾಗಿ ಚರ್ಚಿಸಲಾಗಿತ್ತು. ಆದ್ದರಿಂದ, ಈ ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ಕೇವಲ ಸ್ವೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಾಮರಾನ್ ಬ್ಯಾನ್‌ಕ್ರಾಫ್ಟ್ ಮೇಲೆ ಹಾಕಿದ್ದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾವೆಲ್ಲರೂ ಜವಾಬ್ದಾರರು!

ಆಸ್ಟ್ರೇಲಿಯಾ ಪರ 88 ಟೆಸ್ಟ್ ಪಂದ್ಯಗಳನ್ನಾಡಿ 6,229 ರನ್ ಗಳಿಸಿರುವ ಖವಾಜಾ, ಈ ಘಟನೆಗೆ ನಾವೆಲ್ಲರೂ ಜವಾಬ್ದಾರರು. ಕೇವಲ ಬ್ಯಾಟರ್‌ಗಳಾಗಲಿ, ಬೌಲರ್‌ಗಳಾಗಲಿ ಅಥವಾ ಸಿಬ್ಬಂದಿಯಾಗಲಿ ಮಾತ್ರವಲ್ಲ, ಇಡೀ ತಂಡವೇ ಅದರಲ್ಲಿ ಭಾಗಿಯಾಗಿತ್ತು ಎಂದಿದ್ದಾರೆ. ಅಂದಿನ ನಾಯಕ ಸ್ಟೀವ್ ಸ್ಮಿತ್ ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನೂ ಖವಾಜಾ ವಿವರಿಸಿದ್ದು, ಆ ಸಮಯದಲ್ಲಿ ಸ್ಮಿತ್ ಕೈಗಳನ್ನು ಮೇಲಕ್ಕೆತ್ತಿ, ತನಗೆ ಈ ವಿಷಯದಲ್ಲಿ ಏನೂ ತಿಳಿಯುವುದು ಬೇಡ ಎಂದು ಹೇಳಿದರು ಎಂದು ಖವಾಜಾ ನೆನಪಿಸಿಕೊಂಡಿದ್ದಾರೆ.

2018ರ ಕೇಪ್ ಟೌನ್ ಟೆಸ್ಟ್ ಪಂದ್ಯದ ವೇಳೆ ಕ್ಯಾಮರಾನ್ ಬ್ಯಾನ್‌ಕ್ರಾಫ್ಟ್ ಸ್ಯಾಂಡ್‌ಪೇಪರ್ ಬಳಸಿ ಚೆಂಡನ್ನು ತಿದ್ದುವುದು ಟಿವಿ ಕ್ಯಾಮೆರಾದಲ್ಲಿ ಸೆರೆಯಾದಾಗ ಈ ವಿವಾದ ಜಗಜ್ಜಾಹೀರಾಗಿತ್ತು. ಘಟನೆಯ ಪರಿಣಾಮದಿಂದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಸ್ಮಿತ್ ಮತ್ತು ವಾರ್ನರ್‌ಗೆ ತಲಾ ಒಂದು ವರ್ಷ ಹಾಗೂ ಬ್ಯಾನ್‌ಕ್ರಾಫ್ಟ್‌ಗೆ 9 ತಿಂಗಳ ನಿಷೇಧ ಹೇರಿತ್ತು.

Also Read
ಟೆಸ್ಟ್ ಕ್ರಿಕೆಟ್‌ಗೆ ಮೊಹಮ್ಮದ್ ಶಮಿ ವಿದಾಯ!: ಸೀಮಿತ ಓವರ್‌ಗಳ ಕ್ರಿಕೆಟ್ ಕುರಿತು ಮಹತ್ವದ ಹೇಳಿಕೆ | Mohammad Shami Retirement
ಸ್ಮಿತ್, ವಾರ್ನರ್ ಅಷ್ಟೇ ಅಲ್ಲ.....8 ವರ್ಷದ ಬಳಿಕ ಬಾಲ್ ಟ್ಯಾಂಪರಿಂಗ್ ಸತ್ಯ ಬಿಚ್ಚಿಟ್ಟ ಉಸ್ಮಾನ್ ಖವಾಜಾ | Usman Khawaja

ಆದರೆ, ಆಸ್ಟ್ರೇಲಿಯಾದ ಪ್ರಮುಖ ಬೌಲಿಂಗ್ ಪಡೆಯಾದ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್‌ವುಡ್ ಮತ್ತು ನಾಥನ್ ಲಿಯಾನ್ ತಮಗೆ ಈ ಸಂಚಿನ ಬಗ್ಗೆ ಯಾವುದೇ ಮುನ್ಸೂಚನೆ ಇರಲಿಲ್ಲ ಎಂದು 2021ರಲ್ಲಿ ಜಂಟಿ ಹೇಳಿಕೆ ನೀಡಿದ್ದರು. ನ್ಯೂಲ್ಯಾಂಡ್ಸ್‌ನ ಬಿಗ್ ಸ್ಕ್ರೀನ್ ಮೇಲೆ ಆ ದೃಶ್ಯಗಳನ್ನು ನೋಡುವವರೆಗೂ ಮೈದಾನಕ್ಕೆ ಯಾವುದೇ ಹೊರಗಿನ ವಸ್ತುವನ್ನು ತರಲಾಗಿದೆ ಎಂಬುದು ತಮಗೆ ತಿಳಿದಿರಲಿಲ್ಲ ಎಂದು ಬೌಲರ್‌ಗಳು ಸಮರ್ಥಿಸಿಕೊಂಡಿದ್ದರು.

8 ವರ್ಷಗಳ ನಂತರವೂ ಸತ್ಯ ಹೊರಬರಲಿಲ್ಲ! ಖವಾಜಾ ಅಸಮಾಧಾನ

ವಿಚಾರಣೆಯ ವೇಳೆ ಕ್ರಿಕೆಟ್ ಆಸ್ಟ್ರೇಲಿಯಾ ತನ್ನನ್ನು ಏಕೆ ಸಂಪರ್ಕಿಸಲಿಲ್ಲ ಎಂದು ಖವಾಜಾ ಪ್ರಶ್ನಿಸಿದ್ದಾರೆ. ಎಂಟು ವರ್ಷಗಳು ಕಳೆದರೂ ಯಾರೂ ಮುಕ್ತವಾಗಿ ಸತ್ಯವನ್ನು ಒಪ್ಪಿಕೊಳ್ಳದ ಕಾರಣ ತಾವು ಈ ವಿಷಯವನ್ನು ಬಹಿರಂಗಪಡಿಸುತ್ತಿರುವುದಾಗಿ ಹೇಳಿದ್ದಾರೆ.

ಆದರ್ಶ ಲೋಕದಲ್ಲಿ ನಾನಿದನ್ನು ಮಾಡಲು ಬಯಸುವುದಿಲ್ಲ. ಸತ್ಯವನ್ನು ಮಾತನಾಡುವವನಾಗಿ ಹೊರಬರಲು ನನಗೂ ಇಷ್ಟವಿರಲಿಲ್ಲ. ಆದರೆ, 8 ವರ್ಷಗಳ ನಂತರವಾದರೂ ಸತ್ಯ ಹೊರಬರುತ್ತದೆ ಎಂದು ಭಾವಿಸಿದ್ದೆ ಎಂದು ಖವಾಜಾ ಖೇದ ವ್ಯಕ್ತಪಡಿಸಿದ್ದಾರೆ. ಪಂದ್ಯ ಮುಗಿದ ತಕ್ಷಣ, ಮೂವರನ್ನು ಮಾತ್ರ ಬಲಿಪಶು ಮಾಡುವ ಬದಲು ತಂಡವಾಗಿ ಎಲ್ಲರೂ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಸಹಪಾಠಿಗಳಿಗೆ ಮನವಿ ಮಾಡಿದ್ದಾಗಿಯೂ ಅವರು ನೆನಪಿಸಿಕೊಂಡಿದ್ದಾರೆ.

ಪ್ರಸ್ತುತ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್, ಖವಾಜಾ ತಮ್ಮ ಪುಸ್ತಕದ ಬಗ್ಗೆ ತಮಗೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದರು ಎಂದು ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಈಗಾಗಲೇ ಸಂಪೂರ್ಣ ವಿಚಾರಣೆಗಳು ಮುಗಿದಿರುವುದರಿಂದ ಖವಾಜಾ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳಲು ತಮ್ಮದೇನೂ ಅಭ್ಯಂತರವಿಲ್ಲ ಎಂದು ಕಮ್ಮಿನ್ಸ್ ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ, ಖವಾಜಾ ಅವರ ಈ ಸ್ಫೋಟಕ ಬಹಿರಂಗವು ಆಸೀಸ್ ಕ್ರಿಕೆಟ್ ಅಂಗಳದಲ್ಲಿ ಮತ್ತೊಮ್ಮೆ ಸಂಚಲನ ಮೂಡಿಸಿದ(ಏಜೆನ್ಸೀಸ್​).