ಅಂಡರ್​ 19 ಏಷ್ಯಾಕಪ್​: ಪಾಕ್​ ಸಂಭ್ರಮಾಚರಣೆ ವೇಳೆ ಭಾರತ ವಿರೋಧಿ ಘೋಷಣೆ! U19 Asia Cup 2025

ಅಂಡರ್​ 19 ಏಷ್ಯಾಕಪ್​ ಗೆದ್ದಿದ್ದಕ್ಕೆ ಪಾಕಿಸ್ತಾನದಲ್ಲಿ​ ಸಂಭ್ರಮಾಚರಣೆ
ಅಂಡರ್​ 19 ಏಷ್ಯಾಕಪ್​ ಗೆದ್ದಿದ್ದಕ್ಕೆ ಪಾಕಿಸ್ತಾನದಲ್ಲಿ​ ಸಂಭ್ರಮಾಚರಣೆ
Published on

ಪ್ರಮುಖ ಮುಖ್ಯಾಂಶಗಳು

  • ಹತ್ತೊಂಬತ್ತು ವರ್ಷದೊಳಗಿನವರ ಏಷ್ಯಾ ಕಪ್-2025 ಟೂರ್ನಮೆಂಟ್​ನಲ್ಲಿ ಪಾಕಿಸ್ತಾನ ಗೆಲುವು
  • ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸೋಲು
  • ಅಂಡರ್-19 ಏಷ್ಯಾ ಕಪ್ ಟೂರ್ನಮೆಂಟ್ ಗೆದ್ದಿದ್ದಕ್ಕೆ ಪಾಕಿಸ್ತಾನದಲ್ಲಿ ಸಂಭ್ರಮಾಚರಣೆ
  • ಸಂಭ್ರಮಾಚರಣೆ ಸಮಯದಲ್ಲಿ​ ಭಾರತ ವಿರೋಧಿ ಘೋಷಣೆಗಳನ್ನು ಕೂಗಲಾಗಿದೆ ಎಂದು ವರದಿ
ನವದೆಹಲಿ: ಹತ್ತೊಂಬತ್ತು ವರ್ಷದೊಳಗಿನವರ ಏಷ್ಯಾ ಕಪ್-2025 ಟೂರ್ನಮೆಂಟ್​ನಲ್ಲಿ ( U19 Asia Cup 2025 ) ಪಾಕಿಸ್ತಾನ ಗೆಲುವು ಸಾಧಿಸಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ. ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ಭಾನುವಾರ (ಡಿ.21) ನಡೆದ ಫೈನಲ್​ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ ಮತ್ತು ಟೀಮ್ ಇಂಡಿಯಾ ಸೆಣಸಾಡಿತು. 50 ಓವರ್‌ಗಳ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಪಾಕಿಸ್ತಾನ ಗೆಲುವು ಸಾಧಿಸಿತು.
ಪಾಕ್​ ತಂಡವು ಟೀಮ್ ಇಂಡಿಯಾ ವಿರುದ್ಧ 191 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ, ಪಾಕಿಸ್ತಾನ ಮೊದಲ ಬಾರಿಗೆ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಹಿಂದೆ ಭಾರತ ಮತ್ತು ಪಾಕಿಸ್ತಾನ ಎರಡೂ ಒಮ್ಮೆ ಪ್ರಶಸ್ತಿಯನ್ನು ಹಂಚಿಕೊಂಡಿದ್ದವು. ಈಗ, ಪಾಕಿಸ್ತಾನ ಚಾಂಪಿಯನ್ ಆಗಿದೆ.
ಪಾಕಿಸ್ತಾನ ಅಂಡರ್-19 ಏಷ್ಯಾ ಕಪ್ ಟೂರ್ನಮೆಂಟ್ ಗೆದ್ದ ನಂತರ ಪಾಕಿಸ್ತಾನದಲ್ಲಿ ಸಂಭ್ರಮಾಚರಣೆಗಳು ವೇಗ ಪಡೆದುಕೊಂಡಿವೆ. ಇಸ್ಲಾಮಾಬಾದ್‌ನಲ್ಲಿ ಮಧ್ಯರಾತ್ರಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಪಾಕಿಸ್ತಾನದಲ್ಲಿ ತಡರಾತ್ರಿ 2 ಗಂಟೆಯವರೆಗೆ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ, ಪಾಕಿಸ್ತಾನ ಅಂಡರ್-19 ಕ್ರಿಕೆಟಿಗರನ್ನು ನೋಡಲು ಸಾಕಷ್ಟು ಜನರು ಸೇರಿದ್ದರು.
ಸಂಭ್ರಮಾಚರಣೆ ಸಮಯದಲ್ಲಿ​ ಭಾರತದ ವಿರುದ್ಧ ಘೋಷಣೆಗಳನ್ನು ಕೂಗಲಾಗಿದೆ ಎಂದು ವರದಿಯಾಗಿದೆ. ದಾರಿಯುದ್ದಕ್ಕೂ ಭಾರತ ವಿರೋಧಿಗಳನ್ನು ಕೂಗಿ, ತಮ್ಮ ಕ್ರಿಕೆಟಿಗರ ಪರ ಪಾಕ್​ ಮಂದಿ ಜಯಘೋಷ ಮೊಳಗಿಸಿದ್ದಾರೆ. ಇದರ ನಡುವೆ ಪಾಕಿಸ್ತಾನದ ಸಂಭ್ರಮಾಚರಣೆಯ ಸಾಮಾಜಿಕ ಜಾಲತಾಣದಲ್ಲೂ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಪಾಕ್​ಗೆ ಸಿಗುವ ಬಹುಮಾನದ ಮೊತ್ತವೆಷ್ಟು?
19 ವರ್ಷದೊಳಗಿನವರ ಏಷ್ಯಾ ಕಪ್ 2025 ಟೂರ್ನಮೆಂಟ್ ಗೆದ್ದ ಪಾಕಿಸ್ತಾನಕ್ಕೆ ಭಾರಿ ಬಹುಮಾನದ ಹಣ ಸಿಕ್ಕಿದೆ. ಪಾಕಿಸ್ತಾನ ಅಂಡರ್ 19 ತಂಡವು ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನಿಂದ 15 ಸಾವಿರ ಡಾಲರ್‌ಗಳನ್ನು ಪಡೆದಿದೆ. ಅಂದರೆ, ಪಾಕಿಸ್ತಾನಿ ರೂಪಾಯಿಗಳಲ್ಲಿ 42 ಲಕ್ಷಗಳನ್ನು ಪಡೆದಿದೆ. ರನ್ನರ್ ಅಪ್ ಟೀಮ್ ಇಂಡಿಯಾಕ್ಕೆ 7500 ಡಾಲರ್ ಬಹುಮಾನದ ಹಣ ನೀಡಲಾಯಿತು.
ಇನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಏಷ್ಯಾ ಕಪ್ 2025 ಟೂರ್ನಮೆಂಟ್ ಗೆದ್ದ ಅಂಡರ್ 19 ಪಾಕಿಸ್ತಾನ ತಂಡದ ಪ್ರತಿಯೊಬ್ಬ ಆಟಗಾರನಿಗೆ ವಿಶೇಷ ಬಹುಮಾನದ ಹಣವನ್ನು ನೀಡಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಪ್ರತಿ ಆಟಗಾರನಿಗೆ 50 ಲಕ್ಷ ಪಾಕಿಸ್ತಾನಿ ರೂಪಾಯಿಗಳನ್ನು ಬಹುಮಾನವಾಗಿ ನೀಡುವುದಾಗಿ ಘೋಷಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net