ಒಂದೇ ದಿನ ನಾಲ್ವರಿಗೆ ಆರೆಂಜ್ ಕ್ಯಾಪ್​! ಐಪಿಎಲ್​ ಇತಿಹಾಸದಲ್ಲೇ ಹಿಂದೆಂದೂ ನಡೆಯದ ಅಪರೂಪದ ಘಟನೆಯಿದು​

ಐಪಿಎಲ್​ ಆರೆಂಜ್​ ಕ್ಯಾಪ್​
ಐಪಿಎಲ್​ ಆರೆಂಜ್​ ಕ್ಯಾಪ್​
Published on

ಪ್ರಮುಖ ಮುಖ್ಯಾಂಶಗಳು

  • ಶನಿವಾರ (ಏ.25) ನಡೆದ ಐಪಿಎಲ್​ ಪಂದ್ಯಗಳಲ್ಲಿ ನಾಲ್ವರ ಪಾಲಾದ ಆರೆಂಜ್ ಕ್ಯಾಪ್
  • ಐಪಿಎಲ್ ಇತಿಹಾಸದಲ್ಲೇ ಇದು ಮೊದಲು
  • ಆರೆಂಜ್​ ಕ್ಯಾಪ್​ ಬದಲಿಸಿಕೊಂಡ ಆ ನಾಲ್ಕು ಬ್ಯಾಟರ್​ಗಳು ಯಾರು?
IPL 2026: ನಿನ್ನೆ (ಏ.25) ನಡೆದ ಎರಡು 19ನೇ ಆವೃತ್ತಿಯ ಐಪಿಎಲ್​ ಪಂದ್ಯಗಳು ಕ್ರಿಕೆಟ್​ ಅಭಿಮಾನಿಗಳಿಗೆ ಡಬಲ್​ ಮನರಂಜನೆ ನೀಡಿತು. ಮೊದಲ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್​ ಪರ ಕೆ.ಎಲ್. ರಾಹುಲ್ ಅವರ ವಿನಾಶಕಾರಿ ಬ್ಯಾಟಿಂಗ್ (ಅಜೇಯ 152 ರನ್​, 67 ಎಸೆತಗಳಲ್ಲಿ 16 ಬೌಂಡರಿ ಮತ್ತು 9 ಸಿಕ್ಸರ್) ತಂಡದ ಮೊತ್ತವನ್ನು 264 ರನ್ ಗಳಿಸಲು ಸಹಾಯ ಮಾಡಿತು. ಆದರೆ, ಈ ಬೃಹತ್​ ಗುರಿಯನ್ನು 7 ಬಾಲ್​ ಬಾಕಿ ಇರುವಂತೆ ಪುಡಿಗಟ್ಟಿದ ಪಂಜಾಬ್ ಕಿಂಗ್ಸ್, 4 ವಿಕೆಟ್‌ಗಳ ನಷ್ಟಕ್ಕೆ ರೋಚಕ ಗೆಲುವು ಸಾಧಿಸಿತು. 
ಇನ್ನು ಎರಡನೇ ಪಂದ್ಯದಲ್ಲಿ, ರಾಜಸ್ಥಾನ ರಾಯಲ್ಸ್ ಪರ ವೈಭವ್ ಸೂರ್ಯವಂಶಿ (103 ರನ್​, 37 ಎಸೆತ, 5 ಬೌಂಡರಿ, 12 ಸಿಕ್ಸರ್‌ಗಳು) ಶತಕದಾಟ ತೋರಿದರು. ಇಷ್ಟಾದರೂ ತಂಡ ಕಲೆಹಾಕಿದ 228 ರನ್‌ಗಳ ಗುರಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಶಾನ್ ಕಿಶನ್ (74 ರನ್​, 31 ಎಸೆತ, 11 ಬೌಂಡರಿ, 3 ಸಿಕ್ಸರ್‌) ಮತ್ತು ಅಭಿಷೇಕ್ ಶರ್ಮಾ (57 ರನ್​, 29 ಎಸೆತ, 11 ಬೌಂಡರಿ, 1 ಸಿಕ್ಸರ್‌) ಅರ್ಧಶತಕದಿಂದ ಸನ್‌ರೈಸರ್ಸ್ 18.3 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 229 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಿತು.

ಹಿಂದೆಂದೂ ನಡೆದಿಲ್ಲ...

ಎರಡು ಪಂದ್ಯಗಳಲ್ಲಿ ರನ್​ಗಳ ಹೊಳೆಯೇ ಹರಿದುಬಂದಿದ್ದು, ಕ್ರಿಕೆಟ್​ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಕ್ಕಿತು. ಇದೇ ದಿನ, ಐಪಿಎಲ್​ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಒಂದು ಅಪರೂಪದ ಘಟನೆ ನಡೆದಿದ್ದು, ಮೈದಾನದಲ್ಲಿದ್ದ ಕ್ರಿಕೆಟ್​ ಪ್ರಿಯರನ್ನು ಕೆಲ ಸಮಯ ತೀವ್ರ ಗೊಂದಲಕ್ಕೆ ದೂಡಿತು. ಇದಕ್ಕೆ ಕಾರಣ, ಅದು ಹೇಗೆ? ಒಂದೇ ದಿನದಲ್ಲಿ ನಾಲ್ಕು ಬಾರಿ ಅತ್ಯಧಿಕ ರನ್​ ಗಳಿಸಿದವರಿಗೆ ನೀಡಲಾಗುವ  ಆರೆಂಜ್ ಕ್ಯಾಪ್ ಬದಲಾಯಿತು ಎಂದು. 
ಈ ಪಂದ್ಯಗಳಿಗೂ ಮುನ್ನ ಆರ್​ಸಿಬಿಯ ಸ್ಟಾರ್​ ಬ್ಯಾಟರ್​ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಹೊಂದಿದ್ದರು. ಶನಿವಾರದ ಮೊದಲ ಪಂದ್ಯದಲ್ಲಿ ಕೆ.ಎಲ್. ರಾಹುಲ್​ ಅವರಿಂದ ಬಂದ ಅದ್ಭುತ ಪ್ರದರ್ಶನದಿಂದ ಹೆಚ್ಚುವರಿ ರನ್​ಗಳು ಅವರ ಪಾಲಾಯಿತು. ಹೀಗಾಗಿ, ಆರೆಂಜ್ ಕ್ಯಾಪ್ ಅವರಿಗೆ ಹಸ್ತಾಂತರವಾಯಿತು. ಎರಡನೇ ಪಂದ್ಯದಲ್ಲಿ ಆರ್​ಆರ್​ ಪರ ವೈಭವ್ ಸೂರ್ಯವಂಶಿ ಸ್ಫೋಟಕ ಶತಕ ಸಿಡಿಸಿದರು. ರಾಹುಲ್​ ಬಳಿಯಿದ್ದ ಆರೆಂಜ್​ ಕ್ಯಾಪ್ ನೇರವಾಗಿ ಬೇಬಿ ಬಾಸ್​ ಮುಡಿಗೇರಿತು.
ಶತಕ ಬಾರಿಸಿದರೂ ವೈಭವ್ ಅವರ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. ಸನ್​ರೈಸರ್ಸ್​ ಪರ ಅಭಿಷೇಕ್ ಶರ್ಮಾ ಅಬ್ಬರದ ಬ್ಯಾಟಿಂಗ್​ ಮಾಡಿ, 57 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು. 24 ಗಂಟೆಯೊಳಗೆ ನಾಲ್ವರು ಆಟಗಾರರಿಗೆ ಅತ್ಯಧಿಕ ರನ್​ ಗಳಿಸಿದ್ದಕ್ಕಾಗಿ ಆರೆಂಜ್​ ಕ್ಯಾಪ್​ ಬದಲಾಗಿದ್ದು, ಐಪಿಎಲ್​ ಇತಿಹಾಸದಲ್ಲಿಯೇ ಮೊದಲು. 

ಈ ಸೀಸನ್​ನಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ರನ್ ಗಳಿಸಿದ ಅಗ್ರ 5 ಬ್ಯಾಟರ್​ಗಳಿವರು

1. ಅಭಿಷೇಕ್ ಶರ್ಮಾ - 8 ಪಂದ್ಯ, 380 ರನ್​
2. ವೈಭವ್ ಸೂರ್ಯವಂಶಿ - 8 ಪಂದ್ಯ, 357 ರನ್​
3. ಕೆ.ಎಲ್. ರಾಹುಲ್ - 7 ಪಂದ್ಯ, 357 ರನ್​
4. ಹೆನ್ರಿಚ್​ ಕ್ಲಾಸೆನ್ - 8 ಪಂದ್ಯ. 349 ರನ್​
5. ವಿರಾಟ್ ಕೊಹ್ಲಿ - 7 ಪಂದ್ಯ, 328 ರನ್​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net