75 ಲಕ್ಷ, 28 ಕೋಟಿ ರೂ.! ಚೆನ್ನೈ ಸೂಪರ್​ ಕಿಂಗ್ಸ್​ ಅತಿ ದಡ್ಡ ಫ್ರಾಂಚೈಸಿ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? | CSK

ಸಿಎಸ್​ಕೆ ಆಟಗಾರರು
ಸಿಎಸ್​ಕೆ ಆಟಗಾರರು
Published on

ಪ್ರಮುಖ ಮುಖ್ಯಾಂಶಗಳು

  • ಆಡಿರುವ ಮೂರು ಪಂದ್ಯದಲ್ಲಿಯೂ ಹೀನಾಯ ಸೋಲು
  • ಹರಾಜಿನಲ್ಲಿ ಯಾರನ್ನು, ಎಷ್ಟು ಹಣಕ್ಕೆ ಖರೀದಿ ಮಾಡಬೇಕು ಅನ್ನೋ ಲೆಕ್ಕಾಚಾರ ಗೊತ್ತಿಲ್ಲ
  • 75 ಲಕ್ಷ ರೂ. ಕೊಟ್ಟ ಆಟಗಾರನಿಂದ ಬರುತ್ತಿರುವ ಇನ್ನಿಂಗ್ಸ್​, ಇತರರಿಂದ ಇಲ್ಲ
CSK: ನಿನ್ನೆ (ಏ.05) ಬೆಂಗಳೂರಿನ ಎಂ.ಚಿನ್ನಸ್ವಾಮಿಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ 19ನೇ ಆವೃತ್ತಿಯ 11ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಎದುರು ಚೆನ್ನೈ ಸೂಪರ್ ಕಿಂಗ್ಸ್ ಹೀನಾಯ ಸೋಲುಂಡಿತು. 43 ರನ್​ಗಳಿಂದ ಸೋತ ಸಿಎಸ್​ಕೆಗೆ ಬೌಲರ್​ಗಳು ಮತ್ತು ಬ್ಯಾಟರ್​ಗಳ ಬೇಜವಾಬ್ದಾರಿ ಆಟವೇ ಕ್ರಿಕೆಟ್​ ಅಭಿಮಾನಿಗಳ ಟೀಕೆ, ಆಕ್ರೋಶಕ್ಕೆ ಕಾರಣವಾಯಿತು.
ಆರ್​ಸಿಬಿ ಬ್ಯಾಟರ್​ಗಳು ಹಿಗ್ಗಾಮುಗ್ಗಾ ಸಿಕ್ಸರ್​ಗಳನ್ನು ಬಾರಿಸಲು ಬಿಟ್ಟ ಸಿಎಸ್​ಕೆ ಬೌಲರ್​ಗಳು, ಕೇವಲ 3 ವಿಕೆಟ್​ ಪಡೆಯಲಷ್ಟೇ ಸಫಲರಾದರು. ಇನ್ನು ಬೆಂಗಳೂರು ಪಡೆ ನೀಡಿದ 251 ರನ್​ಗಳ ಬೃಹತ್ ರನ್​ಗಳ ಗುರಿಯನ್ನು ಬೆನ್ನತ್ತಿದ ಸಿಎಸ್​ಕೆಗೆ ಎಂದಿನಂತೆ ಬ್ಯಾಟರ್​ಗಳಿಂದ ಅದೇ ಕಳಪೆ ಪ್ರದರ್ಶನ ಮುಂದುವರಿಯಿತು. ಆರಂಭಿಕರಾದ ಸಂಜು ಸ್ಯಾಮ್ಸನ್ ಮತ್ತು ನಾಯಕ ರುತುರಾಜ್ ಗಾಯಕ್ವಾಡ್​ ಕೇವಲ ಒಂದಂಕಿಗೆ ಪೆವಿಲಿಯನ್​ನತ್ತ ಮುಖಮಾಡಿದ್ದು, ಅಭಿಮಾನಿಗಳ ಭರವಸೆಯನ್ನು ಕುಸಿಯುವಂತೆ ಮಾಡಿತು.  
ಪವರ್​ಪ್ಲೇನಲ್ಲೇ ಮೂರ್ನಾಲ್ಕು ವಿಕೆಟ್​ಗಳನ್ನು ಕಳೆದುಕೊಂಡು ಪರದಾಡಿದ ಚೆನ್ನೈ ಪಡೆಗೆ ಬೆನ್ನೆಲುಬಾಗಿ ನಿಂತಿದ್ದು 75 ಲಕ್ಷ ರೂ.ಗೆ ಖರೀದಿಸಿದ ಸರ್ಫರಾಜ್ ಖಾನ್​. ಸತತ ಮೂರು ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿರುವ ಸಿಎಸ್​ಕೆಗೆ ಸರ್ಫರಾಜ್​ ಒಬ್ಬರೇ, ಸತತವಾಗಿ ಹೆಚ್ಚು ರನ್​ಗಳ ಕೊಡುಗೆ ನೀಡಿರುವುದು ಎಂಬುದು ಇಲ್ಲಿ ಗಮನಾರ್ಹ. ತಂಡದ ಬ್ಯಾಟಿಂಗ್ ಲೈನ್​ಅಪ್​ಗೆ ದೊಡ್ಡ ಶಕ್ತಿ ಆಗಿರುವುದು ಮಿಡಲ್ ಆರ್ಡರ್​ನ ಸರ್ಫರಾಜ್​ ಖಾನ್​. ಅಲ್ಲಿಗೆ ಫ್ರಾಂಚೈಸಿ ಮಾಡಿದ ಎಡವಟ್ಟು ಈಗ ಹಲವರಿಗೆ ಸ್ಪಷ್ಟವಾಗಿ ತಿಳಿಯುತ್ತಿದೆ. 28 ಕೋಟಿ ರೂ. ಕೊಟ್ಟು ಇಬ್ಬರನ್ನು ಖರೀದಿಸಿದ ಸಿಎಸ್​ಕೆಗೆ, 75 ಲಕ್ಷ ರೂ. ಆಟಗಾರನಿಂದ ಬರುತ್ತಿರುವ ಪ್ರದರ್ಶನವನ್ನು ಉಳಿದ ಇಬ್ಬರಿಂದ ತೆಗೆಸುವುದು ಕಷ್ಟಸಾಧ್ಯವಾಗಿದೆ. 
ಆಡಿರುವ ಮೂರು ಪಂದ್ಯಗಳಲ್ಲಿ ಸರ್ಫರಾಜ್​ ಖಾನ್​, 99 ರನ್​ಗಳನ್ನು ತಮ್ಮ ತೆಕ್ಕೆಗೆ ಸೇರಿಸಿಕೊಂಡಿದ್ದಾರೆ. ಅಲ್ಲಿಗೆ, ತಂಡದ ಪರ ಅತಿ ಹೆಚ್ಚು ರನ್​ ಗಳಿಸಿರುವ ಬ್ಯಾಟರ್​ ಆಗಿದ್ದಾರೆ. ಭಾರತೀಯ ಟೆಸ್ಟ್​ ಕ್ರಿಕೆಟ್​ ಹಾಗೂ ದೇಶಿಯ ಕ್ರಿಕೆಟ್​ನಲ್ಲಿ ತನ್ನ ಪ್ರತಿಭೆಯನ್ನು ಈಗಾಗಲೇ ಸಾಬೀತುಪಡಿಸಿರುವ ಸರ್ಫರಾಜ್​ಗೆ ಕೇವಲ 75 ಲಕ್ಷ ರೂ. ಕೊಟ್ಟು ಖರೀದಿ ಮಾಡಿರುವ ಸಿಎಸ್​ಕೆ, ಅದೇ ಪ್ರಶಾಂತ್ ವೀರ್​ ಮತ್ತು ಕಾರ್ತಿಕ್ ಶರ್ಮಗೆ ಬರೋಬ್ಬರಿ 24.2 ಕೋಟಿ ರೂ. ನೀಡಿ ಖರೀದಿಸಿದೆ. ಇಲ್ಲೇ ಆಗಿರೋದು ದೊಡ್ಡ ಎಡವಟ್ಟು. 
14.20+ 14 ಕೋಟಿ ರೂ. ಕೊಟ್ಟು ಈ ಇಬ್ಬರನ್ನು ಕರೆದುಕೊಂಡಿರುವ ಚೆನ್ನೈ ಸೂಪರ್​ ಕಿಂಗ್ಸ್​, ಯಾವ ಲೆಕ್ಕಾಚಾರದಲ್ಲಿ ಇಷ್ಟೊಂದು ಹಣವನ್ನು ನೀಡಿ, ಅವರನ್ನು ಆಯ್ಕೆ ಮಾಡಿಕೊಂಡಿತು ಎಂಬ ಪ್ರಶ್ನೆ ಸದ್ಯ ಫ್ರಾಂಚೈಸಿ ಹಾಗೂ ಕ್ರಿಕೆಟ್​ ಅಭಿಮಾನಿಗಳಲ್ಲಿ ಮೂಡಿದೆ. ಇಷ್ಟು ದುಬಾರಿ ಹಣವನ್ನು ಕೊಟ್ಟಿರುವ ಸಿಎಸ್​ಕೆ, ಪ್ರಶಾಂತ್​ ವೀರ್​ ಅವರಿಂದ ಇಲ್ಲಿಯವರೆಗೆ ಒಂದೇ ಒಂದು ಓವರ್​ ಕೂಡ ಬೌಲಿಂಗ್ ಮಾಡಿಸಿಲ್ಲ ಎಂಬುದು ಗಮನಿಸಬೇಕಾದ ವಿಷಯ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net