ಟೆಸ್ಟ್​, ಟಿ20, ಏಕದಿನ... 2025ರಲ್ಲಿ ಟೀಮ್ ಇಂಡಿಯಾ ಅತ್ಯುತ್ತಮ ಪ್ರದರ್ಶನ! ಹೀಗಿವೆ ಗೆದ್ದ ಪಂದ್ಯಗಳ ಸಂಖ್ಯೆ

ಪುರುಷರ ಭಾರತ ತಂಡ
ಪುರುಷರ ಭಾರತ ತಂಡ
Published on

ಪ್ರಮುಖ ಮುಖ್ಯಾಂಶಗಳು

  • 2025ರಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ
  • ಮೂರು ಸ್ವರೂಪಗಳಲ್ಲಿಯೂ ಹೆಚ್ಚಿನ ಜಯ ಗಳಿಸಿದ ತಂಡ
  • ರೋಹಿತ್ ಶರ್ಮ ನಾಯಕತ್ವದಲ್ಲಿ ಹಲವು ಪಂದ್ಯಗಳಲ್ಲಿ ಜಯ
ನವದೆಹಲಿ: 2025ರ ವರ್ಷದ ಕೊನೆಗೆ ಇನ್ನೊಂದೇ ದಿನ ಬಾಕಿ. ಈ ವರ್ಷದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಸ್ಮರಣೀಯ ಎಂದೇ ಹೇಳಬಹುದು. ಕಾರಣ, ಆಡಿದ ಮೂರು ಸ್ವರೂಪಗಳಲ್ಲಿ (ಟೆಸ್ಟ್, ಏಕದಿನ ಮತ್ತು ಟಿ20) ಸ್ಥಿರ ಪ್ರದರ್ಶನ ನೀಡಿದೆ. ವಿಶೇಷವಾಗಿ, ಐಸಿಸಿ ಟೂರ್ನಿಯ ಟ್ರೋಫಿಗಳನ್ನು ಗೆಲ್ಲುವ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಪ್ರಾಬಲ್ಯವನ್ನು ಭಾರತ ತಂಡ ತೋರಿದೆ. ಇದೊಂದೇ ವರುಷದಲ್ಲಿ ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯಾ ಕಪ್ ಟೀಮ್ ಇಂಡಿಯಾ ತೆಕ್ಕೆಗೆ ಸೇರಿವೆ.

ಟೆಸ್ಟ್ ಕ್ರಿಕೆಟ್‌

ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಒಟ್ಟು 10 ಪಂದ್ಯಗಳನ್ನಾಡಿದ್ದು, ಅವುಗಳಲ್ಲಿ 4 ಪಂದ್ಯಗಳು ಗೆದ್ದು, ಐದರಲ್ಲಿ ಸೋಲುಂಡಿತು. ಒಂದು ಮಾತ್ರ ಡ್ರಾದಲ್ಲಿ ಅಂತ್ಯಗೊಂಡಿತು. ಟೆಸ್ಟ್‌ನಲ್ಲಿ ಕೆಲವು ಕಠಿಣ ಪರಿಸ್ಥಿತಿಗಳ ಹೊರತಾಗಿಯೂ, ಯುವ ಆಟಗಾರರ ಜತೆಗೆ ಅನುಭವಿ ಆಟಗಾರರ ಪ್ರದರ್ಶನವು ಕ್ರಿಕೆಟ್​ ಪ್ರಿಯರ ಗಮನ ಸೆಳೆಯಿತು.

ಏಕದಿನ ಕ್ರಿಕೆಟ್​

ಭಾರತ ಏಕದಿನ ಕ್ರಿಕೆಟ್‌ನಲ್ಲಿ ತನ್ನ ಅತ್ಯುತ್ತಮ ಫಾರ್ಮ್ ಮುಂದುವರಿಸಿದ್ದು ಗಮನಾರ್ಹ. 2025ರಲ್ಲಿ ಟೀಮ್ ಇಂಡಿಯಾ ಒಟ್ಟು 14 ಏಕದಿನ ಪಂದ್ಯಗಳನ್ನಾಡಿದೆ. ಅವುಗಳಲ್ಲಿ 11 ಪಂದ್ಯಗಳನ್ನು ಗೆದ್ದು, 3ರಲ್ಲಿ ಸೋಲುಂಡಿದೆ. ರೋಹಿತ್ ಶರ್ಮ ನಾಯಕತ್ವದಲ್ಲಿ, ಮೊದಲ 8 ಮ್ಯಾಚ್​ಗಳಲ್ಲಿ ಒಂದೇ ಒಂದು ಸೋಲು ಕೂಡ ಭಾರತ ನೋಡಲಿಲ್ಲ. ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲುವ ಮೂಲಕ ದೇಶಕ್ಕೆ ಮತ್ತೊಂದು ಕೊಡುಗೆಯನ್ನು ನೀಡಿತು.

ಟಿ20 ಕ್ರಿಕೆಟ್​

ಈ ವರ್ಷ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡ ಸಂಪೂರ್ಣ ಪ್ರಾಬಲ್ಯವನ್ನು ತೋರಿಸಿದೆ. ಆಡಿದ ಒಟ್ಟು 22 ಪಂದ್ಯಗಳ ಪೈಕಿ 14 ಪಂದ್ಯಗಳಲ್ಲಿ ಗೆಲುವು, 3ರಲ್ಲಿ ಸೋಲುಂಡಿತು. ಇನ್ನು 3 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿತು. 2025ರಲ್ಲಿ ಟೀಮ್ ಇಂಡಿಯಾ ಒಂದೇ ಒಂದು ಟಿ20 ಸರಣಿಯನ್ನು ಸೋತಿಲ್ಲ ಎಂಬುದು ನಿಜಕ್ಕೂ ಗಮನಾರ್ಹ. ಇದಲ್ಲದೆ, ಏಷ್ಯಾಕಪ್ ಗೆಲ್ಲುವ ಮೂಲಕ ಟಿ20 ಸ್ವರೂಪದಲ್ಲಿ ಮತ್ತೊಮ್ಮೆ ತನ್ನ ಪ್ರಾಬಲ್ಯವನ್ನು ತೋರಿಸಿದೆ.
ಒಟ್ಟಾರೆಯಾಗಿ, ಈ ವರ್ಷ ಟೀಮ್ ಇಂಡಿಯಾ ಮೂರು ಫಾರ್ಮೆಟ್​ಗಳಲ್ಲಿ ಉತ್ತಮ ಪ್ರದರ್ಶನ ಮತ್ತು ಪ್ರತಿಷ್ಠಿತ ಟ್ರೋಫಿಗಳನ್ನು ಎತ್ತಿಹಿಡಿಯುವ ಮೂಲಕ ಅಭಿಮಾನಿಗಳ ಹೃದಯವನ್ನು ಗೆದ್ದಿದೆ. ಬಹುತೇಕ ಗೆಲುವುಗಳು ರೋಹಿತ್ ಶರ್ಮ ನಾಯಕತ್ವದಲ್ಲಿ ಒಲಿದಿರುವುದು 'ಹಿಟ್​ಮ್ಯಾನ್'​ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net