ಕೊಹ್ಲಿಗೆ ಸವಾಲು ಹಾಕಬಲ್ಲ ಆಟಗಾರ ಯಾರಾದ್ರೂ ಇದ್ದರೆ ಅದು ಈತ ಮಾತ್ರ... ಇರ್ಫಾನ್​ ಪಠಾಣ್​ ಅಚ್ಚರಿ ಹೇಳಿಕೆ! Virat Kohli

ಕೊಹ್ಲಿಗೆ ಸವಾಲು ಹಾಕಬಲ್ಲ ಆಟಗಾರ ಯಾರಾದ್ರೂ ಇದ್ದರೆ ಅದು ಈತ ಮಾತ್ರ... ಇರ್ಫಾನ್​ ಪಠಾಣ್​ ಅಚ್ಚರಿ ಹೇಳಿಕೆ! Virat Kohli
ಕೊಹ್ಲಿಗೆ ಸವಾಲು ಹಾಕಬಲ್ಲ ಆಟಗಾರ ಯಾರಾದ್ರೂ ಇದ್ದರೆ ಅದು ಈತ ಮಾತ್ರ... ಇರ್ಫಾನ್​ ಪಠಾಣ್​ ಅಚ್ಚರಿ ಹೇಳಿಕೆ! Virat Kohli
Published on

ಪ್ರಮುಖ ಮುಖ್ಯಾಂಶಗಳು

  • ವಿರಾಟ್​ ಕೊಹ್ಲಿ ಈ ಹೆಸರಿಗೆ ಯಾವುದೇ ಪರಿಚಯದ ಅಗತ್ಯವೇ ಇಲ್ಲ
  • ಕಿಂಗ್​ ಎಂದೇ ಕರೆಸಿಕೊಳ್ಳುವ ಕೊಹ್ಲಿಗೆ ವಿಶ್ವದಾದ್ಯಂತ ಬಹುದೊಡ್ಡ ಅಭಿಮಾನಿ ಬಳಗವಿದೆ
  • ಐಪಿಎಲ್​ನಲ್ಲಿ ಅನಭಿಷಿಕ್ತ ದೊರೆಯಂತೆ ಮರೆಯುತ್ತಿರುವ ಕೊಹ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ
  • ಕೊಹ್ಲಿ ಬಗ್ಗೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್​ ಆಡಿರುವ ಮಾತುಗಳು ಇದೀಗ ಎಲ್ಲರ ಗಮನ ಸೆಳೆದಿದೆ
ನವದೆಹಲಿ: ವಿರಾಟ್​ ಕೊಹ್ಲಿ ( Virat Kohli ) ಈ ಹೆಸರಿಗೆ ಯಾವುದೇ ಪರಿಚಯದ ಅಗತ್ಯವೇ ಇಲ್ಲ. ದಾಖಲೆಗಳ ಸರದಾರ, ರನ್​ ಮೆಷಿನ್​, ಚೇಸ್​ ಮಾಸ್ಟರ್​ ಹಾಗೂ ಕ್ರಿಕೆಟ್​ ಲೋಕದ ಕಿಂಗ್​ ಎಂದೇ ಕರೆಸಿಕೊಳ್ಳುವ ಕೊಹ್ಲಿ, ವಿಶ್ವದಾದ್ಯಂತ ಬಹುದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಕ್ರೀಸ್​ಗೆ ಬಂದರೆ, ಎದುರಾಳಿ ಬೌಲರ್​ಗಳ ಬೆವರಿಳಿಸೋ ಈ ಕ್ಲಾಸಿಕ್​ ಬ್ಯಾಟರ್​, ಮೈದಾನದಲ್ಲಿ ಫೀಲ್ಡಿಂಗ್​ ಮಾಡುವಾಗ ಇಡೀ ತಂಡಕ್ಕೆ ಉತ್ಸಾಹದ ಚಿಲುಮೆಯಾಗಿರುತ್ತಾರೆ. ಫಿಟ್​ನೆಸ್​ನಲ್ಲಂತೂ ಎರಡು ಮಾತೇ ಇಲ್ಲ. ಹಿರಿಯ ಆಟಗಾರನಾಗಿದ್ದರೂ ಇಂದಿಗೂ ಯುವಕರು ನಾಚುವಂತೆ ಬ್ಯಾಟ್​ ಬೀಸುವ ಕೊಹ್ಲಿ, ಮೈದಾನದಲ್ಲಿ ಬೌಂಡರಿ ಸಿಕ್ಸರ್​ಗಳ ಸುರಿಮಳೆ ಸುರಿಸುತ್ತಿದ್ದಾರೆ. ಇಂಥಾ ದಿಗ್ಗಜ ಆಟಗಾರನ ಬಗ್ಗೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್​ ಆಡಿರುವ ಮಾತುಗಳು ಇದೀಗ ಎಲ್ಲರ ಗಮನ ಸೆಳೆದಿದೆ.
ಅಂದಹಾಗೆ, ವಿರಾಟ್​ ಕೊಹ್ಲಿ ಐಪಿಎಲ್​ ಶುರುವಾದಾಗಿನಿಂದ ಒಂದೇ ತಂಡಕ್ಕೆ ಆಡುತ್ತಿರುವ ಏಕೈಕ ಆಟಗಾರ ಅನ್ನೋದು ನಿಮಗೆಲ್ಲರಿಗೂ ಗೊತ್ತೇ ಇದೆ. ಐಪಿಎಲ್​ ಹುಟ್ಟಿದಾಗಿನಿಂದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ( RCB ) ತಂಡವನ್ನು ಕೊಹ್ಲಿ ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ, ಅವರನ್ನು ಕರ್ನಾಟಕದ ದತ್ತು ಪುತ್ರನೆಂದು ಕರೆಯಲಾಗುತ್ತದೆ. ಐಪಿಎಲ್​ನಲ್ಲಿ ಅನಭಿಷಿಕ್ತ ದೊರೆಯಂತೆ ಮರೆಯುತ್ತಿರುವ ಕೊಹ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಇದೀಗ ಮತ್ತೊಂದು ಮೈಲುಗಲ್ಲನ್ನು ಕೊಹ್ಲಿ ತಲುಪಿದ್ದಾರೆ.
ಹೌದು, ನಿನ್ನೆ ತಮ್ಮ ತವರು ದೆಹಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ವಿರುದ್ಧ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ 9000 ರನ್​ಗಳ ಮೈಲುಗಲ್ಲು ತಲುಪಿದರು. ಐಪಿಎಲ್​ ಇತಿಹಾಸದಲ್ಲೇ 9 ಸಾವಿರ ರನ್​ ಪೂರೈಸಿದ ಏಕೈಕ ಆಟಗಾರ ಎನಿಸಿಕೊಂಡರು. ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 15 ಎಸೆತಗಳಲ್ಲಿ 2 ಸಿಕ್ಸರ್​ ಮತ್ತು 1 ಬೌಂಡರಿ ನೆರವಿನಿಂದ ಅಜೇಯ 23 ರನ್​ ಬಾರಿಸುವ ಮೂಲಕ ಇಂಥಾ ಐತಿಹಾಸಿಕ ಸಾಧನೆಗೆ ಭಾಜನರಾದರು.
ಕೊಹ್ಲಿಯ ಈ ಸಾಧನೆಯನ್ನು ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅವರು ಕೊಂಡಾಡಿದ್ದಾರೆ. ತಮ್ಮ ಎಕ್ಸ್​ನಲ್ಲಿ ಬರೆದುಕೊಂಡಿರುವ ಪಠಾಣ್​, ವಿರಾಟ್ ಕೊಹ್ಲಿಗೆ ಯಾರಾದರೂ ಸವಾಲು ಹಾಕಲು ಸಾಧ್ಯವಾದರೆ, ಅದು ಬೇರೆ ಯಾರೂ ಅಲ್ಲ ಕೊಹ್ಲಿಯೇ. ಕೊಹ್ಲಿ ಬಿಟ್ಟು ಬೇರೆ ಯಾರೂ ಕೊಹ್ಲಿಗೆ ಸರಿಸಾಟಿ ಆಗಲಾರರು. ಅದಕ್ಕಾಗಿಯೇ ಐಪಿಎಲ್‌ನಲ್ಲಿ 9,000 ರನ್‌ಗಳ ಈ 'ಮೌಂಟ್ ಎವರೆಸ್ಟ್' ಅವರಿಗೆ ಕೇವಲ ಒಂದು ಮೆಟ್ಟಿಲಾಗಿದ್ದು, ಅದು ಎಂದಿಗೂ ಅವರ ಅಂತಿಮ ಗುರಿಯಲ್ಲ ಎಂದು ಪಠಾಣ್​ ಹೇಳಿದ್ದಾರೆ.
ಅಂದಹಾಗೆ, ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಭರ್ಜರಿ ಜಯ ದಾಖಲಿಸುವ ಮೂಲಕ ಆರ್‌ಸಿಬಿ, ಉತ್ತಮ ರನ್​ ರೇಟ್​ ಹೊಂದಿದೆ. ಈವರೆಗೂ ಎಂಟು ಪಂದ್ಯಗಳಾಡಿರುವ ಆರ್​ಸಿಬಿ 12 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಅದೇ ವೇಳೆ, ಡೆಲ್ಲಿ ಕ್ಯಾಪಿಟಲ್ಸ್ ಎಂಟು ಪಂದ್ಯಗಳಿಂದ ಐದು ಸೋಲುಗಳೊಂದಿಗೆ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಕುಸಿದಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net