

ಥಾಣೆ: ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಪ್ರತಿಭಾವಂತ ಆಟಗಾರರಲ್ಲಿ ಒಬ್ಬರಾದ ಮಾಜಿ ಬ್ಯಾಟರ್ ವಿನೋದ್ ಕಾಂಬ್ಳಿ (Vinod Kambli) ಅವರ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲ ವರ್ಷಗಳಿಂದ ತೀವ್ರ ಆರೋಗ್ಯ ಸಮಸ್ಯೆ ಹಾಗೂ ವೈಯಕ್ತಿಕ ಕಷ್ಟಗಳಿಂದ ಬಳಲುತ್ತಿರುವ ಕಾಂಬ್ಳಿ, ವೃದ್ಧಾಶ್ರಮವೊಂದರಿಂದ ಹಂಚಿಕೊಂಡಿರುವ ವಿಡಿಯೋ ಅವರ ಅಭಿಮಾನಿಗಳ ಆತಂಕ ಹಾಗೂ ಬೇಸರಕ್ಕೆ ಕಾರಣವಾಗಿದೆ.
ಥಾಣೆಯಲ್ಲಿರುವ ನಿಧಾನ್ ಸೆಂಟರ್ ಫಾರ್ ಎಲ್ಡರ್ಲಿ ಕೇರ್ ಎಂಬ ವೃದ್ಧಾಶ್ರಮದಿಂದ ವಿನೋದ್ ಕಾಂಬ್ಳಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮಾತನಾಡಲು ಪರದಾಡುತ್ತಾ, ಕೆಲವೊಮ್ಮೆ ಗೋಗರೆಯುವಂತೆ ಕಾಣಿಸಿಕೊಂಡಿರುವ ಕಾಂಬ್ಳಿ, ತಮ್ಮ ಆರೋಗ್ಯ ಪರಿಸ್ಥಿತಿ ಹಾಗೂ ಅಲ್ಲಿನ ವಾತಾವರಣದ ಬಗ್ಗೆ ಮಾತನಾಡಿದ್ದಾರೆ.
ನಾನು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದೇನೆ, ಇಲ್ಲಿನ ಸೌಲಭ್ಯಗಳು ಅತ್ಯುತ್ತಮವಾಗಿವೆ ಎಂದು ಹೇಳಲು ಬಯಸುತ್ತೇನೆ. ಇಲ್ಲಿರುವಾಗ ನಾನು ಮನೆಯಿಂದ ದೂರವಿದ್ದೇನೆ ಎಂದು ನನಗೆ ಎಂದಿಗೂ ಅನಿಸುವುದಿಲ್ಲ. ಇಲ್ಲಿನ ಜನರಿಂದ ನನಗೆ ಅಪಾರ ಪ್ರೀತಿ ಮತ್ತು ಗೌರವ ಸಿಗುತ್ತಿದೆ ಎಂದು ಕಾಂಬ್ಳಿ ಭಾವುಕರಾಗಿ ಹೇಳಿದ್ದಾರೆ. ಆದರೆ, ಅವರನ್ನು ಅಲ್ಲಿ ಶಾಶ್ವತವಾಗಿ ದಾಖಲಿಸಲಾಗಿದೆಯೇ ಅಥವಾ ಚಿಕಿತ್ಸೆಗಾಗಿ ಮಾತ್ರ ತೆರಳಿದ್ದಾರೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲವಾದರೂ, ಅವರ ಈ ಸ್ಥಿತಿ ಕ್ರಿಕೆಟ್ ಪ್ರೇಮಿಗಳನ್ನು ಕಣ್ಣೀರಲ್ಲಿ ಮುಳುಗಿಸಿದೆ.
ಒಂದು ಕಾಲದಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಜೋಡಿ ಭಾರತೀಯ ಕ್ರಿಕೆಟ್‌ನ ಭವಿಷ್ಯ ಎಂದೇ ಬಿಂಬಿತವಾಗಿತ್ತು. ಶಾಲಾ ಕ್ರಿಕೆಟ್‌ನಲ್ಲಿ ಶಾರದಾಶ್ರಮ ಶಾಲೆಗಾಗಿ ಆಡುತ್ತಾ ಇವರಿಬ್ಬರೂ ಸೇರಿ ಕಟ್ಟಿದ 664 ರನ್‌ಗಳ ಐತಿಹಾಸಿಕ ಜೊತೆಯಾಟ ವಿಶ್ವ ದಾಖಲೆಯಾಗಿ ಇಂದಿಗೂ ಅಚ್ಚಳಿಯದೇ ಉಳಿದಿದೆ. ಆ ಪಂದ್ಯದಲ್ಲಿ ಕಾಂಬ್ಳಿ ಬರೋಬ್ಬರಿ 349 ರನ್ ಗಳಿಸಿ ಅಜೇಯರಾಗಿದ್ದರು.
ಸಚಿನ್‌ಗಿಂತಲೂ ಕಾಂಬ್ಳಿಯಲ್ಲೇ ಹೆಚ್ಚಿನ ಪ್ರತಿಭೆಯಿದೆ ಎಂದು ಅನೇಕ ದಿಗ್ಗಜರು ನಂಬಿದ್ದರು. ಆದರೆ ದುರಾದೃಷ್ಟವಶಾತ್, ವೃತ್ತಿಜೀವನದಲ್ಲಿ ಶಿಸ್ತಿನ ಕೊರತೆ ಮತ್ತು ಇತರೆ ಕಾರಣಗಳಿಂದ ಕಾಂಬ್ಳಿ ಬೇಗನೆ ಮಂಕಾದರು. ಭಾರತಕ್ಕಾಗಿ 17 ಟೆಸ್ಟ್ ಹಾಗೂ 104 ಏಕದಿನ ಪಂದ್ಯಗಳನ್ನು ಆಡಿರುವ ಕಾಂಬ್ಳಿ, ಟೆಸ್ಟ್‌ನಲ್ಲಿ 1084 ಹಾಗೂ ಏಕದಿನದಲ್ಲಿ 2477 ರನ್ ಕಲೆಹಾಕಿದ್ದಾರೆ. 1993ರಿಂದ 2000 ರ ವರೆಗೆ ಮಾತ್ರ ಅವರು ಭಾರತ ತಂಡದಲ್ಲಿ ಆಡಲು ಸಾಧ್ಯವಾಯಿತು.
ಕ್ರಿಕೆಟ್ ಮೈದಾನದಿಂದ ದೂರವಾದ ಬಳಿಕ ಕಾಂಬ್ಳಿ ವೈಯಕ್ತಿಕ ಬದುಕಿನಲ್ಲೂ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದರು. ಮೊದಲ ಪತ್ನಿ ನೋಯೆಲ್ಲಾ ಲೂಯಿಸ್‌ಗೆ ವಿಚ್ಛೇದನ ನೀಡಿದ ಬಳಿಕ, ಫ್ಯಾಶನ್ ಮಾಡೆಲ್ ಆಂಡ್ರಿಯಾ ಹೆವಿಟ್ ಅವರನ್ನು ವಿವಾಹವಾದರು. ಇವರಿಗೆ ಜೀಸಸ್ ಕ್ರಿಸ್ಟಿಯಾನೊ ಎಂಬ ಮಗನಿದ್ದಾನೆ. ಆರೋಗ್ಯ ಕೈಕೊಟ್ಟ ಬಳಿಕ ಆರ್ಥಿಕ ಹಾಗೂ ವೈಯಕ್ತಿಕ ಸಂಕಷ್ಟಗಳಿಗೆ ಸಿಲುಕಿರುವ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ಇಂದಿನ ಪರಿಸ್ಥಿತಿ ಕಷ್ಟಕರವಾಗಿದೆ. ಭಾರತ ಕ್ರಿಕೆಟ್ ತಂಡಕ್ಕೆ ನೂರಾರು ನೆನಪುಗಳನ್ನು ನೀಡಿದ ಈ ದೈತ್ಯ ಪ್ರತಿಭೆ ಬೇಗನೆ ಚೇತರಿಸಿಕೊಳ್ಳಲಿ ಎಂದು ಕೋಟ್ಯಂತರ ಅಭಿಮಾನಿಗಳು ಹಾರೈಸುತ್ತಿದ್ದಾರೆ, (ಏಜೆನ್ಸೀಸ್).