ಸುಮ್ಮನೆ ಹೇಳಲ್ಲ 'ಕಿಂಗ್' ಅಂತ! ಐಪಿಎಲ್​ ಇತಿಹಾಸದಲ್ಲಿ ಈ ಅಪರೂಪದ ದಾಖಲೆ ಬರೆದ ಮೊದಲ ಕ್ರಿಕೆಟಿಗ ವಿರಾಟ್ | Virat Kohli​

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ
Published on

ಪ್ರಮುಖ ಮುಖ್ಯಾಂಶಗಳು

  • ನಿನ್ನೆ (ಏ.27) ನಡೆದ ಡಿಸಿ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ
  • 19 ವರ್ಷಗಳಿಂದ ಒಂದೇ ಫ್ರಾಂಚೈಸಿಗೆ ಆಡುವುದು ಸುಲಭದ ಮಾತಲ್ಲ
  • ಯಾರೂ ಮಾಡದ ಅಪರೂಪದ ಸಾಧನೆ ವಿರಾಟ್​ ಕೊಹ್ಲಿ ಹೆಸರಿಗೆ
  • ಈ ವಿಶೇಷ ಗೌರವ ಸಾಧಿಸಿದ ಏಕೈಕ ಆಟಗಾರ 'ರನ್​ ಮಷಿನ್​'
Virat Kohli: ನಿನ್ನೆ (ಏ.27) ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವಿಕೆಟ್​ಗಳ ಸುಲಭ ಗೆಲುವು ಸಾಧಿಸಿತು. ಒಂದೆಡೆ, ಆರ್​ಸಿಬಿಗೆ ಮತ್ತೊಂದು ಗೆಲುವಿನ ಸಂಭ್ರಮವಾದರೆ, ಅತ್ತ ಒಂದೇ ಫ್ರಾಂಚೈಸಿಗೆ 19 ವರ್ಷಗಳಿಂದ ಆಡುತ್ತಿರುವ ಕ್ರಿಕೆಟ್​ ದಿಗ್ಗಜ ವಿರಾಟ್​ ಕೊಹ್ಲಿ ಅವರಿಂದ ಬಂದ ಒಟ್ಟು ರನ್​ಗಳ ಸಂಖ್ಯೆ ಕೇಳಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.   
ಕಳೆದ 19 ವರ್ಷಗಳಿಂದ ಒಂದೇ ಫ್ರಾಂಚೈಸಿಗೆ ಆಡುತ್ತಿರುವ ವಿರಾಟ್ ಕೊಹ್ಲಿ, ಈ ಅಪರೂಪದ ಸಾಧನೆ ಮಾಡಿರುವುದು ಸದ್ಯ ಆರ್​ಸಿಬಿ ಅಭಿಮಾನಿಗಳಲ್ಲಿ ಭಾರೀ ಖುಷಿ ತಂದಿದೆ. ಐಪಿಎಲ್‌ನಲ್ಲಿ 9,000 ರನ್ ಮೈಲಿಗಲ್ಲು ತಲುಪಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಕೊಹ್ಲಿ ಐಪಿಎಲ್​ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 11 ರನ್​ಗಳನ್ನು ಬಾರಿಸಿದ ಕೂಡಲೇ 9 ಸಾವಿರ ರನ್​ಗಳ ಅಪರೂಪದ ದಾಖಲೆ ವಿರಾಟ್​ ಹೆಸರಿಗೆ ಸೇರಿತು. 
ಐಪಿಎಲ್ ಆರಂಭವಾದಾಗಿನಿಂದ (2008) ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದಾರೆ. ಒಂದೇ ಫ್ರಾಂಚೈಸಿ ಪರ ರನ್​ಗಳ ಹೊಳೆ ಹರಿಸಿರುವ ಕಿಂಗ್ ಕೊಹ್ಲಿ, ಆಡಿರುವ 267 ಇನ್ನಿಂಗ್ಸ್‌ಗಳಲ್ಲಿ ಒಟ್ಟು 9012 ರನ್‌ಗಳನ್ನು ಕಲೆಹಾಕಿದ್ದಾರೆ. ಅವರು ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಪಟ್ಟಿಯಲ್ಲಿ ವಿರಾಟ್​ ಅಗ್ರಸ್ಥಾನದಲ್ಲಿದ್ದರೆ, ಅವರ ನಂತರದಲ್ಲಿ ರೋಹಿತ್ ಶರ್ಮಾ ಇದ್ದಾರೆ. ಹಿಟ್‌ಮ್ಯಾನ್, 271 ಇನ್ನಿಂಗ್ಸ್‌ಗಳಲ್ಲಿ 7183 ರನ್ ಗಳಿಸಿದ್ದಾರೆ.

ಐಪಿಎಲ್‌ನಲ್ಲಿ ಅಧಿಕ ರನ್ ಗಳಿಸಿದ ಆಟಗಾರರಿವರು

  1. ವಿರಾಟ್ ಕೊಹ್ಲಿ - 267 ಇನ್ನಿಂಗ್ಸ್‌, 9012 ರನ್‌
  2. ರೋಹಿತ್ ಶರ್ಮಾ - 271 ಇನ್ನಿಂಗ್ಸ್‌, 7183 ರನ್‌
  3. ಶಿಖರ್ ಧವನ್ - 221 ಇನ್ನಿಂಗ್ಸ್‌, 6769 ರನ್‌
  4. ಡೇವಿಡ್ ವಾರ್ನರ್ - 184 ಇನ್ನಿಂಗ್ಸ್‌, 6656 ರನ್‌
  5. ಕೆ.ಎಲ್. ರಾಹುಲ್ - 144 ಇನ್ನಿಂಗ್ಸ್‌, 5580 ರನ್‌

ಪಂದ್ಯದ ವಿವರ 

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 16.3 ಓವರ್‌ಗಳಲ್ಲಿ 75 ರನ್‌ಗೆ ಆಲೌಟ್ ಆಯಿತು. ಅಭಿಷೇಕ್ ಪೊರೆಲ್ (30 ರನ್​, 33 ಎಸೆತಗಳಲ್ಲಿ 3 ಬೌಂಡರಿ), ಡೇವಿಡ್ ಮಿಲ್ಲರ್ (19 ರನ್​, 18 ಎಸೆತಗಳಲ್ಲಿ 3 ಬೌಂಡರಿ), ಮತ್ತು ಕೈಲ್ ಜೇಮಿಸನ್ (12 ರನ್​, 1 ಬೌಂಡರಿ, 13 ಎಸೆತಗಳಲ್ಲಿ 1 ಸಿಕ್ಸ್) ಮಾತ್ರ ಎರಡಂಕಿ ಗಳಿಸಿದರು. ಆರ್​ಸಿಬಿ ಪರ ಕಮಾಲ್​ ಮಾಡಿದ ಬೌಲರ್‌ಗಳಲ್ಲಿ ಜೋಶ್ ಹೇಜಲ್‌ವುಡ್ 4, ಭುವನೇಶ್ವರ್ ಕುಮಾರ್ 3, ರಸಿಕ್ ಸಲಾಂದಾರ್, ಸುಯಾಶ್ ಶರ್ಮಾ ಮತ್ತು ಕೃನಾಲ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಈ ಸುಲಭ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ, ಕೇವಲ 6.3 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 76 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ದೇವದತ್ ಪಡಿಕ್ಕಲ್ (ಅಜೇಯ 34 ರನ್​, 13 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್), ವಿರಾಟ್ ಕೊಹ್ಲಿ (ಅಜೇಯ 23  ರನ್​, 15 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್), ಮತ್ತು ಜಾಕೋಬ್ ಬೆಥೆಲ್ (20 ರನ್​, 11 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್) ಅವರ ಉತ್ತಮ ಬ್ಯಾಟಿಂಗ್​ ಪ್ರದರ್ಶನದಿಂದ ರಜತ್ ಪಡೆ ಪಂದ್ಯ ಗೆದ್ದು ಬೀಗಿತು,(ಏಜೆನ್ಸೀಸ್). ​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net