ಹೊಸ ವರ್ಷಾರಂಭದಲ್ಲೇ ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ ಭಾಗಶಃ ಜಾರಿ

ಹೊಸ ವರ್ಷಾರಂಭದಲ್ಲೇ ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ ಭಾಗಶಃ ಜಾರಿ
ಹೊಸ ವರ್ಷಾರಂಭದಲ್ಲೇ ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ ಭಾಗಶಃ ಜಾರಿ
Published on
ನವದೆಹಲಿ: ಹೊಸ ವರ್ಷದ ಮೊದಲ ದಿನವೇ ಅಂದರೆ ಗುರುವಾರದಿಂದಲೇ ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ (National Sports Governance Act) ಅಧಿಕೃತವಾಗಿ ಭಾಗಶಃ ಜಾರಿಗೆ ಬಂದಿದೆ. ದೇಶದ ಕ್ರೀಡಾ ಆಡಳಿತದಲ್ಲಿ ಸರ್ವಶಕ್ತವಾಗಿರುವ ರಾಷ್ಟ್ರೀಯ ಕ್ರೀಡಾ ಮಂಡಳಿ (ಎನ್​ಎಸ್​ಬಿ-National Sports Board) ಮತ್ತು ಕ್ರೀಡಾ ವಿವಾದಗಳನ್ನು ನಿರ್ವಹಿಸುವ ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿ (ಎನ್​ಎಸ್​ಟಿ-National Sports Tribunal) ಸ್ಥಾಪನೆಗೆ ಚಾಲನೆ ನೀಡುವ ನಿಬಂಧನೆಗಳನ್ನು ಇದು ಒಳಗೊಂಡಿದೆ. ದೇಶದ ಕ್ರೀಡಾ ಆಡಳಿತದಲ್ಲಿ ಸುಧಾರಣೆ ಮತ್ತು ಹೊಸ ಕ್ರಾಂತಿ ಸೃಷ್ಟಿಸಬಲ್ಲ ಈ ಕಾಯ್ದೆಯು ಭಾರತಕ್ಕೆ 2036ರ ಒಲಿಂಪಿಕ್ಸ್​ ಆತಿಥ್ಯ ಒಲಿಸಿಕೊಳ್ಳುವಲ್ಲೂ ಮಹತ್ವದ ಪಾತ್ರ ನಿರ್ವಹಿಸುವ ನಿರೀಕ್ಷೆ ಇದೆ.
ಈ ಕಾಯ್ದೆಯ ಅಧಿಸೂಚನೆಯನ್ನು ಕಳೆದ ವರ್ಷ ಆಗಸ್ಟ್​ 18ರಂದು ಹೊರಡಿಸಲಾಗಿತ್ತು. ಇದು ದೇಶದಲ್ಲಿ ಏಕೈಕ ಅತಿದೊಡ್ಡ ಕ್ರೀಡಾ ಸುಧಾರಣೆ ಎಂದು ಕ್ರೀಡಾ ಸಚಿವ ಮನ್ಸುಖ್​ ಮಾಂಡವೀಯ ಬಣ್ಣಿಸಿದ್ದರು.
ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆಯ ನಿಬಂಧನೆಗಳು ರಾಷ್ಟ್ರೀಯ ಒಲಿಂಪಿಕ್ಸ್​ ಸಮಿತಿ, ರಾಷ್ಟ್ರೀಯ ಪ್ಯಾರಾಲಿಂಪಿಕ್ಸ್​ ಸಮಿತಿ, ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು (ಎನ್​ಎಸ್​ಎಫ್​) ಮತ್ತು ಪ್ರಾದೇಶಿಕ ಕ್ರೀಡಾ ಒಕ್ಕೂಟಗಳು ಸೇರಿದಂತೆ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳ ರಚನೆ ಮತ್ತು ಆಡಳಿತ ಚೌಕಟ್ಟಿಗೆ ಸಂಬಂಧಿಸಿವೆ.

"ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆಯ ಸೆಕ್ಷನ್​ 1ರಿಂದ 3ರವರೆಗೆ, ಸೆಕ್ಷನ್​ 4ರ ಉಪ-ವಿಭಾಗಗಳು (1), (2) ಮತ್ತು (4), ಸೆಕ್ಷನ್​ 5ರ ಉಪ-ವಿಭಾಗಗಳು (1) ಮತ್ತು (2), ಸೆಕ್ಷನ್​ 8ರ ಉಪ-ವಿಭಾಗ (5), ಸೆಕ್ಷನ್​ 11ರ ಉಪ-ವಿಭಾಗ (1), ಸೆಕ್ಷನ್​ 14 ಮತ್ತು 15, ಸೆಕ್ಷನ್​ 17ರ ಉಪ-ವಿಭಾಗಗಳು (1) ರಿಂದ (7) ಮತ್ತು (10), ಸೆಕ್ಷನ್​ 30 ಮತ್ತು 31, ಮತ್ತು ಸೆಕ್ಷನ್​ 33ರಿಂದ 38ರವರೆಗಿನ ನಿಬಂಧನೆಗಳು 2026ರ ಜನವರಿ 1ರಿಂದ ಜಾರಿಗೆ ಬರಲಿವೆ' ಎಂದು ಕ್ರೀಡಾ ಸಚಿವಾಲಯ ಬುಧವಾರ ತಡರಾತ್ರಿಯ ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ಕಾಯ್ದೆಯ ಅನ್ವಯ ಕ್ರೀಡಾ ಒಕ್ಕೂಟಗಳ ಚುನಾವಣೆ ನಡೆಯುವಾಗ ಎಲ್ಲ ಸಂಸ್ಥೆಗಳ ಕಾರ್ಯಕಾರಿ ಸಮಿತಿಯು 15ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದುವಂತಿಲ್ಲ ಮತ್ತು ಕನಿಷ್ಠ ಇಬ್ಬರು ಅರ್ಹ ಕ್ರೀಡಾಪಟುಗಳು ಕಡ್ಡಾಯವಾಗಿ ಇರಬೇಕಾಗುತ್ತದೆ.

ಕಾಯ್ದೆಯನ್ನು ಹಂತ ಹಂತವಾಗಿ ಜಾರಿಗೆ ತರುವುದರೊಂದಿಗೆ ಶಾಸನಬದ್ಧ ಕ್ರೀಡಾ ಆಡಳಿತ ಚೌಕಟ್ಟಿನ ಸುಗಮ ಪರಿವರ್ತನೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಮುಂದಿನ ಕೆಲ ತಿಂಗಳಲ್ಲಿ ಚುನಾವಣೆ ನಡೆಯಬೇಕಿರುವ ಎನ್​ಎಸ್​ಎ್​ಗಳಿಗೆ ಕಾಯ್ದೆಯ ಪೂರ್ಣಪ್ರಮಾಣದ ಅನುಷ್ಠಾನಕ್ಕಾಗಿ ಡಿಸೆಂಬರ್​ವರೆಗೆ ಪ್ರಕ್ರಿಯೆಯನ್ನು ಮುಂದೂಡಲು ಸಚಿವಾಲಯ ಈಗಾಗಲೆ ಅವಕಾಶ ನೀಡಿದೆ.
ಹೊಸ ಕಾಯ್ದೆಯ ಅನ್ವಯ ಎನ್​ಎಸ್​ಎಫ್​ ಮತ್ತು ಇತರ ಕ್ರೀಡಾ ಸಂಸ್ಥೆಗಳ ಚುನಾವಣೆಯ ಮೇಲ್ವಿಚಾರಣೆ ವಹಿಸಿಕೊಳ್ಳಲು ರಾಷ್ಟ್ರೀಯ ಕ್ರೀಡಾ ಚುನಾವಣಾ ಸಮಿತಿಯೂ (ಎನ್​ಎಸ್​ಇಪಿ) ರಚನೆಯಾಗಲಿದೆ. ಎನ್​ಎಸ್​ಎಫ್​ಗಳಲ್ಲಿ ಸಕಾಲದಲ್ಲಿ ಮತ್ತು ನ್ಯಾಯಯುತ ಚುನಾವಣೆ ನಡೆಯುವಂತೆ ನೋಡಿಕೊಳ್ಳುವುದು ಇದರ ಹೊಣೆಯಾಗಿರಲಿದೆ.

2036ರ ಒಲಿಂಪಿಕ್ಸ್​ ಆತಿಥ್ಯಕ್ಕೆ ಬಿಡ್​ ಮಾಡುವ ಗುರಿಯನ್ನು ಹೊಂದಿರುವ ಭಾರತದಲ್ಲಿ, ಪಾರದರ್ಶಕ, ಉತ್ತರದಾಯಿತ್ವದ ಮತ್ತು ವಿಶ್ವದರ್ಜೆಯ ಕ್ರೀಡಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ಈ ಕಾಯ್ದೆಯ ಗುರಿಯಾಗಿದೆ.
ಕ್ರೀಡಾಪಟುಗಳಿಗೆ ನಿಬಂಧನೆ
ಕ್ರೀಡಾ ಸಚಿವಾಲಯ ಪ್ರಕಟಿಸಿರುವ ಕಾಯ್ದೆಯ ನಿಬಂಧನೆಗಳ ಪ್ರಕಾರ, ಕ್ರೀಡಾ ಆಡಳಿತಕ್ಕೆ ಪ್ರವೇಶಿಸುವ ಕ್ರೀಡಾಪಟು ಅದಕ್ಕೆ ಕನಿಷ್ಠ ಒಂದು ವರ್ಷ ಮುನ್ನ ಕ್ರೀಡೆಯಿಂದ ನಿವೃತ್ತರಾಗಿರಬೇಕು. ಒಲಿಂಪಿಕ್ಸ್​ ಪದಕ ಗೆದ್ದವರು ಅಥವಾ ಕನಿಷ್ಠ ಒಂದು ಒಲಿಂಪಿಕ್ಸ್​ನಲ್ಲಿ ಭಾಗವಹಿಸಿರುವವರು ಮಾತ್ರ ಭಾರತೀಯ ಒಲಿಂಪಿಕ್ಸ್​ ಸಮಿತಿಯಲ್ಲಿ ಸ್ಥಾನ ಪಡೆಯಲು ಅರ್ಹರಾಗಿರುತ್ತಾರೆ. ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ ಪ್ರವೇಶಕ್ಕೆ ಸ್ವಲ್ಪ ವಿನಾಯಿತಿ ನೀಡಲಾಗಿದ್ದು, ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಅಥವಾ ವಿಶ್ವ ಚಾಂಪಿಯನ್​ಷಿಪ್​ಗಳಲ್ಲಿ ಪದಕ ಗೆದ್ದವರು ಎನ್​ಎಸ್​ಎಫ್​ ಸೇರಲು ಅರ್ಹರಾಗಿರುತ್ತಾರೆ. ವಿವಿಧ ಕ್ರೀಡೆಗಳಲ್ಲಿ ತೋರಿರುವ ಸಾಧನೆಗೆ ಅನ್ವಯವಾಗಿ ಕ್ರೀಡಾಪಟುಗಳ ಅರ್ಹತೆಯನ್ನು ಅವರೋಹಣ ಕ್ರಮದಲ್ಲಿ 1ರಿಂದ 10ರವರೆಗೆ ವರ್ಗೀಕರಿಸಲಾಗಿದೆ.
ರಾಷ್ಟ್ರೀಯ ಕ್ರೀಡಾ ಮಂಡಳಿ
ಮೂವರು ಸದಸ್ಯರನ್ನು ಒಳಗೊಂಡ ರಾಷ್ಟ್ರೀಯ ಕ್ರೀಡಾ ಮಂಡಳಿಯು (ಎನ್​ಎಸ್​ಬಿ), ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ (ಎನ್​ಎಸ್​ಎಫ್​) ಮಾನ್ಯತೆಯನ್ನು ನೀಡುವುದಲ್ಲದೆ, ಅವುಗಳ ಹಣಕಾಸು ನಿರ್ವಹಣೆಯ ಮೇಲೂ ನಿಗಾ ವಹಿಸಲಿದೆ. ಜತೆಗೆ ಭ್ರಷ್ಟಾಚಾರ ಕಂಡು ಬಂದರೆ ದಂಡ ವಿಧಿಸುವ ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳುವ ಅಧಿಕಾರವನ್ನೂ ಹೊಂದಿರುತ್ತದೆ. ಎನ್​ಎಸ್​ಎಫ್​​ಗಳು ಸರ್ಕಾರದ ಅನುದಾನವನ್ನು ಪಡೆಯಬೇಕಾದರೆ, ಎನ್​ಎಸ್​ಬಿ ಮಾನ್ಯತೆಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಸಾರ್ವಜನಿಕ ಆಡಳಿತ, ಕ್ರೀಡಾ ಆಡಳಿತ, ಕ್ರೀಡಾ ಕಾನೂನು ಮತ್ತು ಇತರ ಸಂಬಂಧಿತ ಕ್ಷೇತ್ರಗಳಲ್ಲಿ ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಅನುಭವ ಹೊಂದಿರುವ ವ್ಯಕ್ತಿಗಳನ್ನು ಕೇಂದ್ರ ಸರ್ಕಾರವೇ ರಾಷ್ಟ್ರೀಯ ಕ್ರೀಡಾ ಮಂಡಳಿಗೆ ಅಧ್ಯಕ್ಷ ಮತ್ತು ಸದಸ್ಯರಾಗಿ ನೇಮಕ ಮಾಡಲಿದೆ. ಈ ನೇಮಕಾತಿಗೆ ಶಿಫಾರಸು ಮಾಡುವ ಆಯ್ಕೆ ಸಮಿತಿಯನ್ನು ಇನ್ನಷ್ಟೇ ಅಂತಿಮಗೊಳಿಸಬೇಕಾಗಿದೆ. ಎನ್​ಎಸ್​ಬಿ ಸದಸ್ಯರ ವಯೋಮಿತಿ 65 ವರ್ಷ ಆಗಿರುತ್ತದೆ. ನವದೆಹಲಿಯಲ್ಲಿ ಇದರ ಪ್ರಧಾನ ಕಚೇರಿ ಇರಲಿದೆ.
ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿ
ಕ್ರೀಡೆಗೆ ಸಂಬಂಧಿಸಿದ ವಿವಾದಗಳು ಇನ್ನು ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿಯಲ್ಲೇ (ಎನ್​ಎಸ್​ಟಿ) ವಿಚಾರಣೆಗೆ ಒಳಪಡಲಿವೆ. ಇದರ ತೀರ್ಪನ್ನು ಸುಪ್ರೀಂ ಕೋರ್ಟ್​ನಲ್ಲಿ ಮಾತ್ರ ಪ್ರಶ್ನಿಸಬಹುದಾಗಿರುತ್ತದೆ. ಎನ್​ಎಸ್​ಟಿ ಸದಸ್ಯರ ಕಾರ್ಯಾವಧಿ 4 ವರ್ಷ ಮತ್ತು ವಯೋಮಿತಿ 67 ವರ್ಷ ಆಗಿರುತ್ತದೆ.
ಬಿಸಿಸಿಐಗೂ ಅನ್ವಯ
ವಿಶ್ವದ ಶ್ರೀಮಂತ ಕ್ರಿಕೆಟ್​ ಸಂಸ್ಥೆಯಾಗಿರುವ ಬಿಸಿಸಿಐ ಕೂಡ ಇನ್ನು ಈ ಹೊಸ ಕಾಯ್ದೆಯಡಿ ಬರಲಿದ್ದು, ಸೊಸೈಟಿಯಿಂದ ರಾಷ್ಟ್ರೀಯ ಕ್ರೀಡಾ ಒಕ್ಕೂಟವಾಗಿ ಬದಲಾಗಬೇಕಾಗುತ್ತದೆ. ಆದರೆ ಸರ್ಕಾರದ ಅನುದಾನ ಪಡೆಯದಿರುವುರಿಂದ ಬಿಸಿಸಿಐಗೆ ಆರ್​ಟಿಐನಿಂದ ವಿನಾಯಿತಿ ಸಿಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net