ಯಾರೀ ಮ್ಯಾಥ್ಯೂವ್ ಹೊಲ್ಲಾರ್ಡ್​?​ ಪಾದಾರ್ಪಣೆ ಪಂದ್ಯದಲ್ಲೇ ಟೀಮ್ ಇಂಡಿಯಾಗೆ ಶಾಕ್​ ನೀಡಿದ ಐರ್ಲೆಂಡ್​ ವೇಗಿ

ಐರ್ಲೆಂಡ್​ ವೇಗಿ ಮ್ಯಾಥ್ಯೂವ್ ಹೊಲ್ಲಾರ್ಡ್
ಐರ್ಲೆಂಡ್​ ವೇಗಿ ಮ್ಯಾಥ್ಯೂವ್ ಹೊಲ್ಲಾರ್ಡ್
Published on

ಪ್ರಮುಖ ಮುಖ್ಯಾಂಶಗಳು

  • ಬೆಲ್​ಫಾಸ್ಟ್​ನಲ್ಲಿ ನಡೆದ ಐರ್ಲೆಂಡ್​ ಮತ್ತು ಭಾರತ ನಡುವಿನ ಮೊದಲ ಟಿ20 ಪಂದ್ಯ
  • 34 ರನ್​ಗಳ ಸೋಲಿನಿಂದ ಭಾರಿ ಮುಖಭಂಗ ಅನುಭವಿಸಿದ ಟೀಮ್ ಇಂಡಿಯಾ
  • ಭಾರತೀಯ ಬ್ಯಾಟರ್​ಗಳನ್ನು ಕಾಡಿದ ಐರ್ಲೆಂಡ್​ನ ವೇಗಿ
IND vs IRE: ನಿನ್ನೆ (ಜೂ.26) ಬೆಲ್​ಫಾಸ್ಟ್​ನಲ್ಲಿ ನಡೆದ ಐರ್ಲೆಂಡ್​ ಮತ್ತು ಭಾರತ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಅನುಭವಿಸಿತು. 34 ರನ್​ಗಳಿಂದ ಭಾರಿ ಮುಖಭಂಗಕ್ಕೆ ಒಳಗಾದ ಶ್ರೇಯಸ್​ ಅಯ್ಯರ್​ ಪಡೆಗೆ ಸೋಲುಣಿಸಿದ್ದೇ ಐರ್ಲೆಂಡ್​ನ ಈ ಸ್ಟಾರ್​ ಬೌಲರ್​.
ಟೀಮ್ ಇಂಡಿಯಾ ವಿರುದ್ಧದ ಪಾದಾರ್ಪಣೆ ಟಿ20 ಪಂದ್ಯದಲ್ಲಿ ಮೂರು ಮುಖ್ಯ ವಿಕೆಟ್​ ಕಬಳಿಸುವ ಮೂಲಕ ಮ್ಯಾಥ್ಯೂ ಹೊಲ್ಲಾರ್ಡ್ ತಂಡದ ಪರ ಮಿಂಚಿದರು. ತಮ್ಮ ಚೊಚ್ಚಲ ಮ್ಯಾಚ್​ನಲ್ಲೇ ಕ್ರಿಕೆಟ್​ ಪ್ರೇಮಿಗಳ ಗಮನ ಸೆಳೆದ ಈತ, ಐರ್ಲೆಂಡ್​​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮೊದಲ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಮ್ಯಾಥ್ಯೂ, ತಮ್ಮ ವೃತ್ತಿಜೀವನಕ್ಕೆ ಅದ್ಭುತ ಅಡಿಪಾಯವನ್ನು ಹಾಕಿಕೊಂಡಿದ್ದಾರೆ.
ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಅವರಂತಹ ಸ್ಟಾರ್​ ಬ್ಯಾಟ್ಸ್​ಮನ್​ಗಳ ವಿಕೆಟ್​ಗಳನ್ನು ಮ್ಯಾಥ್ಯೂ ಕಿತ್ತು ಸಂಭ್ರಮಿಸಿದರು. ಇದೇ ಪಂದ್ಯದಲ್ಲಿ ಭಾರತೀಯ ಮೂಲದ ಬೌಲರ್ ಜೇ ಮುಂಧ್ರಾ ಕೂಡ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯದ ಮೊದಲ ಎಸೆತದಲ್ಲೇ ಸಂಜು ಸ್ಯಾಮ್ಸನ್ ಅವರ ವಿಕೆಟ್ ಪಡೆದರು. ಈ ಇಬ್ಬರು ಯುವ ಬೌಲರ್‌ಗಳು ಭಾರತದ ಅಗ್ರ ಕ್ರಮಾಂಕವನ್ನು ಸುಲಭವಾಗಿ ಕೆಡವಿದರು. 183 ರನ್‌ಗಳ ಗುರಿಯನ್ನು ಬೆನ್ನತ್ತಿದ ಶ್ರೇಯಸ್​ ಪಡೆ ಕೇವಲ 148 ರನ್‌ಗೆ ಆಲೌಟ್ ಆಯಿತು.

ಯಾರೀ ಮ್ಯಾಥ್ಯೂ ಹೊಲ್ಲಾರ್ಡ್?

ಏಪ್ರಿಲ್ 14, 1999ರಂದು ಜನಿಸಿದ ಮ್ಯಾಥ್ಯೂ ಹೊಲ್ಲಾರ್ಡ್, ದೇಶೀಯ ಕ್ರಿಕೆಟ್‌ನಲ್ಲಿಯೂ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಇಲ್ಲಿಯವರೆಗೆ, ಅವರು 15 ಟಿ20 ಪಂದ್ಯಗಳಲ್ಲಿ 20 ವಿಕೆಟ್‌, ಐದು ಪ್ರಥಮ ದರ್ಜೆ ಪಂದ್ಯಗಳಲ್ಲಿ 9 ವಿಕೆಟ್‌ ಮತ್ತು ನಾಲ್ಕು ಲಿಸ್ಟ್-ಎ ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಲೀನ್‌ಸ್ಟರ್ ಲೈಟ್ನಿಂಗ್ ಮತ್ತು ಸ್ಟ್ರೈಕರ್ಸ್‌ನಂತಹ ತಂಡಗಳನ್ನು ಪ್ರತಿನಿಧಿಸಿರುವ ಹೊಲ್ಲಾರ್ಡ್, ಭಾರತದ ವಿರುದ್ಧ ಅದ್ಭುತ ಪ್ರದರ್ಶನ ನೀಡುವ ಮೂಲಕ ಐರ್ಲೆಂಡ್‌ನ ಭವಿಷ್ಯದ ಸ್ಟಾರ್ ಬೌಲರ್ ಎಂದು ಗುರುತಿಸಿಕೊಂಡಿದ್ದಾರೆ.
ಭಾರತೀಯ ಬ್ಯಾಟರ್​ಗಳನ್ನು ಬ್ಯಾಕ್​ ಟು ಬ್ಯಾಕ್​ ಔಟ್​ ಮಾಡಿ, ತನ್ನ ಆತ್ಮವಿಶ್ವಾಸವನ್ನೂ ಪ್ರದರ್ಶಿಸಿದ ಮ್ಯಾಥ್ಯೂ, ಇಡೀ ಪಂದ್ಯದ ದಿಕ್ಕನ್ನೇ ಸಂಪೂರ್ಣವಾಗಿ ಬದಲಾಯಿಸಿದರು ಎಂದರೆ ತಪ್ಪಾಗಲಾರದು. ಮೂರು ವಿಕೆಟ್​ಗಳನ್ನು ಪಡೆದು ತಂಡದ ಗೆಲುವಿಗೆ ಕಾರಣರಾದ ಹೊಲ್ಲಾರ್ಡ್​, ಭಾನುವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಭಾರತ ವಿರುದ್ಧ ಇದೇ ರೀತಿಯ ಅದ್ಭುತ ಪ್ರದರ್ಶನ ನೀಡಲಿದ್ದಾರಾ? ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net