ಆರ್ಸಿಬಿ 18ನೇ ಆವೃತ್ತಿಯಲ್ಲಿ ಕಪ್ ಗೆಲುವಿನ ಬರ ನೀಗಿಸಿಕೊಂಡಿತು. 19ನೇ ಆವೃತ್ತಿಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಾಂಪಿಯನ್ ತಂಡದಂತೆಯೇ ಟೂರ್ನಿಯುದ್ದಕ್ಕೂ ಆಟವಾಡಿತು. ಅಲ್ಲದೆ ಎಲ್ಲ ವಿಭಾಗದಲ್ಲೂ ಬಲಿಷ್ಠ ನಿರ್ವಹಣೆ ತೋರಿಸಿತು. ರಜತ್ ಪಾಟೀದಾರ್ ಮುಂಚೂಣಿಯಲ್ಲಿ ನಿಂತು ತಂಡವನ್ನು ಸಮರ್ಥವಾಗಿ ನಿಭಾಯಿಸಿದರೆ, ವಿರಾಟ್ ಕೊಹ್ಲಿ ತಂಡದ ಪ್ರಮುಖ ಶಕ್ತಿಯಾಗಿ ಮುಂದುವರಿದರು. ಯಾವುದೇ ಪ್ರಮುಖ ಲೋಪದೋಷ, ದೌರ್ಬಲ್ಯಗಳಿಲ್ಲದೆ ಸಂಪೂರ್ಣ ಪರಾಕ್ರಮ ಪ್ರದರ್ಶಿಸಿತು. ಟೂರ್ನಿಯಲ್ಲಿ ಆಡಿದ 10 ತಂಡಗಳ ಪೈಕಿ ಆರ್ಸಿಬಿಯಷ್ಟು ಸಮತೋಲನ, ಸರ್ವಾಂಗೀಣ ಮತ್ತು ಬಲಿಷ್ಠವಾದ ತಂಡ ಬೇರಾವುದೂ ಕಾಣಿಸಲಿಲ್ಲ. ಉತ್ತಮ ಆರಂಭದ ಕೊರತೆ, ದುರ್ಬಲ ಮಧ್ಯಮ ಕ್ರಮಾಂಕ, ಬೌಲಿಂಗ್ ವಿಭಾಗದಲ್ಲಿ ವೈಫಲ್ಯ, ಕಳಪೆ ಫೀಲ್ಡಿಂಗ್ ವಿಭಾಗದಂಥ ಲೋಪಗಳು ಇತರ ಕೆಲ ತಂಡಗಳಲ್ಲಿ ಎದ್ದು ಕಾಣಿಸಿದವು.