ಅಂದು ಕಡಿಮೆ ಬೆಲೆಯ ಡೀಲ್… ಇಂದು ಕೋಟಿ ಕೋಟಿ ಡೀಲ್! RR ತಂಡ ಖರೀದಿಸಿದ ಯಾರೀ ಈ ಕುಬೇರ ಕಲ್ ಸೋಮಾನಿ?

RR
RR
Published on
ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಸೀಸನ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಐಪಿಎಲ್‌ನ ಮೊದಲ ಆವೃತ್ತಿಯ ಚಾಂಪಿಯನ್ಸ್ ರಾಜಸ್ಥಾನ್ ರಾಯಲ್ಸ್ (RR) ತಂಡವು ಬರೋಬ್ಬರಿ 1.63 ಬಿಲಿಯನ್ ಡಾಲರ್ (ಸುಮಾರು ₹15,000 ಕೋಟಿಗೂ ಅಧಿಕ) ಮೊತ್ತಕ್ಕೆ ಮಾರಾಟವಾಗುವ ಮೂಲಕ ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾ ಫ್ರಾಂಚೈಸಿಗಳ ಪಟ್ಟಿಗೆ ಸೇರ್ಪಡೆಯಾಗಿದೆ.
ಹೌದು,ಅಮೆರಿಕ ಮೂಲದ ಉದ್ಯಮಿ ಕಲ್ ಸೋಮಾನಿ (Kal Somani) ನೇತೃತ್ವದ ಒಕ್ಕೂಟವು ಈ ಬೃಹತ್ ಮೊತ್ತಕ್ಕೆ ತಂಡವನ್ನು ತನ್ನದಾಗಿಸಿಕೊಂಡಿದೆ. ವಿಶೇಷವೆಂದರೆ, ಈ ಮಾರಾಟವು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ವ್ಯವಹಾರ ಎಂದು ಪಿಟಿಐ ವರದಿ ಮಾಡಿದೆ.

ಯಾರೀ ಕಲ್ ಸೋಮಾನಿ? ಇವರ ಹಿನ್ನೆಲೆ ಏನು?

ಅಮೆರಿಕದ ಅರಿಜೋನಾದ ಸ್ಕಾಟ್ಸ್‌ಡೇಲ್ ಮೂಲದವರಾದ ಕಲ್ ಸೋಮಾನಿ ಅವರು ಕೇವಲ ಉದ್ಯಮಿ ಮಾತ್ರವಲ್ಲ, ತಂತ್ರಜ್ಞಾನ ಮತ್ತು ಕ್ರೀಡಾ ಜಗತ್ತಿನ ಪ್ರಭಾವಿ ವ್ಯಕ್ತಿ.ಸೋಮಾನಿ ಅವರು ಎಡ್-ಟೆಕ್, ಕೃತಕ ಬುದ್ಧಿಮತ್ತೆ (AI), ಕ್ರೀಡಾ ತಂತ್ರಜ್ಞಾನ ಮತ್ತು ಡೇಟಾ ಗೌಪ್ಯತೆ ಕ್ಷೇತ್ರಗಳಲ್ಲಿ 15 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿದ್ದಾರೆ.ಇವರು ತಾಂತ್ರಿಕ ಸೇವಾ ಸಂಸ್ಥೆಯಾದ IntraEdge ಮತ್ತು ಡೇಟಾ ಸಾಫ್ಟ್‌ವೇರ್ ಸಂಸ್ಥೆ Truyo ನ ಸ್ಥಾಪಕರಾಗಿದ್ದಾರೆ.
ನಿವ್ವಳ ಆಸ್ತಿ: ವರದಿಯ ಪ್ರಕಾರ, ಸೋಮಾನಿ ಅವರ ನಿವ್ವಳ ಆಸ್ತಿ ಮೌಲ್ಯ 110 ಬಿಲಿಯನ್ ಡಾಲರ್ (₹9 ಲಕ್ಷ ಕೋಟಿಗೂ ಅಧಿಕ) ಎಂದು ಅಂದಾಜಿಸಲಾಗಿದೆ. ಈ ಮೂಲಕ ಅವರು ಅಮೆರಿಕದ ಅತ್ಯಂತ ಶ್ರೀಮಂತ ಕ್ರೀಡಾ ಮಾಲೀಕರಾಗಿ ಹೊರಹೊಮ್ಮಿದ್ದಾರೆ.

ಬೆನ್ನಿಗಿರೋದು ವಿಶ್ವದ ನಂ.1 ಕಂಪನಿ 'ವಾಲ್‌ಮಾರ್ಟ್'!

ಈ ಬೃಹತ್ ಹೂಡಿಕೆಯಲ್ಲಿ ಕಲ್ ಸೋಮಾನಿ ಅವರಿಗೆ ವಿಶ್ವದ ಅತಿದೊಡ್ಡ ರಿಟೇಲ್ ಕಂಪನಿ ವಾಲ್‌ಮಾರ್ಟ್ (Walmart) ಮಾಲೀಕತ್ವದ ರಾಬ್ ವಾಲ್ಟನ್ ಮತ್ತು ಹ್ಯಾಂಪ್ ಕುಟುಂಬ ಬೆಂಬಲ ನೀಡಿದೆ. ಸೋಮಾನಿ ಅವರು 2021 ರಿಂದಲೇ ರಾಜಸ್ಥಾನ್ ರಾಯಲ್ಸ್‌ನಲ್ಲಿ ಹೂಡಿಕೆದಾರರಾಗಿದ್ದರು. ಐಪಿಎಲ್‌ನ ಬೆಳವಣಿಗೆಯನ್ನು ಮೊದಲೇ ಗುರುತಿಸಿದ್ದ ಅವರು, ಅಂದು "ಐಪಿಎಲ್ ಭವಿಷ್ಯದ ಮೇಲೆ ನಮಗೆ ಅಪಾರ ನಂಬಿಕೆ ಇದೆ" ಎಂದು ಹೇಳಿದ್ದರು.

ತೀವ್ರ ಪೈಪೋಟಿ ಮತ್ತು ಸೋತ ದಿಗ್ಗಜರು

ರಾಜಸ್ಥಾನ್ ರಾಯಲ್ಸ್ ಖರೀದಿಸಲು ಭಾರತದ ಮತ್ತು ಜಗತ್ತಿನ ಪ್ರಮುಖ ಉದ್ಯಮಿಗಳ ನಡುವೆ ದೊಡ್ಡ ಪೈಪೋಟಿ ಏರ್ಪಟ್ಟಿತ್ತು. ಟೈಮ್ಸ್ ಇಂಟರ್ನೆಟ್, ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಆರ್ಸೆಲರ್ ಮಿತ್ತಲ್ ಸಿಇಒ ಆದಿತ್ಯ ಮಿತ್ತಲ್ ಅವರ ಕುಟುಂಬ ಕೂಡ ಬಿಡ್ ಸಲ್ಲಿಸಿತ್ತು. ವಿಶ್ವದ ಅತಿದೊಡ್ಡ ಆಸ್ತಿ ನಿರ್ವಹಣಾ ಸಂಸ್ಥೆಯಾದ ಬ್ಲ್ಯಾಕ್‌ಸ್ಟೋನ್ ಕೂಡ ಆರ್‌ಆರ್ ಅಥವಾ ಆರ್‌ಸಿಬಿ ತಂಡದ ಮೇಲೆ $300 ಮಿಲಿಯನ್ ಹೂಡಿಕೆ ಮಾಡಲು ತುದಿಗಾಲಲ್ಲಿ ನಿಂತಿತ್ತು. ಆದರೆ, ಸೋಮಾನಿ ನೇತೃತ್ವದ ತಂಡವು ಅಂತಿಮವಾಗಿ ಬಿಡ್ ಗೆದ್ದು ಇತಿಹಾಸ ಸೃಷ್ಟಿಸಿತು.

ಡೀಲ್ ಯಾವಾಗ ಜಾರಿಗೆ ಬರಲಿದೆ?

ಸದ್ಯದ ಮಾಹಿತಿಯ ಪ್ರಕಾರ, ಈ ಬೃಹತ್ ಖರೀದಿ ಒಪ್ಪಂದವು IPL 2026 ರ ನಂತರ ಅಧಿಕೃತವಾಗಿ ಜಾರಿಗೆ ಬರಲಿದೆ. ಅಂದರೆ ಅಲ್ಲಿಯವರೆಗೆ ಮನೋಜ್ ಬದಲೆ ನೇತೃತ್ವದ ಹಾಲಿ ಆಡಳಿತ ಮಂಡಳಿಯೇ ಕಾರ್ಯನಿರ್ವಹಿಸಲಿದೆ. ತಂಡದ ಮೌಲ್ಯವು ಕಳೆದ ಐದು ವರ್ಷಗಳಲ್ಲಿ 10 ಪಟ್ಟು ಹೆಚ್ಚಾಗಿರುವುದು ಐಪಿಎಲ್ ಬ್ರ್ಯಾಂಡ್ ಮೌಲ್ಯದ ತಾಕತ್ತನ್ನು ತೋರಿಸುತ್ತದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net