ಕೊನೇ ಕ್ಷಣದಲ್ಲಿ ಮಾಡಿದ ಆ ಒಂದು ತಪ್ಪೇ ನಮ್ಮ ಸೋಲಿಗೆ ಕಾರಣವಾಯಿತು ಎಂದ ನಾಯಕ ಶುಭಮಾನ್​ ಗಿಲ್​! Shubman Gill

ಕೊನೇ ಕ್ಷಣದಲ್ಲಿ ಮಾಡಿದ ಆ ಒಂದು ತಪ್ಪೇ ನಮ್ಮ ಸೋಲಿಗೆ ಕಾರಣವಾಯಿತು ಎಂದ ನಾಯಕ ಶುಭಮಾನ್​ ಗಿಲ್​! Shubman Gill
ಕೊನೇ ಕ್ಷಣದಲ್ಲಿ ಮಾಡಿದ ಆ ಒಂದು ತಪ್ಪೇ ನಮ್ಮ ಸೋಲಿಗೆ ಕಾರಣವಾಯಿತು ಎಂದ ನಾಯಕ ಶುಭಮಾನ್​ ಗಿಲ್​! Shubman Gill
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ಸರಣಿ ವೈಟ್‌ವಾಶ್ ಬೆನ್ನಲ್ಲೇ ಏಕದಿನ ಸರಣಿಯನ್ನೂ ಇಂಗ್ಲೆಂಡ್ ಕೈಗೆ ಒಪ್ಪಿಸಿದ ಟೀಮ್ ಇಂಡಿಯಾ
  • ಬೆನ್ ಡಕೆಟ್ ಭರ್ಜರಿ ಶತಕದ ನೆರವಿನಿಂದ ಭಾರತಕ್ಕೆ 27 ರನ್‌ಗಳ ಸೋಲುಣಿಸಿ ಸರಣಿ ಗೆದ್ದ ಇಂಗ್ಲೆಂಡ್
  • ಲಾರ್ಡ್ಸ್ ಮೈದಾನದಲ್ಲಿ ರೋಹಿತ್ ಶರ್ಮಾ ಶತಕ ಹೋರಾಟ ವ್ಯರ್ಥವಾಗಿ ಮೂರನೇ ಏಕದಿನ ಪಂದ್ಯದಲ್ಲಿ ಎಡವಿದ ಭಾರತ
  • ಕೊನೆಯ ಮೂರು ಓವರ್‌ಗಳಲ್ಲಿ ಅತಿಯಾಗಿ ರನ್ ಬಿಟ್ಟುಕೊಟ್ಟಿದ್ದೇ ಸೋಲಿಗೆ ಪ್ರಮುಖ ಕಾರಣ ಎಂದ ನಾಯಕ ಶುಭಮನ್ ಗಿಲ್
Shubman Gill : ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ವೈಟ್‌ವಾಶ್ ಮುಖಭಂಗ ಅನುಭವಿಸಿದ್ದ ಭಾರತ ಕ್ರಿಕೆಟ್ ತಂಡ, ಇದೀಗ ಮೂರು ಪಂದ್ಯಗಳ ಏಕದಿನ ಸರಣಿಯನ್ನೂ 1-2 ಅಂತರದಿಂದ ಕೈಚೆಲ್ಲಿದೆ. ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ಭಾನುವಾರ ನಡೆದ ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 27 ರನ್‌ಗಳ ಸೋಲು ಅನುಭವಿಸಿತು. ಬೌಲಿಂಗ್ ಮಾಡುವಾಗ ಕೊನೆಯ ಮೂರು ಓವರ್‌ಗಳಲ್ಲಿ ಅತಿಯಾಗಿ ರನ್‌ಗಳನ್ನು ಬಿಟ್ಟುಕೊಟ್ಟಿದ್ದೇ ಪಂದ್ಯ ಕೈಜಾರಲು ಪ್ರಮುಖ ಕಾರಣವಾಯಿತು ಎಂದು ಟೀಮ್ ಇಂಡಿಯಾ ನಾಯಕ ಶುಭಮಾನ್ ಗಿಲ್ ಪಂದ್ಯದ ನಂತರ ತಿಳಿಸಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ, ಬೆನ್​ ಡಕೆಟ್​ (141 ರನ್, 135 ಎಸೆತ, 18 ಬೌಂಡರಿ, 1 ಸಿಕ್ಸರ್) ಬಾರಿಸಿದ ಭರ್ಜರಿ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 387 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಇವರ ಜೊತೆಗೆ ಜೇಕಬ್ ಬೆಥೆಲ್ (91 ರನ್) ಕೂದಲೆಳೆಯ ಅಂತರದಲ್ಲಿ ಶತಕ ವಂಚಿತರಾದರೆ, ಜೋ ರೂಟ್ (74 ನಾಟೌಟ್) ಅರ್ಧಶತಕ ಸಿಡಿಸಿ ಮಿಂಚಿದರು. ಕೊನೆಯಲ್ಲಿ ಜೋಸ್ ಬಟ್ಲರ್ (41 ನಾಟೌಟ್, 13 ಎಸೆತ, 4 ಬೌಂಡರಿ, 3 ಸಿಕ್ಸರ್) ಬಿರುಗಾಳಿ ಬ್ಯಾಟಿಂಗ್ ನಡೆಸಿ ರನ್​ ಮಳೆ ಹರಿಸಿದರು. ಭಾರತದ ಬೌಲರ್‌ಗಳ ಪೈಕಿ ಪ್ರಸಿದ್ಧ್ ಕೃಷ್ಣ ಎರಡು ವಿಕೆಟ್ ಹಾಗೂ ಪ್ರಿನ್ಸ್ ಯಾದವ್ ಒಂದು ವಿಕೆಟ್ ಪಡೆದರು.
ಬೃಹತ್ ಗುರಿ ಬೆನ್ನಟ್ಟಿದ ಭಾರತಕ್ಕೆ ರೋಹಿತ್ ಶರ್ಮ (138 ರನ್, 110 ಎಸೆತ, 17 ಬೌಂಡರಿ, 5 ಸಿಕ್ಸರ್) ಅವರ ಭರ್ಜರಿ ಶತಕ ಹಾಗೂ ಶುಭಮಾನ್ ಗಿಲ್ (77 ರನ್) ಮತ್ತು ವಿರಾಟ್ ಕೊಹ್ಲಿ (74 ರನ್) ಅವರ ಜವಾಬ್ದಾರಿಯುತ ಅರ್ಧಶತಕಗಳು ಉತ್ತಮ ನೆರವು ನೀಡಿದವು. ಆದಾಗ್ಯೂ 388 ರನ್‌ಗಳ ಕಠಿಣ ಗುರಿ ತಲುಪಲು ಸಾಧ್ಯವಾಗದೆ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 360 ರನ್‌ಗಳಷ್ಟೇ ಗಳಿಸಿ ಸೋಲೊಪ್ಪಿಕೊಂಡಿತು. ಇಂಗ್ಲೆಂಡ್ ಪರ ಮಾರಕ ಬೌಲಿಂಗ್ ನಡೆಸಿದ ಸ್ಯಾಮ್ ಕರನ್ ನಾಲ್ಕು ವಿಕೆಟ್ ಕಬಳಿಸಿದರೆ, ಜೋಫ್ರಾ ಆರ್ಚರ್, ಆದಿಲ್ ರಶೀದ್ ಮತ್ತು ಜೇಕಬ್ ಬೆಥೆಲ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಪಂದ್ಯದ ನಂತರ ಸೋಲಿಗೆ ಪ್ರತಿಕ್ರಿಯಿಸಿದ ಟೀಮ್ ಇಂಡಿಯಾ ನಾಯಕ ಶುಭಮಾನ್ ಗಿಲ್, ಈ ಸೋಲು ತೀವ್ರ ನಿರಾಶೆ ತಂದಿದೆ ಎಂದಿದ್ದಾರೆ. ವಿಶೇಷವಾಗಿ ಪವರ್‌ಪ್ಲೇ ಅವಧಿಯಲ್ಲಿ ಸೂಕ್ತ ಲೈನ್ ಮತ್ತು ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ ಹಾಗೂ ಡೆತ್ ಓವರ್‌ಗಳ ಕೊನೆಯ ಮೂರು ಓವರ್‌ಗಳಲ್ಲಿ ಸುಮಾರು 60 ರನ್‌ಗಳನ್ನು ಬಿಟ್ಟುಕೊಟ್ಟಿದ್ದೇ ಪಂದ್ಯ ಕೈಜಾರಲು ಮುಖ್ಯ ಕಾರಣವಾಯಿತು ಎಂದು ಗಿಲ್​ ಅವರು ಒಪ್ಪಿಕೊಂಡಿದ್ದಾರೆ. ಎದುರಾಳಿ ತಂಡದ ಆರಂಭಿಕರು ಇದರ ಪೂರ್ಣ ಲಾಭ ಪಡೆದು ಅದ್ಭುತವಾಗಿ ಆಡಿದರು ಮತ್ತು ನಮಗೆ ಪಂದ್ಯಕ್ಕೆ ಮರಳಲು ಅವಕಾಶವೇ ನೀಡಲಿಲ್ಲ ಎಂದು ಗಿಲ್ ಅಭಿಪ್ರಾಯಪಟ್ಟರು.
ಬೃಹತ್ ಗುರಿ ಬೆನ್ನಟ್ಟುವ ಯೋಜನೆಯ ಕುರಿತು ಮಾತನಾಡಿದ ಗಿಲ್, 40 ಓವರ್‌ಗಳವರೆಗೆ ಹೆಚ್ಚು ವಿಕೆಟ್ ಕಳೆದುಕೊಳ್ಳದೆ ರನ್ ರೇಟ್ ಅನ್ನು 6 ರಿಂದ 6.5 ರಷ್ಟರಲ್ಲಿ ಕಾಯ್ದುಕೊಳ್ಳುವುದು ನಮ್ಮ ತಂತ್ರವಾಗಿತ್ತು. ಕೊನೆಯ 10 ಓವರ್‌ಗಳಲ್ಲಿ 100 ರಿಂದ 110 ರನ್ ಗಳಿಸಿದರೆ ಪಂದ್ಯದ ಫಲಿತಾಂಶವೇ ಬೇರೆಯಾಗುತ್ತಿತ್ತು ಮತ್ತು ನಾವು 45ನೇ ಓವರ್‌ವರೆಗೂ ಹೋರಾಟದಲ್ಲಿದ್ದೆವು ಎಂದು ತಿಳಿಸಿದರು.
ಸರಣಿ ಸೋತರೂ ತಂಡಕ್ಕೆ ಹಲವು ಪಾಸಿಟಿವ್​ ಅಂಶಗಳಿವೆ ಎಂದ ನಾಯಕ, ಬಹುತೇಕ ಬ್ಯಾಟರ್‌ಗಳು ರನ್ ಗಳಿಸಿದ್ದರೆ, ಬೌಲರ್‌ಗಳು ವಿಕೆಟ್ ಪಡೆದಿದ್ದಾರೆ ಎಂದು ವಿವರಿಸಿದರು. ಇದೇ ವೇಳೆ ಹಿರಿಯ ಆಟಗಾರರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರನ್ನು ಶ್ಲಾಘಿಸಿದ ಗಿಲ್, ಕೊನೆಯ ಹಂತದಲ್ಲಿ ಪಿಚ್ ತುಸು ಮಂದಗತಿಯಲ್ಲಿದ್ದರೂ ರೋಹಿತ್ ಶರ್ಮಾ ಆಡಿದ ಭರ್ಜರಿ 138 (140) ರನ್‌ಗಳ ಇನಿಂಗ್ಸ್ ಅದ್ಭುತವಾಗಿತ್ತು ಮತ್ತು ಅದನ್ನು ವೀಕ್ಷಿಸುವುದೇ ಒಂದು ಸೌಭಾಗ್ಯವಾಗಿತ್ತು ಎಂದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net