ಅದೊಂದು ಕಾರಣಕ್ಕೆ ಸಿಎಸ್​ಕೆ ಗುಡ್​ಬೈ ಹೇಳೋದನ್ನು 4 ವರ್ಷ ಮುಂದೂಡಿದ್ರು! ಮೆಂಟರ್​ ಧೋನಿ ಬಗ್ಗೆ ಮೊಹಮ್ಮದ್​ ಕೈಫ್​ ಅಚ್ಚರಿ ಹೇಳಿಕೆ

MS Dhoni
ಅದೊಂದು ಕಾರಣಕ್ಕೆ ಸಿಎಸ್​ಕೆ ಗುಡ್​ಬೈ ಹೇಳೋದನ್ನು 4 ವರ್ಷ ಮುಂದೂಡಿದ್ರು! ಮೆಂಟರ್​ ಧೋನಿ ಬಗ್ಗೆ ಮೊಹಮ್ಮದ್​ ಕೈಫ್​ ಅಚ್ಚರಿ ಹೇಳಿಕೆ
Published on: 

ನವದೆಹಲಿ: ಐಪಿಎಲ್​ನ ಬಲಿಷ್ಠ ಹಾಗೂ ಬುದ್ಧಿವಂತ ಫ್ರಾಂಚೈಸಿ ಎಂದೇ ಕರೆಸಿಕೊಳ್ಳುವ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಇದೀಗ ದಿಗ್ಗಜ ಕ್ರಿಕೆಟಿಗ, ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್ ಧೋನಿ ಅವರು ಅಧಿಕೃತವಾಗಿ ಹೇಳಿದ ಗುಡ್​ಬೈ ಬರಸಿಡಿಲು ಬಡಿದಂತಾಗಿದೆ. ನಿವೃತ್ತಿ ಕೊಟ್ಟರೂ ಸಿಎಸ್​ಕೆ ಜತೆಗಿನ ನಂಟು ಬಿಡದೆ, 20ನೇ ಸೀಸನ್​ನಿಂದ ಮೆಂಟರ್​ ಆಗಿ ಅಧಿಕಾರ ವಹಿಸಲಿರುವ ಧೋನಿ ಬಗ್ಗೆ ಸದ್ಯ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಮೊಹಮ್ಮದ್​ ಕೈಫ್​ ಆಶ್ಚರ್ಯಕರ ಸಂಗತಿಯೊಂದನ್ನು ಈಗ ರಿವೀಲ್ ಮಾಡಿದ್ದಾರೆ.

ತಂಡದ ಸೋಲಿನ ಹೊಣೆಯೂ...

ಮುಂದಿನ ವರ್ಷದಿಂದ ಸಿಎಸ್​ಕೆ ತಂಡದಲ್ಲಿ ಮಹತ್ವದ ಬದಲಾವಣೆಯಾಗುವ ನಿರೀಕ್ಷೆಯಿದೆ. ಆಟಗಾರನಾಗಿ ಧೋನಿ ಇಲ್ಲದೆ ಸಿಎಸ್‌ಕೆ ತಂಡ ಹೊಸ ರೀತಿಯಲ್ಲಿ ಮುನ್ನಡೆಯಬೇಕಿದೆ. ಅಸಲಿಗೆ, ಮಹೇಂದ್ರ ಸಿಂಗ್ ಧೋನಿ ತಂಡಕ್ಕೆ ಕೊಡುತ್ತಿದ್ದ ಕೊಡುಗೆ ಕೇವಲ ನಾಯಕತ್ವಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಟೀಮ್​ ಗೆದ್ದಾಗ ಎಷ್ಟು ಗೌರವ ಸ್ವೀಕಾರ ಮಾಡುತ್ತಿದ್ದರೋ, ತಂಡ ಸೋತಾಗ ಎಲ್ಲ ಟೀಕೆಗಳನ್ನೂ ಧೋನಿ ಸ್ವತಃ ತಮ್ಮ ಮೇಲೆ ತೆಗೆದುಕೊಳ್ಳುತ್ತಿದ್ದರು ಎಂದಿದ್ದಾರೆ.

ಪ್ರತಿ ಪಂದ್ಯದಲ್ಲಿಯೂ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ಸದಾ ಮುಂದಿದ್ದರು. ಸಿಎಸ್‌ಕೆ ಸೋತಾಗ ಜನರು ಕೋಚ್​ ಸ್ಟೀಫನ್ ಫ್ಲೆಮಿಂಗ್ ಕಡೆ ನೋಡುತ್ತಿರಲಿಲ್ಲ. ಬದಲಿಗೆ ಧೋನಿಯದ್ದೇ ತಪ್ಪು! ಅವರಿಂದಲೇ ತಂಡ ಸೋತಿತು ಎಂದು ಹೇಳಿಬಿಡುತ್ತಿದ್ದರು. ಅದೇ, ಗೆಲುವಿನ ಶ್ರೇಯಸ್ಸು ಸಿಕ್ಕಾಗ ಅದೇ ಧೋನಿ, ಸೋಲಿನ ಹೊಣೆಯನ್ನು ತಾವೇ ಒಪ್ಪಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಆಟಗಾರರು ಟೀಕೆಗಳನ್ನು ಎದುರಿಸಲು ಹಿಂಜರಿಯುತ್ತಾರೆ. ಆದರೆ, ಮಾಹಿ ಮಾತ್ರ ಆ ಜವಾಬ್ದಾರಿಯಿಂದ ಎಂದೂ ಹಿಂದೆ ಸರಿಯಲಿಲ್ಲ ಎಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಮೆಂಟರ್ ಆಗಿ ಧೋನಿಗೆ ಸವಾಲು!

ಆಟಗಾರನಾಗಿ ಮೈದಾನದಲ್ಲಿದ್ದು, ತಕ್ಷಣಕ್ಕೆ ಚುರುಕಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಧೋನಿಗೂ, ಈಗ ಹೊರಗಿದ್ದು ಮೆಂಟರ್ ಆಗಿ ಮಾರ್ಗದರ್ಶನ ನೀಡುವುದಕ್ಕೂ ಸಾಕಷ್ಟು ವ್ಯತ್ಯಾಸ ಇರಲಿದೆ. ಟಿ20 ಪಂದ್ಯದಲ್ಲಿ ಪ್ರತಿ ಎಸೆತವೂ ಪಂದ್ಯದ ಗತಿಯನ್ನು ಬದಲಾಯಿಸಬಹುದು. ಹೊರಗಿನಿಂದ ಏನೂ ಬೇಕಾದರೂ ಹೇಳಬಹುದು. ಆದರೆ, ಮೈದಾನದಲ್ಲಿ ನಡೆಯುವ ಸಂದರ್ಭಗಳಲ್ಲಿ ತಕ್ಷಣ ನಿರ್ಧಾರ ಕೈಗೊಳ್ಳುವ ಅವಕಾಶ ಧೋನಿಗೆ ಇರುವುದಿಲ್ಲ ಎಂದರು.

ಹೊರಗಿನಿಂದ ಆಟಕ್ಕೆ ಕೊಡುಗೆ ನೀಡುವ ಅವಕಾಶ ತುಂಬಾ ಕಡಿಮೆ. ಆನ್​-ಸ್ಪಾಟ್​ ನಿರ್ಧಾರ ತೆಗೆದುಕೊಳ್ಳುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸುತ್ತಿದ್ದ ಮಾಹಿಯ ಉಪಸ್ಥಿತಿ ಈಗ ಸಿಎಸ್​ಕೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಧೋನಿಗೆ ಈ ವ್ಯತ್ಯಾಸದ ಅರಿವಿತ್ತು. ಇದೇ ಕಾರಣಕ್ಕೆ ಅವರು ತಮ್ಮ ಆಟಗಾರನ ಕರಿಯರ್​ ಅನ್ನು ಇನ್ನೂ ಮೂರು ಅಥವಾ ನಾಲ್ಕು ವರ್ಷಕ್ಕೆ ಮುಂದೂಡಿದರು. ಅದಕ್ಕೆ ಮುಖ್ಯ ಕಾರಣವೇ ಇದಾಗಿತ್ತು ಎಂದು ಹೇಳಿದ್ದಾರೆ.

Also Read
ಜಮೀನು ಮಾರಿ ಬೀದಿಗೆ ಬಂದಿದ್ದ ತಂದೆಗೆ ಕೊನೆಗೂ ಕೈಹಿಡಿದ ಪುತ್ರರು! ಅಪ್ಪನ ಆಸೆ, ಹೆಸರುಳಿಸಿದ ಅಣ್ಣ-ತಮ್ಮನ ಯಶೋಗಾಥೆಗೆ ನೆಟ್ಟಿಗರು ಸಲಾಂ
MS Dhoni

2021ರಲ್ಲಿ ಟೀಮ್ ಇಂಡಿಯಾಗೆ ಮೆಂಟರ್

ಧೋನಿ ಈ ಹಿಂದೆ 2021ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಮೆಂಟರ್ ಆಗಿ ಕೆಲಸ ಮಾಡಿದ್ದಾರೆ. ಆದರೆ, ಆ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಲು ವಿಫಲವಾಯಿತು. ಇದೀಗ ಸಿಎಸ್‌ಕೆ ತಂಡದಲ್ಲೂ ಮೆಂಟರ್ ಪಾತ್ರ ವಹಿಸುವುದರಿಂದ, ಈ ಹೊಸ ಜವಾಬ್ದಾರಿಯನ್ನು ಅವರು ಹೇಗೆ ನಿರ್ವಹಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ಸಿಎಸ್‌ಕೆ ಕೋಚಿಂಗ್ ವಿಭಾಗದಲ್ಲೂ ಬದಲಾವಣೆ

ಇನ್ನೊಂದೆಡೆ, ಸಿಎಸ್‌ಕೆ ತಂಡದ ಕೋಚಿಂಗ್ ವಿಭಾಗದಲ್ಲೂ ಬದಲಾವಣೆಗಳಾಗಿವೆ. 18 ವರ್ಷಗಳ ಕಾಲ ತಂಡದ ಮುಖ್ಯ ಕೋಚ್ ಆಗಿದ್ದ ಸ್ಟೀಫನ್ ಫ್ಲೆಮಿಂಗ್ ಅವರ ಎಕ್ಸಿಟ್​ ಬೆನ್ನಲ್ಲೇ, ಭಾರತದ ಮಾಜಿ ವೇಗಿ ಜಹೀರ್ ಖಾನ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಆಲ್ಬಿ ಮಾರ್ಕೆಲ್ ಎಂದಿನಂತೆ ಸಹಾಯಕ ಕೋಚ್ ಆಗಿ ತಂಡಕ್ಕೆ ಮರಳಲಿದ್ದಾರೆ,(ಏಜೆನ್ಸೀಸ್).