ಮಾಜಿ ಸಹ-ಆಟಗಾರ ಗುರುಶರಣ್​ ಸಹಾಯ ನೆನೆದ ಸಚಿನ್​ ತೆಂಡುಲ್ಕರ್​; ಹೀಗಿದೆ ಕಾರಣ...

ಮಾಜಿ ಸಹ-ಆಟಗಾರ ಗುರುಶರಣ್​ ಸಹಾಯ ನೆನೆದ ಸಚಿನ್​ ತೆಂಡುಲ್ಕರ್
ಮಾಜಿ ಸಹ-ಆಟಗಾರ ಗುರುಶರಣ್​ ಸಹಾಯ ನೆನೆದ ಸಚಿನ್​ ತೆಂಡುಲ್ಕರ್
Published on
ಮುಂಬೈ: ಸಚಿನ್​ ತೆಂಡುಲ್ಕರ್ (Sachin Tendulkar)​ 1989ರ ಇರಾನಿ ಕಪ್​ ಪಂದ್ಯದಲ್ಲಿ ದೆಹಲಿ ವಿರುದ್ಧ ಶೇಷ ಭಾರತ ಪರ ಶತಕ ಸಿಡಿಸಿದ ಸಾಹಸವು ಭಾರತ ತಂಡವನ್ನು ಪ್ರವೇಶಿಸಲು ಸಹಾಯ ಮಾಡಿತ್ತು. ಆದರೆ ಆ ಪಂದ್ಯದಲ್ಲಿ ಗುರುಶರಣ್​ ಸಿಂಗ್​ (Gursharan Singh) ಎಂಬ ಸಹ-ಆಟಗಾರ, ಕೈಬೆರಳು ಮೂಳೆಮುರಿತದ ನಡುವೆಯೂ ಬ್ಯಾಟಿಂಗ್​ಗೆ ಇಳಿದು 16 ವರ್ಷದ ಸಚಿನ್​ಗೆ ಶತಕ ಪೂರೈಸಲು ನೆರವಾಗದಿದ್ದರೆ ಅವರು ಅಷ್ಟು ಬೇಗನೆ ಭಾರತ ತಂಡ ಪ್ರವೇಶಿಸಲು ಕೂಡ ಸಾಧ್ಯವಾಗುತ್ತಿರಲಿಲ್ಲ.

ಗುರುಶರಣ್​ ಅವರ ಆ ಸಹಾಯವನ್ನು ಸಚಿನ್​ ತೆಂಡುಲ್ಕರ್​ ಮಂಗಳವಾರ ಸಮಾರಂಭವೊಂದರಲ್ಲಿ ಮೆಲುಕು ಹಾಕಿದ್ದಾರೆ. ಅಲ್ಲದೆ, ಅಂದು ಗುರುಶರಣ್​ ಶತಕ ಸಿಡಿಸಲು ನೆರವಾಗಿದ್ದರಿಂದಲೇ ನಾನು ಭಾರತ ತಂಡಕ್ಕೆ ಆಯ್ಕೆಯಾಗಿದ್ದೆ ಎಂದಿದ್ದಾರೆ. 555 ರನ್​ಗಳ ಬೃಹತ್​ ಗುರಿ ಪಡೆದಿದ್ದ ಶೇಷ ಭಾರತದ 9ನೇ ವಿಕೆಟ್​ ಬಿದ್ದಾಗ ಸಚಿನ್​ 90ರ ಗಡಿ ದಾಟಿದ್ದರು. ಗುರುಶರಣ್​ ಗಾಯದಿಂದಾಗಿ ಬ್ಯಾಟಿಂಗ್​ಗೆ ಇಳಿಯುವ ನಿರೀಕ್ಷೆ ಇರಲಿಲ್ಲ. ಆದರೆ ಆಗಿನ ಆಯ್ಕೆ ಸಮಿತಿ ಅಧ್ಯಕ್ಷ ರಾಜ್​ ಸಿಂಗ್​ ಡುಂಗರ್​ಪುರ್​ ಮನವಿಯ ಮೇರೆಗೆ ಗುರುಶರಣ್​ ಗಾಯದ ನಡುವೆಯೂ ಬ್ಯಾಟಿಂಗ್​ಗೆ ಇಳಿದು ಸಚಿನ್​ ಶತಕ ಪೂರೈಸುವವರೆಗೆ ಸಾಥ್​ ನೀಡಿದ್ದರು. ಪಂಜಾಬ್​ ಬ್ಯಾಟರ್​ ಗುರುಶರಣ್​ 1990ರಲ್ಲಿ ಭಾರತ ಪರ ತಲಾ 1 ಏಕದಿನ, ಟೆಸ್ಟ್​ ಆಡುವ ಅವಕಾಶವನ್ನೂ ಪಡೆದಿದ್ದರು.

"ಗುರುಶರಣ್​ಗೆ ನಾನಾಗ ಮೈದಾನದಲ್ಲಿ ಮತ್ತು ಡ್ರೆಸ್ಸಿಂಗ್​ ರೂಮ್​ನಲ್ಲೂ ಅಪಾರ ಧನ್ಯವಾದಗಳನ್ನು ತಿಳಿಸಿದ್ದೆ. ಅವರ ಆ ದಿಟ್ಟ ನನ್ನ ಪಾಲಿಗೆ ಅತ್ಯಂತ ದೊಡ್ಡದಾಗಿತ್ತು. ನಾನಾಗ ಶತಕ ಸಿಡಿಸಿದರೂ, ಸಿಡಿಸದಿದ್ದರೂ, ನನಗೆ ನೆರವಾಗುವ ಸಲುವಾಗಿ ಅವರು ಇಟ್ಟ ದಿಟ್ಟ ಹೆಜ್ಜೆಯೇ ನನ್ನ ಹೃದಯವನ್ನು ತಟ್ಟಿತ್ತು' ಎಂದು ಸಚಿನ್​ ವಿವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net