ನವೆಂಬರ್​ 26, ಭಾರತದ ಟೆಸ್ಟ್​ ಕ್ರಿಕೆಟ್​ ಇಂದು ಸತ್ತಿದೆ... ಟೀಮ್​​ ಇಂಡಿಯಾ ಅಭಿಮಾನಿಗಳ ಆಕ್ರೋಶ! Team India

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್​ ಸರಣಿ ಸೋತ ಭಾರತ
ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್​ ಸರಣಿ ಸೋತ ಭಾರತ
Published on

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ಆಫ್ರಿಕಾ ವಿರುದ್ಧ ತವರು ನೆಲದಲ್ಲೇ ಟೀಮ್ ಇಂಡಿಯಾಗೆ ಸೋಲು
  • ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬೇಸರ ಹೊರಹಾಕಿದ ಅಭಿಮಾನಿಗಳು
  • ಗುವಾಹಟಿಯಲ್ಲಿ ಇಂದು ಭಾರತೀಯ ಟೆಸ್ಟ್ ಕ್ರಿಕೆಟ್ ಸತ್ತುಹೋಗಿದೆ ಎಂದು ಆಕ್ರೋಶ
  • ತನ್ನದೇ ನೆಲದಲ್ಲಿ ಸೋಲುವುದನ್ನು ಊಹಿಸಲೂ ಸಾಧ್ಯವಿಲ್ಲ ಎಂದ ಅಭಿಮಾನಿಗಳು.
ನವದೆಹಲಿ: ತವರು ನೆಲದಲ್ಲಿ ಟೀಮ್ ಇಂಡಿಯಾವನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ಆದರೆ, ಈಗ ಎಲ್ಲವೂ ಬದಲಾಗಿದೆ. ಯಾರು ಬೇಕಾದರೂ ಭಾರತವನ್ನು ಸೋಲಿಸಬಹುದು ಎಂದು ಟೀಮ್​ ಇಂಡಿಯಾ ( Team India ) ದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬೇಸರವನ್ನು ಹೊರಹಾಕುತ್ತಿದ್ದಾರೆ.
ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್​ ಇಂಡಿಯಾ ಹೀನಾಯವಾಗಿ ಸೋತಿರುವುದನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಕನಿಷ್ಠ ಹೋರಾಟವನ್ನು ಮಾಡದೇ ಎದುರಾಳಿಗಳ ಮುಂದೆ ಮಂಡಿಯೂರಿದ್ದನ್ನು ಫ್ಯಾನ್ಸ್​ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತವರು ನೆಲದಲ್ಲೇ ಟೀಮ್ ಇಂಡಿಯಾದ ಹೀನಾಯ ಸೋಲು ಅಭಿಮಾನಿಗಳನ್ನು ಮತ್ತಷ್ಟು ಕುಗ್ಗಿಸಿದೆ.
ಟೀಮ್ ಇಂಡಿಯಾವನ್ನು ತವರು ನೆಲದಲ್ಲೇ ಸೋಲಿಸಿ ಎಲ್ಲಾ ವಿಭಾಗಗಳಲ್ಲಿ ಮೇಲುಗೈ ಸಾಧಿಸಿದ್ದಕ್ಕಾಗಿ ಕ್ರೀಡಾಭಿಮಾನಿಗಳು ದಕ್ಷಿಣ ಆಫ್ರಿಕಾ ತಂಡವನ್ನು ಶ್ಲಾಘಿಸುತ್ತಿದ್ದಾರೆ. ಬಹಳ ದಿನಗಳ ನಂತರ ಭಾರತದ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿದ್ದಲ್ಲದೆ, ವೈಟ್‌ವಾಶ್ ಮಾಡಿದ್ದಕ್ಕಾಗಿ ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಅವರಿಗೆ ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ. ಹರಿಣ ಪಡೆ ಈ ಗೆಲುವಿಗೆ ಎಲ್ಲ ರೀತಿಯಲ್ಲೂ ಅರ್ಹರು ಎನ್ನುತ್ತಿದ್ದಾರೆ.
ಈ ಮಧ್ಯೆ, ಭಾರತದ ಹೀನಾಯ ಸೋಲಿಗೆ ಟೀಮ್ ಇಂಡಿಯಾ ಅಭಿಮಾನಿಗಳು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ದೂಷಿಸುತ್ತಿದ್ದಾರೆ. ಭಾರತೀಯ ಟೆಸ್ಟ್ ಕ್ರಿಕೆಟ್ ಅನ್ನು ಹಾಳು ಮಾಡಿದ್ದಕ್ಕಾಗಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಟೀಮ್ ಇಂಡಿಯಾ ಸೋಲಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಗುವಾಹಟಿಯಲ್ಲಿ ಇಂದು ಭಾರತೀಯ ಟೆಸ್ಟ್ ಕ್ರಿಕೆಟ್ ಸತ್ತುಹೋಗಿದೆ ಎಂದು ಕಟುವಾದ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಎದುರಾಳಿ ತಂಡಗಳು ಭಾರತೀಯ ತಂಡದೊಂದಿಗೆ ತಮ್ಮದೇ ಆದ ನೆಲದಲ್ಲಿ ಕ್ರಿಕೆಟ್ ಆಡಲು ಹೆದರುತ್ತಿದ್ದರು ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಭಾರತ ತಂಡವನ್ನು ಭಾರತ ನೆಲದಲ್ಲೇ ಸೋಲಿಸುತ್ತಿದ್ದಾರೆ ಎಂದು ಟೀಮ್​ ಇಂಡಿಯಾವನ್ನು ಟೀಕಿಸುತ್ತಿದ್ದಾರೆ. ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಮತ್ತು ಅಶ್ವಿನ್ ಅವರಂತಹ ದಿಗ್ಗಜ ಆಟಗಾರರು ಇದ್ದಂತಹ ತಂಡ ತನ್ನದೇ ಆದ ನೆಲದಲ್ಲಿ ಸೋಲುವುದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಇದಿಷ್ಟೇ ಅಲ್ಲದೆ, ತವರಿನಲ್ಲಿ ಟೀಮ್ ಇಂಡಿಯಾದ ಹೀನಾಯ ಸೋಲಿನ ನಂತರ ನೆಟ್ಟಿಗರು ಮೀಮ್ಸ್ ಮತ್ತು ಟ್ವೀಟ್‌ಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಅವರು ವಿಡಿಯೋಗಳು, ಕಾಮೆಂಟ್‌ಗಳು ಮತ್ತು ಅಂಕಿಅಂಶಗಳನ್ನು ಪೋಸ್ಟ್ ಮಾಡುವ ಮೂಲಕ ಟೀಮ್ ಇಂಡಿಯಾದ ಸೋಲಿನ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸುತ್ತಿದ್ದಾರೆ. ನಾವು ಇಷ್ಟು ಕೆಟ್ಟದಾಗಿ ಸೋಲುತ್ತೇವೆ ಎಂದು ಊಹೆ ಮಾಡಿರಲಿಲ್ಲ ಎಂದು ದುಃಖ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಅಂದಹಾಗೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC)-2025 ವಿಜೇತ ತಂಡವಾಗಿರುವ ದಕ್ಷಿಣ ಆಫ್ರಿಕಾ, WTC ಯ ಮತ್ತೊಂದು ಆವೃತ್ತಿಯ ಭಾಗವಾಗಿ ಎರಡು ಟೆಸ್ಟ್‌ಗಳನ್ನು ಆಡಲು ಭಾರತಕ್ಕೆ ಆಗಮಿಸಿತು. ಭಾರೀ ನಿರೀಕ್ಷೆಗಳ ನಡುವೆ ಕೋಲ್ಕತದಲ್ಲಿ ಉಭಯ ತಂಡಗಳ ನಡುವೆ ನಡೆದ ಮೊದಲ ಟೆಸ್ಟ್ ಅನ್ನು ಹರಿಣ ಪಡೆ 30 ರನ್‌ಗಳಿಂದ ಗೆದ್ದುಕೊಂಡಿತು. ನಂತರ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಶನಿವಾರ ಗುವಾಹಟಿಯಲ್ಲಿ ಆರಂಭವಾಯಿತು. ಟಾಸ್ ಗೆದ್ದ ಸಫಾರಿಗಳು ಆರಂಭದಿಂದಲೇ ಪ್ರಾಬಲ್ಯ ಮೆರೆದರು. ಮೊದಲ ಇನ್ನಿಂಗ್ಸ್‌ನಲ್ಲಿ 489 ರನ್‌ಗಳ ಬೃಹತ್ ಸ್ಕೋರ್ ಗಳಿಸಿದ ಪ್ರೋಟಿಯಸ್ ತಂಡ, ಬಳಿಕ ಟೀಮ್ ಇಂಡಿಯಾವನ್ನು 201 ರನ್‌ಗಳಿಗೆ ಆಲೌಟ್ ಮಾಡಿತು. ವೇಗಿ ಮಾರ್ಕೊ ಜಾನ್ಸೆನ್ ಆರು ವಿಕೆಟ್‌ಗಳೊಂದಿಗೆ ತಮ್ಮ ಶಕ್ತಿಯನ್ನು ಪ್ರದರ್ಶಿಸಿದರು.. ದಕ್ಷಿಣ ಆಫ್ರಿಕಾ 288 ರನ್‌ಗಳ ಬೃಹತ್ ಮುನ್ನಡೆ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದಾದ ಬಳಿಕ ಟೀಮ್ ಇಂಡಿಯಾವನ್ನು ಫಾಲೋ ಆನ್ ಮಾಡಲು ಬಿಡದೆ ಮತ್ತೆ ಬ್ಯಾಟಿಂಗ್ ಮಾಡಿದ ಸಫಾರಿಗಳು, ನಾಲ್ಕನೇ ದಿನದ ಕೊನೆಯ ಸೆಷನ್​ವರೆಗೆ ತಮ್ಮ ಇನ್ನಿಂಗ್ಸ್ ಡಿಕ್ಲೇರ್ ಮಾಡಲಿಲ್ಲ. ನಿಧಾನವಾಗಿ ಆಟವಾಡಿದ ಪ್ರೋಟಿಯಸ್ ತಂಡ 78.3 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿದ ನಂತರ ತಮ್ಮ ಇನ್ನಿಂಗ್ಸ್ ಡಿಕ್ಲೇರ್ ಮಾಡಿ, ಟೀಮ್ ಇಂಡಿಯಾಕ್ಕೆ 549 ರನ್‌ಗಳ (288+260) ಬೃಹತ್ ಗುರಿಯನ್ನು ನೀಡಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಟ್ರಿಸ್ಟಾನ್ ಸ್ಟಬ್ಸ್ (94) ಅದ್ಭುತ ಇನ್ನಿಂಗ್ಸ್ ಆಡಿದರು. ಟೋನಿ ಡಿ ಜಾರ್ಜಿ (49) ಅರ್ಧಶತಕವನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡರು. ಗುರಿಯನ್ನು ಬೆನ್ನಟ್ಟಲು ಹೊರಟ ಟೀಮ್ ಇಂಡಿಯಾ ಆರಂಭದಿಂದಲೇ ಆಘಾತಗಳನ್ನು ಅನುಭವಿಸಿತು. ಓಪನರ್ ಯಶಸ್ವಿ ಜೈಸ್ವಾಲ್ (13) ಅವರನ್ನು ಜಾನ್ಸೆನ್ ಔಟ್ ಮಾಡಿದರು. ಕೆಎಲ್ ರಾಹುಲ್ (6) ಅವರನ್ನು ಸೈಮನ್ ಹಾರ್ಮರ್ ಔಟ್ ಮಾಡಿದರು. ಇದರೊಂದಿಗೆ, ಮಂಗಳವಾರ ನಾಲ್ಕನೇ ದಿನದ ಅಂತ್ಯಕ್ಕೆ ಟೀಮ್ ಇಂಡಿಯಾ ಎರಡು ವಿಕೆಟ್ ನಷ್ಟಕ್ಕೆ ಕೇವಲ 27 ರನ್ ಗಳಿಸಿತು.
ಬುಧವಾರ ಕೊನೆಯ ದಿನದ ಆಟವನ್ನು 27/2 ಸ್ಕೋರ್‌ನೊಂದಿಗೆ ಆರಂಭಿಸಿದ ಟೀಮ್ ಇಂಡಿಯಾವನ್ನು ಸಫಾರಿ ಸ್ಪಿನ್ನರ್ ಸೈಮನ್ ಹಾರ್ಮರ್ ಕಾಡಿದರು. ಸೈಮನ್ ಅವರು ನೈಟ್‌ವಾಚ್‌ಮನ್ ಕುಲದೀಪ್ ಯಾದವ್ (5) ಅವರನ್ನು ಬೌಲ್ಡ್ ಮಾಡಿದರೆ, ಸೆನುರನ್ ಮುತ್ತುಸ್ವಾಮಿ ಕ್ರೀಸ್‌ನಲ್ಲಿ ದೃಢವಾಗಿ ನಿಂತಿದ್ದ ಸಾಯಿ ಸುದರ್ಶನ್ (139 ಎಸೆತಗಳಲ್ಲಿ 14) ಅವರನ್ನು ವಾಪಸ್ ಕಳುಹಿಸಿದರು. ನಂತರ ಸೈಮನ್ ಹಾರ್ಮರ್ ತಮ್ಮ ಬೌಲಿಂಗ್​ ಅನ್ನು ಚುರುಕುಗೊಳಿಸಿದರು. ಧ್ರುವ್ ಜುರೆಲ್ (2), ನಾಯಕ ರಿಷಭ್ ಪಂತ್ (13), ವಾಷಿಂಗ್ಟನ್ ಸುಂದರ್ (16) ಮತ್ತು ನಿತೀಶ್ ಕುಮಾರ್ ರೆಡ್ಡಿ (0) ಅವರನ್ನು ಔಟ್ ಮಾಡಿ ಭಾರತದ ಬ್ಯಾಟಿಂಗ್ ಕ್ರಮಾಂಕವನ್ನೇ ನಾಶಮಾಡಿದರು. ಇದಾದ ಬಳಿಕ ರವೀಂದ್ರ ಜಡೇಜಾ (87 ಎಸೆತಗಳಲ್ಲಿ 54) ಅವರನ್ನು ಮತ್ತೊಬ್ಬ ಸ್ಪಿನ್ನರ್ ಕೇಶವ್ ಮಹಾರಾಜ್ ಔಟ್​ ಮಾಡಿದರು. ಕೊನೆಯ ವಿಕೆಟ್ ಮೊಹಮ್ಮದ್ ಸಿರಾಜ್ (0) ಅವರನ್ನೂ ವಾಪಸ್ ಕಳುಹಿಸಿದರು. ಅಲ್ಲಿದೆ ಟೀಮ್ ಇಂಡಿಯಾದ ಸೋಲನ್ನು ಅನುಭವಿಸಿತು.
ಒಟ್ಟಾರೆಯಾಗಿ, ಸೈಮನ್ ಹಾರ್ಮರ್ ಆರು ವಿಕೆಟ್ ಪಡೆದರು, ಕೇಶವ್ ಮಹಾರಾಜ್ ಎರಡು, ಜಾನ್ಸೆನ್ ಮತ್ತು ಮುತ್ತುಸ್ವಾಮಿ ತಲಾ ಒಂದು ವಿಕೆಟ್ ಪಡೆದರು. ತಮ್ಮ ಸಾಮೂಹಿಕ ಪ್ರಯತ್ನದಿಂದ ಇಡೀ ಪಂದ್ಯದುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ, ಆರು ವರ್ಷಗಳಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿತು ಮಾತ್ರವಲ್ಲದೆ, ವೈಟ್‌ವಾಶ್ ಅನ್ನು ಸಹ ಸಾಧಿಸಿತು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net