ಕಡೆಗೂ ಫಲಿಸಲಿಲ್ಲ ತಿಲಕ್​ ಏಕಾಂಗಿ ಹೋರಾಟ! ಹರಿಣರ ಪಡೆ ಎದುರು ಹೀನಾಯ ಸೋಲುಂಡ ಟೀಮ್ ಇಂಡಿಯಾ

ಭಾರತಕ್ಕೆ 2ನೇ ಟಿ20 ಪಂದ್ಯದಲ್ಲಿ ಸೋಲು
ಭಾರತಕ್ಕೆ 2ನೇ ಟಿ20 ಪಂದ್ಯದಲ್ಲಿ ಸೋಲು
Published on

ಪ್ರಮುಖ ಮುಖ್ಯಾಂಶಗಳು

  • 214 ರನ್​ ತಲುಪಲು ವಿಫಲಗೊಂಡ ಭಾರತ
  • ಹರಿಣರ ಪಡೆ ಎದುರು 51 ರನಗಳ ಹೀನಾಯ ಸೋಲು
  • ಕಡೆಗೂ ಫಲಿಸಲಿಲ್ಲ ತಿಲಕ್ ವರ್ಮ ಏಕಾಂಗಿ ಹೋರಾಟ
ಚಂಡೀಗಢ: ಇಂದು (ಡಿ.11) ಮುಲ್ಲನ್‌ಪುರದ ನ್ಯೂ ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಲು ವಿಫಲಗೊಂಡಿತು. 214 ರನ್​ ಗುರಿ ತಲುಪಲು ಮುಗ್ಗರಿಸಿದ ಭಾರತ, ಕೇವಲ 162 ರನ್​ಗೆ ಆಲ್​ಔಟ್​ ಆಯಿತು.
ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1 ಅಂತರ ಕಾಯ್ದುಕೊಂಡಿರುವ ಎರಡೂ ತಂಡಗಳು, ದ್ವಿತೀಯ ಟಿ20 ಪಂದ್ಯ ನಂತರ ಗೆಲುವನ್ನು ಸಮಬಲವಾಗಿಸಿದೆ. ಎರಡನೇ ಟಿ20ಯಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳು ಬೃಹತ್ ಸ್ಕೋರ್ ಗಳಿಸುವಲ್ಲಿ ಮಾತ್ರವಲ್ಲ, ಟೀಮ್ ಇಂಡಿಯಾ ಬ್ಯಾಟರ್​ಗಳನ್ನು ಕಟ್ಟಿಹಾಕುವಲ್ಲಿಯೂ ಯಶಸ್ವಿಯಾದರು. ಹರಿಣರ ಪಡೆ ನೀಡಿದ 214 ರನ್​ಗಳ ಬೃಹತ್ ಗುರಿಯನ್ನು ತಲುಪಲು ಪರದಾಡಿದ ಟೀಮ್ ಇಂಡಿಯಾ, 51 ರನ್​ನಿಂದ ಹೀನಾಯ ಸೋಲು ಅನುಭವಿಸಿತು.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಸೂರ್ಯಕುಮಾರ್ ಯಾದವ್ ಪಡೆ, ಹರಿಣರ ಪಡೆಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ, ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ ಹರಿಣರು 213 ರನ್ ಕಲೆಹಾಕಿದರು. ದಕ್ಷಿಣ ಆಫ್ರಿಕಾದ ಓಪನರ್​ ಕ್ವಿಂಟನ್ ಡಿ ಕಾಕ್ ಸ್ಪೋಟಕ ಇನ್ನಿಂಗ್ಸ್ ನೀಡಿದರು. ಕೇವಲ 46 ಎಸೆತಗಳಲ್ಲಿ 5 ಬೌಂಡರಿ ಮತ್ತು 7 ಸಿಕ್ಸರ್‌ ಮೂಲಕ 195.65 ಸ್ಟ್ರೈಕ್​ ರೇಟ್‌ನಲ್ಲಿ 90 ರನ್ ಸಿಡಿಸಿದರು. ಕಾಕ್​ ನಂತರದಲ್ಲಿ, ಐಡೆನ್ ಮಾರ್ಕ್ರಾಮ್ (26 ಎಸೆತ, 29 ರನ್), ಡೊನೊವನ್ ಫೆರೇರಾ (16 ಎಸೆತ. ಅಜೇಯ 30 ರನ್) ಮತ್ತು ಡೇವಿಡ್ ಮಿಲ್ಲರ್ (12 ಎಸೆತ, ಅಜೇಯ 20 ರನ್) ತಂಡದ ಒಟ್ಟು ಮೊತ್ತವನ್ನು ಹೆಚ್ಚಿಸಲು ಶ್ರಮಿಸಿದರು.

ಫಲಿಸಲಿಲ್ಲ ತಿಲಕ್ ಏಕಾಂಗಿ ಹೋರಾಟ

214 ರನ್​ ಗುರಿ ತಲುಪಲು ಮುಗ್ಗರಿಸಿದ ಟೀಮ್ ಇಂಡಿಯಾ ಬ್ಯಾಟರ್​ಗಳ ಪೈಕಿ ತಿಲಕ್ ವರ್ಮಾ ಮಾತ್ರ ಕ್ರೀಸ್​ನಲ್ಲಿ ನಿಂತು, ತಂಡಕ್ಕಾಗಿ ಕೊನೆಯವರೆಗೂ ಹೋರಾಡಿದರು. ಕೇವಲ 34 ಎಸೆತ ಎದುರಿಸಿದ ತಿಲಕ್​, 2 ಬೌಂಡರಿ, 5 ಸಿಕ್ಸರ್​ ಸಹಾಯದಿಂದ 62 ರನ್​ ಬಾರಿಸಿದರು. ಇಷ್ಟಾದರೂ ಅವರಿಗೆ ಉತ್ತಮ ಸಾಥ್ ಸಿಗದ ಹಿನ್ನೆಲೆ ಪಂದ್ಯವನ್ನು ಸೋಲಿಗೆ ದೂಡುವಂತಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net