650, 651... ಈ ವರ್ಷ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟೀಮ್​ ಇಂಡಿಯಾ ಸ್ಟಾರ್​ ಈತ | Team India

ಟೀಮ್​ ಇಂಡಿಯಾ
ಟೀಮ್​ ಇಂಡಿಯಾ
Published on

ಪ್ರಮುಖ ಮುಖ್ಯಾಂಶಗಳು

  • 2-1 ಅಂತರದಲ್ಲಿ ಏಕದಿನ ಸರಣಿ ಗೆದ್ದ ಭಾರತ
  • ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಆಟಗಾರರ ಭರ್ಜರಿ ಬ್ಯಾಟಿಂಗ್
  • ಈ ವರ್ಷ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸ್ಟಾರ್​ ಈತ
ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್​ ಸರಣಿಯನ್ನು 2-1 ಅಂತರದಲ್ಲಿ ಗೆದ್ದು ಬೀಗಿದ ಟೀಮ್ ಇಂಡಿಯಾ, ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿದೆ. ವಿಶೇಷವಾಗಿ ರೋಹಿತ್ ಶರ್ಮ ನಾಯಕತ್ವದಲ್ಲಿ ಎಂಬುದು ಗಮನಾರ್ಹ.
2025ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ರೋಹಿತ್​ ಪಡೆ, ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭರ್ಜರಿ ಗೆಲುವಿನೊಂದಿಗೆ ವರ್ಷವನ್ನು ಆರಂಭಿಸಿತು. ಇದರೊಟ್ಟಿಗೆ ಕೆ.ಎಲ್. ರಾಹುಲ್ ನಾಯಕತ್ವದಲ್ಲಿ, ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು 2-1 ಅಂತರದಿಂದ ಗೆದ್ದು ಬೀಗಿದ್ದು ರೋಚಕ. ಈ ವರ್ಷದ ಅಕ್ಟೋಬರ್‌ನಲ್ಲಿ ನಡೆದ ಆಸೀಸ್ ವಿರುದ್ಧದ ಸರಣಿಯನ್ನು ಮಾತ್ರ ಭಾರತ ವಶಪಡಿಸಿಕೊಳ್ಳುವಲ್ಲಿ ವಿಫಲಗೊಂಡಿತು.
ಈ ವರ್ಷ ಹಲವು ಆಟಗಾರರು ಏಕದಿನ ಪಂದ್ಯಗಳಲ್ಲಿ ತಂಡದ ಪರ ಉತ್ತಮ ಪ್ರದರ್ಶನ ತೋರಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ನಂತರ, ಏಕದಿನ ಪಂದ್ಯಗಳಲ್ಲಿ ದಿಗ್ಗಜ ಆಟಗಾರರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರ ಭವಿಷ್ಯವು ಪ್ರಶ್ನಾರ್ಹವಾಯಿತು. ಬಹುತೇಕ ವರದಿಗಳು ಶೀಘ್ರವೇ ಇವರಿಬ್ಬರು ಏಕದಿನ ಕ್ರಿಕೆಟ್​ಗೂ ಗುಡ್​ಬೈ ಹೇಳಲಿದ್ದಾರೆ ಎಂದೇ ಬಿತ್ತರಿಸಿತು. ಆದರೆ, ಇದ್ಯಾವುದಕ್ಕೂ ಜಗ್ಗದ 'ರೋಕೊ' ಜೋಡಿ, ತಮ್ಮ ಅದ್ಭುತ ಬ್ಯಾಟಿಂಗ್​ ಪ್ರದರ್ಶನದಿಂದ ಇದಕ್ಕೆಲ್ಲ ಖಡಕ್​ ಉತ್ತರ ರವಾನಿಸಿತು.

650, 651 ರನ್​

ಈ ವರ್ಷ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಇಬ್ಬರೂ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ. ಮೊದಲಿಗೆ ವಿರಾಟ್​ ಕೊಹ್ಲಿ ಇದ್ದು, ಅವರು ಆಡಿದ 13 ಪಂದ್ಯಗಳಲ್ಲಿ ಒಟ್ಟು 651 ರನ್ ಗಳಿಸಿದ್ದಾರೆ. ರೋಹಿತ್ ಶರ್ಮ, ಆಡಿರುವ 14 ಪಂದ್ಯಗಳಲ್ಲಿ 650 ರನ್ ಕಲೆ ಹಾಕಿದ್ದಾರೆ. ಇನ್ನು ಪಕ್ಕೆಲುಬಿನ ಗಾಯದಿಂದಾಗಿ ಹರಿಣರ ಪಡೆ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದ ಶ್ರೇಯಸ್ ಅಯ್ಯರ್, ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

2025ರಲ್ಲಿ ಭಾರತ ಪರ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಿವರು

1. ವಿರಾಟ್ ಕೊಹ್ಲಿ - 651 ರನ್​
2. ರೋಹಿತ್ ಶರ್ಮ - 650 ರನ್​
3. ಶ್ರೇಯಸ್ ಅಯ್ಯರ್ - 496 ರನ್​
4. ಶುಭ್​ಮನ್​ ಗಿಲ್ - 490 ರನ್​
5. ಕೆಎಲ್ ರಾಹುಲ್ - 367 ರನ್​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net