ಟೀಮ್​ ಇಂಡಿಯಾದ ಹೊಸ ಜೆರ್ಸಿ ನೋಡಿದ್ರಾ? ಇದರ ವಿಶೇಷತೆ ಏನು ಗೊತ್ತಾ? 1990ರ ತಂಡಕ್ಕಿದೆ ಲಿಂಕ್​! New Jersey

ಟೀಮ್​ ಇಂಡಿಯಾದ ಹೊಸ ಜೆರ್ಸಿ ಅನಾವರಣ
ಟೀಮ್​ ಇಂಡಿಯಾದ ಹೊಸ ಜೆರ್ಸಿ ಅನಾವರಣ
Published on

ಪ್ರಮುಖ ಮುಖ್ಯಾಂಶಗಳು

  • ಮುಂದಿನ ವರ್ಷ ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ನಡೆಯಲಿದೆ ಟಿ20 ವಿಶ್ವಕಪ್
  • ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಈ ಮೆಗಾ ಟೂರ್ನಮೆಂಟ್ ಆಯೋಜಿಸಲಿವೆ
  • ಟಿ20 ವಿಶ್ವಕಪ್​ ಟ್ರೋಫಿಗಾಗಿ ಆತಿಥೇಯ ಟೀಮ್ ಇಂಡಿಯಾ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ
ನವದೆಹಲಿ: ಮುಂದಿನ ವರ್ಷ ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ಟಿ20 ವಿಶ್ವಕಪ್ ನಡೆಯಲಿದೆ. ಭಾರತ ಮತ್ತು ಶ್ರೀಲಂಕಾ ಈ ಮೆಗಾ ಟೂರ್ನಮೆಂಟ್ ಅನ್ನು ಆಯೋಜಿಸಲಿದ್ದು, ಆತಿಥೇಯ ಟೀಮ್ ಇಂಡಿಯಾ ಹೊಸ ಜೆರ್ಸಿಯೊಂದಿಗೆ ( New Jersey ) ಕಣಕ್ಕೆ ಇಳಿಯಲಿದೆ.
ರಾಯ್‌ಪುರದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದ ಇನ್ನಿಂಗ್ಸ್ ವಿರಾಮದ ಸಮಯದಲ್ಲಿ ಟೀಮ್ ಇಂಡಿಯಾ ಆಟಗಾರರಾದ ರೋಹಿತ್ ಶರ್ಮ ಮತ್ತು ತಿಲಕ್ ವರ್ಮ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದರು. ಬಿಸಿಸಿಐ ಕಾರ್ಯದರ್ಶಿ ದೇವಜಿತ್​ ಸೈಕಿಯಾ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
2024ನೇ ಸಾಲಿನ ಟಿ20 ವಿಶ್ವಕಪ್ ವಿಜೇತ ನಾಯಕ ಮತ್ತು 2026ರ ಆವೃತ್ತಿಯ ಬ್ರಾಂಡ್ ರಾಯಭಾರಿ ರೋಹಿತ್ ಶರ್ಮ, ಜೆರ್ಸಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ ಟೀಮ್ ಇಂಡಿಯಾವನ್ನು ಅಭಿನಂದಿಸಿದರು ಮತ್ತು ಮುಂದಿನ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಗೆಲುವಿಗಾಗಿ ಶುಭ ಹಾರೈಸಿದರು.

ಜೆರ್ಸಿಯ ವಿಶೇಷತೆ ಏನು?

ಈ ಜೆರ್ಸಿಯಲ್ಲಿ ಭಾರತೀಯ ಧ್ವಜದ ಮೂರು ಬಣ್ಣಗಳಿವೆ. ಇದು ಹೆಚ್ಚಾಗಿ ಕಡು ನೀಲಿ ಬಣ್ಣದ್ದಾಗಿದ್ದು, ಎರಡೂ ಬದಿಗಳಲ್ಲಿ ಕಿತ್ತಳೆ ಬಣ್ಣವಿದೆ. ಕಾಲರ್ ಬಳಿ ಬಿಳಿ ಬಣ್ಣವಿದೆ. ಜೆರ್ಸಿಯ ಮಧ್ಯದಲ್ಲಿ ಪ್ರಾಯೋಜಕರಾದ ಅಪೊಲೊ ಟೈರ್ಸ್ ಹೆಸರಿದೆ. ಇದರೊಂದಿಗೆ ಇಂಡಿಯಾ ಅಂತಾನೂ ಬರೆಯಲಾಗಿದೆ.
1990ರ ಭಾರತ ತಂಡದ ಕಿಟ್‌ನಿಂದ ಪ್ರೇರಿತವಾಗಿ ರೆಟ್ರೋ ಅಂಶಗಳೊಂದಿಗೆ ವಿಶ್ವಕಪ್ ಜೆರ್ಸಿ ವಿನ್ಯಾಸಗೊಳಿಸಲಾಗಿದೆ ಎಂದು ಕಿಟ್ ಪ್ರಾಯೋಜಕ ಅಡಿಡಾಸ್‌ ಸಂಸ್ಥೆ ತಿಳಿಸಿದೆ. ಪ್ರಸ್ತುತ, ಹೊಸ ಜೆರ್ಸಿಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಇನ್ನು ಟಿ20 ವಿಶ್ವಕಪ್​ ಮೆಗಾ ಟೂರ್ನಮೆಂಟ್‌ನಲ್ಲಿ ಒಟ್ಟು 20 ದೇಶಗಳು ಭಾಗವಹಿಸುತ್ತಿವೆ. ಭಾರತ ಎ ಗುಂಪಿನಲ್ಲಿದೆ. ಟೀಮ್ ಇಂಡಿಯಾ ಜೊತೆಗೆ ಪಾಕಿಸ್ತಾನ, ನೆದರ್‌ಲ್ಯಾಂಡ್ಸ್, ನಮೀಬಿಯಾ ಮತ್ತು ಯುಎಸ್‌ಎ ಗ್ರೂಪ್​ ಎ ನಲ್ಲಿವೆ. ಫೆಬ್ರವರಿ 7 ರಂದು ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಆಡಲಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಯುಎಸ್‌ಎಯನ್ನು ಎದುರಿಸಲಿದೆ. ಕ್ರಿಕೆಟ್ ಪ್ರಿಯರು ಕಾಯುತ್ತಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಪಂದ್ಯ ಫೆಬ್ರವರಿ 15ರಂದು ಕೊಲಂಬೊದಲ್ಲಿ ನಡೆಯಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net